ನುಡಿನಮನ: ಕಾಮ್ರೇಡ್ ಫಿಡೆಲ್ ಕ್ಯಾಸ್ಟ್ರೋಗೆ ಲಾಲ್ ಸಲಾಂ..

By: ಸನತಕುಮಾರ ಬೆಳಗಲಿ
Subscribe to Oneindia Kannada

"ನಿಮ್ಮೊಂದಿಗೆ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಅರ್ಪಣಾ ಮನೋಭಾವದಿಂದ ಹೋರಾಟ ನಡೆಸಿದ್ದು ನನಗೆ ಹೆಮ್ಮೆಯ ಸಂಗತಿ. ನಿಮ್ಮೊಳಗಿನ ಕ್ರಾಂತಿಕಾರಿ, ನಾಯಕತ್ವದ ಗುಣಲಕ್ಷಣಗಳನ್ನು ಅರಿಯುವಲ್ಲಿ ಕೊಂಚ ತಡವಾಯಿತು. ನಿಮ್ಮ ಆಲೋಚನಾ ಲಹರಿಯೊಂದಿಗೆ ಗುರುತಿಸಿಕೊಂಡಿದ್ದು ಅಲ್ಲದೇ ಅಪಾಯ, ತತ್ವಗಳನ್ನು ನಿಮ್ಮಂತೆಯೇ ಗ್ರಹಿಸಿದ್ದು ಹೆಮ್ಮೆಯಿಂದ ನೆನೆಯುತ್ತೇನೆ. ಕ್ಯೂಬಾ ದೇಶದ ನಾಯಕತ್ವ ಜವಾಬ್ದಾರಿ ನಿಮ್ಮದು. ನಾನಿನ್ನೂ ಹೊರಡುತ್ತೇನೆ".

ಕ್ಯೂಬಾದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸುವ ಮುನ್ನ ಕ್ರಾಂತಿಕಾರಿ ಚೆಗುವೇರಾ ಮತ್ತೊಬ್ಬ ಕ್ರಾಂತಿಕಾರಿ ಫಿಡಲ್ ಕ್ಯಾಸ್ಟ್ರೋಗೆ ಹೇಳಿದ ಮಾತಿದು. ಕ್ಯಾಸ್ಟ್ರೋ ಯಾರು ಮತ್ತು ಏನು ತಿಳಿದುಕೊಳ್ಳಲು ಇಷ್ಟು ಪದಗಳು ಸಾಕು. ಕ್ಯಾಸ್ಟ್ರೋ ಅವರನ್ನು ಹತ್ತು ಹಲವು ರೀತಿಯಲ್ಲಿ ವರ್ಣಿಸಬಹುದು. ಆದರೆ ಅವರ ಜೀವಿತಾವಧಿಯ ಹೋರಾಟದ ಕಾಲಘಟ್ಟ ಮತ್ತು ಬದುಕಿದ ರೀತಿಯನ್ನು ವರ್ಣಿಸಲು ಪದಗಳ ಕೊರತೆ ಕಾಡಬಹುದು.[ಕ್ಯೂಬಾ ಮಾಜಿ ಅಧ್ಯಕ್ಷ, ಕಮ್ಯೂನಿಸ್ಟ್ ನಾಯಕ ಫಿಡಲ್ ಕ್ಯಾಸ್ಟ್ರೋ ನಿಧನ]

Tribute to Cuba's revolutionary leader Fidel Castro

ದೇಶಭಕ್ತಿ ಮತ್ತು ತ್ಯಾಗ ಮನೋಭಾವದ ಕುರಿತು ಪ್ರಶ್ನೆಗಳು ವ್ಯಕ್ತವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕ್ಯಾಸ್ಟ್ರೋ ಹೆಚ್ಚು ಪ್ರಸ್ತುತವಾಗುತ್ತಾರೆ. ದೇಶಕ್ಕಾಗಿ ಯಾರೇನು ಮಾಡಿದರೂ ಅಥವಾ ಕೊಟ್ಟರು ಎಂದು ಪ್ರಶ್ನಿಸುವ ಬದಲು ಸ್ವತಃ ಕ್ಯಾಸ್ಟ್ರೋ ತಾನೇನು ಮಾಡಿದೆ ಎಂದು ಸಾದರಪಡಿಸಿದರು. ಮಾತುಗಳಿಗಿಂತ ಕೃತಿಯಲ್ಲೇ ಹೆಚ್ಚು ನಂಬಿಕೆ ಹೊಂದಿದ್ದ ಅಮೆರಿಕ ಎಂಬ ಪೆಡಂಭೂತವನ್ನು ಎದುರು ಹಾಕಿಕೊಂಡು ಪುಟ್ಟ ಕ್ಯೂಬಾ ರಕ್ಷಿಸಿಕೊಂಡರು.

ಕ್ರಾಂತಿಯಿಂದ ಮಾತ್ರವೇ ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಂಡ ಕ್ಯಾಸ್ಟ್ರೋ ತಮ್ಮ 90ನೇ ಇಳಿವಯಸ್ಸಿನಲ್ಲೂ ರಾಜಿ ಮಾಡಿಕೊಳ್ಳಲಿಲ್ಲ. ಅಮೆರಿಕ ಎಷ್ಟೇ ನಿರ್ಬಂಧ ಹೇರಿದರೂ, ಬೆದರಿಕೆ ಒಡ್ಡಿದರೂ ಬೃಹತ್ ಪರ್ವತದಂತೆ ಅಲುಗಾಡಿಸಲಾಗದ ಬಂಡೆಯಂತೆ ಕ್ಯೂಬಾ ದೇಶವನ್ನು ಬಂಡೆಯಾಗಿ ನಿಲ್ಲಿಸಿದರು. ದೇಶಕ್ಕಾಗಿ ಇಡೀ ಜೀವನ ಸಮರ್ಪಿಸಿದ ಅವರು ತಮ್ಮ ಮೊಗದಲ್ಲಿ ಎಂದಿಗೂ ದಣಿವು ತೋರಿಸಿಕೊಡಲಿಲ್ಲ.

