ಸಿಡ್ನಿಗೆ ಲಗ್ಗೆ ಇಟ್ಟಿದ್ದ ಒಬ್ಬ ಉಗ್ರ ಪೊಲೀಸರ ಗುಂಡಿಗೆ ಬಲಿ
ಸಿಡ್ನಿ, ಡಿ.16 : ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಮಾರ್ಟಿನ್ ಪ್ಲೇಸ್‌ನ ಲಿಂಟ್ ಚಾಕೊಲೇಟ್ ಕೆಫೆಗೆ ನುಗ್ಗಿದ್ದ ಉಗ್ರನನ್ನು ಸುಮಾರು 16 ಗಂಟೆಗಳ ಕಾರ್ಯಾಚರಣೆ ಬಳಿಕ ಹತ್ಯೆ ಮಾಡಲಾಗಿದೆ. ಉಗ್ರ ಒತ್ತೆಯಿರಿಸಿಕೊಂಡಿದ್ದ 30 ಮಂದಿಯನ್ನು ರಕ್ಷಿಸುವಲ್ಲಿ ಆಸ್ಟ್ರೇಲಿಯಾ ಪೊಲೀಸರು ಯಶಸ್ವಿಯಾಗಿದ್ದಾರೆ. ಉಗ್ರರ ವಶದಲ್ಲಿದ್ದ ಭಾರತೀಯ ಮೂಲದ ಟೆಕ್ಕಿಯೂ ಸುರಕ್ಷಿತವಾಗಿದ್ದಾರೆ.

ಕೆಫೆಗೆ ನುಗ್ಗಿದ ಉಗ್ರನನ್ನು ಇರಾನ್ ಮೂಲದ ಹರನ್ ಮೋನಿಸ್ ಎಂದು ಗುರುತಿಸಲಾಗಿದೆ. ಉಗ್ರನನ್ನು ಕೊಲ್ಲುವ ಕಾರ್ಯಾಚರಣೆ ವೇಳೆ ಇಬ್ಬರು ಒತ್ತೆಯಾಳುಗಳು ಮೃತಪಟ್ಟಿದ್ದಾರೆ. ಸುಮಾರು 16 ತಾಸು ವಿಶ್ವದ ಗಮನಸೆಳೆದಿದ್ದ ಉಗ್ರನನ್ನು ರಾತ್ರಿ 2 ಗಂಟೆ ಸುಮಾರಿಗೆ ಆಸ್ಟ್ರೇಲಿಯಾ ಪೊಲೀಸರು ಹತ್ಯೆ ಮಾಡಿದ್ದಾರೆ. [ಸಿಡ್ನಿ ದಾಳಿಯ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ]

ಬೆಳಗ್ಗೆ ನುಗ್ಗಿದ್ದ : ಸಿಡ್ನಿಯ ಮಾರ್ಟಿನ್ ಪ್ಲೇಸ್‌ನ ಲಿಂಟ್ ಚಾಕೊಲೇಟ್ ಕೆಫೆಗೆ ಸೋಮವಾರ ಬೆಳಗ್ಗೆ 9.45ರ ಸುಮಾರಿಗೆ ಉಗ್ರ ಹರನ್ ಮೋನಿಸ್ ನುಗ್ಗಿದ್ದ. ಅಲ್ಲಿದ್ದವರನ್ನು ಒತ್ತೆಯಾಗಿರಿಸಿಕೊಂಡು ತನಗೆ ತಕ್ಷಣ ಐಸಿಸ್ ಧ್ವಜ ಒದಗಿಸುವುದರ ಜತೆಗೆ ಪ್ರಧಾನಿ ಟೋನಿ ಅಬಾಟ್ ಜತೆ ಸಂಧಾನಕ್ಕೆ ಏರ್ಪಾಡು ಮಾಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದ. [ಉಗ್ರರ ವಶದಲ್ಲಿ ಇನ್ಫೋಸಿಸ್ ಉದ್ಯೋಗಿ]

