Get Updates
Get notified of breaking news, exclusive insights, and must-see stories!

500ಕ್ಕೂ ಹೆಚ್ಚು ಸಾವು, 5000 ಜನರಿಗೆ ಗಂಭೀರ ಗಾಯ

ಸುಡಾನ್: ಹಿಂಸೆಗೆ ಮಿತಿ ಇರಬೇಕು, ಆದರೆ ಸುಡಾನ್‌ನಲ್ಲಿ ಹಿಂಸೆಯೇ ಕೆಲಸವಾಗಿದೆ. ಅಲ್ಲಿನ ಸೇನೆ ಮತ್ತು ಅರೆಸೇನಾ ಪಡೆ ಜಗಳದಲ್ಲಿ 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 5000 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಸುಡಾನ್ ಸುಡುಗಾಡಾಗಿ ಪರಿವರ್ತನೆ ಆಗಿದೆ. ಮತ್ತೊಂದು ಕಡೆ ಇನ್ನಷ್ಟು ಹಿಂಸೆ ಭುಗಿಲೇಳುವ ಮುನ್ಸೂಚನೆ ಸಿಕ್ಕಿದೆ.

ಆಫ್ರಿಕಾ ಎಂದ ತಕ್ಷಣ ಇಡೀ ಜಗತ್ತಿಗೆ ತಿಳಿಯುವುದು ಬಡತನ, ಹಸಿವಿನ ಜೊತೆಗೆ ಹಿಂಸಾಚಾರ. ಅದರಲ್ಲೂ ಈ ಸುಡಾನ್ ಇದೆಯಲ್ಲ ಇದು ಹಿಂಸಾಚಾರದ ತವರು. ಯಾಕಂದ್ರೆ ಸುಡಾನ್ ನೆಲದಲ್ಲಿ ನಡೆದಷ್ಟು ಸಂಘರ್ಷಗಳು ಇಡೀ ಆಫ್ರಿಕಾದಲ್ಲಿ ಯಾವ ದೇಶದಲ್ಲೂ ನಡೆದಿಲ್ಲ ಅಂದರೆ ಅಲ್ಲಿನ ಪರಿಸ್ಥಿತಿ ನೀವೆ ಲೆಕ್ಕ ಹಾಕಿ. 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ಕಂಡಿದೆ. ಈಗ ಮತ್ತೆ 2023ರಲ್ಲಿ ಸಿಕ್ಕ ಸಿಕ್ಕವರ ರಕ್ತ ಹರಿಸಿ, ಅಲ್ಲಿನ ಸೇನೆ ಮತ್ತು ಅರೆಸೇನಾ ಪಡೆಗಳು ಜಗಳಕ್ಕೆ ನಿಂತಿವೆ.

Sudan deadly violence entered third week with killing of 500 people

ವಿಶ್ವಸಂಸ್ಥೆ ಮಾತಿಗೆ ಬೆಲೆ ಇಲ್ಲ!

ಸುಡಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ನಿಲ್ಲಿಸಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿದೆ. ಇದೇ ಕಾರಣಕ್ಕೆ ಸುಡಾನ್‌ನ ಸೇನೆ ಮತ್ತು ಅರೆಸೇನಾ ಪಡೆ ನಡುವೆ ಸಂಧಾನಕ್ಕೆ ವಿಶ್ವಸಂಸ್ಥೆ ಮುಂದಾಗಿತ್ತು. ಎರಡು ಸೇನೆಗಳ ಮುಖ್ಯಸ್ಥರು ಮಾತುಕತೆಗೆ ಬನ್ನಿ, ಅಧಿಕಾರಕ್ಕಾಗಿ ಸಂಘರ್ಷ ಮುಂದುವರಿಸುವುದು ಸರಿಯಲ್ಲ ಎಂದು ವಿಶ್ವಸಂಸ್ಥೆ ಸಲಹೆ ನೀಡಿತ್ತು. ಆದರೆ ವಿಶ್ವಸಂಸ್ಥೆ ಮಾತನ್ನು ಕೇಳುವಷ್ಟು ಸೌಜನ್ಯವನ್ನ ಸುಡಾನ್ ಸೇನಾ ಮುಖ್ಯಸ್ಥನಾಗಲಿ, ಅರೆಸೇನಾ ಪಡೆ ಮುಖ್ಯಸ್ಥನಾಗಲಿ ತೋರಿಸುತ್ತಿಲ್ಲ. ಈ ಮಧ್ಯೆ ಮತ್ತಷ್ಟು ಹಿಂಸೆ ಭುಗಿಲೆದ್ದಿದ್ದು, ಎಲ್ಲೆಂದರಲ್ಲಿ ಬಾಂಬ್ ಬೀಳುತ್ತಿವೆ.

