Ukraine War: ಉಕ್ರೇನ್ ಜೊತೆಗೆ ಅಮೆರಿಕ ಅಧಿಕಾರಿಗಳ ಮಹತ್ವದ ಮಾತುಕತೆ, ಸೌದಿ ನೆಲದಲ್ಲಿ ಸಂಚಲನ!
ಉಕ್ರೇನ್ ಯುದ್ಧದ ಜ್ವಾಲೆ ಯುರೋಪ್ ದೇಶಕ್ಕೆ ಹಬ್ಬುತ್ತಿದ್ದು, ಹೆಜ್ಜೆ ಹೆಜ್ಜೆಗೂ ಪರಿಸ್ಥಿತಿಯ ಹಿಡಿತಕ್ಕೆ ಸಿಲುಕಿ ಯುರೋಪ್ ಒಕ್ಕೂಟದ ದೇಶಗಳು ನಲುಗುತ್ತಿವೆ. ಅಲ್ಲದೆ ಜಾಗತಿಕವಾಗಿಯೂ ಈ ಯುದ್ಧ ದೊಡ್ಡ ತಲೆನೋವು ತರಿಸಿದೆ. ಇಂತಹ ಸಮಯದಲ್ಲೇ ಮಹತ್ವದ ಬದಲಾವಣೆ ಕೂಡ ಶುರುವಾಗಿದ್ದು, ಯುದ್ಧ ನಿಲ್ಲಿಸಲು ಮುಂದೆ ನುಗ್ಗಿದೆ ಅಮೆರಿಕ. ಹೀಗಾಗಿ ಅಮೆರಿಕ & ಉಕ್ರೇನ್ ನಡುವೆ ಇದೀಗ ಅಂತಿಮ ಹಂತದ ಮಾತುಕತೆ ಶುರುವಾಗಿದೆ.
ಉಕ್ರೇನ್ ಸೇನೆ ರಷ್ಯಾ ಎದುರು ಇವತ್ತು ಶರಣಾಗುತ್ತೆ, ನಾಳೆ ಶರಣಾಗುತ್ತದೆ ಅಂತಾ ಜಗತ್ತೇ ಈಗ ಕಾಯುತ್ತಿದೆ. ಯಾಕಂದ್ರೆ ಈಗಾಗಲೇ ಈ ಯುದ್ಧದಲ್ಲಿ ಲಕ್ಷ ಲಕ್ಷ ಜನ ಮೃತಪಟ್ಟಿದ್ದಾರೆ ಎಂಬ ಆರೋಪವೂ ಇದೆ. ಅಲ್ಲದೆ ಇನ್ನೊಂದು ಕಡೆ ರಷ್ಯಾ ಕೊಡ್ತಾ ಇರುವ ಏಟಿಗೆ ಈಗಾಗಲೇ ಭಾಗಶಃ ಉಕ್ರೇನ್ ನೆಲ ನಲುಗಿ ಹೋಗಿದೆ. ಪರಿಸ್ಥಿತಿ ಕೈಮೀರಿ, ಯಾವ ಕ್ಷಣದಲ್ಲಿ ಈ ರಷ್ಯಾ & ಉಕ್ರೇನ್ ಯುದ್ಧ 3ನೇ ಮಹಾಯುದ್ಧವಾಗಿ ಬದಲಾಗುತ್ತೋ? ಎಂಬ ಭಯ ಕಾಡುತ್ತಿದೆ. ಹೀಗಿದ್ದಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ನಿಲ್ಲಿಸಲು ಮುಂದಾಗಿದ್ದಾರೆ.

