America Attacks Iran: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು: ಇರಾನ್‌ನಲ್ಲಿರುವ ಭಾರತೀಯರಿಗೆ ಮಹತ್ವದ ಸಲಹೆ
America Attacks Iran: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಈಗ ಉತ್ತುಂಗಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ನೀಡಿದ್ದ ಗಡುವು ಮುಗಿಯುವ ಮೊದಲೇ, ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿ ದಾಳಿ ನಡೆಸಿವೆ. ಇದರ ಬೆನ್ನಲ್ಲೇ ಭಾರತೀಯ ಪ್ರಜೆಗಳಿಗೆ ಅಭಯದ ಸೂಚನೆಯನ್ನು ನೀಡಲಾಗಿದೆ.
ತಮ್ಮ 'ಟ್ರೂತ್ ಸೋಶಿಯಲ್'ನಲ್ಲಿ ಅಧ್ಯಕ್ಷ ಟ್ರಂಪ್ ಅವರು, "ಇಂದು ರಾತ್ರಿ ಇರಾನ್‌ನಲ್ಲಿ ಒಂದು ಇಡೀ ನಾಗರಿಕತೆಯೇ ಅಂತ್ಯವಾಗಲಿದೆ, ಅದು ಮತ್ತೆಂದೂ ಮರಳಿ ಬರುವುದಿಲ್ಲ. ಇದು ಸಂಭವಿಸುವುದು ನನಗೆ ಇಷ್ಟವಿಲ್ಲ, ಆದರೆ ಬಹುಶಃ ಇದು ನಡೆದೇ ತೀರುತ್ತದೆ," ಎಂದು ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಸಿದ್ದಾರೆ.

ಖಾರ್ಗ್ ದ್ವೀಪದ ಮೇಲೆ ದಾಳಿ
ಇರಾನ್‌ನ ಶೇಕಡ 90ರಷ್ಟು ಕಚ್ಚಾ ತೈಲ ರಫ್ತು ಮಾಡುವ ಖಾರ್ಗ್ ದ್ವೀಪದ ಮೇಲೆ ಸರಣಿ ದಾಳಿಗಳು ನಡೆದಿವೆ. ಅಮೆರಿಕದ ಮಿಲಿಟರಿ ಪಡೆಗಳು ಇರಾನ್‌ನ ಸುಮಾರು 50ಕ್ಕೂ ಹೆಚ್ಚು ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಿ, ಬಂಕರ್‌ಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ನಾಶಪಡಿಸಿವೆ.
ಇರಾನ್‌ಗೆ ಬೆದರಿಕೆ ಹಾಕಿದ ಟ್ರಂಪ್
ಇರಾನ್ ತನ್ನ ಹಾರ್ಮುಜ್ ಜಲಸಂಧಿಯನ್ನು ಮರುಪ್ರಾರಂಭಿಸದಿದ್ದರೆ, ಅಲ್ಲಿನ ಎಲ್ಲಾ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಬಾಂಬ್ ಹಾಕಿ ಧ್ವಂಸಗೊಳಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಟೆಹ್ರಾನ್‌ನ ಉತ್ತರ ಭಾಗದಲ್ಲಿ 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರೈಲ್ವೇ ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು, "ನಾನು ಸೇರಿದಂತೆ 1.4 ಕೋಟಿ ಇರಾನಿಯನ್ನರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ಧರಿದ್ದೇವೆ," ಎಂದು ಹೇಳಿದ್ದಾರೆ. ಅಲ್ಲದೆ, ಅಮೆರಿಕ ತನ್ನ ಮಿತಿ ಮೀರಿದರೆ ಪ್ರಾದೇಶಿಕ ಮಟ್ಟ ಮೀರಿ ಪ್ರತಿದಾಳಿ ನಡೆಸುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಸಿದೆ.
