190 ಅಮಾಯಕ ಮಕ್ಕಳನ್ನು ಬಲಿಪಡೆದ ಸುಡಾನ್ ಹಿಂಸಾಚಾರ
ಸುಡಾನ್: ಸುಡುಗಾಡಿನಂತೆ ಭಾಸವಾಗುತ್ತಿರುವ ಸುಡಾನ್ ಬದಲಾಗಿಲ್ಲ, ಕದನ ವಿರಾಮ ಹೆಸರಿಗೆ ಮಾತ್ರ ಘೋಷಣೆಯಾಗಿದೆ. ಸುಡಾನ್ ಸೇನೆ, ಅರೆಸೇನಾ ಪಡೆ ಮುಖ್ಯಸ್ಥರು 1 ವಾರ ಕದನ ವಿರಾಮ ಘೋಷಣೆಗೆ ಒಪ್ಪಿದ್ದಾರೆ. ಆದ್ರೂ ಭೀಕರ ಹಿಂಸೆ ನಡೆಯುತ್ತಿದೆ. ಇಲ್ಲಿ ತನಕ ಸುಡಾನ್ ದಂಗೆಯಲ್ಲಿ 190 ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ 1700ಕ್ಕೂ ಹೆಚ್ಚು ಕಂದಮ್ಮಗಳು ಗಾಯಗೊಂಡಿವೆ.
ಸುಡಾನ್ ಸೇನೆಯ ಮುಖ್ಯಸ್ಥ ಜನರಲ್ ಅಬ್ದುಲ್ ಫತ್ತಾಹ್ ಅಲ್ ಬುಹ್ರಾನ್ ಹಾಗೂ ಅರೆಸೇನಾ ಪಡೆಯ ಮುಖ್ಯಸ್ಥ ಮೊಹಮ್ಮದ್ ಹಮದಾನ್ ದಾಗಲೊನ ಪ್ರತಿಷ್ಠೆಗೆ ಇಲ್ಲಿ ಹಿಂಸಾಚಾರ ಆರಂಭವಾಗಿತ್ತು. ಏಪ್ರಿಲ್ 15ರಂದು ಶುರುವಾದ ಗುಂಡು, ಬಾಂಬ್‌ಗಳ ದಾಳಿ ಇಂದಿಗೂ ನಿಂತಿಲ್ಲ. ಆದರೆ ಇವರಿಬ್ಬರ ಕಿತಾಪತಿ ಮತ್ತು ಇವರ ಗ್ಯಾಂಗ್ ನಡೆಸಿದ ಹಿಂಸಾಚಾರದಲ್ಲಿ ಬಲಿಯಾದವರು, ಕೈ-ಕಾಲು ಕಳೆದುಕೊಂಡಿದ್ದು ಮಾತ್ರ ಅಮಾಯಕರು. ಈ ಮೂಲಕ ಸುಡಾನ್ ಹಿಂಸಾಚಾರ ಮತ್ತೊಂದು ಆಂತರಿಕ ಯುದ್ಧದ ಸ್ವರೂಪ ಪಡೆದಿದೆ. ಈಗಲಾದರೂ ಸುಡಾನ್ ನೆಲದಲ್ಲಿ ಹಿಂಸಾಚಾರ ನಿಲ್ಲುತ್ತಾ? ತಿಳಿಯೋಣ ಬನ್ನಿ.

ಪ್ರತಿ 1 ಗಂಟೆಗೆ 7 ಮಕ್ಕಳ ಸಾವು
ವರದಿಯ ಪ್ರಕಾರ ಸುಡಾನ್ ಹಿಂಸಾಚಾರ ಶುರುವಾದ ಬಳಿಕ ಅತಿಹೆಚ್ಚು ಜೀವ ಕಳೆದುಕೊಂಡಿದ್ದು ಮಕ್ಕಳೂ. ಪ್ರತಿ 1 ಗಂಟೆಗೆ 7 ಮಕ್ಕಳು ಮೃತಪಡುತ್ತಿದ್ದಾರೆ ಎಂಬ ಭಯಾನಕ ಅಂಶ ಬಯಲಾಗಿದೆ. ಯುನಿಸೆಫ್‌ನ ಮಕ್ಕಳ ವಿಭಾಗದ ವಕ್ತಾರ ಜೇಮ್ಸ್ ಎಲ್ಡರ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾದರೆ ನೀವೆ ಲೆಕ್ಕಹಾಕಿ ಸುಡಾನ್ ಹಿಂಸಾಚಾರ ಯಾವ ರೀತಿ ಭಯಾನಕ ಸ್ವರೂಪ ಪಡೆದಿರಬಹುದು ಎಂಬುದನ್ನ. ಯುದ್ಧ, ಹಿಂಸೆ, ದಂಗೆಯ ತವರು ಎಂದೇ ಕುಖ್ಯಾತಿ ಪಡೆದಿರುವ ಸುಡಾನ್ ನೆಲ ಈಗಲೂ ಧಗಧಗಿಸುತ್ತಿದೆ.
ಆಸ್ಪತ್ರೆಗಳ ಬಳಿ ರೋಗಿಗಳ ನರಳಾಟ
ಸುಡಾನ್ ರಾಜಧಾನಿ ಖಾರ್ಟೂಮ್ & ಡಾರ್ಫರ್ ಪ್ರದೇಶದಲ್ಲಿ ಆರೋಗ್ಯ ಸೇವೆಗೆ ಜನ ಆಸ್ಪತ್ರೆಗಳ ಎದುರು ಪರದಾಡುತ್ತಿದ್ದಾರೆ. ಸುಡಾನ್ ಸ್ಥಿತಿ ನೋಡುತ್ತಿದ್ದರೆ ಅಕ್ಷರಶಃ ನರಕ ಕಣ್ಣಮುಂದೆ ಬರುತ್ತದೆ. ಅದರಲ್ಲೂ ಸುಡಾನ್ ರಾಜಧಾನಿ ಖರ್ಟೋಮ್ ಹೊತ್ತಿ ಉರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶೇ. 60ರಷ್ಟು ಆಸ್ಪತ್ರೆಗಳು ಮುಚ್ಚಿವೆ. ರೋಗಿಗಳು ಏನು ಮಾಡಬೇಕು? ಉಳಿದಿರುವ ಶೇ. 16ರಷ್ಟು ಆಸ್ಪತ್ರೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಕೂಡ ಸಿಗದೆ ಹಲವರು ಮೃತಪಡುತ್ತಿದ್ದು, ಇದು ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿದೆ.

