ಚೆಲ್ಲಾಪಿಲ್ಲಿಯಾದ ಶವ.. ಶಾಂತವಾಗದ ಗಾಜಾ.. ಮುಂದುವರಿದ ರಕ್ತದೋಕುಳಿ..
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದ ಆಟ, ಸಾವಿರಾರು ಅಮಾಯಕರನ್ನು ಬಲಿಪಡೆದರೂ ನಿಂತಿಲ್ಲ. ಅಕಸ್ಮಾತ್ ಈ ಯುದ್ಧ ನಿಲ್ಲಿಸಿದ್ರೆ ಮತ್ತೊಮ್ಮೆ ಹಮಾಸ್ ಉಗ್ರರು ಬಾಲ ಬಿಚ್ಚುತ್ತಾರೆ ಅಂತಾ, ಇಸ್ರೇಲ್ ಆಕ್ರೋಶ ಹೊರಹಾಕುತ್ತಿದೆ. ಇದೇ ಸಮಯದಲ್ಲಿ ಹಮಾಸ್ ಉಗ್ರರು ಕೂಡ ತಮ್ಮ ಸ್ವಾರ್ಥಕ್ಕಾಗಿ ಅಮಾಯಕ ಜನರನ್ನು ಬಲಿ ಕೊಡುತ್ತಿದ್ದಾರೆ. ಪರಿಸ್ಥಿತಿ ಹಿಗಿದ್ದಾಗ ಗಾಜಾಪಟ್ಟಿ ಬಗ್ಗೆ ವಿಶ್ವಸಂಸ್ಥೆ ಭಯಾನಕ ಸತ್ಯವನ್ನೂ ಬಾಯಿಬಿಟ್ಟಿದೆ.
ಗಾಜಾಪಟ್ಟಿ ಅದ್ರಲ್ಲೂ ಗಾಜಾಪಟ್ಟಿ ನಗರದ ಉತ್ತರ ಭಾಗ ಈಗ ಹೇಗಾಗಿದೆ ಅಂದ್ರೆ, ಥೇಟ್ ಯಾವುದೋ ಯುದ್ಧದ ಬಗೆಗಿನ ವಿಡಿಯೋ ಗೇಮ್ ನೋಡಿದ ರೀತಿಯೇ ಭಾಸವಾಗುತ್ತಿದೆ. ವಿಡಿಯೋ ಗೇಮ್ ಅಂದಾಕ್ಷಣ ಇದು ತಮಾಷೆಯ ಮಾತು ಅಲ್ಲ, ಯಾಕಂದ್ರೆ ವಿಡಿಯೋ ಗೇಮ್‌ನಲ್ಲಿ ಮನುಷ್ಯರ ಆಕೃತಿಗಳನ್ನು ಮಾತ್ರ ಕೊಲ್ಲುತ್ತಾರೆ. ಆದರೆ ಇಲ್ಲಿ ನಿಜವಾಗಿಯೂ ಮನುಷ್ಯರನ್ನ ಕೊಂದು ಹಾಕಲಾಗುತ್ತಿದೆ. ಹಮಾಸ್ ಉಗ್ರರು ಮಾಡಿದ ಕೃತ್ಯಕ್ಕೆ ಸಾವಿರಾರು ಅಮಾಯಕ ಪ್ರಜೆಗಳು ಜೀವ ಬಿಟ್ಟಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ವಿಶ್ವಸಂಸ್ಥೆ ಮಾತನಾಡಿ ಗಾಜಾಪಟ್ಟಿ ಬಗ್ಗೆ ಭಯಾನಕ ಹೇಳಿಕೆ ನೀಡಿದೆ.

