ಸುಡಾನ್ ಸೇನೆಯ ರಕ್ತದಾಹ.. ಮತ್ತೆ ಹಿಂಸಾಚಾರ ಶುರು!
ಖರ್ಟೋಮ್: ಸುಡಾನ್ ನೆಲದಲ್ಲಿ ಶಾಂತಿ ಎಂಬುದೇ ಕನಸಿನ ಮಾತಾಗಿದೆ, 1 ಸಾವಿರಕ್ಕೂ ಹೆಚ್ಚು ಜೀವ ಬಲಿ ಪಡೆದಿರುವ ಸುಡಾನ್ ಆಂತರಿಕ ಕದನ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ಅಮೆರಿಕ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ ಶುರುವಾಗಿದ್ದ ಕದನ ವಿರಾಮ ಮಾತುಕತೆಯಿಂದ ಸುಡಾನ್ ಸೇನೆ ಇದೀಗ ಹಿಂದೆ ಸರಿದಿದ್ದು, ಮತ್ತಷ್ಟು ರಕ್ತ ಚೆಲ್ಲಾಡುವ ಮುನ್ಸೂಚನೆ ನೀಡಿದೆ.
ಸುಡಾನ್ ಹಿಂಸಾಚಾರದಲ್ಲಿ ಸಾಮಾನ್ಯ ಜನರ ತಪ್ಪೇನು ಇಲ್ಲ. ಆದರೆ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ಅಧಿಕಾರದ ದಾಹ ಹೆಚ್ಚಾಗಿ ಕಿತ್ತಾಟ ಶುರುವಾಗಿತ್ತು. ಪರಿಣಾಮ ಸುಡಾನ್ ಬೀದಿ ಬೀದಿಗಳಲ್ಲಿ ರಕ್ತ ಹರಿಯಿತು. ಮೊದಲೇ ಬಡತನ ಮತ್ತು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಸುಡಾನ್ ಈಗ ಬಹುತೇಕ ನಾಶವಾಗುವ ಹಂತಕ್ಕೆ ಬಂದು ನಿಂತಿದೆ. 50 ಲಕ್ಷ ಜನರ ಬದುಕು ಬೀದಿಗೆ ಬಿದ್ದರೂ ಹಿಂಸಾಚಾರ ಮಾತ್ರ ತಣ್ಣಗಾಗುತ್ತಿಲ್ಲ. ಮತ್ತೊಂದು ಕಡೆ ಶಾಂತಿ ಮಾತುಕತೆಯೂ ಮುರಿದುಬಿದ್ದು ಪರಿಸ್ಥಿತಿ ಮತ್ತೆ ಕೈಮೀರುತ್ತಿದೆ (Sudan Violence).

ಅಧಿಕಾರ ದಾಹಕ್ಕಾಗಿ ಸಾಮಾನ್ಯರ ಸಾವು
ಅಷ್ಟಕ್ಕೂ ಸುಡಾನ್ ಅರೆಸೇನಾ ಪಡೆಯ ಯೋಧರನ್ನ ನಿಕೃಷ್ಟವಾಗಿ ಸೇನೆ ಕಾಣುತ್ತಿದೆ ಎಂಬ ಆರೋಪಕ್ಕೆ ಗಲಾಟೆ ಶುರು ಆಗಿತ್ತು. ಆದರೆ ಅದರ ಲಾಭ ಪಡೆದಿದ್ದು ಮಾತ್ರ ಸೇನಾ ಮುಖ್ಯಸ್ಥರು. ಅತ್ತ ಸುಡಾನ್ ಸೇನೆಯ ಮುಖ್ಯಸ್ಥ ತನ್ನ ಅಧಿಕಾರ ಉಳಿಸಿಕೊಳ್ಳಲು ಹೋರಾಡಿದ, ಇತ್ತ ಅರೆಸೇನಾ ಪಡೆಯ ಮುಖ್ಯಸ್ಥ ತನ್ನ ಅಧಿಕಾರಕ್ಕೆ ಬಡಿದಾಡಿದ. ಇವರಿಬ್ಬರ ಜಗಳಕ್ಕೆ ಸಾವಿರಾರು ಅಮಾಯಕರು ಬಲಿಯಾದರು. ಈಗ ನೋಡಿದರೆ ಅರೆಸೇನಾಪಡೆ ನಮ್ಮ ಬದ್ಧತೆ ಗೌರವಿಸಿಲ್ಲ, ಹೀಗಾಗಿ ನಾವು ಯುದ್ಧಕ್ಕೆ ಸಿದ್ಧ ಎಂದಿದ್ದಾನೆ ಸುಡಾನ್ ಸೇನೆಯ ಮುಖ್ಯಸ್ಥ.
ಸಂಧಾನದ ಹೊತ್ತಲ್ಲೇ ಕಿರಿಕ್ ಶುರು!
ಇನ್ನೇನು ಎಲ್ಲಾ ಸರಿಹೋಯ್ತು ಅನ್ನೋ ಸಮಯಕ್ಕೆ ಮತ್ತೆ ಕಿರಿಕ್ ಶುರುವಾಗಿದೆ. ಕದನ ವಿರಾಮ ಘೋಷಿಸಿದಾಗ ಸುಡಾನ್ ಅರೆಸೇನಾಪಡೆ ನಿಯಮ ಪಾಲಿಸಲಿಲ್ಲ. ಅಲ್ಲದೆ ಕದನ ವಿರಾಮ ಘೋಷಣೆ ಮಾಡಿದ್ದಾಗ ಕೂಡ ಅರೆಸೇನಾ ಪಡೆ ಗುಂಡು ಹಾರಿಸಿದೆ, ಬಾಂಬು ಎಸೆದಿದೆ. ಹೀಗಾಗಿ ಸುಡಾನ್ ಸೇನೆಯು ಸಂಧಾನ ಮಾತುಕತೆಯಿಂದ ಹಿಂದೆ ಸರಿಯುತ್ತಿದೆ ಎಂದು ಸುಡಾನ್ ಸೇನೆಯ ಮುಖ್ಯಸ್ಥ ಅಬ್ದುಲ್ ಫತ್ತಾಹ್ ಅಲ್ ಬುಹ್ರಾನ್ ಹೇಳಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