50 ಲಕ್ಷ ಜನರ ಜೀವಕ್ಕೆ ಅಪಾಯ

ನೋಡ ನೋಡುತ್ತಲೇ ಸುಡಾನ್ ಸಂಘರ್ಷ 3ನೇ ವಾರಕ್ಕೆ ಕಾಲಿಟ್ಟಿದೆ. ಇಬ್ಬರು ಸೇನಾಧಿಕಾರಿಗಳ ಒಣ ಪ್ರತಿಷ್ಠೆಗೆ 50 ಲಕ್ಷ ಜನರ ಜೀವ ಅಪಾಯದಲ್ಲಿ ಸಿಲುಕಿದೆ. ಆಹಾರ, ಕುಡಿಯುವ ನೀರು ಹಾಗೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿರುವ ಕಾರಣ ಲಕ್ಷಾಂತರ ಜನ ಒದ್ದಾಡುತ್ತಿದ್ದಾರೆ. ಅದೆಷ್ಟೋ ಜನ ಆಹಾರ ಸಿಗದೆ ಉಸಿರು ಚೆಲ್ಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತೆಪ್ಪಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಬದಲು ಯುದ್ಧ ಮುಂದುವರಿಸಿದ್ದಾರೆ ಸುಡಾನ್ ಸೇನಾಧಿಕಾರಿಗಳು. ಮೊದಲೇ ಬಡತನದ ಬೇಗೆಯಲ್ಲಿ ಬೇಯುತ್ತಿರುವ ದೇಶಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಟಿವಿಯಲ್ಲಿ ಸೇನಾಧಿಕಾರಿಗಳು ಪ್ರತ್ಯಕ್ಷ

ಅತ್ತ ವಿಶ್ವಸಂಸ್ಥೆ ಶಾಂತಿ ಒಪ್ಪಂದಕ್ಕೆ ಬನ್ನಿ ಎಂದು ಕರೆದರು ಪ್ರತಿಕ್ರಿಯೆ ನೀಡದ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಯ ಮುಖ್ಯಸ್ಥರು, ಟಿವಿ ಸಂದರ್ಶನದಲ್ಲಿ ಒಬ್ಬರಿಗೊಬ್ಬರು ಬೈದಾಡಿದ್ದಾರೆ. ಸುಡಾನ್ ಸೇನೆ ಮುಖ್ಯಸ್ಥ ಜನರಲ್‌ ಅಬ್ದುಲ್‌ ಫತ್ತಾಹ್‌ ಅಲ್‌ ಬುಹ್ರಾನ್‌ ಹಾಗೂ ಅರೆಸೇನಾ ಪಡೆಯ ಮುಖ್ಯಸ್ಥ ಮೊಹಮ್ಮದ್‌ ಹಮದಾನ್‌ ದಾಗಲೊ ಪ್ರತ್ಯೇಕವಾಗಿ ಇಂಟರ್‌ವ್ಯೂವ್ ನೀಡಿ ಒಬ್ಬರಿಗೊಬ್ಬರು ಬೈದಾಡಿಕೊಂಡು, ಆರೋಪ ಕೂಡ ಮಾಡಿದ್ದಾರೆ. ಹಾಗಿದ್ದರೆ ಅವರಿಬ್ಬರು ಹೇಳಿದ್ದೇನು, ಮುಂದೆ ಓದಿ.

Sudan deadly violence entered third week with killing of 500 people

ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ!

