ಟ್ರಂಪ್ ಒಬ್ಬ ಶೋಮ್ಯಾನ್, ಅಮೆರಿಕ ದಾಳಿಯಿಂದ ನಮಗೆ ನಷ್ಟವಾಗಿಲ್ಲ: ಇರಾನ್ ಸುಪ್ರೀಂ ಲೀಡರ್ ಮೊದಲ ಪ್ರತಿಕ್ರಿಯೆ
ಇಸ್ರೇಲ್ ವಿರುದ್ಧದ ಕದನ ವಿರಾಮದ ಬಳಿಕ ಇರಾನಿನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಮೊದಲ ಬಾರಿಗೆ ಪ್ರತಿಕ್ರಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. ಅಮೆರಿಕದ ಯುದ್ಧ ವಿಮಾನಗಳು ಇರಾನ್‌ನ ಪ್ರಮುಖ ಅಣು ಕೇಂದ್ರಗಳ ಮೇಲೆ ನಡೆಸಿದ ದಾಳಿಯಿಂದ ಹೆಚ್ಚಿನ ನಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಅಮೆರಿಕದ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಆತನೊಬ್ಬ ಶೋಮ್ಯಾನ್, ಈ ಸಂಘರ್ಷದಲ್ಲಿ ಆತನಿಗೆ ತೋರಿಕೆಯ ಅಗತ್ಯವಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ 12 ದಿನಗಳ ಯುದ್ಧದಲ್ಲಿ ಅಮೆರಿಕ ನೇರವಾಗಿ ಭಾಗವಹಿಸಿತು. ಈ ಸಂದರ್ಭ ಅಮೆರಿಕದ ಸೇನೆಗಳು ಇರಾನ್‌ನ ಪ್ರಮುಖ ಪರಮಾಣು ನೆಲೆಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿತು. ಈ ಕುರಿತು ಹೇಳಿಕೆ ನೀಡಿದ್ದ, ಡೊನಾಲ್ಡ್ ಟ್ರಂಪ್, ಅಮೆರಿಕದ ದಾಳಿಯನ್ನು ಸಮರ್ಥಿಸಿಕೊಂಡಿದ್ದರು. ಈ ದಾಳಿಯನ್ನು ಹಿರೋಶಿಮಾ-ನಾಗಾಸಾಕಿಗೆ ಹೋಲಿಸಿದ್ದ ಟ್ರಂಪ್, ಇರಾನಿನ ಪರಮಾಣು ನೆಲೆಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದ್ದಾಗಿ ಹೇಳಿದ್ದರು.

ಟ್ರಂಪ್ ಹೇಳಿಕೆಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿರುವ ಖಮೇನಿ, 'ಅಮೆರಿಕದ ದಾಳಿಯಿಂದ ಹೆಚ್ಚಿನ ಹಾನಿಯಾಗಿಲ್ಲ. ಅವರು ಏನನ್ನೂ ಸಾಧಿಸಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಜಗತ್ತಿನ ಮುಂದೆ ತೋರಿಸಿಕೊಳ್ಳುವುದಕ್ಕಾಗಿ ಈ ದಾಳಿಯನ್ನು ನಡೆಸಿದರು ಎಂದು ಖಮೇನಿ ಟೀಕಿಸಿದ್ದಾರೆ.
'ಇರಾನ್‌ನ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದರೂ, ಇದರಿಂದ ಇರಾನ್‌ಗೆ ನಷ್ಟವಾಗಿಲ್ಲ. ಟ್ರಂಪ್ ತೆಗೆದುಕೊಂಡಿರುವ ಈ ತೀರ್ಮಾನಗಳು ಯುದ್ಧವನ್ನು ತಡೆಯುವ ಗಂಭೀರ ಉದ್ದೇಶವನ್ನು ಹೊಂದಿರಲಿಲ್ಲ. ರಾಜಕೀಯ ಪ್ರದರ್ಶನಕ್ಕಾಗಿ, ಜಗತ್ತಿಗೆ ತಮ್ಮ ಶಕ್ತಿಯನ್ನು ತೋರಿಸುವ ಉದ್ದೇಶಗಳನ್ನು ಹೊಂದಿದ್ದವು' ಎಂದು ಖಮೇನಿ ಆರೋಪಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖಮೇನಿ, 'ಪ್ರೀತಿಯ ಇರಾನ್ ಜಯ ಗಳಿಸಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು. ಅಮೆರಿಕದ ಆಡಳಿತವು ನೇರವಾಗಿ ಯುದ್ಧದಲ್ಲಿ ಪ್ರವೇಶ ಮಾಡಿತು. ಅದು ಹಾಗೆ ಮಾಡದೆ ಹೋಗಿದ್ದರೆ, ಜಿಯೋನಿಸ್ಟ್ (ಯದೂದಿ ರಾಷ್ಟ್ರವಾದಿ) ಆಡಳಿತ ಸಂಪೂರ್ಣವಾಗಿ ನಾಶವಾಗುತ್ತಿತ್ತು ಎಂಬ ಭಯವಿತ್ತು. ಆದರೆ, ಈ ಯುದ್ಧದಿಂದ ಅಮೆರಿಕಕ್ಕೆ ಯಾವುದೇ ರೀತಿಯಲ್ಲಿ ಲಾಭವಾಗಿಲ್ಲ. ಈಗ ಇಸ್ಲಾಮಿಕ್ ರಿಪಬ್ಲಿಕ್ ( ಇರಾನ್ ) ಗೆಲುವು ಸಾಧಿಸಿದೆ. ಇದರಿಂದ ಅಮೆರಿಕಕ್ಕೆ ಬಲವಾದ ಪೆಟ್ಟು ಬಿದ್ದಿದೆ' ಎಂದು ಹೇಳಿದ್ದಾರೆ.
ಖಮೇನಿ ಅವರ ಈ ಹೇಳಿಕೆಗಳು ಅಮೆರಿಕ ಮತ್ತು ಇರಾನ್ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಜಟಿಲಗೊಳಿಸಬಹುದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇಂತಹ ಟೀಕೆಗಳು ಎರಡೂ ದೇಶಗಳ ನಡುವಿನ ವಿಶ್ವಾಸದ ಕೊರತೆ ಹೆಚ್ಚಿಸಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.












Click it and Unblock the Notifications