ಗಾಜಾದಲ್ಲಿ ಯಾವುದೇ ಸ್ಥಳ ಸುರಕ್ಷಿತವಾಗಿಲ್ಲ!
ಹೌದು, ಈಗ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಒಬ್ಬರು ಈ ಬಗ್ಗೆ ಮಾತನಾಡಿ ಭಯಾನಕ ಸತ್ಯ ಬಾಯಿಬಿಟ್ಟಿದ್ದಾರೆ. ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಹೇಳಿರುವಂತೆ, ಸದ್ಯಕ್ಕೆ ಗಾಜಾ ನಗರದಲ್ಲಿ ಯಾವುದೇ ಸ್ಥಳವೂ ಸುರಕ್ಷಿತ ಅಲ್ಲ. ಹಾಗೇ ವಿಶ್ವಸಂಸ್ಥೆಯ ಬಾವುಟ ಇದ್ರೂ, ಆ ಪ್ರದೇಶದಲ್ಲಿ ಸುರಕ್ಷಿತವಾಗಿ ಹೊರಗೆ ಬರಲು ಆಗುತ್ತಿಲ್ಲ ಎಂದಿದ್ದಾರೆ. ಈ ಮೂಲಕ ಗಾಜಾ ನಗರದ ಭಯಾನಕ ಸ್ಥಿತಿ ಬಗ್ಗೆ ವಿಶ್ವಸಂಸ್ಥೆ ಅಧಿಕಾರಿ ಮುಕ್ತವಾಗಿ ಮಾತನಾಡಿದ್ದು ನೋಡ ನೋಡುತ್ತಲೇ ಯುದ್ಧ ತೀವ್ರವಾಗುತ್ತಿದೆ. ಇನ್ನು ಈವರೆಗೆ ಇಸ್ರೇಲ್ & ಹಮಾಸ್ ಯುದ್ಧಕ್ಕೆ ಬಲಿಯಾಗಿರುವ ಜನರ ಸಂಖ್ಯೆ ಎಷ್ಟು ಗೊತ್ತಾ?
ಗಾಜಾದಲ್ಲಿ 9,227 ಜನ ಸಾವು
ಅಂದಹಾಗೆ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ತನ್ನ ಕಾರ್ಯಾಚರಣೆ ಆರಂಭಿಸಿದ ಬಳಿಕ ಈವರೆಗೂ ಸುಮಾರು 9,227 ಜನ ಪ್ಯಾಲೆಸ್ತೀನಿಯನ್ ನಾಗರಿಕರು, ಅಂದ್ರೆ ಗಾಜಾಪಟ್ಟಿಯ ನಿವಾಸಿಗಳು ಮೃತಪಟ್ಟಿದ್ದಾರೆ. ಇದರ ಜೊತೆಗೆ ಇಸ್ರೇಲ್ ನೆಲದಲ್ಲಿ ಈಗಾಗಲೇ 1400 ಜನರ ಜೀವಹಾನಿ ಆಗಿದೆ. ಈ ಮೂಲಕ ಹತ್ತಿರ ಹತ್ತಿರ 11,000 ಜನರನ್ನು ಹಮಾಸ್ & ಇಸ್ರೇಲ್ ಕಿತ್ತಾಟ ಬಲಿ ಪಡೆದಿದೆ. ಪರಿಹಾರ ಕಾರ್ಯದಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ 72 ಸಿಬ್ಬಂದಿಯ ಜೀವ ಕೂಡ ಈ ಹಿಂಸಾಚಾರದಲ್ಲಿ ಬಲಿಯಾಗಿದೆ.

ಯುದ್ಧ ಶುರುವಾಗಿದ್ದು ಹೇಗೆ ಗೊತ್ತಾ?
ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧವೇ 5000ಕ್ಕೂ ಹೆಚ್ಚು ರಾಕೆಟ್ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಆದರೆ ಅಷ್ಟೊತ್ತಿಗೆ ಪರಿಸ್ಥಿತಿ ಕೈಮೀರಿತ್ತು. ನೂರಾರು ಜನರ ಅಪಹರಣ ಮಾಡಿದ್ದ ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡದ್ದು, ಈ ಪೈಕಿ ಹಲವರ ಹತ್ಯೆ ಕೂಡ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ನಡುವೆ ಇಸ್ರೇಲ್ ಸೇನೆಯು ಕೂಡ ತನ್ನ ಶತ್ರುಗಳ ವಿರುದ್ಧ ಭೀಕರ ಕಾರ್ಯಾಚರಣೆ ಮುಂದುವರಿಸಿದೆ.
ಹೀಗೆ ನೋಡ ನೋಡುತ್ತಲೇ ಸ್ಮಶಾನದ ರೂಪ ಪಡೆದಿದೆ ಗಜಾಪಟ್ಟಿಯ ಭೂಮಿ. ಹೀಗಾಗಿ ಯುದ್ಧ ನಿಲ್ಲಿಸಬೇಕು ಎನ್ನುವ ಪ್ರಯತ್ನ ಸಾಗಿದ್ದರೂ, ಇಸ್ರೇಲ್ ಇದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಈ ನಡುವೆ ಹಮಾಸ್ ಉಗ್ರರು ಕೂಡ, ದಾಳಿ ಮುಂದುವರಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಹೀಗಾಗಿ ಗಾಜಾಪಟ್ಟಿಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಇಡೀ ಗಾಜಾ ನಗರ ಸಂಪೂರ್ಣ ಬೂದಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.












Click it and Unblock the Notifications