Indians: ಭಾರತೀಯರು ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪಡೆದು ವಾಪಸ್ ಹೋಗುವುದು ನಾಚಿಕೆಗೇಡು!
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಿರುದ್ಧ ಕತ್ತಿ ಮಸಿಯುವುದನ್ನು ಮುಂದುವರಿಸಿದ್ದಾರೆ. ಭಾರತ ಮತ್ತು ರಷ್ಯಾ ಒಂದಾಗಿ ಸಾಗುತ್ತಿರುವುದು ಹಾಗೂ ಕಚ್ಚಾ ತೈಲ ಖರೀದಿ ವಿಚಾರದಲ್ಲಿ ಭಾರತವು ಅಮೇರಿಕಾ ಹೇಳಿದಂತೆ ರಾಜಿ ಆಗದೆ ಇರುವುದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಅದನ್ನು ಈಚೆಗೆ ಅವರು ಭಾರತದಿಂದ ಆಮದು ಆಗುತ್ತಿರುವ ಅಕ್ಕಿ ವಿಚಾರದಲ್ಲೂ ತೋರಿಸಿದ್ದರು. ಇದೀಗ ಟ್ರಂಪ್ ಅವರು ಭಾರತೀಯ ವಿದ್ಯಾರ್ಥಿಗಳು ಹಾಗೂ ಉನ್ನತ ಶಿಕ್ಷಣಕ್ಕೆಂದು ಅಮೇರಿಕಾಗೆ ಹೋಗುತ್ತಿರುವ ಭಾರತೀಯರ ಮೇಲೆ ತೋರಿಸುತ್ತಿದ್ದಾರೆ.
ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಅವರು ಮಿಲಿಯನ್ ಡಾಲರ್ ಮೌಲ್ಯದ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದ್ದು, ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಭಾರತ - ಚೀನಾ ಪ್ರಮುಖ ರಾಷ್ಟ್ರದ ವಿದ್ಯಾರ್ಥಿಗಳ ಬಗ್ಗೆ ಟ್ರಂಪ್ ಅಸಮಾಧಾನ
ಇನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ - ಚೀನಾ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳ ಮೇಲೆ ಕಿಡಿಕಾರಿದ್ದಾರೆ. ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅಮೇರಿಕಾದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿದ ಮೇಲೆ ಅವರ ದೇಶಗಳಿಗೆ ವಾಪಸ್ ಹೋಗುವುದು ನಾಚಿಕೆಗೇಡಿನ ಸಂಗತಿ ಆಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಇಲ್ಲಿಯವರೆಗೆ ಪ್ರತಿಭಾನ್ವಿತರನ್ನು ಅಮೇರಿಕದಲ್ಲಿ ಉಳಿಸಿಕೊಳ್ಳುವುದಕ್ಕೆ ಯಾವುದೇ ನಿರ್ದಿಷ್ಟ ವ್ಯವಸ್ಥೆ ಇರಲಿಲ್ಲ. ಆದರೆ ಗೋಲ್ಡ್ ಕಾರ್ಡ್ ವ್ಯವಸ್ಥೆ ಪ್ರಾರಂಭಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಮೇರಿಕಾಗೆ ಹೆಚ್ಚು ಪ್ರಯೋಜನ ಮಾಡುವವರಿಗೆ ಈ ಕಾರ್ಡ್ ಕೊಡುತ್ತೇವೆ. ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ಮೇಲೆ ಅವರನ್ನು ಅಮೇರಿಕನ್ ಕಂಪನಿಗಳಲ್ಲಿ ಉಳಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದಿದ್ದಾರೆ. ಭಾರತೀಯರಿಗೆ ವೀಸಾ ನೀಡುವ ವಿಚಾರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಟ್ರಂಪ್ ಅವರು ಇದೀಗ ಗೋಲ್ಡ್ ಕಾರ್ಡ್‌ನಲ್ಲಿ ಹೊಸ ಆಟ ಶುರು ಮಾಡಿದ್ದಾರೆ.
ಏನಿದು ಗೋಲ್ಡ್ ಕಾರ್ಡ್ ?
ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಚೆಗೆ ಗೋಲ್ಡ್ ಕಾರ್ಡ್ ಪರಿಚಯಿಸಿದ್ದಾರೆ. ಇದು ಅಮೇರಿಕಾದಲ್ಲಿ ಯಾರಾದರೂ ಉಳಿಯಬೇಕು ಎಂದಾದರೆ ನೀಡುವ ಹೊಸ ವೀಸಾ ಯೋಜನೆಯಾಗಿದೆ. ಹೆಚ್ಚು ಸ್ಕಿಲ್ ಇರುವ ವಿದೇಶಿ ಪದವೀಧರರು ಯುಎಸ್‌ನಲ್ಲಿ ಉಳಿಸಿಕೊಳ್ಳುವ ಉದ್ದೇಶಕ್ಕಾಗಿ ಈ ಕಾರ್ಡ್ ಪರಿಚಯಿಸಲಾಗಿದೆ. ಅಲ್ಲದೇ ಅಂತಿಮವಾಗಿ ಪೌರತ್ವಕ್ಕೆ ಮಾರ್ಗವನ್ನು ಒದಗಿಸುತ್ತದೆ.
ಗೋಲ್ಡ್ ಕಾರ್ಡ್ ಇರುವ ವ್ಯಕ್ತಿಗಳು 15,000 ಡಾಲರ್ ಮರುಪಾವತಿ ಮಾಡಲಾಗದ ಶುಲ್ಕವನ್ನು ಪಾವತಿಸಿದರೆ ಮತ್ತು ಅನುಮೋದನೆಯ ನಂತರ ಯುಎಸ್ ಸರ್ಕಾರಕ್ಕೆ 1 ಮಿಲಿಯನ್ ಡಾಲರ್ ಪಾವತಿ ಮಾಡಿದರೆ ಯುಎಸ್‌ನಲ್ಲಿ ಉಳಿಯಲು ಅನುಮತಿ ನೀಡಲಾಗುತ್ತದೆ. ಇನ್ನು ಅಮೇರಿಕಾದಲ್ಲಿ ಇರುವ ಕಂಪನಿಗಳು ಪ್ರತಿಭಾವಂತರನ್ನು ಉಳಿಸಿಕೊಳ್ಳಲು 2 ಮಿಲಿಯನ್ ಡಾಲರ್ ವರೆಗೆ ಪಾವತಿ ಮಾಡಿ, ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications