ಶ್ರೀಲಂಕಾದಿಂದ ಅಳಿವಿನಂಚಿನಲ್ಲಿರುವ 1 ಲಕ್ಷ ಕೋತಿಗಳನ್ನು ಕೇಳಿದ ಚೀನಾ!: ಕಾರಣ ಇಲ್ಲಿದೆ
ಬೆಂಗಳೂರು, ಏಪ್ರಿಲ್. 21: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕಾ ಒಂದು ಲಕ್ಷ ಕೋತಿಗಳನ್ನು ಚೀನಾಗೆ ಕಳುಹಿಸಲಿದೆ. ಇದು ಈಗ ಹೆಚ್ಚು ಚರ್ಚೆಗೆ ಕಾರಣವಾಗಿದ್ದು, ಚೀನಾವು ತನ್ನ ಪ್ರಯೋಗಗಳಿಗೆ ಈ ಅಳಿವಿನಂಚಿನಲ್ಲಿರುವ ಕೋತಿಗಳನ್ನು ಬಳಸಿಕೊಳ್ಳಲಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ನಗದು ಕೊರತೆಯಿರುವ ದ್ವೀಪ ರಾಷ್ಟ್ರ ಶ್ರೀಲಂಕ ಆಕೂಡ 1,00,000 ಅಳಿವಿನಂಚಿನಲ್ಲಿರುವ ಕೋತಿಗಳನ್ನು ಆಮದು ಮಾಡಿಕೊಳ್ಳುವ ಚೀನಾದ ಮನವಿಯನ್ನು ದೃಢಪಡಿಸಿದೆ. ಈ ಒಪ್ಪಂದಕ್ಕೆ ಪರಿಸರ ಹೋರಾಟಗಾರರ ಭಾರಿ ವಿರೋಧ ವ್ಯಕ್ತವಾಗಿತ್ತು.

ಶ್ರೀಲಂಕಾದ ಕೃಷಿ ಸಚಿವಾಲಯದ ಉನ್ನತ ಅಧಿಕಾರಿ ಗುಣದಾಸ ಸಮರಸಿಂಘೆ ಮಾತನಾಡಿ, ಖಾಸಗಿ ಒಡೆತನದ ಚೀನಾ ಕಂಪನಿಯು ಪ್ರಾಣಿ ಸಾಕಣೆದಾರರಾದ ಝೂಲಾಜಿಕಲ್ ಗಾರ್ಡನ್ಸ್ ಜೊತೆಗೆ ಸಂಪರ್ಕ ಹೊಂದಿದೆ. ಅವರ ಸಚಿವಾಲಯಕ್ಕೆ ಕೋತಿಗಳನ್ನು ನೀಡುವಂತೆ ಮನವಿ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
"ನಾವು ಸಂಪೂರ್ಣ 1,00,000 ಕೋತಿಗಳನ್ನು ಒಂದೇ ಸ್ಥಳದಿಂದ ಕಳುಹಿಸುವುದಿಲ್ಲ. ಆದರೆ, ದೇಶದ ಹಲವಾರು ಭಾಗಗಳಲ್ಲಿ ಮಂಗಗಳಿಂದ ಉಂಟಾದ ಬೆಳೆ ಹಾನಿಯನ್ನು ಪರಿಗಣಿಸಿ ಚೀನಾದ ಈ ವಿನಂತಿಗೆ ಒಪ್ಪಿಗೆ ನೀಡಿದ್ದೇವೆ. ಅವುಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಗಳಿಂದ ಹಿಡಿಯಲಾಗುವುದಿಲ್ಲ. ಎಲ್ಲಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿವೆಯೋ ಅಂತಹ ಕೃಷಿ ಪ್ರದೇಶಗಳಲ್ಲಿ ಮಾತ್ರ ಗಮನ ನೀಡಲಾಗುತ್ತದೆ" ಎಂದು ಗುಣದಾಸ ಸಮರಸಿಂಘೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಟೋಕ್ ಮಕಾಕ್ ಮಂಕಿ ಶ್ರೀಲಂಕಾದ ಸ್ಥಳೀಯ ಮಂಗವಾಗಿದ್ದು, ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ನ ಕೆಂಪು ಪಟ್ಟಿಯಲ್ಲಿ ಇದೆ. ಅಂದರೆ ಇದು ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ವರ್ಗೀಕರಿಸಲಾಗಿದೆ.

