ಅಮೆರಿಕದ ಎಡವಟ್ಟು, ಜೀವ ಭಯದಲ್ಲಿ ನರಳುತ್ತಿದೆಯಾ ತೈವಾನ್?
ತೈಪೆ: ಅಮೆರಿಕದ ಸಹವಾಸ ಮಾಡಿ ಬೆಚ್ಚಿರುವ ತೈವಾನ್‌ಗೆ ಕ್ಷಣಕ್ಷಣಕ್ಕೂ ಶಾಕ್ ಸಿಗುತ್ತಿದೆ. 1 ವಾರದ ಹಿಂದೆ ತೈವಾನ್ ಸುತ್ತ ಸಮರಭ್ಯಾಸ ನಡೆಸಿ ಭೀಕರ ಎಚ್ಚರಿಕೆ ಕೊಟ್ಟಿದ್ದ ಚೀನಾ ಸೇನೆ ಕೋಪ ಇನ್ನೂ ಕಡಿಮೆಯಾಗಿಲ್ಲ ಅಂತಾ ಕಾಣುತ್ತೆ. ಏಕೆಂದರೆ ಮತ್ತೊಮ್ಮೆ ಚೀನಾದ 13 ಮಿಲಿಟರಿ ವಿಮಾನ ಮತ್ತು 3 ನೌಕಾ ಹಡಗುಗಳನ್ನ ಗುರುತಿಸಿರುವುದಾಗಿ ತೈವಾನ್ ಹೇಳಿಕೊಂಡಿದೆ.
ನೆಮ್ಮದಿ ಇರುವ ಜಾಗದಲ್ಲಿ ಅಮೆರಿಕದ ಎಂಟ್ರಿಯಾದರೆ ಎಡವಟ್ಟು ಗ್ಯಾರಂಟಿ ಎಂಬುದು ಜನಜನಿತ ಆರೋಪ. ಈಗಲೂ ಅಷ್ಟೇ ಏಷ್ಯಾದಲ್ಲಿ ನಡೆಯುತ್ತಿರುವ ಕಿತ್ತಾಟ, ತಿಕ್ಕಾಟಗಳಿಗೆ ಅಮೆರಿಕ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ತೈವಾನ್ ಜೊತೆ ಜಂಟಿ ಸಮರಾಭ್ಯಾಸ ನಡೆಸಿ ತೈವಾನ್ (Taiwan) ನೆಮ್ಮದಿ ಕೆಡಿಸಿತ್ತು ದೊಡ್ಡಣ್ಣ. ಅಮೆರಿಕ (America) ಸೇನೆ ಫಿಲಿಪೈನ್ಸ್ (Philippines) ಜೊತೆಗೂ ಇದೇ ಕೆಲಸ ಮಾಡಿದೆ. ಈ ಹೊತ್ತಲ್ಲಿ ಡ್ರ್ಯಾಗನ್ ಚೀನಾ ಮತ್ತೊಂದು ಶಾಕ್ ಕೊಟ್ಟಿದೆ. ತೈವಾನ್ ಸುತ್ತ ಈಗಲೂ ಸೇನೆಯನ್ನ ನಿಯೋಜಿಸಿರುವ ಸ್ಫೋಟಕ ಸತ್ಯ ಬಯಲಾಗಿದೆ.

ತೈವಾನ್ ಸೇನೆಗೆ ಕಾದಿತ್ತು ಶಾಕ್!
ತೈವಾನ್ ಭಾನುವಾರ ಬೆಳಗ್ಗೆ 6 ರಿಂದ ಸೋಮವಾರ ಬೆಳಗ್ಗೆ 6 ಗಂಟೆ ತನಕ ದೇಶದಾದ್ಯಂತ ಚೀನಾದ 13 ಮಿಲಿಟರಿ ವಿಮಾನಗಳು ಮತ್ತು 3 ನೌಕಾ ಹಡಗುಗಳನ್ನ ಗುರುತಿಸಿದೆ. ಈ ಕುರಿತು ತೈವಾನ್ ಸುದ್ದಿವಾಹಿನಿ ವರದಿ ಮಾಡಿದೆ. ಅಲ್ಲದೆ ಪತ್ತೆಯಾದ ಚೀನಾ ಯುದ್ಧ ವಿಮಾನಗಳ ಪೈಕಿ 1 ವಿಮಾನ ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯದ ಆಗ್ನೇಯ ಭಾಗಕ್ಕೆ ಪ್ರವೇಶಿಸಿದೆ ಎಂದು ಆರೋಪಿಸಲಾಗಿದೆ. ಇದರ ಜೊತೆಗೆ ಸೇನಾ ಹೆಲಿಕಾಪ್ಟರ್ ಕೂಡ ತೈವಾನ್ ಸುತ್ತಮುತ್ತಲು ಹಾರಾಟ ನಡೆಸಿರುವ ಸುದ್ದಿ ಬರಸಿಡಿಲಿನಂತೆ ತೈವಾನ್ ನಾಯಕರಿಗೆ ಬಡಿದಿದೆ.
ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಈಗಾಗಲೇ ರಷ್ಯಾ ಮತ್ತು ಉಕ್ರೇನ್ ಜಗಳದಲ್ಲಿ ಜಗತ್ತು 2 ಭಾಗವಾಗಿದೆ. ಮತ್ತೊಂದು ಕಡೆ ದಕ್ಷಿಣ ಚೀನಾ ಸಮುದ್ರ ಪ್ರದೇಶ ಬೂದಿ ಮುಚ್ಚಿದ ಕೆಂಡವಾಗಿದೆ. ಇದೇ ಸಂದರ್ಭದಲ್ಲಿ ತೈವಾನ್ ಸುತ್ತಲೂ ಚೀನಾ ಮತ್ತೊಮ್ಮೆ ತನ್ನ ಸೇನಾ ವಿಮಾನ ಹಾಗೂ ಹಡಗು ತಂದಿರುವುದು ಆತಂಕ ಹೆಚ್ಚಿಸಿದೆ. ಅದರಲ್ಲೂ ಕೊತಕೊತ ಕುದಿಯುತ್ತಿರುವ ಅಮೆರಿಕ ಈಗ ಚೀನಾದ ನಡೆಯಿಂದ ಮತ್ತೊಂದು ತಂತ್ರ ಹೂಡಲು ಸಜ್ಜಾಗಿರಬಹುದು. ಆದರೆ ತೈವಾನ್ ಮಾತ್ರ ಚೀನಾದ ಸೇನಾ ವಿಮಾನಗಳನ್ನ ಕಂಡು ಬೆಚ್ಚಿದೆ. ಜೊತೆಗೆ ಯುದ್ಧದ ಆತಂಕದಲ್ಲೇ ತೈವಾನ್ ಪ್ರಜೆಗಳು ನಿದ್ದೆ ಮಾಡುವಂತಾಗಿದೆ.
ತೈವಾನ್ ಪರ ಜಿ-7 ಬಲ
ಕಳೆದ ವಾರ ಜಪಾನ್‌ನಲ್ಲಿ ನಡೆದಿದ್ದ ಸಭೆಯಲ್ಲಿ ತೈವಾನ್ ಪರವಾಗಿ ಮಾತನಾಡಿದ್ದ ಜಿ-7 ರಾಷ್ಟ್ರಗಳ ವಿದೇಶಾಂಗ ಸಚಿವರು ದಕ್ಷಿಣ ಚೀನಾ ಪ್ರದೇಶದ ವಿಚಾರದಲ್ಲಿ ಚೀನಾ ಸುಮ್ಮನೆ ಇರಬೇಕು ಎನ್ನುವಂತೆ ಎಚ್ಚರಿಸಿದ್ದರು. ದಕ್ಷಿಣ ಚೀನಾ ಸಮುದ್ರದ ಪ್ರದೇಶದಲ್ಲಿ ಚಟುವಟಿಕೆಗಳು ನಡೆಯುವ ಹೊತ್ತಲ್ಲೇ ಇಂತಹ ಹೇಳಿಕೆ ಬಂದಿರುವುದು ಸಂಚಲನ ಸೃಷ್ಟಿಸಿತ್ತು. ಮತ್ತೊಂದ್ಕಡೆ ಚೀನಾ ಈ ಹೇಳಿಕೆಗೆ ಖಡಕ್ ರಿಯಾಕ್ಷನ್ ಕೂಡ ಕೊಟ್ಟಿತ್ತು. ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಹಾಗೂ ಅಮೆರಿಕಗೆ ಪರೋಕ್ಷ ಎಚ್ಚರಿಕೆ ರವಾನಿಸಿತ್ತು ಚೀನಾ.

ಒಟ್ನಲ್ಲಿ ಪರಿಸ್ಥಿತಿ ತಣ್ಣಗಾಯ್ತು ಎನ್ನುವಷ್ಟರಲ್ಲಿ ಮತ್ತೆ ಕಾಡ್ಗಿಚ್ಚೇ ಹೊತ್ತಿಕೊಂಡಂತೆ ಕಾಣುತ್ತಿದೆ. ಚೀನಾ ಕೋಪ ತಣ್ಣಗೆ ಮಾಡಲು ತೈವಾನ್ ಏನೆಲ್ಲಾ ಪ್ರಯತ್ನ ಮಾಡಿದರೂ ಚೀನಾ ಸೇನೆ ಮಾತ್ರ ಸೈಲೆಂಟ್ ಆಗುತ್ತಿಲ್ಲ. ಇದರ ಜೊತೆಗೆ ಮತ್ತೆ ಮತ್ತೆ ಅಮೆರಿಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಇವರ ಈ ತಿಕ್ಕಾಟದಲ್ಲಿ ಸಾಮಾನ್ಯರ ನೆಮ್ಮದಿ ಹಾರಿ ಹೋಗಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.












Click it and Unblock the Notifications