ಉಕ್ರೇನ್ ಬುಡ ಅಲುಗಾಡಿಸಿದ ರಷ್ಯಾ
ರಷ್ಯಾ ಸೇನೆ ಬಲಿಷ್ಠವಾಗಿದೆ, ಉಕ್ರೇನ್ ಮಿಲಿಟರಿಗೆ ಹೋಲಿಕೆಯನ್ನ ಮಾಡಿದ್ರೆ ರಷ್ಯಾ ಮಿಲಿಟರಿ ತುಂಬಾ ಸ್ಟ್ರಾಂಗ್. ಈ ಕಾರಣಕ್ಕೆ ರಷ್ಯಾ & ಉಕ್ರೇನ್ ಕಾಳಗದಲ್ಲಿ ರಷ್ಯಾ ಸೇನೆ ಏಟಿಗೆ ಉಕ್ರೇನ್ ನಲುಗಿದೆ. ಪರಿಸ್ಥಿತಿ ಈಗ ಭಯ ಹುಟ್ಟಿಸುತ್ತಿದ್ದು, ಮುಂದೆ ಏನೆಲ್ಲಾ ನಡೆಯುತ್ತೆ ದೇವರೆ ಅಂತಾ ಉಕ್ರೇನ್ ಜನ ಕೂಡ ಚಿಂತೆ ಮಾಡುವಂತಾಗಿದೆ. ಇಷ್ಟೆಲ್ಲದರ ಮಧ್ಯೆ ಉಕ್ರೇನ್ ವಿದ್ಯುತ್ ಇಲ್ಲದೆ ಚಳಿಯಲ್ಲಿ ನಡುಗುತ್ತಿದೆ. ಆದರೆ ಇದೆಲ್ಲವನ್ನೂ ಅಮೆರಿಕ ಸೂಕ್ಷ್ಮವಾಗಿ ಗಮನಿಸಿ, ಯುದ್ಧಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಯುದ್ಧ ನಿಲ್ಲಿಸಲು ಎಷ್ಟೆಲ್ಲಾ ಪರದಾಟ!
ಸೌದಿ ಅರೇಬಿಯಾದಲ್ಲಿ ಉಕ್ರೇನ್ ಜೊತೆಗೆ ಅಮೆರಿಕದ ಅಧಿಕಾರಿಗಳು ಮಹತ್ವದ ಸಭೆಯನ್ನ ಆಯೋಜನೆ ಮಾಡಿದ್ದಾರೆ. ಈ ಸಭೆಯಲ್ಲಿ ರಷ್ಯಾ ಅಧಿಕಾರಿಗಳು ಕೂಡ ಭಾವಹಿಸುವ ಸಾಧ್ಯತೆ ಇತ್ತು. ಅಲ್ಲದೆ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಭೆಗೆ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಕೇವಲ ಉಕ್ರೇನ್ & ಅಮೆರಿಕದ ಅಧಿಕಾರಿಗಳ ನಡುವೆ ಮಾತುಕತೆ ಆರಂಭ ಆಗುತ್ತಿದೆ.
ಹೀಗಾಗಿ ಸಭೆಯ ಸಕ್ಸಸ್ ಬಗ್ಗೆ ಕೂಡ ಅನುಮಾನ ಮೂಡುವಂತೆ ಆಗಿದೆ. ಮತ್ತೊಂದು ಕಡೆ ಇಲ್ಲಿ ನಡೆಯುವ ಮಾತುಕತೆ ಮಾಹಿತಿಯನ್ನು ರಷ್ಯಾಗೆ ತಲುಪಿಸಿ, ಆ ಮೂಲಕವೇ ಯುದ್ಧ ನಿಲ್ಲಿಸುವ ಕೆಲಸವನ್ನು ಅಮೆರಿಕ ಮಾಡಲಿದೆ ಎನ್ನಲಾಗುತ್ತಿದೆ. ಒಟ್ನಲ್ಲಿ ಆದಷ್ಟು ಬೇಗನೇ ಯುದ್ಧಕ್ಕೆ ಬ್ರೇಕ್ ಬೀಳಬೇಕು ಎಂಬ ಒತ್ತಾಯ ಕೇಳಿಬಂದಿದೆ.












Click it and Unblock the Notifications