ಭಾರತೀಯರಿಗೆ ಎಚ್ಚರಿಕೆ ಸಂದೇಶ
ಯುದ್ಧದ ತೀವ್ರತೆ ಹೆಚ್ಚುತ್ತಿರುವುದರಿಂದ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ "ಇದ್ದಲ್ಲೇ ಇರಿ, ಸುರಕ್ಷಿತವಾಗಿರಿ" ಎಂಬ ತುರ್ತು ಸೂಚನೆಯನ್ನು ಭಾರತ ಸರ್ಕಾರ ನೀಡಿದೆ. ಇನ್ನೂ ಈ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದು, ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದೆ. ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದು 1970ರ ದಶಕದ ತೈಲ ಬಿಕ್ಕಟ್ಟಿಗಿಂತಲೂ ಭೀಕರ ಪರಿಣಾಮ ಬೀರಬಹುದು ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ಆತಂಕ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಟ್ರಂಪ್ ನೀಡಿದ ಕಠಿಣ ಸಂದೇಶ
ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಈಗ ಕೈಮೀರಿ ಹೋಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ನೀಡಿದ್ದ ಗಡುವು ಮುಕ್ತಾಯಗೊಳ್ಳುತ್ತಿದ್ದಂತೆ, ಜಗತ್ತೇ ಬೆಚ್ಚಿಬೀಳುವಂತಹ ಬೆಳವಣಿಗೆಗಳು ಸಂಭವಿಸಿವೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದಕ್ಕೆ ಪ್ರತಿಯಾಗಿ ಅಮೆರಿಕ ಈಗ "ಸಂಪೂರ್ಣ ವಿನಾಶ"ದ ಎಚ್ಚರಿಕೆ ನೀಡಿದೆ.
"ಇಂದು ರಾತ್ರಿ ಇರಾನ್‌ನಲ್ಲಿ ಒಂದು ಇಡೀ ನಾಗರಿಕತೆಯೇ ಅಂತ್ಯವಾಗಲಿದೆ" ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಅಮೆರಿಕದ ಬೇಡಿಕೆಗಳಿಗೆ ಒಪ್ಪದಿದ್ದರೆ, ಇರಾನ್ ಅನ್ನು ಮತ್ತೆ ಎಂದಿಗೂ ಚೇತರಿಸಿಕೊಳ್ಳದಂತೆ ಧ್ವಂಸ ಮಾಡುವುದಾಗಿ ಅವರು ಗುಡುಗಿದ್ದಾರೆ. ಈಗಾಗಲೇ ಅಲ್ಲಿನ ಹಲವು ಕೇಂದ್ರಗಳ ಮೇಲೆ ಸರಣಿ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ.
ಜಗತ್ತಿನ ಒಟ್ಟು ತೈಲ ಪೂರೈಕೆಯ ಗಣನೀಯ ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಇದನ್ನು ಬಂದ್ ಮಾಡಿರುವುದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಸಿದೆ. "ಜಲಸಂಧಿಯನ್ನು ತಕ್ಷಣವೇ ತೆರೆಯಿರಿ, ಇಲ್ಲದಿದ್ದರೆ ನಿಮ್ಮ ದೇಶದ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳನ್ನು ಧ್ವಂಸ ಮಾಡುತ್ತೇವೆ" ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಅಮೆರಿಕ ಬೆದರಿಕೆಗೆ ಬಗ್ಗದ ಇರಾನ್
ಮತ್ತೊಂದೆಡೆ, ಅಮೆರಿಕದ ಈ ಬೆದರಿಕೆಗೆ ಬಗ್ಗದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ತಮ್ಮ ದೇಶದ ಕೋಟ್ಯಂತರ ಜನರು ಪ್ರಾಣತ್ಯಾಗಕ್ಕೆ ಸಿದ್ಧರಿದ್ದಾರೆ ಎಂದು ಘೋಷಿಸಿದ್ದಾರೆ. ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಇರಾನ್ ಬೆಂಬಲಿತ ಪಡೆಗಳು ಪ್ರತಿದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.












Click it and Unblock the Notifications