ಹೌದು, ಸುಡಾನ್ ಸಂಘರ್ಷ ನೋಡುತ್ತಿದ್ದರೆ ಈ ಗಾದೆ ನೆನಪಾಗದೆ ಇರದು. ಅಮೆರಿಕ ಮೂಲದ ಟೆಲಿವಿಷನ್ ಒಂದಕ್ಕೆ ಸುಡಾನ್ ಸೇನಾ ಮುಖ್ಯಸ್ಥ ಅಬ್ದುಲ್‌ ಸಂದರ್ಶನ ನೀಡಿದ್ದು, ಅರೆಸೇನಾ ಪಡೆ ಇಡೀ ಸುಡಾನ್‌ ದೇಶ ನಾಶಗೊಳಿಸುವುದನ್ನೇ ತನ್ನ ಗುರಿ ಮಾಡಿಕೊಂಡಿದೆ. ದಾಗಲೊ ಜೊತೆಗೆ ಮಾತುಕತೆಗೆ ಸಿದ್ಧವಿಲ್ಲ ಎಂದಿದ್ದು. ಅರೆಸೇನೆಯ ಮುಖ್ಯಸ್ಥ ದಾಗಲೊ ಬಿಬಿಸಿಗೆ ಸಂದರ್ಶನ ನೀಡಿ, ಅಬ್ದುಲ್‌ ಸತ್ಯಕ್ಕೆ ಅರ್ಹನಾದ ವ್ಯಕ್ತಿಯಲ್ಲ. ಆತನೊಬ್ಬ ದೇಶದ್ರೋಹಿ ಎಂದು ಆರೋಪಿಸಿದ್ದಾನೆ. ಇದನ್ನ ನೋಡಿದರೆ ಹೇಳಬಹುದು ಸುಡಾನ್ ಸಂಘರ್ಷ ಸದ್ಯಕ್ಕೆ ಮುಗಿಯಲ್ಲ ಎಂದು.

ದೇಶ ಬಿಟ್ಟು ಓಡಿ ಹೋದ ಜನ

ಇದೆಲ್ಲಾ ಒಂದೆಡೆಯಾದರೆ, ಮತ್ತೊಂದು ಕಡೆ ಜೀವ ಉಳಿಸಿಕೊಳ್ಳಲು ಸುಡಾನ್ ಜನರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಸುಡಾನ್ ಅಕ್ಕಪಕ್ಕದ ಈಜಿಫ್ಟ್‌, ಇಥಿಯೋಪಿಯಾ, ಚಾಡ್‌, ದಕ್ಷಿಣ ಸುಡಾನ್‌ ದೇಶಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸುಡಾನ್‌ ಪ್ರಜೆಗಳು ಓಡಿ ಹೋಗಿದ್ದಾರೆ. 75 ಸಾವಿರ ಜನ ಸುಡಾನ್ ರಾಜಧಾನಿ ಖಾರ್ಟೂಮ್‌ ತೊರೆದಿದ್ದಾರೆ. ಪರಿಸ್ಥಿತಿಯನ್ನ ನಿಯಂತ್ರಿಸಿ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಭೀಕರ ಸಮಸ್ಯೆ ಎದುರಾಗಬಹುದು. ಸುಡಾನ್ ಅಕ್ಕಪಕ್ಕದ ದೇಶಗಳು ಕೂಡ ಹಿಂಸಾಚಾರ ಕಂಡು ಬೆಚ್ಚಿಬಿದ್ದಿವೆ.

ಕೈದಿಗಳು ಕೂಡ ಎಸ್ಕೇಪ್!

ಸಂಘರ್ಷದ ನೆಲವಾಗಿ, ಸುಡಾನ್‌ನಲ್ಲಿ ನಡೆಯುತ್ತಿರುವ ಸೇನಾಪಡೆಗಳ ನಡುವಿನ ಭೀಕರ ಕಾಳಗದಲ್ಲಿ ಯುದ್ಧ ಕೈದಿಗಳು ಎಸ್ಕೇಪ್ ಆಗಿದ್ದಾರೆ. ಯುದ್ಧ ಅಪರಾಧಿಯಾಗಿ ಜೈಲು ಸೇರಿದ್ದ ಅಹ್ಮದ್‌ ಹರೂನ್‌ ಮತ್ತು ಆತನ ನಟೋರಿಯಸ್ ಗ್ಯಾಂಗ್ ಕೋಬೆರ್ ಜೈಲಿನಿಂದ ಎಸ್ಕೇಪ್ ಆಗಿದೆ. ಈ ಗ್ಯಾಂಗ್ ಹಿಂಸಾಚಾರದಲ್ಲಿ ಎಕ್ಸ್‌ಪರ್ಟ್ ಎಂಬ ಆರೋಪವಿದ್ದು, ಈಗಾಗಲೇ ಆಂತರಿಕ ಹಿಂಸಾಚಾರದಲ್ಲಿ ಬೆಂದಿರುವ ಸುಡಾನ್‌ಗೆ ಮುಂದಿನ ದಿನಗಳಲ್ಲಿ ಭಾರಿ ಅಪಾಯ ಕಾದಿದೆ ಎನ್ನಲಾಗುತ್ತಿದೆ.