ಕಳೆದ ವಾರ, ಶ್ರೀಲಂಕಾದ ಕೃಷಿ ಸಚಿವ ಮಹಿಂದಾ ಅಮರವೀರಾ ಅವರು 1,000 ಚೀನೀ ಮೃಗಾಲಯಗಳಲ್ಲಿ 1,00,000 ಮಂಗಗಳನ್ನು ಪ್ರದರ್ಶಿಸಲು ಚೀನಾದ ವಿನಂತಿಯನ್ನು ಪರಿಗಣಿಸಬಹುದು ಎಂದು ಹೇಳಿದ್ದರು. ಅಂದರೆ ಚೀನಾ ಈ ಮಂಗಗಳನ್ನು ಪ್ರಯೋಗಕ್ಕೆ ಬಳಸುವುದಿಲ್ಲ ಎಂದು ಸೂಚನೆ ನೀಡಿದ್ದರು.
"ಅವರಿಗೆ ಈ ಮಂಗಗಳು ತಮ್ಮ ಪ್ರಾಣಿಸಂಗ್ರಹಾಲಯಗಳಿಗೆ ಬೇಕು" ಎಂದು ಸಚಿವರು ಹೇಳಿರುವುದಾಗಿ ವರದಿಯಾಗಿದೆ. ಶ್ರೀಲಂಕಾವು ಬಹುತೇಕ ಎಲ್ಲಾ ಜೀವಂತ ಪ್ರಾಣಿಗಳ ರಫ್ತುಗಳನ್ನು ನಿಷೇಧಿಸುತ್ತದೆ. ಆದರೆ ದೇಶವು ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಚೀನಾಗೆ ಮಂಗಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.
ಹಣದ ಕೊರತೆಯಿರುವ ಶ್ರೀಲಂಕಾ ಈ ವರ್ಷ ತನ್ನ ಸಂರಕ್ಷಿತ ಪಟ್ಟಿಯಿಂದ ಹಲವಾರು ಜಾತಿಯ ಪ್ರಾಣಿ ಪಕ್ಷಿಗಳನ್ನು ತೆಗೆದುಹಾಕಿದೆ. ಅದರಲ್ಲಿ ಎಲ್ಲಾ ಮೂರು ಮಂಗಗಳು ಮತ್ತು ನವಿಲುಗಳು ಮತ್ತು ಕಾಡುಹಂದಿಗಳು ಸೇರಿವೆ. ಇವುಗಳನು ರೈತರಿಗೆ ತೊಂದರೆ ಮಾಡಿದರೆ, ರೈತರಿಗೆ ಅವುಗಳನ್ನು ಕೊಲ್ಲಲು ಅವಕಾಶ ಮಾಡಿಕೊಟ್ಟಿದೆ.
ಟೋಕ್ ಮಕಾಕ್ ಮಂಗಗಳು ಶ್ರೀಲಂಕಾದ ಹಲವಾರು ಭಾಗಗಳಲ್ಲಿ ರೈತರ ಬೆಳೆಗಳನ್ನು ನಾಶಮಾಡುತ್ತದೆ. ಇಷ್ಟೇ ಅಲ್ಲದೇ ಈ ಮಂಗಗಳು ಕೆಲವೊಮ್ಮೆ ಜನರ ಮೇಲೆ ದಾಳಿ ಮಾಡುತ್ತದೆ. ಸದ್ಯ ಶ್ರೀಲಂಕಾದಲ್ಲಿ ಈ ಕೋತಿಗಳ ಸಂಖ್ಯೆ ಎರಡರಿಂದ ಮೂರು ಮಿಲಿಯನ್ ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು, ಕೊಲಂಬೊದಲ್ಲಿರುವ ಚೀನಾದ ರಾಯಭಾರ ಕಚೇರಿಯು ಶ್ರೀಲಂಕಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಚೀನಾದ ಖಾಸಗಿ ಕಂಪನಿಗೆ ಅಳಿವಿನಂಚಿನಲ್ಲಿರುವ ಟೋಕ್ ಮಕಾಕ್ ಮಂಗಗಳನ್ನು ರಫ್ತು ಮಾಡುವ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದೆ.
ಚೀನಾದ ರಾಷ್ಟ್ರೀಯ ಅರಣ್ಯ ಮತ್ತು ಹುಲ್ಲುಗಾವಲು ಆಡಳಿತ, ಕಾಡು ಪ್ರಾಣಿಗಳು ಮತ್ತು ಸಸ್ಯಗಳ ಆಮದು ಮತ್ತು ರಫ್ತು ನಿರ್ವಹಣೆಯನ್ನು ನಿರ್ವಹಿಸುವ ಕಚೇರಿಯೂ ಕೂಡ ಶ್ರೀಲಂಕಾದಿಂದ ಮಂಗಗಳನ್ನು ಆಮದು ಮಾಡಿಕೊಳ್ಳಲು ಅಂತಹ ಯಾವುದೇ ವಿನಂತಿಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ವನ್ಯಜೀವಿ ಸಂರಕ್ಷಣಾ ಕಾನೂನು ಮತ್ತು ಕಾನೂನು ಜಾರಿ ವಿಷಯದಲ್ಲಿ ಚೀನಾವನ್ನು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದೆಂದು ಉಲ್ಲೇಖಿಸಿದ ರಾಯಭಾರ ಕಚೇರಿ, ದೇಶವು ಈಗಾಗಲೇ ತನ್ನ ವನ್ಯಜೀವಿ ಸಂರಕ್ಷಣಾ ಕಾನೂನನ್ನು 1988 ರಲ್ಲಿ ಹಲವಾರು ತಿದ್ದುಪಡಿಗಳೊಂದಿಗೆ ಅಳವಡಿಸಿಕೊಂಡಿದೆ. ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳು ಮತ್ತು ಸಸ್ಯಗಳ ವ್ಯಾಪಾರ ಸಮಾವೇಶದ ಒಪ್ಪಂದದಕ್ಕೆ ಬದ್ಧವಾಗಿದೆ ಎಂದು ಹೇಳಿದೆ.












Click it and Unblock the Notifications