ಇರಾನ್ ಮೇಲೆ ದಾಳಿ ಹಿನ್ನೆಲೆ: ಅಮೆರಿಕದ ನಗರಗಳಲ್ಲಿ ಭಾರೀ ಕಟ್ಟೆಚ್ಚರ, ಬಂಧಿಖಾನೆಗಳಾದ ನ್ಯೂಯಾರ್ಕ್, ವಾಷಿಂಗ್ಟನ್
ಇರಾನ್‌ನ ಪರಮಾಣು ನೆಲೆಗಳ ಮೇಲೆ ಅಮೆರಿಕವು ವಾಯುದಾಳಿಗಳನ್ನು ನಡೆಸಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳನ್ನು ಭಾರೀ ಕಟ್ಟೆಚ್ಚರದಲ್ಲಿಡಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಸ್ಥಳಗಳ ಬಳಿ ಹೆಚ್ಚುವರಿ ಪೊಲೀಸ್ ಪೇಟ್ರೋಲಿಂಗ್ ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ನ್ಯೂಯಾರ್ಕ್ ಪೊಲೀಸ್ ಇಲಾಖೆ, 'ಇರಾನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಗಮನಿಸುತ್ತಿದ್ದೇವೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರಾದ್ಯಾಂತ ಭದ್ರತೆಯನ್ನು ಬಿಗಿಗೊಳಿಸಿದ್ದೇವೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜತಾಂತ್ರಿಕ ಸ್ಥಳಗಳಿಗೆ ಹೆಚ್ಚುವರಿ ಪೊಲೀಸ್ ಹಾಗೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ' ಎಂದು ತಿಳಿಸಿದೆ.

ಇದೇ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ವಾಷಿಂಗ್ಟನ್‌ನ ಮೆಟ್ರೋಪೊಲಿಟನ್ ಪೊಲೀಸ್ ಇಲಾಖೆ, 'ಸ್ಥಳೀಯ ಪೊಲೀಸ್, ರಾಜ್ಯ ಭದ್ರತಾ ಪಡೆ ಮತ್ತು ಕೇಂದ್ರದ ಕಾನೂನು ಸಂಸ್ಥೆಗಳೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಎಲ್ಲ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ. ಈ ಸಮಯದಲ್ಲಿ ನಮಗೆ ಯಾವುದೇ ನಿರ್ದಿಷ್ಟ ಬೆದರಿಕೆಗಳಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ನಗರಾದ್ಯಾಂತ ಧಾರ್ಮಿಕ ಸಂಸ್ಥೆಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದೇವೆ' ಎಂದು ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಲಾಸ್ ಏಂಜಲಿಸ್ ಮೇಯರ್ ಕ್ಯಾರೆನ್ ಬಾಸ್, 'ಈ ಸಮಯದಲ್ಲಿ ಯಾವುದೇ ಬೆದರಿಕೆಗಳಿಲ್ಲ. ಮುನ್ನೆಚ್ಚರಿಕೆಯಾಗಿ ಚರ್ಚ್‌ಗಳು, ಸಾರ್ವಜನಿಕ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳ ಹತ್ತಿರ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ' ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇರಾನ್ ಮೇಲೆ ಅಮೆರಿಕ ದಾಳಿ
ಅಮೆರಿಕವು ಇರಾನ್‌ನ ಮೂರು ಪರಮಾಣು ಸೈಟ್‌ಗಳ ಮೇಲೆ ದಾಳಿ ನಡೆಸಿದೆ. ಇದರೊಂದಿಗೆ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗಿದೆ. ಇದು ಸಂಘರ್ಷವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ದಾಳಿಗಳ ನಂತರ ವೈಟ್ ಹೌಸ್‌ನಲ್ಲಿ ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಇರಾನ್‌ನ ಪ್ರಮುಖ ಪರಮಾಣು ನೆಲೆಗಳನ್ನು ಸಂಪೂರ್ಣವಾಗಿ ನಾಶಮಾಡಲಾಗಿದೆ' ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಘ್ಚಿ, 'ಯುನೈಟೆಡ್ ಸ್ಟೇಟ್ಸ್, ಅಂತಾರಾಷ್ಟ್ರೀಯ ಕಾನೂನು ಮತ್ತು ಎನ್‌ಪಿಟಿ ಅನ್ನು ಉಲ್ಲಂಘಿಸಿ ಅಮೆರಿಕವು ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications