ಕಕ್ಷೆಗೆ ಕೇವಲ ಎಂಟು ಗಂಟೆ: ದಾಖಲೆ ನಿರ್ಮಿಸಿದ ಡ್ರ್ಯಾಗನ್!
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಅಕ್ಟೋಬರ್ 2ರ ಮುಂಜಾನೆ 4:35ರ ಸುಮಾರಿಗೆ, ಬಹುತೇಕ ಭಾರತ ಇನ್ನೂ ಸಿಹಿ ನಿದ್ದೆಯಲ್ಲೇ ಇದ್ದಾಗ ಗ್ರೇಸ್ ಎನ್ನುವ ಹೆಸರಿನ ಒಂದು ಕ್ಯಾಪ್ಸೂಲ್ ಭೂಮಿಯಿಂದ ಬಹುತೇಕ 400 ಕಿಲೋಮೀಟರ್ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿ, ಅದರ ಬಾಗಿಲೊಂದಕ್ಕೆ ಅಳವಡಿಕೆಯಾಯಿತು. ಆ ಕ್ಯಾಪ್ಸೂಲ್ ಒಳಗೆ ಕೇವಲ 7 ಗಂಟೆ 55 ನಿಮಿಷಗಳ ಹಿಂದೆಯಷ್ಟೇ ಭೂಮಿಯಿಂದ ಪ್ರಯಾಣ ಆರಂಭಿಸಿದ್ದ ನಾಲ್ವರು ಗಗನಯಾತ್ರಿಗಳಿದ್ದರು. ಇಲ್ಲಿಯ ತನಕ, ಮಾನವರಿದ್ದು ಅಥವಾ ಮಾನವ ರಹಿತವಾಗಿ, ಯಾವುದೇ ಅಮೆರಿಕನ್ ಬಾಹ್ಯಾಕಾಶ ನೌಕೆ ಉಡಾವಣಾ ವೇದಿಕೆಯಿಂದ ಬಾಹ್ಯಾಕಾಶ ನಿಲ್ದಾಣಕ್ಕೆ ಇಷ್ಟು ಕ್ಷಿಪ್ರವಾಗಿ ಎಂದಿಗೂ ತಲುಪಿಲ್ಲ.
ಸ್ಪೇಸ್ಎಕ್ಸ್ ಸಂಸ್ಥೆಯ ಕ್ರ್ಯೂ-13 ಯೋಜನೆಯ ಭಾಗವಾಗಿ ನಾಸಾದ ಪರ ಬಾಹ್ಯಾಕಾಶಕ್ಕೆ ತೆರಳಿರುವ ಸಿಬ್ಬಂದಿಗಳು ಮೂರು ದೇಶಗಳಿಂದ ಬಂದಿದ್ದಾರೆ. ಜೆಸ್ಸಿಕಾ ವ್ಯಾಟ್‌ಕಿನ್ಸ್ ಮತ್ತು ಲೂಕ್ ಡಿಲಾನಿ ಅವರು ನಾಸಾ ಗಗನಯಾತ್ರಿಗಳಾಗಿದ್ದರೆ, ಜೋಶುವಾ ಕುಟ್ರಿಕ್ ಕೆನೆಡಿಯನ್ ಸ್ಪೇಸ್ ಏಜೆನ್ಸಿಯನ್ನು ಪ್ರತಿನಿಧಿಸಿದ್ದಾರೆ. ಇನ್ನು ಸರ್ಗೇ ಟೆಟೆರ್ಯಾಟ್ನಿಕೊವ್ ರಷ್ಯನ್ ಬಾಹ್ಯಾಕಾಶ ಸಂಸ್ಥೆಯಾದ ರಾಸ್‌ಕಾಸ್ಮೋಸ್ ಪ್ರತಿನಿಧಿಸಿದ್ದಾರೆ. ಮುಂದಿನ ಆರು ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣವೇ ಅವರ ಮನೆ, ಪ್ರಯೋಗಾಲಯ ಮತ್ತು ಕಾರ್ಯಕ್ಷೇತ್ರವಾಗಿರಲಿದೆ. ಅವರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿ, ಬಾಹ್ಯಾಕಾಶ ನಿಲ್ದಾಣವನ್ನು ಜೀವಂತವಾಗಿಡುವ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಅವಧಿಯಲ್ಲಿ, ಅವರು ತಮ್ಮ ಕುಟುಂಬ, ಶುದ್ಧ ಗಾಳಿ ಮತ್ತು ಚಿರಪರಿಚಿತವಾದ ಎಲ್ಲದರಿಂದಲೂ ದೂರವಿರಲಿದ್ದಾರೆ.

ಅಕ್ಟೋಬರ್ 5ರ ವೇಳೆಗೆ ಭೂಮಿಯತ್ತ ಮರಳುವ ಸಾಧ್ಯತೆ
ಈ ತಂಡದ ಆಗಮನ ಈಗಾಗಲೇ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯಾಚರಿಸುತ್ತಿರುವ ತಂಡವನ್ನು ಮುಕ್ತಗೊಳಿಸಲಿದೆ. ನಾಸಾದ ಜೆಸ್ಸಿಕಾ ಮೀರ್ ಮತ್ತು ಜಾಕ್ ಹಾತ್‌ವೇ, ಯುರೋಪಿನ ಸೋಫಿ ಅಡೆನಾಟ್ ಮತ್ತು ರಷ್ಯಾದ ಆಂಡ್ರೇ ಫೆಡ್ಯೇವ್ ಅವರು ಕ್ರ್ಯೂ-12 ತಂಡದ ಭಾಗವಾಗಿ ಫೆಬ್ರವರಿ ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿದ್ದಾರೆ. ಈಗಾಗಲೇ ಪರ್ಯಾಯ ತಂಡ ಆಗಮಿಸಿರುವುದರಿಂದ, ಹಿಂದಿನ ತಂಡ ಅಕ್ಟೋಬರ್ 5ರ ವೇಳೆಗೆ ಭೂಮಿಯತ್ತ ಮರಳಬಹುದು ಎಂದು ನಾಸಾ ಹೇಳಿದೆ.
ಈ ಬಾರಿಯ ಪ್ರಯಾಣ ಹೇಗೆ ಇಷ್ಟು ವೇಗವಾಗಿ ನಡೆಯಿತು? ಚಲಿಸುತ್ತಿರುವ ರೈಲೊಂದಕ್ಕೆ ಏರುವ ಪ್ರಯತ್ನವನ್ನು ಒಮ್ಮೆ ಊಹಿಸಿಕೊಳ್ಳಿ. ನೀವು ಬರುತ್ತಿದ್ದ ಹಾಗೇ ರೈಲು ಪ್ಲಾಟ್‌ಫಾರಂ ಒಳಗೆ ಬರುತ್ತಿದ್ದರೆ, ನೀವು ಒಂದೇ ಬಾರಿಗೆ ಅದರೊಳಗೆ ಏರಬಹುದು. ಒಂದು ವೇಳೆ ರೈಲು ಈಗಷ್ಟೇ ನಿಲ್ದಾಣದಿಂದ ಹೊರಟಿದೆ ಎಂದರೆ, ನೀವು ಕಾಯಬೇಕು ಅಥವಾ ಅದನ್ನು ಬೆನ್ನತ್ತಬೇಕು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವೂ ಆ ರೈಲಿದ್ದಂತೆ. ಅದು ಒಂದು ಬಾರಿಗೂ ನಿಲ್ಲದೆ, ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುತ್ತಲೇ ಇರುತ್ತದೆ. ಅದನ್ನು ಹಿಡಿಯುವ ಸಲುವಾಗಿ, ಬಾಹ್ಯಾಕಾಶ ನೌಕೆ ಸಾಮಾನ್ಯವಾಗಿ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸುತ್ತಾ ಹಲವು ಗಂಟೆಗಳನ್ನು ಕಳೆಯುತ್ತದೆ.
ಜೂಲಿಯಾನಾ ಶಿಮಾನ್ ಹೇಳಿದ್ದೇನು?
