ಯುದ್ಧದ ನಾಡು ಉಕ್ರೇನ್ ನೆಲದಲ್ಲಿ ಚುನಾವಣೆ ಚರ್ಚೆ, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ | Ukraine President Election
ಉಕ್ರೇನ್ ಸರಿಯಾಗಿ ಪೆಟ್ಟು ತಿಂದು ನರಳುವ ಪರಿಸ್ಥಿತಿ ಎದುರಾಗಿದ್ದು, ರಷ್ಯಾ ಸೇನೆಯಿಂದ ಆಗಿರುವ ಹಾನಿ ಸರಿ ಮಾಡಿಕೊಳ್ಳಲು ಇನ್ನೂ ಹತ್ತಾರು ವರ್ಷಗಳೇ ಸಾಲುವುದಿಲ್ಲ ಉಕ್ರೇನ್ ದೇಶಕ್ಕೆ. ಹೀಗೆಲ್ಲಾ ಕಳೆದ 4 ವರ್ಷಗಳಲ್ಲಿ ಇಡೀ ಉಕ್ರೇನ್ ಹೀನಾಯವಾಗಿ ಸೋಲು ಕಂಡು, ಇನ್ನೇನು ಸರ್ವನಾಶವಾಗಿ ಹೋಗುವ ಹಂತಕ್ಕೆ ಬಂದು ತಲುಪಿದೆ. ಜನರಿಗೆ ಊಟ, ನೀರು ಕೂಡ ಸಿಗದ ಪರಿಸ್ಥಿತಿ ಇದೆ. ಹಾಗೇ ಚಳಿಯಲ್ಲಿ ಜೀವ ಉಳಿಸಿಕೊಳ್ಳಲು ವಿದ್ಯುತ್ ವ್ಯವಸ್ಥೆ ಕೂಡ ಇಲ್ಲದೆ ಉಕ್ರೇನ್ ಪ್ರಜೆಗಳು ದೇಶ ಬಿಟ್ಟು ಹೋಗುತ್ತಿದ್ದಾರೆ. ಈ ಸಮಯದಲ್ಲೇ ಯುದ್ಧದ ನಾಡು ಉಕ್ರೇನ್ ನೆಲದಲ್ಲಿ ದಿಢೀರ್ ಚುನಾವಣೆ ಚರ್ಚೆ ಜೋರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಕೂಡ ಹೆಚ್ಚಾಗಿದೆ.
ಯುರೋಪ್ ದೇಶಗಳು ನೆಮ್ಮದಿಯಾಗಿ ಇರಬೇಕು ಎಂದರೆ ಇದೀಗ ಉಕ್ರೇನ್ ಯುದ್ಧ ನಿಲ್ಲಬೇಕಾಗಿದೆ. ಅದರಲ್ಲೂ ಯುದ್ಧ ನಿಂತ ತಕ್ಷಣವೇ ಉಕ್ರೇನ್ ದೇಶದಲ್ಲಿ ಚುನಾವಣೆ ಕೂಡ ನಡೆಸಬೇಕು ಎನ್ನುವ ಒತ್ತಡ ಇದೀಗ ಹೆಚ್ಚಾಗಿದೆ. ರಷ್ಯಾ ಜೊತೆಗೆ ಯುದ್ಧ ಮಾಡಿ ನರಳಾಡಿರುವ ಉಕ್ರೇನ್‌ಗೆ ಈಗ ಬದುಕಿದರೆ ಸಾಕು ಎನ್ನುವ ಪರಿಸ್ಥಿತಿ ಇದೆ. ಹೀಗಿದ್ದಾಗ ಉಕ್ರೇನ್ ಸಹಾಯಕ್ಕೆ ನಿಂತಿರುವುದು ಯುರೋಪ್ ಒಕ್ಕೂಟದ ದೇಶಗಳು ಮಾತ್ರ. ಈ ನಡುವೆ ಯುದ್ಧದಲ್ಲಿ ರಷ್ಯಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಕೊಡುತ್ತಿರುವುದೂ ಇದೇ ಯುರೋಪ್ ದೇಶಗಳು. ಆದರೆ ಇದೇ ಯುರೋಪ್ ಒಕ್ಕೂಟದ ದೇಶಗಳು ಉಕ್ರೇನ್ ಚುನಾವಣೆಗೆ ಒತ್ತಾಯ ಮಾಡುವ ಪರಿಸ್ಥಿತಿ ಬಂದಿದೆ, ಏಕೆಂದರೆ ಈಗಾಗಲೇ ಉಕ್ರೇನ್ ಅಧ್ಯಕ್ಷರ ಅವಧಿಯು ಮುಗಿದು ಹಲವು ತಿಂಗಳು ಕಳೆದಿದೆ. ಹೀಗಾಗಿ ಆದಷ್ಟು ಬೇಗ ಚುನಾವಣೆ ನಡೆಯಲು ಒತ್ತಡ ಹೆಚ್ಚಾಗುತ್ತಿದೆ.