Sudan deadly violence entered third week with killing of 500 people

ನಟೋರಿಯಸ್ ಕ್ರಿಮಿನಲ್ ಜೈಲಿಂದ ಎಸ್ಕೇಪ್

ಮೊದಲೇ ಹೇಳಿದಂತೆ 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ಕಂಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರ ಬಂದು 30 ವರ್ಷಕ್ಕೂ ಹೆಚ್ಚು ಕಾಲ ಸರ್ವಾಧಿಕಾರಿ ಆಡಳಿತ ನಡೆಸಿದ್ದ. ಈತನ ಆಪ್ತನಾಗಿದ್ದ ಅಹ್ಮದ್ ಹರೂನ್‌ ಜೈಲಿನಿಂದ ಎಸ್ಕೇಪ್ ಆಗಿದ್ಧಾನೆ. ಅಹ್ಮದ್ ಹರೂನ್‌ ವಿರುದ್ಧ ಹಲವು ಗಂಭೀರ ಆರೋಪಗಳು ಇವೆ. ಈಗ ಈತ ಕೂಡ ಅರೆಸೇನಾ ಪಡೆಯ ಜೊತೆ ಸೇರಿ ಹಿಂಸಾಚಾರ ನಡೆಸುವ ಭೀತಿ ಆವರಿಸಿದೆ.

ಭಾರತೀಯರನ್ನ ಹೊರಗೆ ಹಾಕಿದ್ರಾ?

ಸುಡಾನ್ ನಾಗರಿಕರ ಮೇಲೆ ಕೇಳಿಬಂದಿರುವ ಮತ್ತೊಂದು ಆರೋಪ ಏನೆಂದರೆ ಭಾರತದಿಂದ ಹೊಟ್ಟೆಪಾಡಿಗೆ ಸುಡಾನ್ ದೇಶ ತಲುಪಿದ್ದ ಭಾರತೀಯರನ್ನ ಮನೆಯಿಂದ ಹೊರ ಹಾಕಲಾಗಿದೆ ಎನ್ನಲಾಗಿದೆ. ಹೌದು ಸುಡಾನ್ ದೇಶದಲ್ಲಿ ಬಾಡಿಗೆ ಇರುವ ಭಾರತೀಯರನ್ನ ಅಲ್ಲಿನ ಮಾಲೀಕರು ಮನೆಯಿಂದ ಹೊರಗೆ ಕಳುಹಿಸುತ್ತಿರುವ ಆರೋಪ ಕೇಳಿಬಂದಿದೆ. ತೀವ್ರ ಹಿಂಸಾಚಾರ ನಡೆಯುತ್ತಿರುವ ಹೊತ್ತಲ್ಲೇ ಸುಡಾನ್ ಮಾಲೀಕರು ಈ ರೀತಿ ಭಾರತೀಯರನ್ನ ಏಕಾಏಕಿ ಮನೆಯಿಂದ ಹೊರಹಾಕಿ, ಅವರನ್ನ ಅತಂತ್ರ ಮಾಡಿದ್ದಾರೆ ಎಂಬ ಆರೋಪ ಹರಿದಾಡುತ್ತಿದೆ.

ಒಟ್ಟಾರೆ ಯಾರದ್ದೋ ತಪ್ಪಿಗೆ ಅಮಾಯಕರು ಹಿಂಸೆಯ ಕುಲುಮೆಯಲ್ಲಿ ನರಳುವಂತಾಗಿದೆ. ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿ, ಶಾಂತಿ ಮಾತುಕತೆ ನಡೆಸೋಣ ಬನ್ನಿ ಅಂದರೂ ಅದಕ್ಕೆ ಸುಡಾನ್ ಸೇನಾ ಮುಖ್ಯಸ್ಥ ಮತ್ತು ಅರೆಸೇನಾ ಪಡೆ ಮುಖ್ಯಸ್ಥ ಒಪ್ಪಿಕೊಳ್ಳುತ್ತಿಲ್ಲ. ಈ ನಡುವೆ ಬಲಾಢ್ಯ ರಾಷ್ಟ್ರಗಳು ಕೂಡ ಸುಡಾನ್ ಪರಿಸ್ಥಿತಿಯನ್ನ ಹತ್ತಿರದಿಂದ ಗಮನಿಸುತ್ತಿವೆ. ಇದೇ ರೀತಿ ಹಿಂಸಾಚಾರ ಮುಂದವರಿದರೆ ವಿಶ್ವಸಂಸ್ಥೆ ಅನಿವಾರ್ಯವಾಗಿ ತನ್ನ ಶಾಂತಿ ಪಾಲನಾ ಪಡೆಯನ್ನ ಕಾರ್ಯಾಚರಣೆಗೆ ಕಳುಹಿಸಿದರೂ ಅಚ್ಚರಿ ಇಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+