ಭಾರತೀಯ ನಟಿಯರು ಕೇನ್ಸ್‌ನಲ್ಲಿ ಭಾಗವಹಿಸುವುದೇಕೆ? ಕೇನ್ಸ್ ಟಿಕೆಟ್ ದರವೆಷ್ಟು ಗೊತ್ತಾ?
ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ 2023 ಈಗಾಗಲೇ ಆರಂಭವಾಗಿದ್ದು ಬಾಲಿವುಡ್ ಸ್ಟಾರ್ ನಟಿಯರು ಬಗೆ ಬಗೆಯ ಉಡುಗೆ ತೊಟ್ಟು ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಅನ್ನು ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಫ್ರಾನ್ಸ್ ದೇಶದ ದಕ್ಷಿಣ ಭಾಗದಲ್ಲಿರುವ ಪ್ರವಾಸಿ ತಾಣ ನಗರವಾದ ಕ್ಯಾನ್‌ನಲ್ಲಿ ಪ್ರತಿ ವರ್ಷ ಮೇ ತಿಂಗಳಲ್ಲಿ ಈ ಚಲನಚಿತ್ರೋತ್ಸವ ಜರಗುತ್ತದೆ.
ಕೇನ್ಸನಲ್ಲಿ ಅನೇಕ ಭಾರತೀಯ ನಟಿಯರು ಆಕರ್ಷಕ ಉಡುಗೆಗಳನ್ನು ತೊಟ್ಟು ನೋಡುಗರ ಗಮನ ಸೆಳೆಯುತ್ತಾರೆ. ಸಾರಾ ಅಲಿ ಖಾನ್ ಈ ವರ್ಷ ಕೇನ್ಸ್‌ಗೆ ಪಾದಾರ್ಪಣೆ ಮಾಡಿದ್ದು ಅವರ ಚೊಚ್ಚಲ ಪ್ರವೇಶದೊಂದಿಗೆ ದೇಸಿ ಲುಕ್‌ನಲ್ಲಿ ಅಭಿಮಾನಿಗಳ ಕಣ್ಮನಸೆಳೆದಿದ್ದಾರೆ. ಜೊತೆಗೆ ಅನುಷ್ಕಾ ಶರ್ಮಾ ಮತ್ತು ಮೃಣಾಲ್ ಠಾಕೂರ್ ಕೂಡ ಈ ವರ್ಷ ಕೇನ್ಸಗೆ ಪಾದಾರ್ಪಣೆ ಮಾಡಲಿದ್ದಾರೆ.

ಕೆಲವು ಭಾರತೀಯ ಸುಂದರಿಯರು ಪ್ರತಿ ವರ್ಷ ಈ ಉತ್ಸವದ ಭಾಗವಾಗಿರುತ್ತಾರೆ. ಅವರಲ್ಲಿ ಐಶ್ವರ್ಯಾ ರೈ ಒಬ್ಬರು. ಪ್ರತಿ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಕೇನ್ಸ್‌ನಲ್ಲಿ ವಿಶೇಷವಾದದ್ದು ಏನೆಂದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಕೇನ್ಸ್‌ಗೆ ಪ್ರವೇಶಿಸಲಿದ್ದಾರೆ.
ಆದರೆ ಯಾವುದೇ ಚಲನಚಿತ್ರ ಪ್ರದರ್ಶನವಿಲ್ಲದಿದ್ದರೂ ಕೆಲವು ಸುಂದರಿಯರು ರೆಡ್ ಕಾರ್ಪೆಟ್ ಮೇಲೆ ಕ್ಯಾಟ್ ವಾಕ್ ಮಾಡಲಿದ್ದಾರೆ. ಸಾಮಾನ್ಯವಾಗಿ ಕೇನ್ಸ್‌ನಲ್ಲಿ ತಮ್ಮ ಸಿನಿಮಾ ಪ್ರದರ್ಶನವಿದ್ದಲ್ಲಿ ನಟಿಯರು ಭಾಗವಹಿಸುತ್ತಾರೆ. ಆದರೆ ಕೆಲವು ನಟಿಯರು ಕೇನ್ಸ್‌ನಲ್ಲಿ ಪ್ರತೀ ವರ್ಷ ಭಾಗವಹಿಸುತ್ತಲೇ ಇರುತ್ತಾರೆ. ಅದು ಏಕೆ? ಜೊತೆಗೆ ಕೇನ್ಸ್ನಲ್ಲಿ ಭಾಗವಹಿಸಲು ಒಂದು ಟಿಕೆಟ್‌ಗೆ ಶುಲ್ಕ ಎಷ್ಟು ಎನ್ನುವ ಬಗ್ಗೆ ಕೊಂಚ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರತೀ ವರ್ಷ ಕೆಲ ನಟಿಯರನ್ನು ತಮ್ಮ ಚಲನಚಿತ್ರ ಪ್ರದರ್ಶನವಿಲ್ಲದಿದ್ದರೂ ಆಹ್ವಾನಿಸಲಾಗುತ್ತದೆ. ಕೇನ್ಸ್ ಚಲನಚಿತ್ರೋತ್ಸವ 2023 ರಲ್ಲಿ ಯಾವುದೇ ಬಿಡುಗಡೆ ಅಥವಾ ಪ್ರದರ್ಶನವನ್ನು ಹೊಂದಿರದ ನಟಿಯರನ್ನು ರೆಡ್ ಕಾರ್ಪೆಟ್ ಮೇಲೆ ನಡೆಯಲು ಏಕೆ ಆಹ್ವಾನಿಸಲಾಗುತ್ತದೆ ಎಂದು ಹಲವರು ಆಶ್ಚರ್ಯ ಪಡುತ್ತಾರೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ;

