Syrian Conflict: ನೆಮ್ಮದಿ ಇಲ್ಲದ ನಾಡು ಸಿರಿಯಾದಲ್ಲಿ ಮತ್ತಷ್ಟು ಹಿಂಸಾಚಾರ...
ಸಿರಿಯಾ ಸಂಘರ್ಷದ ಕುಲುಮೆಯಲ್ಲಿ ಬೆಂದು ಹೋಗಿದೆ, ಸಿರಿಯಾ ಜನ ಜೀವ ಉಳಿಸಿಕೊಂಡು ಒಂದಷ್ಟು ದಿನ ಬದಕಲು ಮತ್ತೆ ಬೇರೆ ದೇಶಗಳಿಗೆ ಓಡಿ ಹೋಗುವಂತೆ ಆಗಿದೆ. ಯಾಕಂದ್ರೆ, ಸಿರಿಯಾ ದೇಶದಲ್ಲಿ ನೆಮ್ಮದಿಯೇ ಇಲ್ಲವಾಗಿದೆ. ಆಂತರಿಕ ಗಲಭೆ ಕಾರಣಕ್ಕೆ ವಿಲವಿಲ ಒದ್ದಾಡಿ ಹೋಗಿರುವ ಸಿರಿಯಾ ದೇಶದಲ್ಲಿ ಮತ್ತಷ್ಟು ಸ್ಫೋಟಕ ಘಟನೆಗಳು ವರದಿಯಾಗುತ್ತಿವೆ. ಹೀಗೆ ಇದ್ದಾಗಲೇ ಇಸ್ರೇಲ್ & ಟರ್ಕಿ ಕೂಡ ಸಿರಿಯಾ ಮೇಲೆ ದಾಳಿ ಆರಂಭ ಮಾಡಿರುವ ಆರೋಪ ಕೇಳಿ ಬಂದಿದೆ.
ಸಿರಿಯಾ ನಾಗರಿಕ ಯುದ್ಧದ ಬೆಂಕಿಯಿಂದ ಎದ್ದು ಬಂದು ಹೊಸ ಬದುಕು ಕಟ್ಟಿಕೊಂಡು, ಇನ್ನೇನು ಎಲ್ಲಾ ದೇಶಗಳಂತೆ ಬದುಕಲು ಸಿದ್ಧವಾಗಿತ್ತು. ಆದರೆ ಇದೀಗ ಸಿರಿಯಾ ದೇಶದಲ್ಲಿ ಹೊಸ ಭಯ ಶುರುವಾಗಿದೆ. ಇಷ್ಟು ದಿನಗಳ ಕಾಲ ಸಿರಿಯಾ ದೇಶದಲ್ಲಿ ಜನರು ತಮ್ಮ ನೆಲದ ಸರ್ಕಾರದ ವಿರುದ್ಧವೇ ಹೋರಾಟ ನಡೆಸುತ್ತಿದ್ದರು. ಯಾಕಂದ್ರೆ ಅಸ್ಸಾದ್ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಆಗಿ ವರ್ತನೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಆಂತರಿಕ ಯುದ್ಧ ನಿಂತ ನಂತರ ಇದೀಗ ಶತ್ರು ದೇಶಗಳ ದಾಳಿಗೆ ಸಿರಿಯಾ ನಲುಗಿ ಹೋಗಿದೆ.

ಶತ್ರುಗಳ ದಾಳಿಗೆ ಸಿರಿಯಾ ವಿಲವಿಲ!
ಹೌದು, ಇದೀಗ ಸಿರಿಯಾ ನೆಲದ ಮೇಲೆ ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್ ಸೇನೆ ತನ್ನ ಹಿಡಿತವನ್ನು ಮತ್ತಷ್ಟು ಪ್ರದೇಶಗಳಲ್ಲಿ ಹೆಚ್ಚಿಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಸಿರಿಯಾ ಭೂಮಿ ಮೇಲೆ ಕಣ್ಣು ಇಟ್ಟಿರುವ ಅಕ್ಕಪಕ್ಕದ ಶತ್ರು ದೇಶಗಳು ಕೂಡ ಸಿರಿಯಾ ಒಳಗೆ ನುಗ್ಗಲು ಸಿದ್ಧವಾಗಿವೆ ಎಂಬ ಆರೋಪ ಬಿರುಗಾಳಿ ಎಬ್ಬಿಸಿದೆ. ಇಷ್ಟೆಲ್ಲದರ ನಡುವೆ ಸಿರಿಯಾದ ಜನರು ಮತ್ತಷ್ಟು ಬೆಚ್ಚಿ ಬಿದ್ದಿದ್ದಾರೆ.
ಸಿರಿಯಾ ಬಂಡಾಯ ನಾಯಕರ ಜೊತೆಗೆ ದೋಸ್ತಿ!
ಇರಾನ್ ಈಗ, ಸಿರಿಯಾ ನಾಯಕತ್ವದಲ್ಲಿ ಆಗಿರುವ ಬದಲಾವಣೆ ಬಗ್ಗೆ ವಾಸ್ತವವಾಗಿ ಚಿಂತೆ ಮಾಡಲು ಶುರು ಮಾಡಿದೆ. ಇದೇ ಕಾರಣಕ್ಕೆ ಅಸ್ಸಾದ್ ಸರ್ಕಾರ ಬಿದ್ದು ಹೋಗಿ, ಸಿರಿಯಾ ನೆಲದಿಂದ ಅಸ್ಸಾದ್ ಓಡಿ ಹೋದ ನಂತರ ಅಧಿಕಾರಕ್ಕೆ ಬಂದಿರುವ ಸಿರಿಯಾದ ಬಂಡಾಯ ಸೇನೆಯ ಆಡಳಿತದ ಜೊತೆಗೆ ಮಾತುಕತೆಗೆ ಇದೀಗ ಇರಾನ್ ಮುಂದಾಗಿದೆ. ಈ ಮೂಲಕವೇ ಮಧ್ಯಪ್ರಾಚ್ಯ ಭಾಗದಲ್ಲಿ ತನ್ನ ಸ್ನೇಹವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ಇರಾನ್‌ನ ಆಡಳಿತ ಮುಂದಾಗಿದೆ ಎಂಬ ಮಾತು ಕೇಳಿ ಬಂದಿದೆ.
ಒಟ್ನಲ್ಲಿ ಸಿರಿಯಾ ಆದಷ್ಟು ಬೇಗ ಶಾಂತವಾಗಬೇಕಿದೆ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ರೀತಿಯ ತಿಕ್ಕಾಟಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಇಸ್ರೇಲ್ & ಗಾಜಾದ ಯುದ್ಧ ಮತ್ತು ಇಸ್ರೇಲ್ & ಲೆಬನಾನ್ ಯುದ್ಧಗಳು ಭಾರಿ ಘೋರತೆ ತೋರಿಸಿವೆ. ಹೀಗಾಗಿ, ಆದಷ್ಟು ಬೇಗ ಸಿರಿಯಾ ನೆಲ ತಣ್ಣಗೆ ಆಗಬೇಕು ಎಂಬ ಒತ್ತಾಯ ಕೇಳಿ ಬರುತ್ತಲೇ ಇದೆ. ಆದ್ರೆ ಈ ಒತ್ತಾಯಕ್ಕೆ ಮಣಿಯುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications