Donald Trump: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕಿಚ್ಚು ಹೊತ್ತಿದೆ!
ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಒಂದಲ್ಲ ಒಂದು ಪ್ರಕರಣ ಟ್ರಂಪ್ ಬೆನ್ನಹಿಂದೆ ಬೀಳುತ್ತಿದ್ದು, ಈ ಬಾರಿಯ ಸಮಸ್ಯೆ ಒಂದಷ್ಟು ದೊಡ್ಡದಾಗೇ ಕಾಣುತ್ತಿದೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಟ್ರಂಪ್‌ಗೆ ಇನ್ನೊಂದು ತಲೆನೋವು ಎದುರಾಗಿದೆ. ಹಾಗಾದ್ರೆ ಟ್ರಂಪ್‌ರ ವಿರುದ್ಧ ಈಗ ಎದುರಾಗಿರುವ ಆಪತ್ತು ಯಾವುದು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಬಹುಶಃ ಅಮೆರಿಕ ಚುನಾವಣೆ ಇತಿಹಾಸದಲ್ಲೇ 2020 ಎಂದೆಂದಿಗೂ ಮರೆಯಾಗಲ್ಲ ಅಂತಾ ಹೇಳಬಹುದು. ಯಾಕಂದ್ರೆ 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಜಗತ್ತಿನಲ್ಲಿ ಸದ್ದು ಮಾಡಿತ್ತು. ಇದಕ್ಕೆಲ್ಲ ಪ್ರಮುಖ ಕಾರಣ ಟ್ರಂಪ್ & ಟ್ರಂಪ್ ಬೆಂಬಲಿಗರು ಎಂಬ ಆರೋಪ ಇದೆ. ಈಗ ಇದೇ 2020ರ ಅಧ್ಯಕ್ಷೀಯ ಚುನಾವಣೆ ವಿಚಾರ ಟ್ರಂಪ್‌ಗೆ ಆಘಾತ ನೀಡುತ್ತಿದೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜಿಯಾದ ಫಲಿತಾಂಶ ಬದಲಿಸಲು ಯತ್ನಿಸಿರುವ ಆರೋಪ & ವಂಚನೆ ಸಂಬಂಧಿತ ಕೇಸ್‌ನಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವಿರುದ್ ಅಮೆರಿಕದ ನ್ಯಾಯಾಲಯ ದೋಷಾರೋಪ ಹೊರಿಸಿದೆ.

ಟ್ರಂಪ್ ಮುಂದಿನ ನಡೆ ಏನು?
ಡೊನಾಲ್ಡ್ ಟ್ರಂಪ್ ತಾವು ಅಧಿಕಾರದಲ್ಲಿ ಇದ್ದಾಗಲೂ ಸದ್ದು ಮಾಡಿದ್ರು, ಅಧಿಕಾರವನ್ನು ತೊರೆದಾಗಲೂ ಸದ್ದು ಮಾಡುತ್ತಿದ್ದಾರೆ. ಜಾರ್ಜಿಯಾದ ಚುನಾವಣಾ ಫಲಿತಾಂಶ ಸಂಬಂಧ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿ 18 ಮಂದಿ ವಿರುದ್ಧ ಫುಲ್ಟನ್ ಕೌಂಟಿ ಕೋರ್ಟ್ ದೋಷಾರೋಪ ಹೊರಿಸಿದೆ. ಫಲಿತಾಂಶವನ್ನು ಕಾನೂನುಬಾಹೀರವಾಗಿ ಟ್ರಂಪ್ ಪರ ಬದಲಿಸಲು ನಡೆದ ಪಿತೂರಿಯೊಂದಿಗೆ ಉದ್ದೇಶಪೂರ್ವಕ ಹಾಗೂ ಪ್ರಜ್ಞಾಪೂರ್ವಕವಾಗಿ ಇತರರು ಕೈಜೋಡಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಸೇರಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ 4ನೇ ಕೇಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ರಾಜಕೀಯ ಪ್ರೇರಿತ ಎಂದು ಟ್ರಂಪ್ ವಾಗ್ದಾಳಿ