2024ಕ್ಕೆ ಅಧಿಕಾರ ಮುಕ್ತಾಯ ಆಗಿತ್ತು
ವೊಲೊಡಿಮಿರ್ ಝೆಲೆನ್ಸ್ಕಿ 2019 ಉಕ್ರೇನ್ ಚುನಾವಣೆ ಅಖಾಡದಲ್ಲಿ ಗೆದ್ದು ಅಧ್ಯಕ್ಷರಾಗಿ ಆಯ್ಕೆಯೂ ಆಗಿ, ಕೊನೆಗೆ ಒಂದು ಯುದ್ಧ ಎದುರಿಸುವ ಪರಿಸ್ಥಿತಿ ಕೂಡ ಬಂದಿತ್ತು. ಹಾಗೆ ನೋಡಿದರೆ ಉಕ್ರೇನ್ ದೇಶದ ನೂತನ ಅಧ್ಯಕ್ಷರ ಆಯ್ಕೆಗೆ 2024 ಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಚುನಾವಣೆ ನಡೆದು ಹೊಸ ಅಧ್ಯಕ್ಷನ ಎಂಟ್ರಿ ಆಗಬೇಕಿತ್ತು. ಆದರೆ ಯುದ್ಧದ ನೆಪವನ್ನೇ ಮುಂದೆ ಇಟ್ಟುಕೊಂಡು ಪದೇ, ಪದೇ ಚುನಾವಣೆ ಮುಂದೂಡಿಕೆ ಮಾಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.
ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿರುವ ಸಮಯದಲ್ಲೇ ಉಕ್ರೇನ್ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಮತ್ತೆ ಚರ್ಚೆ ಜೋರಾಗಿದೆ. ಅದರಲ್ಲೂ ಈ ಬಾರಿ ಚುನಾವಣೆ ನಡೆದರೆ ವೊಲೊಡಿಮಿರ್ ಝೆಲೆನ್ಸ್ಕಿಗೆ ಭಾರಿ ಹಿನ್ನಡೆ ಆಗುತ್ತಾ? ಎಂಬ ಅನುಮಾನ & ಪ್ರಶ್ನೆ ಕೂಡ ಎದ್ದಿದೆ. ಆದರೆ ರಷ್ಯಾದ ಕಡೆಯಿಂದ ಉಕ್ರೇನ್ ಚುನಾವಣೆ ಆದಷ್ಟು ಬೇಗ ನಡೆಸಲು ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾಗುತ್ತಾ ಇದ್ದು, ಯುರೋಪ್ ಒಕ್ಕೂಟಗಳು ಈ ಒತ್ತಡಕ್ಕೆ ಮಣಿಯುವ ಸ್ಥಿತಿ ನಿರ್ಮಾಣ ಆಗುತ್ತಿದೆ.
ಮತದಾರರ ಬೆಂಬಲ ಯಾರಿಗೆ ಸಿಗಲಿದೆ?
ಒಟ್ನಲ್ಲಿ ಉಕ್ರೇನ್ ದೇಶಕ್ಕೆ ಹೊಸ ಅಧ್ಯಕ್ಷರ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದು, ರಷ್ಯಾ ದೇಶದ ಅಧ್ಯಕ್ಷ ಪುಟಿನ್ ಕೂಡ ಪದೇ ಪದೇ ಉಕ್ರೇನ್ ಚುನಾವಣೆ ವಿಚಾರ ಪ್ರಸ್ತಾಪ ಮಾಡಿದ್ದರು. ಹೀಗಿದ್ದಾಗ ಉಕ್ರೇನ್ ಎಲೆಕ್ಷನ್ ಆದಷ್ಟು ಬೇಗ ನಡೆಯುತ್ತಾ? ಅಥವಾ ಮತ್ತೆ ಯುದ್ಧದ ನೆಪವನ್ನೇ ಹೇಳಿಕೊಂಡು ಇನ್ನಷ್ಟು ಕಾಲ ಮುಂದೂಡಿಕೆ ಮಾಡಲಾಗುತ್ತಾ? ಎಂಬ ಕುತೂಹಲ ಮೂಡಿದೆ. ಈಗಾಗಲೇ ಉಕ್ರೇನ್ ಪ್ರಜೆಗಳು ಕೂಡ ವೊಲೊಡಿಮಿರ್ ಝೆಲೆನ್ಸ್ಕಿ ಆಡಳಿತದ ವಿರುದ್ಧ ಮುನಿಸು ಹೊರ ಹಾಕುತ್ತಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿವೆ. ಆದರೆ ಇನ್ನೊಂದು ಕಡೆ ವೊಲೊಡಿಮಿರ್ ಝೆಲೆನ್ಸ್ಕಿಗೆ ಮತ್ತೆ ಅಧ್ಯಕ್ಷ ಪಟ್ಟ ಸಿಗುವುದು ಗ್ಯಾರಂಟಿ ಎಂಬ ವಾದಗಳು ಕೂಡ ಕುತೂಹಲ ಕೆರಳಿಸುತ್ತಿವೆ.












Click it and Unblock the Notifications