ಹಲವು ವರ್ಷಗಳಿಂದ ಐಶ್ವರ್ಯಾ ರೈ ಬಚ್ಚನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಸೋನಮ್ ಕಪೂರ್ ಅವರ ಚಲನಚಿತ್ರಗಳು ಪ್ರದರ್ಶನವಾಗಲಿ ಅಥವಾ ಆಗದಿರಲಿ ಕ್ಯಾನೆಸ್‌ನಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ. ಏಕೆಂದರೆ ಅವರು ಪ್ರಪಂಚದಾದ್ಯಂತ ಬೆಂಬಲಿಸುವ ಸೌಂದರ್ಯ ಬ್ರಾಂಡ್‌ಗಳಿಗಾಗಿ ರೆಡ್ ಕಾರ್ಪೆಟ್‌ನಲ್ಲಿ ನಡೆಯುತ್ತಾರೆ.
ಕೇನ್ಸ್ ಚೋಪರ್ಡ್ ಮತ್ತು ಲೋರಿಯಲ್ ಪ್ಯಾರಿಸ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಈ ಬಾಲಿವುಡ್ ಸುಂದರಿಯರು ಈ ಲೇಬಲ್‌ಗಳಿಗೆ ಬ್ರಾಂಡ್ ಅಂಬಾಸಿಡರ್‌ಗಳಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರ ಯಾವುದೇ ಚಿತ್ರಗಳು ಕೇನ್ಸ್‌ನಲ್ಲಿ ಪ್ರದರ್ಶನವಾಗದಿದ್ದರೂ, ಅವರನ್ನು ಪ್ರತಿ ವರ್ಷ ರೆಡ್ ಕಾರ್ಪೆಟ್‌ಗೆ ಆಹ್ವಾನಿಸಲಾಗುತ್ತದೆ.
ಆದ್ದರಿಂದ, ಕೇನ್ಸ್‌ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಅವರು ನಡೆಯುವ ಮತ್ತು ಉಡುಗೆಯ ವಿಧಾನಕ್ಕೆ ಹೆಚ್ಚಿನ ಗಮನ ನೀಡಲಾಗುತ್ತದೆ. ಈ ವರ್ಷ ಮೇ 16 ರಿಂದ ಮೇ 27 ರವರೆಗೆ ಚಿತ್ರೋತ್ಸವ ನಡೆಯಲಿದೆ. ಇದರಲ್ಲಿ ಸಾಮಾನ್ಯವಾಗಿ ಚಲನಚಿತ್ರ ವೃತ್ತಿಪರರು ಮತ್ತು ಪತ್ರಕರ್ತರಿಗೆ ಆಹ್ವಾನಿಸಲಾಗುತ್ತದೆ. ವರದಿಗಳ ಪ್ರಕಾರ, ಈ ಕಾರ್ಯಕ್ರಮಕ್ಕೆ ಹಾಜರಾಗಲು ಟಿಕೆಟ್‌ಗಳ ಬೆಲೆ 5 ರಿಂದ 20 ಲಕ್ಷ ರೂಪಾಯಿ ಇರುತ್ತದೆ.












Click it and Unblock the Notifications