ಆಪ್ತಸ್ನೇಹಿತ ಚೆಗುವೇರಾ ಜೊತೆ ಸಿಗಾರ್ ಸೇದುವುದರಲ್ಲಿ ಹೆಚ್ಚು ಸಂತಸಪಡುತ್ತಿದ್ದ ಕ್ಯಾಸ್ಟ್ರೋ ತಮ್ಮ ಬದುಕಿನ ಪ್ರತಿ ಕ್ಷಣವನ್ನು ಸವಾಲಾಗಿ ಸ್ವೀಕರಿಸಿದರು. ಅರ್ಥಾತ್ ಅವರಲ್ಲಿನ ಅದಮ್ಯ ಆತ್ಮವಿಶ್ವಾಸ ಮತ್ತ ಆತ್ಮಬಲ ಯಾವಾಗಲೂ ಸ್ಫೂರ್ತಿ ನೀಡಿದವು. ಕೈಯಲ್ಲಿ ಕೆಂಬಾವುಟ, ತಲೆಗೊಂದು ಕ್ಯಾಪ್, ಮೈಮೇಲೆ ಯೋಧನ ದಿರಿಸು, ಬಾಯಿಯಲ್ಲಿ ಸಿಗಾರ್ ಮತ್ತು ಸದಾ ಆಶಾಭಾವನೆಯಿಂದ ಕಂಗೊಳಿಸುವ ಕಂಗಳಲ್ಲಿ ಕಾಣಸಿಕ್ಕವರು ಕ್ಯಾಸ್ಟ್ರೋ.

ಕ್ಯಾಸ್ಟ್ರೋ ಅವರನ್ನು ಸಂಪೂರ್ಣವಾಗಿ ದಮನ ಮಾಡಲು ನಡೆದ ಪ್ರಯತ್ನಗಳು ಅಷ್ಟಿಷ್ಟಲ್ಲ. 90ಕ್ಕೂ ಹೆಚ್ಚು ಬಾರಿ ಅವರ ಮೇಲೆ ದಾಳಿ ನಡೆಸಿ, ಪ್ರಾಣ ಕಸಿದುಕೊಳ್ಳುವ ಯತ್ನ ನಡೆದವು. ಆದರೆ ಪ್ರತಿ ಸಂದರ್ಭದಲ್ಲೂ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಹುಟ್ಟಿ ಬಂದ ಅವರು ಎಂದಿನಂತೆ ಸವಾಲು ಒಡ್ಡುವುದರಲ್ಲಿ ಖುಷಿ ಅನುಭವಿಸಿದರು. ಕ್ರಾಂತಿಕಾರಿ ಹೇಗೆ ಬದುಕಬೇಕು ಎಂಬುದನ್ನು ನೇರವಾಗಿ ಅವರು ಯಾವತ್ತೂ ಹೇಳಲಿಲ್ಲ. ಆದರೆ ಅಕ್ಷರಶಃ ಬದುಕಿ ತೋರಿಸಿದರು.

1926ರ ಆಗಸ್ಟ್ 13ರಂದು ಭೂಮಾಲೀಕರ ಶ್ರೀಮಂತರ ಕುಟುಂಬದಲ್ಲಿ ಜನಿಸಿದರೂ ಅವರು ಜೀವನದುದ್ದಕ್ಕೂ ಬಡವರು ಮತ್ತು ದಮನಿತರ ಪರ ಧ್ವನಿಯೆತ್ತಿದರು. ಸಹೋದರ ರೌಲ್ ಕ್ಯಾಸ್ಟ್ರೋ, ಚೆಗುವೇರಾ ಮತ್ತು ಇತರರ ಜೊತೆಗೂಡಿ 1950ನೇ ದಶಕದಲ್ಲಿ ಕೈಗೊಂಡ ಕ್ರಾಂತಿಯಿಂದ ಕ್ಯೂಬಾ ಹೊಸಹುಟ್ಟು ಪಡೆಯಿತು. 1959 ರಿಂದ 1976ರದವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕ್ಯಾಸ್ಟ್ರೋ 1976ರಿಂದ 2008ರವರೆಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಅಮೆರಿಕದಲ್ಲಿ ಅಲ್ಲದೇ ಜಾಗತಿಕವಾಗಿ ಹಲವಾರು ಬದಲಾವಣೆಗಳು ಆಗುತ್ತಿರುವ ಇಂದಿನ ಸಂದರ್ಭದಲ್ಲಿ ಕ್ಯಾಸ್ಟ್ರೋ ಇರಬೇಕಿತ್ತು. ಇಂದಿನ ಯುವಪೀಳಿಗೆಗೆ ಮಾರ್ಗದರ್ಶನ ನೀಡಬೇಕಿತ್ತು. ಲಾಲ್ ಸಲಾಂ ಕ್ಯಾಸ್ಟ್ರೋ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fidel Castro, Cuba's former president and leader of the Communist revolution, has died on Saturday. -Veteran Journalist Sanatha Kuamara Belagali pays tribute to Fidel Castro
Please Wait while comments are loading...