ನಮ್ಮ ಜೇಬಲ್ಲಿ ಕಾಸು ಖಾಲಿ, ದಯವಿಟ್ಟು ಬಿಟ್ಟುಬಿಡಿ!
ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಸಹಾಯ ಮಾಡುವುದು ಅಮೆರಿಕಗೆ ಈಗ ಅತ್ಯಗತ್ಯ. ಅಕಸ್ಮಾತ್ ಈ ಸಹಾಯ ನಿಂತು ಹೋದರೆ ಅಮೆರಿಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಬಗ್ಗೆ ಅವಮಾನ ಎದುರಿಸಬೇಕಾಗುತ್ತದೆ. ಆದರೂ ಅಮೆರಿಕದಲ್ಲಿ ಉಂಟಾಗಿರುವ ಆಂತರಿಕ ಕಲಹ ಉಕ್ರೇನ್‌ಗೆ ಸಿಗುತ್ತಿರುವ ನೆರವಿಗೆ ಅಡ್ಡಿ ಮಾಡುತ್ತಿದೆ. ಅದರಲ್ಲೂ ಅಮೆರಿಕ ಆಡಳಿತ ಪಕ್ಷದಲ್ಲೇ ಉಕ್ರೇನ್‌ಗೆ ನೆರವು ನೀಡುವ ಬಗ್ಗೆ ಒಮ್ಮತ ಇಲ್ಲ. ಇಷ್ಟೆಲ್ಲದರ ನಡುವೆ ಈಗ ಉಕ್ರೇನ್ ಕೂಡ, ಅಮೆರಿಕದ ನಿರ್ಧಾರದಿಂದ ಬೆಚ್ಚಿಬಿದ್ದಿದೆ!
ಹೌದು, ರಷ್ಯಾದ ದಾಳಿ ಹಿಮ್ಮೆಟ್ಟಿಸಲು ಉಕ್ರೇನ್‌ಗೆ ನೆರವು ನೀಡಲು ತನ್ನ ಬಳಿ ಹಣವೇ ಇಲ್ಲ. ಹೀಗಾಗಿ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ರವಾನಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ ದೊಡ್ಡಣ್ಣ ಅಮೆರಿಕ. ಈ ಕುರಿತು ಅಮೆರಿಕದ ರಕ್ಷಣಾ ಇಲಾಖೆ ಉಕ್ರೇನ್‌ಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ 50 ರಾಷ್ಟ್ರಗಳ ಮಾಸಿಕ ಸಭೆ ಕರೆಯಲು ಮುಂದಾಗಿದೆ. ಈ ಮೂಲಕ ಉಕ್ರೇನ್‌ಗೆ ಸಹಾಯ ಮಾಡಲು ಅಂತಿಮ ಪ್ರಯತ್ನ ಆರಂಭಿಸಿದೆ. ಆದರೂ, ಈ ಪರಿಸ್ಥಿತಿ ನೋಡುತ್ತಿದ್ದರೆ ಅಮೆರಿಕಗೆ ಹಿನ್ನಡೆ ಆಗಿದೆಯಾ? ಎಂಬ ಅನುಮಾನವೂ ಈಗ ಮೂಡುತ್ತಿದೆ.

ಏನಿದು ಅಮೆರಿಕದ ಮಹತ್ವದ ಸಭೆ?
ಅಷ್ಟಕ್ಕೂ ಈ ಹಿಂದೆ ಅಂದರೆ 2022ರ ಏಪ್ರಿಲ್‌ನಲ್ಲಿ ಉಕ್ರೇನ್ ನೆರವಿಗಾಗಿ ಅಂತಲೇ ಒಂದು ಅಂತಾರಾಷ್ಟ್ರೀಯ ಸಂಘಟನೆ ರಚಿಸಿತ್ತು ಅಮೆರಿಕ. ಈ ಸಭೆಯಲ್ಲಿ ದೀರ್ಘಕಾಲೀನ ಸಹಾಯ ಮತ್ತು ನೆರವಿನ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಪೆಂಟಗನ್ ಅಧಿಕಾರಿಗಳು, ಮಾಹಿತಿ ನೀಡಿದ್ದಾರೆ. ಹಾಗೇ ಸದ್ಯಕ್ಕೆ ಉಕ್ರೇನ್‌ಗೆ ಸಹಾಯ ಆಗುವಂತೆ ತಾತ್ಕಾಲಿಕವಾಗಿ ಸುಮಾರು 10 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಜಂಟಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ ಈಗ. ಮತ್ತೊಂದು ಕಡೆ ರಷ್ಯಾ ಸೇನೆ ಉಕ್ರೇನ್ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿದೆ.
ಉಕ್ರೇನ್ ನಗರಗಳು ಪುಡಿ ಪುಡಿ!
ಅಷ್ಟಕ್ಕೂ ಉಕ್ರೇನ್‌ನ ಕೀವ್ ಸೇರಿ ಇತರೆ ಪ್ರಮುಖ ನಗರಗಳಲ್ಲಿ ವಸತಿ ಕಟ್ಟಡಗಳ ಗುರಿಯಾಗಿಸಿ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಸುಮಾರು 4 ಉಕ್ರೇನ್ ಪ್ರಜೆಗಳು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ ರಷ್ಯಾ ಗಡಿಗೆ ಹೊಂದಿಕೊಂಡ ರೀತಿ ಇರುವ ನಗರಗಳ ಮೇಲೆ, ಭೀಕರ ದಾಳಿ ನಡೆಯುತ್ತಿದೆ. ಉಕ್ರೇನ್‌ನ 2ನೇ ಅತಿ ದೊಡ್ಡ ನಗರ ಹಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿಯಿಂದ ಹಲವು ಕಟ್ಟಡ ಪುಡಿ ಪುಡಿ ಆಗಿವೆ ಎನ್ನಲಾಗಿದೆ. ಇನ್ನು 42 ಮಂದಿ ಗಾಯಗೊಂಡಿರುವ ಬಗ್ಗೆ ಕೂಡ ಮಾಹಿತಿ ಸಿಕ್ಕಿದೆ.

ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ದಿನಗಳ ಕಾಲ ಅಥವಾ ವರ್ಷಗಳ ಕಾಲ ಇದೇ ರೀತಿ ಮುಂದುವರಿಯುವ ಸೂಚನೆ ಸಿಗುತ್ತಿದೆ. ಅದರಲ್ಲೂ ಅಮೆರಿಕ ಈ ಯುದ್ಧವನ್ನ ಈಗ ತನ್ನ ಪ್ರತಿಷ್ಠೆಯಾಗಿ ಸ್ವೀಕಾರ ಮಾಡಿದೆ. ಹೀಗಾಗಿ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದ್ದು ಮುಂದೆ ಏನಾಗುತ್ತೆ ಅನ್ನೋ ಭಯ ಕೂಡ ಆವರಿಸಿದೆ.












Click it and Unblock the Notifications