Winter Storm: 17,000 ವಿಮಾನಗಳು ದಿಢೀರ್ ಹಾರಾಟ ನಿಲ್ಲಿಸಿದ್ದು ಏಕೆ? ಅಮೆರಿಕ ಪರಿಸ್ಥಿತಿ ಭೀಕರ...
ಅಮೆರಿಕ ಜಗತ್ತಿನ ದೊಡ್ಡಣ್ಣ... ಅಮೆರಿಕ ಜಗತ್ತಿನ ಶ್ರೀಮಂತ ದೇಶ... ಅಮೆರಿಕ ಮನಸ್ಸು ಮಾಡಿದರೆ ಈ ಜಗತ್ತಿನಲ್ಲಿ ಏನು ಬೇಕಾದರೂ ಮಾಡಬಹುದು... ಹೀಗೆ ಅಮೆರಿಕ ಬಗ್ಗೆ ಎಲ್ಲರೂ ದೊಡ್ಡದಾಗಿ ಮಾತನಾಡುವುದನ್ನ ನಾವು & ನೀವು ಹಾಗೂ ಬಹುತೇಕರು ಕೇಳೇ ಇರುತ್ತಾರೆ. ಆದರೆ ಪ್ರಕೃತಿ ಮುಂದೆ ದೊಡ್ಡಣ್ಣ ಅಲ್ಲ, ಅವರಣ್ಣ ಬಂದರೂ ಏನೂ ಮಾಡಲು ಆಗುವುದಿಲ್ಲ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಅಂದಹಾಗೆ ಅಮೆರಿಕದಲ್ಲಿ ಇದೀಗ ಎದ್ದಿರುವ ಭೀಕರ ಹಿಮ ಬಿರುಗಾಳಿಯ ಪರಿಣಾಮ ಬರೋಬ್ಬರಿ 17,000 ವಿಮಾನಗಳು ದಿಢೀರ್ ಹಾರಾಟ ನಿಲ್ಲಿಸಿವೆ, ಇದು ಮಾತ್ರವಲ್ಲ ಭಾರಿ ದೊಡ್ಡ ಪ್ರಮಾಣದಲ್ಲಿ ಜೀವಹಾನಿ ಕೂಡ ಉಂಟಾಗಿದೆ.
ಕಳೆದ ಕೆಲ ದಿನಗಳಿಂದ ನಿರಂತರವಾಗಿ ಹಿಮ ಬಿರುಗಾಳಿಯ ಏಟಿಗೆ ಸಿಲುಕಿ ಅಮೆರಿಕ ತತ್ತರಿಸಿದ್ದು, ಈ ಹಿನ್ನೆಲೆ ಭಾರಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಅಮೆರಿಕದ ದೊಡ್ಡ ದೊಡ್ಡ ರಾಜ್ಯಗಳಲ್ಲೂ ಪರಿಸ್ಥಿತಿ ತುಂಬಾ ಕಠಿಣವಾಗಿದ್ದು, ಜನರು ಮನೆಯಿಂದ ಹೊರಗಡೆ ಬರುವ ಮಾತು ಇರಲಿ ತಮ್ಮ ತಮ್ಮ ಮನೆಯಲ್ಲೇ ಇದ್ದರೂ ಬದುಕುವುದು ಕಷ್ಟವಾಗುತ್ತಿದೆ. ಏಕೆಂದರೆ ಅಷ್ಟು ಘೋರವಾಗಿ ಹಿಮ ಬಿರುಗಾಳಿ ಬೀಸುತ್ತಿದ್ದು, ಜನರು ಕೂಡ ಇದರಿಂದ ರಕ್ಷಣೆ ಪಡೆಯಲು ಹೆಣಗಾಡುವ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ಅನೇಕ ಕ್ರಮಗಳನ್ನು ಜಾರಿಗೆ ತಂದಿದ್ದರೂ ಅದೆಲ್ಲಾ ಪ್ರಯೋಜನಕ್ಕೆ ಬರುತ್ತಿಲ್ಲ.

ಸಾವಿನ ಸಂಖ್ಯೆ 30ಕ್ಕೆ ಏರಿಕೆ
ಅಮೆರಿಕದ ತಾಪಮಾನ ದಿಢೀರ್ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಈಗಾಗಲೇ ಲಕ್ಷ ಲಕ್ಷ ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ. ಇದರ ಜೊತೆಗೆ ಈವರೆಗೂ ಹಿಮ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 30ಕ್ಕೆ ಬಂದು ತಲುಪಿದೆ. ತೀವ್ರ ಶೀತದಿಂದ & ಹಿಮದ ಅಬ್ಬರಕ್ಕೆ ಸಿಲುಕಿ ಇವರು ಜೀವ ಕಳೆದುಕೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡುತ್ತಿದೆ. ಇನ್ನೊಂದು ಕಡೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಿಗೆ ವಿದ್ಯುತ್ ಕಡಿತವಾಗಿ, ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಕೂಡ ಆವರಿಸಿದೆ. ಈಗಾಗಲೇ ಅಮೆರಿಕದ 3ನೇ 2 ಭಾಗದಷ್ಟು ಜಾಗದಲ್ಲಿ ಹಿಮ ಬಿರುಗಾಳಿ ಅಬ್ಬರಿಸುತ್ತಿದೆ.
1,300 ಮೈಲಿ ವ್ಯಾಪ್ತಿಯಲ್ಲಿ ಸಮಸ್ಯೆ!
ಇಂಗ್ಲೆಂಡ್ ನೆಲದಿಂದ ಅಮೆರಿಕದ ಅರ್ಕಾನ್ಸಾಸ್ ತನಕ ಹಿಮ ಬಿರುಗಾಳಿ ಆವರಿಸಿದ್ದು, ಶೀತದಿಂದ ಈಗಾಗಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಷ್ಟ ಎದುರಾಗಿದೆ. ಚಳಿಗಾಲದ ಬಿರುಗಾಳಿ ಪರಿಣಾಮ ಸುಮಾರು 1,300 ಮೈಲಿ ಎಂದರೆ 2,100 ಕಿಲೋ ಮೀಟರ್ ಕಾರಿಡಾರ್‌ನಲ್ಲಿ ಒಂದು ಅಡಿ ಅರ್ಥಾತ್ 30 ಸೆಂಟಿಮೀಟರ್ ಮೀರಿಸಿ ಹಿಮ ಬಿದ್ದಿದೆ ಎಂಬ ಮಾಹಿತಿ ಇದೆ. ಈ ಎಲ್ಲಾ ಕಾರಣಗಳಿಂದ ಇದೀಗ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಮುಂದಿನ ಹಲವು ದಿನಗಳ ಕಾಲ ಪರಿಸ್ಥಿತಿ ಹೀಗೆ ಇರುವ ಸಾಧ್ಯತೆ ದಟ್ಟವಾಗಿದ್ದು, ಇದಕ್ಕಾಗಿ ಅಮೆರಿಕ ಸರ್ಕಾರ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
ನ್ಯೂಯಾರ್ಕ್ ನಗರ ಇತ್ತೀಚಿನ ದಿನಗಳಲ್ಲೇ ಅತ್ಯಂತ ಭೀಕರ ಹಿಮಪಾತದ ವಾತಾವರಣವನ್ನ ಇದೀಗ ಎದುರಿಸುತ್ತಿದೆ. 8 ರಿಂದ 15 ಇಂಚು ಎಂದರೆ ಸುಮಾರು 20 ರಿಂದ 38 ಸೆಂಟಿಮೀಟರ್ ಹಿಮ ಈಗ ನ್ಯೂಯಾರ್ಕ್ ನಗರದಲ್ಲಿ ಬಿದ್ದಿದೆ. ಹೀಗಾಗಿ ಶಾಲಾ & ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಜನರು ಕೂಡ ಹೊರ ಬರಲು ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಹಿಮ ಬಿರುಗಾಳಿ ಹಿನ್ನೆಲೆ 5,00,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಕೊರೊನಾ ಅಂದ್ರೆ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಈ ರೀತಿ ಅಮೆರಿದಲ್ಲಿ ಆನ್‌ಲೈನ್ ಕ್ಲಾಸ್‌ಗಳನ್ನ ನಡೆಸಲಾಗಿತ್ತು. ಅದನ್ನ ಬಿಟ್ಟರೆ ಇದೀಗ ಹಿಮ ಬಿರುಗಾಳಿ ಹಿನ್ನೆಲೆ ಆನ್‌ಲೈನ್ ತರಗತಿ ನಡೆಸಲು ಆದೇಶ ನೀಡಲಾಗಿದೆ.












Click it and Unblock the Notifications