ಬೀದಿಗೆ ಬಿದ್ದ ತುಂಬು ಗರ್ಭಿಣಿಯರು
ಇದಿಷ್ಟು ಮಾತ್ರವಲ್ಲ, ವಿಶ್ವಸಂಸ್ಥೆಯ ನಿರಾಶ್ರಿತ ಕೇಂದ್ರದ ವರದಿ ಪ್ರಕಾರ ಸುಡಾನ್ ಹಿಂಸಾಚಾರ ಆರಂಭವಾದ ನಂತರ 11 ಲಕ್ಷ ಬೀದಿಗೆ ಬಿದ್ದಿದ್ದಾರೆ. ಹೀಗೆ ಮನೆ ಕಳೆದುಕೊಂಡು ನರಳುತ್ತಿರುವ ನಿರಾಶ್ರಿತರ ಪೈಕಿ 24 ಸಾವಿರ ಗರ್ಭಿಣಿಯರು ಕೂಡ ಸೇರಿದ್ದಾರಂತೆ. ಇವರಿಗೆಲ್ಲಾ ಮುಂದಿನ ವಾರದಲ್ಲಿ ಹೆರಿಗೆ ಆಗುವುದಿದೆ ಎಂದಿದೆ ವರದಿ. ಸುಡಾನ್ ದೇಶಾದ್ಯಂತ 2,19,000 ಗರ್ಭಿಣಿಯರಿದ್ದಾರೆ. ಆದರೆ ಸೇನಾ ಪಡೆ, ಅರೆಸೇನಾ ಪಡೆ ಹುಚ್ಚಾಟದಲ್ಲಿ ತುಂಬು ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಬೀದಿಗೆ ಬಿದ್ದಂತಾಗಿದೆ.
ಲಕ್ಷ ಲಕ್ಷ ಪ್ರಜೆಗಳು ಎಸ್ಕೇಪ್!
ಇಬ್ಬರು ಸೇನಾ ನಾಯಕರ ಪ್ರತಿಷ್ಠೆಗೆ ಇಡೀ ಸುಡಾನ್ ನರಕವಾಗಿ ಬದಲಾಗಿದೆ. ಪರಿಸ್ಥಿತಿ ಹೀಗಿರುವಾಗ ಜೀವ ಉಳಿಸಿಕೊಂಡು, ಜೀವನ ನಡೆಸಿದರೆ ಸಾಕು ಎಂಬ ಪರಿಸ್ಥಿತಿ ಸುಡಾನ್ ಜನರದ್ದು. ಹೀಗಾಗಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸುಡಾನ್ ಪ್ರಜೆಗಳು ತಮ್ಮ ದೇಶ ತೊರೆದು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಇನ್ನೂ 8 ಲಕ್ಷಕ್ಕೂ ಹೆಚ್ಚು ಜನ ಇದೇ ರೀತಿ ದೇಶವನ್ನ ಬಿಟ್ಟು, ಸುಡಾನ್ ಅಕ್ಕಪಕ್ಕದಲ್ಲಿರುವ ದೇಶಗಳಿಗೆ ಓಡಿ ಹೋಗುವ ತಯಾರಿಯಲ್ಲಿದ್ದಾರೆ. ಹೀಗಾಗಿ ಸುಡಾನ್ ನಿರಾಶ್ರಿತರು ಒಳ ಬಂದರೆ ಗಡಿಭಾಗದ ರಾಷ್ಟ್ರಗಳು ಅವರಿಗೆ ಅನುಮತಿ ನೀಡಬೇಕು ಎಂದು ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿ ಕೋರಿದೆ.
ಒಟ್ನಲ್ಲಿ ಯಾರದ್ದೋ ಪ್ರತಿಷ್ಠೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಈಗಲಾದರೂ ವಿಶ್ವಸಂಸ್ಥೆ ಸುಡಾನ್ ವಿಚಾರದಲ್ಲಿ ಖಡಕ್ ಕ್ರಮ ಕೈಗೊಂಡು, ಸೇನೆ ಮತ್ತು ಅರೆಸೇನಾ ಪಡೆಯನ್ನ ತಣ್ಣಗಾಗಿಸಬೇಕು. ಇಲ್ಲವಾದರೆ ಸುಡಾನ್ ಜೊತೆಗೆ ನೆರೆಯ ರಾಷ್ಟ್ರಗಳಿಗೂ ಇದರಿಂದ ಸಮಸ್ಯೆ ಕಟ್ಟಿಟ್ಟಬುತ್ತಿ.












Click it and Unblock the Notifications