ನ್ಯೂಜಿಲೆಂಡ್‌ನಲ್ಲಿ 3 ಬಾರಿ ಭೂಕಂಪ, ಕಡಲ ತೀರಕ್ಕೆ ಬಂದೆರಗಿದ ಸುನಾಮಿ
ನ್ಯೂಜಿಲೆಂಡ್‌ನಲ್ಲಿ ಮಾರ್ಚ್ 04 ರಿಂದ ಸರಣಿ ಭೂಕಂಪಗಳು ಸಂಭವಿಸುತ್ತಿವೆ. ಇದೀಗ ಕಡಲ ತೀರಕ್ಕೆ ಸುನಾಮಿ ಬಂದಪ್ಪಳಿಸಿದೆ.
ಮೂರು ಬಾರಿ ಒಂದೇ ಜಾಗದಲ್ಲಿ ಭೂಕಂಪ ಸಂಭವಿಸಿದೆ. ಮಾಧ್ಯಮಗಳ ವರದಿ ಪ್ರಕಾರ, 8.1 ತೀವ್ರತೆಯ ಭೂಕಂಪದಿಂದ ಉದ್ಭವಿಸಿದ ಸುನಾಮಿ ಸುಮಾರು 10 ಅಡಿ ಎತ್ತರ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ನ್ಯೂಜಿಲೆಂಡ್ ದೇಶದ ಪೂರ್ವಭಾಗದಲ್ಲಿರುವ ನಾರ್ತ್ ಐಲೆಂಡ್ ದ್ವೀಪದ ಬಳಿ ಒಂದಾದ ಮೇಲೊಂದು ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ.

ಒಂದು ಭೂಕಂಪವಂತೂ ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆ ಹೊಂದಿತ್ತು. ಎಂಟು ಗಂಟೆ ಅಂತರದಲ್ಲಿ ಒಂದೇ ಪ್ರದೇಶದ ಬಳಿ ಮೂರು ಬಾರಿ ಭೂಕಂಪನವಾಗಿದೆ. ಮೊದಲಿಗೆ 7.2, ನಂತರ 7.4 ಹಾಗೂ ಬಳಿಕ 8.1 ತೀವ್ರತೆಯಲ್ಲಿ ಸರಣಿ ಭೂಕಂಪಕ್ಕೆ ಕಿವೀಸ್ ನಾಡು ಬೆಚ್ಚಿಬಿದ್ದಿತು.
ಅದರ ಪರಿಣಾಮವಾಗಿ ಪೂರ್ವ ಕಡಲ ತೀರದಾದ್ಯಂತ ಸಣ್ಣ ಸುನಾಮಿ ಅಲೆ ಅಪ್ಪಳಿಸಿತು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮೊದಲ ಭೂಕಂಪವಾದಾಗಲೇ ಕಡಲ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು. ಹೀಗಾಗಿ ಸುನಾಮಿಯಿಂದ ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ.
ಇಂಡೋನೇಷ್ಯಾದಲ್ಲಿ ಸಂಭವಿಸಿದ 8.2 ತೀವ್ರತೆಯ ಭೂಕಂಪದಿಂದ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ದೊಡ್ಡ ಸುನಾಮಿ ಸೃಷ್ಟಿಯಾಗಿ ಲಕ್ಷಾಂತರ ಮಂದಿಯನ್ನು ಬಲಿಪಡೆದಿತ್ತು.
ಈ ಭೂಕಂಪದಿಂದ ಸಾವು ನೋವು ಸಂಭವಿಸಿದ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಇದಕ್ಕಿಂತಲೂ ಕಡಿಮೆ ತೀವ್ರತೆಯ ಭೂಕಂಪ ಈ ಹಿಂದೆ ನ್ಯೂಜಿಲೆಂಡ್‌ನಲ್ಲಿ ಸಂಭವಿಸಿದ್ದಾಗ ನೂರಾರು ಮಂದಿ ಸಾವನ್ನಪ್ಪಿದ್ದರು.












Click it and Unblock the Notifications