ತಮ್ಮ ವಿರುದ್ಧದ ಈ ಕೇಸ್ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧದ ದೋಷಾರೋಪಗಳು ರಾಜಕೀಯ ಪ್ರೇರಿತ ಎಂದು ಟ್ರಂಪ್ ಗಂಭೀರ ಆರೋಪ ಮಾಡಿದ್ದು, ರಾಜಕೀಯ ಪ್ರೇರಿತ ಆರೋಪವನ್ನ ಮೂರು ವರ್ಷ ಹಿಂದೆಯೇ ಹೊರಿಸಬಹುದಿತ್ತು. ಆದರೆ ಮುಂದಿನ ವರ್ಷದ ಚುನಾವಣೆಗಾಗಿ ನಾನು ಪ್ರಚಾರ ಆರಂಭಿಸಿದ್ದು ಈಗ ವ್ಯವಸ್ಥಿತವಾಗಿ ಇಂತಹ ಆರೋಪ ಹೊರಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ತಮ್ಮ ವಿರೋಧಿಗಳ ವಿರುದ್ಧ ತೊಡೆತಟ್ಟಿದ್ದಾರೆ ಟ್ರಂಪ್. ಈ ಮೂಲಕ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಈಗಲೇ ಕಿಚ್ಚು ಹೊತ್ತಿಕೊಂಡಿದೆ.

ಜೈಲಿಗೆ ಹೋದರೂ ಟ್ರಂಪ್ ಗೆಲ್ಲಬಹುದು!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಂದೇ ಬಿಡುತ್ತೆ. ಚುನಾವಣೆ ಹೀಗೆ ಹತ್ತಿರದಲ್ಲೇ ಇರುವಾಗ ಪ್ರಶ್ನೆಯೊಂದು ಕಾಡುತ್ತಿದೆ. ಅಕಸ್ಮಾತ್ ಟ್ರಂಪ್ ಜೈಲಿಗೆ ಹೋಗಿದ್ದೇ ಆದರೆ ಆಗ ಮುಂದೇನು?ಅಂತಾ. ಅದಕ್ಕೂ ಉತ್ತರ ಇದ್ದು ಅಮೆರಿಕದ ಕಾನೂನಿನ ಪ್ರಕಾರ ಜೈಲಿನಿಂದಲೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಇದೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅಕಸ್ಮಾತ್ ಜೈಲಿಗೆ ಹೋದರೂ ಅಧ್ಯಕ್ಷರಾಗುವ ಕನಸಿಗೆ ಸಮಸ್ಯೆ ಆಗದು. ಈ ನಡುವೆ ಜೈಲಿನಲ್ಲೇ ಇದ್ದರೂ ಅಧ್ಯಕ್ಷರು ತಮ್ಮ ಕಾರ್ಯಗಳನ್ನ ನಡೆಸಲು ಕೂಡ ಅಮೆರಿಕ ಕಾನೂನು ಅನುಮತಿ ನೀಡುತ್ತದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕ್ಷಣಕ್ಷಣಕ್ಕೂ ರಂಗೇರುತ್ತಿದೆ. ಇನ್ನೂ ಒಂದು ವರ್ಷಗಳ ಸಮಯ ಇದ್ದರೂ ಈಗಲೇ ಕಾವು ಜೋರಾಗಿದೆ. ಅತ್ತ ಹಾಲಿ ಅಧ್ಯಕ್ಷ ಜೋ ಬೈಡನ್ ಪರ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ಪ್ರಚಾರ ಶುರು ಮಾಡಿದ್ದರೆ, ಇತ್ತ ಟ್ರಂಪ್ ಪರವಾಗೂ ಅವರ ಬೆಂಬಲಿಗರು ಕ್ಯಾಂಪೇನ್ ಶುರು ಮಾಡಿದ್ದಾರೆ. ಅಲ್ಲದೆ ಟ್ರಂಪ್ ಕೂಡ ಅಮೆರಿಕದ ಮೂಲೆ ಮೂಲೆ ಸುತ್ತಾಡಿ ಪ್ರಚಾರ ಮಾಡುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಟ್ರಂಪ್‌ಗೆ ಭಾರಿ ಅಡ್ಡಿ ಎದುರಾಗುತ್ತಿದೆ. ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications