ನಾಲ್ಕು ತಿಂಗಳ ಮಗು ಕೊಂದ ಆರೋಪ; ಉತ್ತರ ಪ್ರದೇಶದ ಮಹಿಳೆಗೆ ಯುಎಇನಲ್ಲಿ ಮರಣದಂಡನೆ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತದ ಉತ್ತರ ಪ್ರದೇಶ ಮೂಲದ ಮಹಿಳೆಯನ್ನು ಗಲ್ಲಿಗೇರಿಸಲಾಗಿದೆ ಎಂದು ಸೋಮವಾರ ವಿದೇಶಾಂಗ ಸಚಿವಾಲಯ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ನಾಲ್ಕು ತಿಂಗಳ ಮಗುವನ್ನು ಕೊಂದ ಆರೋಪದ ಮೇಳೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಶಹಜಾದಿ ಖಾನ್ ಅಬುಧಾಬಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
ಯುಎಇ ಕಾನೂನು ಮತ್ತು ನಿಯಮಗಳಿಗೆ ಅನುಸಾರವಾಗಿ, ಫೆಬ್ರವರಿ 15, 2025ರಂದು ಶಹಜಾದಿ ಖಾನ್ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ವಿದೇಶಾಂಗ ಸಚಿವ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಶಹಜಾದಿ ಖಾನ್ ಮರಣದಂಡನೆ ಬಗ್ಗೆ ಫೆಬ್ರವರಿ 28ರಂದು ಯುಎಇ ಸರ್ಕಾರದಿಂದ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ತಿಳಿಸಿದ್ದಾರೆ.

ಭಾರತದ ಅಧಿಕಾರಿಗಳು ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದಾರೆ. ಮಹಿಳೆಯ ಅಂತ್ಯಸಂಸ್ಕಾರವನ್ನು ಮಾರ್ಚ್ 5ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶಹಜಾದಿ ಖಾನ್ ಅವರ ತಂದೆ ಶಬ್ಬೀರ್ ಖಾನ್ ತಮ್ಮ ಮಗಳ ಯೋಗಕ್ಷೇಮದ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದು ಬಳಿಕ ಸರ್ಕಾರದಿಂದ ಈ ಮಾಹಿತಿ ಬಹಿರಂಗವಾಗಿದೆ. ನ್ಯಾಯಾಲಯ ಇದನ್ನು "ದುಃಖಕರ ಮತ್ತು ದುರದೃಷ್ಟಕರ" ಘಟನೆ ಎಂದು ಕರೆದಿದ್ದು ವಿಷಾದ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?
ಶಹಜಾದಿ ಖಾನ್ ತಾವು ನೋಡಿಕೊಳ್ಳುತ್ತಿದ್ದ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಅಬುಧಾಬಿಯ ಅಲ್ ವತ್ಬಾ ಜೈಲಿನಲ್ಲಿ ಬಂಧಿಸಲಾಗಿತ್ತು. ಶಬ್ಬೀರ್ ಖಾನ್ ಅವರ ಅರ್ಜಿಯ ಪ್ರಕಾರ, ಅವರ ಮಗಳು ಶಹಜಾದಿ ಖಾನ್ ಕಾನೂನು ವೀಸಾ ಪಡೆದ ನಂತರ ಡಿಸೆಂಬರ್ 2021 ರಲ್ಲಿ ಅಬುಧಾಬಿಗೆ ಹೋಗಿದ್ದರು.
ಶಹಜಾದಿ ಖಾನ್‌ಗೆ ಉದ್ಯೋಗ ನೀಡಿದ್ದ ಮಹಿಳೆಯು 2022ರ ಆಗಸ್ಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಆದರೆ ಡಿಸೆಂಬರ್ 7, 2022 ರಂದು ಲಸಿಕೆಗಳನ್ನು ಪಡೆದ ಬಳಿಕ ಮಗು ಮೃತಪಟ್ಟಿತ್ತು. ಶಹಜಾದಿ ಖಾನ್ ಅವರೇ ಮಗುವಿನ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಡಿಸೆಂಬರ್ 2023 ರಲ್ಲಿ ಶಿಶುವಿನ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾದ ವಿಡಿಯೋ ರೆಕಾರ್ಡಿಂಗ್ ಅನ್ನು ಕೂಡ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಉದ್ಯೋಗ ನೀಡಿದವರು ಚಿತ್ರಹಿಂಸೆ ನೀಡಿ ಹೇಳಿಕೆಯನ್ನು ಪಡೆದಿದ್ದಾರೆ ಎಂದು ಶಹಜಾದಿ ಖಾನ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಗುವಿನ ಪೋಷಕರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲಿಲ್ಲ. ಸಾವಿನ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸದಂತೆ ಒಪ್ಪಂದಕ್ಕೆ ಸಹಿ ಹಾಕಿದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಯು ತನ್ನ ಮಗಳಿಗೆ ಕಾನೂನು ಸಲಹೆ ನೀಡಿದ್ದರೂ, ಕೊಲೆಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಯಿತು ಮತ್ತು ಆಕೆಯ ಸಾಕಷ್ಟು ಪ್ರಾತಿನಿಧ್ಯವನ್ನು ನಿರಾಕರಿಸಲಾಯಿತು ಎಂದು ಅವರ ತಂದೆ ಆರೋಪಿಸಿದ್ದಾರೆ.
ಸೆಪ್ಟೆಂಬರ್ 2023 ರಲ್ಲಿ ಖಾನ್ ಅವರ ಮೇಲ್ಮನವಿಯನ್ನು ವಜಾಗೊಳಿಸಲಾಯಿತು ಮತ್ತು ಫೆಬ್ರವರಿ 28, 2024 ರಂದು ಮರಣದಂಡನೆಯನ್ನು ಎತ್ತಿಹಿಡಿಯಲಾಯಿತು. ಶಬ್ಬೀರ್ ಖಾನ್ ಮೇ 2024 ರಲ್ಲಿ ಹೊಸ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು. ಫೆಬ್ರವರಿ 14, 2025 ರಂದು, ಜೈಲಿನಲ್ಲಿರುವ ಅವರ ಮಗಳಿಂದ ಅವರಿಗೆ ಕರೆ ಬಂದಿತ್ತು, ಮರುದಿನವೇ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications