ವಿಕಿಲೀಕ್ಸ್ ಸಂಸ್ಥಾಪಕ 50 ವರ್ಷದ ಅಸ್ಸಾಂಜೆಗೆ ಜೈಲಿನಲ್ಲೇ ಮದುವೆ!
ಲಂಡನ್, ಮಾರ್ಚ್ 23: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರಿಗೆ ಕಂಕಣಭಾಗ್ಯ ಕೂಡಿ ಬಂದಿದೆ. ತಮ್ಮ ದೀರ್ಘಾವಧಿಯ ಸಂಗಾತಿ ಸ್ಟೆಲ್ಲಾ ಮೋರಿಸ್ ಅವರನ್ನು ಆಗ್ನೇಯ ಲಂಡನ್‌ನ ಹೈ-ಸೆಕ್ಯುರಿಟಿ ಜೈಲಿನಲ್ಲಿ ಅಸ್ಸಾಂಜೆ ಬುಧವಾರ ವಿವಾಹವಾಗಲಿದ್ದಾರೆ. ಈ ಸರಳ ವಿವಾಹ ಸಮಾರಂಭದಲ್ಲಿ ನಾಲ್ಕು ಜನ ಅತಿಥಿಗಳು, ಇಬ್ಬರು ಅಧಿಕೃತ ಸಾಕ್ಷಿಗಳು ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಭಾಗವಹಿಸಲಿದ್ದಾರೆ.
ಯುಎಸ್ ರಹಸ್ಯವಾದ ಮಿಲಿಟರಿ ದಾಖಲೆಗಳು ಮತ್ತು ರಾಜತಾಂತ್ರಿಕ ವಿಷಯಗಳನ್ನು ಬಹಿರಂಗಪಡಿಸಿದ 18 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸ್ಸಾಂಜೆ ಅನ್ನು ವಿಚಾರಣೆಗೆ ಒಳಪಡಿಸಲು ಯುಎಸ್ ಅಧಿಕಾರಿಗಳು ಕಾಯುತ್ತಿದ್ದಾರೆ.
ಎಲ್ಲ ತಪ್ಪುಗಳನ್ನು ನಿರಾಕರಿಸುವ 50 ವರ್ಷದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಕಳೆದ 2019 ರಿಂದ ಬೆಲ್ಮಾರ್ಶ್ ಜೈಲಿನಲ್ಲಿದ್ದಾರೆ. ಇದಕ್ಕೂ ಮೊದಲು ಲಂಡನ್‌ನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಏಳು ವರ್ಷಗಳ ಕಾಲ ಇದ್ದರು.

ಮೋರಿಸ್ ಮತ್ತು ಅಸ್ಸಾಂಜೆ ಪರಿಚಯ:
ಕಳೆದ 2011ರಲ್ಲಿ ಮೊದಲ ಬಾರಿಗೆ ಮೋರಿಸ್ ಮತ್ತು ಅಸ್ಸಾಂಜೆ ಭೇಟಿ ಆಗಿದ್ದು, ಇಬ್ಬರ ನಡುವೆ ದಶಕಗಳ ಕಾಲದ ಸಂಪರ್ಕವಿದೆ. 2015ರಲ್ಲಿ ಕಾನೂನು ಸಲಹೆಗಾರರ ತಂಡದಲ್ಲಿ ಮೋರಿಸ್ ಸೇರಿಕೊಂಡರು. ಅಲ್ಲಿಂದ ರಾಯಭಾರಿ ಕಚೇರಿಯಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರಿಗೂ ಎರಡು ಮಕ್ಕಳು ಇವೆ. ಇದೀಗ ಇಬ್ಬರಿಗೆ ಜೈಲಿನಲ್ಲಿಯೇ ರಿಜಿಸ್ಟ್ರಾರ್ ನೇತೃತ್ವದಲ್ಲಿ ವಿವಾಹ ಆಗಲಿದ್ದಾರೆ. ಅದಕ್ಕಾಗಿ ಜೈಲಿಗೆ ಭೇಟಿ ನೀಡುವ ಸಮಯವನ್ನು ನಿಗದಿಪಡಿಸಲಾಗಿದೆ.
ಆಸ್ಟ್ರೇಲಿಯಾ ಮೂಲದ ಜೂಲಿಯನ್ ಅಸಾಂಜೆ 2012ರಲ್ಲಿ ಸ್ವೀಡನ್ ಗೆ ಹಸ್ತಾಂತರವಾಗುವ ಭಯದಿಂದ ಈಕ್ವೆಡಾರ್ ರಾಯಭಾರಿ ಕಚೇರಿ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಅವರ ಮೇಲೆ ಸ್ವೀಡನ್ನಿನಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಆದರೆ ಅಸಾಂಜೆಗೆ ಸ್ವೀಡನ್‌ಗಿಂತ ಹೆಚ್ಚಾಗಿ ಅಮೆರಿಕಾದ ಭಯವಿತ್ತು. ಸೇನೆ ಮತ್ತು ರಾಜತಾಂತ್ರಿಕ ದಾಖಲೆಗಳನ್ನು ವಿಕಿಲೀಕ್ಸ್‌ನಲ್ಲಿ ಪ್ರಕಟಿಸಿದ್ದಕ್ಕಾಗಿ ಅಲ್ಲಿ ವಿಚಾರಣೆ ಎದುರಿಸಬೇಕಾಗಿ ಬರಬಹುದು ಎಂಬ ಭಯದಿಂದ ಈಕ್ವೆಡಾರ್ ಆಶ್ರಯ ಪಡೆದುಕೊಂಡಿದ್ದರು.
ಅಸ್ಸಾಂಜೆ ಅವರನ್ನು ಯುನೈಟೆಡ್ ಸ್ಟೇಟ್ಸ್‌ಗೆ ಹಸ್ತಾಂತರಿಸುವ ನಿರ್ಧಾರದ ವಿರುದ್ಧ ಬ್ರಿಟನ್‌ನ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಈ ತಿಂಗಳು ಅನುಮತಿ ನಿರಾಕರಿಸಲಾಯಿತು. ತನ್ನ ಹಸ್ತಾಂತರವನ್ನು ಅನುಮೋದಿಸಲು ಸರ್ಕಾರದಿಂದ ಯಾವುದೇ ನಿರ್ಧಾರವನ್ನು ಅವರು ಇನ್ನೂ ಸವಾಲು ಮಾಡಲು ಅವಕಾಶವಿದೆ.












Click it and Unblock the Notifications