ಹಿಂಸೆಯ ತವರು ಸುಡಾನ್ ನೆಲ
ಎಲ್ಲೆಲ್ಲೂ ತುಂಬಿರುವ ಹೊಗೆ, ಜೀವ ಉಳಿಸಿಕೊಳ್ಳಲು ಕೈಯಲ್ಲಿ ಹಸುಗೂಸನ್ನು ಹಿಡಿದುಕೊಂಡು ಹೋಗುತ್ತಿರುವ ಬಾಣಂತಿಯರು. ಮಕ್ಕಳು & ಮಹಿಳೆಯರ ಮುಖ ನೋಡದೆ ಹಲ್ಲೆ ನಡೆಸುವ ಸೈನಿಕರು, ಪೊಲೀಸರು. ಸುಡಾನ್ ದೇಶದ ಈಗಿನ ಸ್ಥಿತಿ ಇದು. ಅಧಿಕಾರದ ಆಸೆ & ಸೇನಾಧಿಕಾರಿಗಳ ಸ್ವಾರ್ಥದ ಪರಿಣಾಮ ಸುಡಾನ್ ಸುಡುಗಾಡಂತೆ ಕಾಣುತ್ತಿದೆ. 7 ದಂಗೆ ನೋಡಿರುವ ಪುಟಾಣಿ ದೇಶ ಹೊತ್ತಿ ಉರಿಯುತ್ತಿದೆ. ಆದ್ರೂ ಇಲ್ಲಿ ಹಿಂಸಾಚಾರ ನಿಲ್ಲುವ ಯಾವುದೇ ನಿರೀಕ್ಷೆ ಕಾಣುತ್ತಿಲ್ಲ.
ಮಾತು ಮಾತಿಗೂ ಕೊಲೆಯೇ ಉತ್ತರ ಇಲ್ಲಿ!
1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ. ಇದೀಗ ಏಪ್ರಿಲ್ 15ರಿಂದ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಹೊತ್ತಿರುವ ಬೆಂಕಿಯಿಂದ ಈವರೆಗೂ 1000 ಜನ ಮೃತಪಟ್ಟಿದ್ದು, 7 ಲಕ್ಷ ಜನ ಬೀದಿಗೆ ಬಿದ್ದಿದ್ದಾರೆ.
ಒಟ್ನಲ್ಲಿ ಸುಡಾನ್ ಮತ್ತೊಮ್ಮೆ ಸಂಘರ್ಷದ ತವರಾಗಿ ಜಗತ್ತಿನ ಎದುರು ನಿಂತಿದೆ. ಇಲ್ಲಿ ಹಿಂಸಾಚಾರ ನಿಲ್ಲಿಸಲು ಯಾರ ಕೈಯಲ್ಲೂ ಸಾಧ್ಯ ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ ಸುಡಾನ್ ರಾಜಕಾರಣಿಗಳ ಸ್ವಾರ್ಥ ಹಾಗೂ ಅಲ್ಲಿನ ಸೇನಾಧಿಕಾರಿಗಳ ದರ್ಪ ಸುಡಾನ್ ಜನರನ್ನ ನರಕಕ್ಕೆ ತಳ್ಳಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಅಕ್ಕಪಕ್ಕದ ದೇಶಕ್ಕೆ ಹೋದರೆ, ಅಲ್ಲೂ ನೆಲೆ ಸಿಗದೆ ಸುಡಾನ್ ಪ್ರಜೆಗಳು ಪರದಾಡುತ್ತಿದ್ದಾರೆ.












Click it and Unblock the Notifications