ವಿಶ್ವಸಂಸ್ಥೆ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು ಏಕೆ?
ಭಾರತ ಯಾವಾಗಲೂ ಶಾಂತಿ ಬಯಸುತ್ತೆ, ಇದೇ ಕಾರಣಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗಲು ಸುಲಭವಾಗುತ್ತಿದೆ. ಉಕ್ರೇನ್ & ರಷ್ಯಾ, ಇಸ್ರೇಲ್ & ಹಮಾಸ್ ಮಧ್ಯೆ ಯುದ್ಧವು ಶುರುವಾಗಿದ್ದ ಸಮಯದಲ್ಲಿ ಭಾರತ ಸೂಕ್ತ ಹೆಜ್ಜೆ ಇಟ್ಟಿತ್ತು. ಅದ್ರಲ್ಲೂ ಶಾಂತಿ ಸಂದೇಶ ಸಾರಿ, ಹಿಂಸಾಚಾರ ಬೇಡ ಎಂದಿತ್ತು ಭಾರತ. ಅದೇ ರೀತಿ ಇಸ್ರೇಲ್ ಜೊತೆಗೆ ಉತ್ತಮ ಸಂಬಂಧ ಇದ್ದರು ಕೂಡ ಭಾರತ, ಪ್ಯಾಲೆಸ್ತೀನ್ ನಾಗರಿಕರಿಗೆ ಸಹಾಯ ಮಾಡಿದೆ. ಈ ಬಗ್ಗೆ ವಿಶ್ವಸಂಸ್ಥೆ ಹೆಮ್ಮೆಯನ್ನ ವ್ಯಕ್ತಪಡಿಸಿದೆ.
ಹೌದು, ಭಾರತ ಪ್ಯಾಲೆಸ್ತೀನ್ ನಾಗರಿಕರಿಗೆ ಸಹಾಯ ಮಾಡಲು ಸುಮಾರು 5 ಮಿಲಿಯನ್ ಅಮೆರಿಕನ್ ಡಾಲರ್ ಹಣ ನೀಡಿದೆ. ಅಂದ್ರೆ ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ, 40 ಕೋಟಿ ರೂಪಾಯಿಗೂ ಹೆಚ್ಚು. ಇದನ್ನ ಬಳಸಿ ಯುದ್ಧ ಪೀಡಿತ ಪ್ಯಾಲೆಸ್ತೀನ್ ಜನರ ರಕ್ಷಣೆಯ ಮಾಡಲಾಗುತ್ತಿದೆ. ಹೀಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯದ ಏಜೆನ್ಸಿ ಭಾರತದ ಕುರಿತಾಗಿ ಹೆಮ್ಮೆ ವ್ಯಕ್ತಪಡಿಸಿದೆ. ಅದ್ರಲ್ಲೂ ಇಸ್ರೇಲ್ ಕಡೆಯಿಂದ ದಾಳಿ ಮತ್ತಷ್ಟು ತೀವ್ರಗೊಂಡಿರುವ ಸಮಯದಲ್ಲೇ ಭಾರತದ ಈ ಸಹಾಯ ಪ್ಯಾಲೆಸ್ತೀನ್ ಜನರಿಗೆ ಬೆಂಬಲ ನೀಡುತ್ತಿದೆ.

ಭಾರತದ ಬಗ್ಗೆ ವಿಶ್ವಸಂಸ್ಥೆಗೆ ಹೆಮ್ಮೆ
ಈ ಕುರಿತು ಮಾಹಿತಿ ನೀಡಿರುವ ವಿಶ್ವಸಂಸ್ಥೆಯ ಪರಿಹಾರ ಕಾರ್ಯದ ಏಜೆನ್ಸಿ ವಕ್ತಾರರಾದ, ತಮಾರಾ ಅಲ್ರಿಫೈ ಅವರು ಭಾರತದ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಾವಿಲ್ಲಿ ಕಷ್ಟಕರ ಸ್ಥಿತಿ ಎದುರಿಸುತ್ತಿದ್ದು, ನಿರಾಶ್ರಿತರಿಗೆ ಬೆಂಬಲ ನೀಡುವ ಎಲ್ಲ ಪಾಲುದಾರ ದೇಶಗಳಿಗೆ ಏಜೆನ್ಸಿ ಕೃತಜ್ಞವಾಗಿರಲಿದೆ. ಭಾರತದ ಉದಾರ ನೆರವು ಈಗ ಪ್ಯಾಲೆಸ್ತೀನ್‌ನಲ್ಲಿ ನಿರಾಶ್ರಿತರಿಗೆ ಜೀವರಕ್ಷಕ ಸೇವೆ ಮುಂದುವರಿಸಲು ಏಜೆನ್ಸಿಗೆ ಬಲ ತುಂಬುತ್ತಿದೆ ಎಂದಿದ್ದಾರೆ. ಈ ಮೂಲಕ ಭಾರತದ ಈ ಮಹತ್ವದ ನೆರವಿಗೆ ವಿಶ್ವಸಂಸ್ಥೆ ಕೂಡ ಹೆಮ್ಮೆ ವ್ಯಕ್ತಪಡಿಸಿದೆ.
ಹೆಚ್ಚುತ್ತಿದೆ ಸಾವಿನ ಸಂಖ್ಯೆ
ಹಮಾಸ್ ಉಗ್ರರ ವಿರುದ್ಧದ ಕೋಪಕ್ಕೆ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ಅದ್ರಲ್ಲೂ ಉತ್ತರ ಗಾಜಾದಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿದ್ದಾಗಲೇ ಪ್ಯಾಲೆಸ್ತೀನ್ ಪರ 20,000ಕ್ಕೂ ಹೆಚ್ಚು ನಾಗರಿಕರು ಇಲ್ಲಿಯವರೆಗೂ ಮೃತಪಟ್ಟಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇಸ್ರೇಲ್ ಕಡೆಯು ಸಾವಿನ ಸಂಖ್ಯೆ 1000 ದಾಟಿದೆ. ಹೀಗೆ ಸುಮಾರು 3 ತಿಂಗಳ ಹಿಂದೆ ಶುರುವಾಗಿದ್ದ ಹಮಾಸ್ ಉಗ್ರರು & ಇಸ್ರೇಲ್ ಸೇನೆ ನಡುವಿನ ಯುದ್ಧ ಹತ್ತಿರ ಹತ್ತಿರ 20 ಸಾವಿರಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಿದೆ.

ಯುದ್ಧ ನಿಂತು ಶಾಂತಿ ಮರುಸ್ಥಾಪನೆ ಆಗಬೇಕು ಎಂಬುದೇ ಭಾರತದ ಬಯಕೆಯಾಗಿದೆ. ಈ ಕಾರಣಕ್ಕೆ ಭಾರತ ಕೂಡ ಸಹಾಯ ಮಾಡುತ್ತಿದೆ. ಅಲ್ಲದೆ ಪ್ಯಾಲೆಸ್ತೀನ್ ನಾಗರಿಕರ ನೆರವಿಗು ನಿಲ್ಲುತ್ತಿದೆ ಭಾರತ. ಮತ್ತೊಂದು ಕಡೆ ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆ ಇದೆ.











Click it and Unblock the Notifications