ಅಮೆರಿಕ ಜೊತೆಗೆ ಇರಾನ್ ಸಂಧಾನ ಮಾತುಕತೆ, ಕೆಲವೇ ಹೊತ್ತಲ್ಲಿ ಸಭೆ ಆರಂಭ | USA And Iran
ಅಮೆರಿಕ ಮತ್ತೊಮ್ಮೆ ಇರಾನ್ ಜೊತೆಗೆ ಸಂಧಾನ ಸಭೆ ನಡೆಸಲು ಮುಂದೆ ಬಂದಿದೆ, ಇದೀಗ ಕಳೆದ ಕೆಲ ದಿನಗಳಲ್ಲಿ ನಡೆಯುತ್ತಿರುವ 3ನೇ ಸಭೆಗೆ ಸ್ವಿಝರ್ಲ್ಯಾಂಡ್‌ನ ಜಿನೇವಾದಲ್ಲಿ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಅಮೆರಿಕ ಮತ್ತು ಇರಾನ್ ಯುದ್ಧಕ್ಕೆ ಸಜ್ಜಾಗಿವೆ ಎಂಬ ಭೀತಿ ನಡುವೆ, ಶಾಂತಿ ಮಾತುಕತೆ ಮಾಡಿಸಲು ಮಧ್ಯಪ್ರಾಚ್ಯದ ದೇಶಗಳು ಒದ್ದಾಡಿದ್ದವು. ಅದರಲ್ಲೂ ಓಮಾನ್ ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಶ್ರಮವಹಿಸಿ, ಎರಡೂ ದೇಶಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ. ಹೀಗಿದ್ದಾಗ, ಕೆಲವೇ ಸಮಯದಲ್ಲಿ ಜಿನೇವಾದಲ್ಲಿ ಮಹತ್ವದ ಚರ್ಚೆ ಆರಂಭ ಆಗಲಿದೆ. ಅಲ್ಲದೆ ಪರಮಾಣು ಶಾಂತಿ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆ ಕೂಡ ಇದೆ.
ಇರಾನ್ ತನ್ನ ತಂಟೆಗೆ ಬಂದರೆ ಸುಮ್ಮನೆ ಇರಲ್ಲ ಅಂತಿದೆ, ಇನ್ನೊಂದು ಕಡೆ ಅಮೆರಿಕ ಸೇನೆ ತನ್ನ ಎಲ್ಲಾ ಅಸ್ತ್ರಗಳನ್ನು ಇರಾನ್ ಗಡಿಗೆ ತೆಗೆದುಕೊಂಡು ಹೋಗಿದೆ. ಇಬ್ಬರೂ ಯುದ್ಧಕ್ಕೆ ಸನ್ನದ್ಧ ಎಂಬ ಘೋಷಣೆ ಕೂಗುತ್ತಾ ಕೈಯಲ್ಲಿ ಅಸ್ತ್ರಗಳನ್ನು ಹಿಡಿದುಕೊಂಡು ಕಾಯುತ್ತಿದ್ದಾರೆ. ಇಂತಹ ಕಠಿಣವಾದ ವಾತಾವರಣದಲ್ಲಿ ಶಾಂತಿ ಮಾತುಕತೆಗೆ ಕಾಲ ಕೂಡಿಬಂದಿದೆ, ಅಲ್ಲದೆ ಅಮೆರಿಕ ಮತ್ತು ಇರಾನ್ ಈ ಯುದ್ಧದ ಮಾತು ಬಿಟ್ಟು ತಣ್ಣಗೆ ಇರುವ ಕಾಲಘಟ್ಟ ಎದುರಾಗಿದೆ. ಪ್ರಮುಖವಾಗಿ ಪರಮಾಣು ಶಾಂತಿ ಮಾತುಕತೆ ಯಶಸ್ಸು ಕಂಡರೆ ಮಧ್ಯಪ್ರಾಚ್ಯಕ್ಕೆ ದೊಡ್ಡ ರಿಲೀಫ್ ಸಿಕ್ಕಂತೆ ಅಂತಿದ್ದಾರೆ ತಜ್ಞರು.

ಟ್ರಂಪ್ ಹೇಳಿಕೆಗಳ ವಿರುದ್ಧ ಆಕ್ರೋಶ
ಈಗಾಗಲೇ ಇರಾನ್ ನಾಯಕರು ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ವಿರುದ್ಧ ಪದೇ ಪದೇ ತಮ್ಮ ಆಕ್ರೋಶ ಹೊರ ಹಾಕುತ್ತಾ ಬಂದಿದ್ದಾರೆ. ಪ್ರಮುಖವಾಗಿ ಇರಾನ್ ಗಡಿಯಲ್ಲಿ ಅಮೆರಿಕದ ಸೇನೆ ಮತ್ತು ಯುದ್ಧ ನೌಕೆಗಳ ನಿಯೋಜನೆ ವಿಚಾರದಲ್ಲಿ ಪದೇ ಪದೇ ಕಿರಿಕ್ ಆಗಿದೆ. ಅದರಲ್ಲೂ ಇನ್ನೇನು ಈಗ ಯುದ್ಧ ಶುರು ಆಗೇ ಬಿಡುತ್ತೆ ಎಂಬ ವಾತಾವರಣದಲ್ಲಿ ಮತ್ತೆ ಎಲ್ಲವೂ ತಣ್ಣಗಾಗುತ್ತಿದೆ. ಮತ್ತೊಂದು ಕಡೆ ಇರಾನ್ ಮತ್ತು ಅಮೆರಿಕ ನಡುವಿನ ಈ ಯುದ್ಧದ ವಾತಾವರಣ ಜಾಗತಿಕ ಷೇರು ಮಾರುಕಟ್ಟೆ ಅಲ್ಲಾಡಿ ಹೋಗುವಂತೆ ಮಾಡಿದೆ.