ತನ್ನನ್ನು ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾದದರೆ ಒತ್ತೆಯಾಳಾಗಿರುವ 30 ಜನರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಮತ್ತು ನಗರದ ನಾಲ್ಕು ಕಡೆ ಅಳವಡಿಸಿರುವ ಬಾಂಬ್‌ಗಳನ್ನು ಸ್ಫೋಟಿಸುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದ. [ಪಿಟಿಐ ಚಿತ್ರಗಳು]

2 ಗಂಟೆಗೆ ನುಗ್ಗಿದರು : ಕೆಫೆ ಬಳಿಯಲ್ಲಿನ ಕಟ್ಟಡಗಳ ಜನರನ್ನು ತೆರವು ಮಾಡಿದ ಪೊಲೀಸರು ಉಗ್ರನನ್ನು ಹಿಡಿಯುವ ಕಾರ್ಯಾಚರಣೆ ಕೈಗೊಂಡರು. 30 ಒತ್ತೆಯಾಳುಗಳ ಪೈಕಿ ಐವರು ಉಗ್ರನ ಸೆರೆಯಿಂದ ತಪ್ಪಿಸಿಕೊಂಡು ಕೆಫೆಯಿಂದ ಹೊರಗೋಡಿ ಬಂದಿದ್ದರು.

ಇವರಲ್ಲಿ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದರು. ತಪ್ಪಿಸಿಕೊಂಡು ಬಂದವರಿಂದ ಉಗ್ರನ ಬಗ್ಗೆ ಮಾಹಿತಿ ಪಡೆದ ಪೊಲೀಸರು ರಾತ್ರಿ 2 ಗಂಟೆ ಸುಮಾರಿಗೆ ಕೆಫೆಗೆ ನುಗ್ಗಿ ಆತನನ್ನು ಹತ್ಯೆ ಮಾಡಿ, ಒತ್ತೆಯಾಳುಗಳನ್ನು ರಕ್ಷಿಸಿದರು. ಈ ವೇಳೆ ಇಬ್ಬರು ನಾಗರಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಇರಾನಿಂದ ಬಂದಿದ್ದ ಉಗ್ರ : ಸುಮಾರು 50 ವರ್ಷ ವಯಸ್ಸಿನ ಹರನ್ ಮೋನಿಸ್ ಸ್ವಯಂಘೋಷಿತ ಇಸ್ಲಾಂ ಮತ ಪಂಡಿತ. 1996ರಲ್ಲೇ ಇರಾನ್‌ನಿಂದ ಓಡಿ ಬಂದು ಆಸ್ಟ್ರೇಲಿಯಾದಲ್ಲಿ ರಾಜಕೀಯ ಆಶ್ರಯ ಪಡೆದಿದ್ದ. ಏಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ, ಮಾಜಿ ಪತ್ನಿಯನ್ನೇ ಕೊಂದ ಆರೋಪ ಈತನ ಮೇಲಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದ.

ಇನ್ಫಿ ಉದ್ಯೋಗಿ ಸುರಕ್ಷಿತ : ಉಗ್ರ ಒತ್ತೆಯಾಳಾಗಿ ಇಟ್ಟುಕೊಂಡಿದ್ದವರ ಪೈಕಿ ಇನ್ಫೋಸಿಸ್ ಉದ್ಯೋಗಿಯೂ ಸೇರಿದ್ದರು. ಆಂಧ್ರಪ್ರದೇಶದ ಗುಂಟೂರು ನಿವಾಸಿ ಅಂಕಿರೆಡ್ಡಿ ವಿಶ್ವಕಾಂತ್ ಉಗ್ರನ ಸೆರೆಯಲ್ಲಿರುವುದನ್ನು ಇನ್ಫೋಸಿಸ್ ಖಚಿತಪಡಿಸಿತ್ತು. ರಾತ್ರಿ ಕಾರ್ಯಾಚರಣೆ ಮುಗಿದ ಬಳಿಕ ವಿಶ್ವಕಾಂತ್ ಸುರಕ್ಷಿತವಾಗಿದ್ದಾರೆ ಎಂದು ಘೋಷಿಸಲಾಗಿದೆ.













Click it and Unblock the Notifications