ಪಾಕಿಸ್ತಾನ-ದುಬೈನಿಂದ ಉಮಾಭಾರತಿಗೆ ಕರೆ: ಕಾಲ್ ಮಾಡಿದವರು ಯಾರು? ಹೇಳಿದ್ದೇನು?
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ಉಮಾಭಾರತಿ ಅವರ ಭದ್ರತಾ ಅಧಿಕಾರಿಗೆ ಪಾಕಿಸ್ತಾನ ಮತ್ತು ದುಬೈನಿಂದ ವಾಟ್ಸಾಪ್ ಕರೆ ಬಂದಿದೆ. ಕರೆ ಮಾಡಿದವರು ಉಮಾಭಾರತಿ ಭದ್ರತಾ ಅಧಿಕಾರಿಯಿಂದ ಸ್ಥಳದ ಮಾಹಿತಿಯನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಉಮಾಭಾರತಿ ಅವರ ಕಚೇರಿಯಿಂದ ಹೇಳಿಕೆ ನೀಡಲಾಗಿದ್ದು, ಪಾಕಿಸ್ತಾನ ಮತ್ತು ದುಬೈನಿಂದ ನಿರಂತರವಾಗಿ ಈ ಕರೆಗಳು ಬರುತ್ತಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಸದ್ಯ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗದ ಪೊಲೀಸರು ನಡೆಸುತ್ತಿದ್ದಾರೆ.

ಕರೆ ಸ್ವೀಕರಿಸಿದ ನಂತರ, ಉಮಾಭಾರತಿ ಅವರ ಕಚೇರಿ ಉಸ್ತುವಾರಿ ಟ್ರೂ ಕಾಲರ್‌ನಲ್ಲಿ ಎರಡೂ ಸಂಖ್ಯೆಗಳನ್ನು ಹುಡುಕಿದ್ದಾರೆ. ಒಂದು ನಂಬರ್ ಪಾಕಿಸ್ತಾನದ ಎಂ.ಹುಸೇನ್ ಅವರದ್ದು ಮತ್ತು ಇನ್ನೊಂದು ನಂಬರ್ ದುಬೈನ ಅಬ್ಬಾಸ್ ಎಂಬುವವರದ್ದು ಎಂದು ತಿಳಿದುಬಂದಿದೆ.
ಫೋನ್ ನಂಬರ್ ದೇಶದಿಂದ ಹೊರಗಿರುವುದು ಗೊತ್ತಾದ ತಕ್ಷಣ ಉಮಾಭಾರತಿ ಅವರ ಭದ್ರತೆಗಾಗಿ ನಿಯೋಜಿಸಲಾದ ಇನ್ಸ್‌ಪೆಕ್ಟರ್ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಉಮಾಭಾರತಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲು
ಇಂಟಲಿಜೆನ್ಸ್ ಎಡಿಜಿ ಮತ್ತು ಡಿಜಿಪಿ ಮಾಹಿತಿ ಪಡೆದ ತಕ್ಷಣ, ಇಡೀ ಪೊಲೀಸ್ ಆಡಳಿತ ಕಾರ್ಯಪ್ರವೃತ್ತವಾಗಿದೆ. ಈ ಬಗ್ಗೆ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಗುಪ್ತಚರ ವಿಭಾಗದ ಎಡಿಜಿ ಜೈದೀಪ್ ಪ್ರಸಾದ್ ತಿಳಿಸಿದ್ದಾರೆ. ಕರೆ ಮಾಡಿದವರು ತಮ್ಮನ್ನು ಕ್ರೈಂ ಬ್ರಾಂಚ್ ಅಧಿಕಾರಿಗಳು ಎಂದೂ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ನಾವು ವಿಚಾರಣೆಗೆ ಬರಬೇಕು, ಹಾಗಾಗಿ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಕರೆಯಲ್ಲಿ ಮಾಹಿತಿ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.
ಉಮಾಭಾರತಿ ಯಾರು?
ಉಮಾಭಾರತಿ ಫೈರ್‌ಬ್ರಾಂಡ್ ಹಿಂದೂ ನಾಯಕಿ ಎಂದು ಹೆಸರುವಾಸಿಯಾಗಿದ್ದಾರೆ. ಅಯೋಧ್ಯೆಯ ಬಾಬರಿ ಮಸೀದಿಯ ಕಟ್ಟಡವನ್ನು ಕೆಡವಲು ಬಯಸಿದವರ ಪಟ್ಟಿಯಲ್ಲಿ ಇವರ ಹೆಸರು ಮುಂಚುಣಿಯಲ್ಲಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರು ತಮ್ಮ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಲೋಕಸಭೆ ಚುನಾವಣೆಯಲ್ಲಿ ಗುಣಾದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಆದರೆ, ಈ ಇಡೀ ಲೋಕಸಭೆ ಚುನಾವಣೆಯಲ್ಲಿ ಭಾರ್ತಿ ಅಷ್ಟೊಂದು ಆಸಕ್ತಿಕೆ ತೋರಲಿಲ್ಲ.












Click it and Unblock the Notifications