ಒಟ್ನಲ್ಲಿ ಆದಷ್ಟು ಬೇಗ ಇರಾನ್ ಮತ್ತು ಅಮೆರಿಕ ನಡುವೆ ಒಪ್ಪಂದ ಏರ್ಪಡಬೇಕಿದ್ದು, ಮಧ್ಯಪ್ರಾಚ್ಯ ತಣ್ಣಗೆ ಆಗಬೇಕು. ಅಲ್ಲಿಯ ತನಕ ಇದೇ ರೀತಿಯ ತಿಕ್ಕಾಟ ಮತ್ತು ಭಯದ ವಾತಾವರಣ ಕಾಡುತ್ತಾ ಇರುತ್ತೆ ಎಂಬುದರಲ್ಲಿ ಎರಡನೇ ಮಾತು ಇಲ್ಲ. ಹೀಗಿದ್ದಾಗ ಪರಮಾಣು ಶಾಂತಿ ಮಾತುಕತೆಗೆ ಈಗ ವೇದಿಕೆ ಸಿದ್ಧವಾಗಿದ್ದು, ಇರಾನ್ ಮತ್ತು ಅಮೆರಿಕ ಅಧಿಕಾರಿಗಳು ಕೂತು ಮಹತ್ವದ ಚರ್ಚೆ ನಡೆಸುವರು.
ಮತ್ತೊಂದು ಮಹಾಯುದ್ಧದ ಆತಂಕ ಶುರು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಜ್ಞೆ ಪಾಲಿಸಲು ಸುಮಾರು ಅರ್ಧ ಲಕ್ಷದಷ್ಟು ಅಮೆರಿಕದ ಸೈನಿಕರು ಸಜ್ಜಾಗಿದ್ದಾರೆ. ಇರಾನ್ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಪದೇ ಪದೇ ನಿರ್ಧಾರವನ್ನು ಬದಲಾವಣೆ ಮಾಡುತ್ತಿದ್ದಾರಾ? ಎಂಬ ಪ್ರಶ್ನೆಗಳ ನಡುವೆ ಆದಷ್ಟು ಬೇಗ ದೊಡ್ಡ ಗಲಾಟೆ ಶುರುವಾಗಿ ಎಡವಟ್ಟು ಆಗಿಬಿಡುತ್ತಾ ಅನ್ನೋ ಚರ್ಚೆ ಕೂಡ ಶುರುವಾಗಿದೆ. ಇದೇ ಕಾರಣಕ್ಕೆ ಇರಾನ್ ಸುತ್ತಮುತ್ತ ಇರುವ ದೇಶಗಳು ಕೂಡ ಭಯದಲ್ಲಿ ನರಳಿವೆ, ಹಾಗೇ ಯಾವ ಕ್ಷಣದಲ್ಲಿ ಏನಾಗುತ್ತೋ? ಎನ್ನುವ ಚಿಂತೆ ಕೂಡ ಶುರುವಾಗಿದೆ. ಇದನ್ನೆಲ್ಲಾ ಮೀರಿ ಈ ಸಮಯದಲ್ಲಿ ಚೀನಾ ಮತ್ತು ರಷ್ಯಾ ಕೂಡ ಇರಾನ್ ಜೊತೆಗೆ ಸೇರಲು ಸಜ್ಜಾಗಿವೆ. ಇದನ್ನೆಲ್ಲಾ ನೋಡಿ ಹೇಳುವುದಾದರೆ ಇರಾನ್ ಮತ್ತು ಅಮೆರಿಕ ನಡುವಿನ ಸೇನಾ ಕಾರ್ಯಾಚರಣೆ ಮತ್ತೊಂದು ಮಹಾಯುದ್ಧದ ರೂಪ ಪಡೆದರೂ ಅಚ್ಚರಿ ಇಲ್ಲ. ಈ ಕಾರಣಗಳಿಂದ ಈಗ ಯುದ್ಧ ನಿಲ್ಲಿಸಲು ಸಕಲ ಪ್ರಯತ್ನ ಮಾಡುತ್ತಿದೆ ಒಮಾನ್ ದೇಶ.












Click it and Unblock the Notifications