ನಾಸಾ ಪರವಾಗಿ ಡ್ರ್ಯಾಗನ್ ಉಡಾವಣೆಗಳನ್ನು ನಿರ್ವಹಿಸುವ ಸ್ಪೇಸ್ಎಕ್ಸ್ ಅಧಿಕಾರಿಯಾದ ಜೂಲಿಯಾನಾ ಶಿಮಾನ್ ಅವರು ತಮ್ಮ ತಂಡ ಈ ಬಾರಿ ಅದೃಷ್ಟ ಮಾಡಿತ್ತು ಎಂದಿದ್ದಾರೆ. ಉಡಾವಣೆಯ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕಕ್ಷೆಯಲ್ಲಿ ಜೋಡಣೆಯಾಗಬೇಕಾದ ನಿಖರ ಬಿಂದುವಿನ ಮೂಲಕ ಹಾದುಹೋಗಲಿತ್ತು. ಹಾಗೆಂದು ನೇರವಾಗಿ ಬಾಹ್ಯಾಕಾಶಕ್ಕೆ ಹಾರಿ, ಬಾಹ್ಯಾಕಾಶ ನಿಲ್ದಾಣದಲ್ಲಿ ಪಾರ್ಕಿಂಗ್ ನಡೆಸಲು ಸಾಧ್ಯವಿಲ್ಲ. ಕ್ಯಾಪ್ಸೂಲ್ ಮತ್ತು ಬಾಹ್ಯಾಕಾಶ ನೌಕೆ ಬಹುತೇಕ ಒಂದೇ ಪಥದಲ್ಲಿ, ಬಹುತೇಕ ಒಂದೇ ವೇಗದಲ್ಲಿ ಸಾಗುತ್ತಿರಬೇಕು. ಈ ಬಾರಿ ಆ ಸಂಯೋಜನೆ ಅಸಹಜ ಎನ್ನುವಷ್ಟು ಹೊಂದಿಕೆಯಾಗಿತ್ತು. ಆದ್ದರಿಂದಲೇ ಈ ಬಾರಿಯ ಪ್ರಯಾಣ ಚಲನೆಯ ನಿಯಮಗಳ ಅನುಸಾರ ಎಷ್ಟು ಸಾಧ್ಯವೋ ಅಷ್ಟು ಕ್ಷಿಪ್ರವಾಗಿತ್ತು.
ಹಿಂದಿನ ಹಾರಾಟಗಳು ಇದಕ್ಕೆ ಹೋಲಿಸಿದರೆ ಬಹಳಷ್ಟು ದೀರ್ಘವಾಗಿದ್ದವು. ಅಮೆರಿಕದ ಹಿಂದಿನ ದಾಖಲೆಯನ್ನು ನವೆಂಬರ್ 2024ರಲ್ಲಿ ಸಿಆರ್‌ಎಸ್-31 ಯೋಜನೆಯಲ್ಲಿ ಡ್ರ್ಯಾಗನ್ ಸಾಗಾಣಿಕಾ ನೌಕೆ ನಿರ್ಮಿಸಿದ್ದು, ಅದು 12 ಗಂಟೆ 33 ನಿಮಿಷಗಳಲ್ಲಿ ಪ್ರಯಾಣಿಸಿತ್ತು. ಆದರೆ ಅದು ಯಾವುದೇ ಗಗನಯಾತ್ರಿಯನ್ನು ಒಯ್ದಿರಲಿಲ್ಲ. ಅದು ಬಹುತೇಕ ಬಾಹ್ಯಾಕಾಶಕ್ಕೆ ಪೂರೈಕೆ ವಾಹನದಂತಿದ್ದು, ಅವಶ್ಯಕ ಸಾಮಗ್ರಿಗಳು, ಆಹಾರ ಪದಾರ್ಥಗಳು, ಮತ್ತು ಪ್ರಯೋಗಗಳನ್ನು ಒಯ್ದಿತ್ತು. ಇದು ಸ್ವಯಂಚಾಲಿತವಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಣೆಯಾಗುತ್ತಿತ್ತು. ಮಾನವರನ್ನು ಸಾಗಿಸುವ ಅಮೆರಿಕನ್ ಹಾರಾಟ ಯೋಜನೆಗಳ ಪೈಕಿ, ಆಗಸ್ಟ್ 2025ರ ಕ್ರ್ಯೂ-11 ಹಾರಾಟ ಅತ್ಯಂತ ಕ್ಷಿಪ್ರವಾಗಿದ್ದು, 14 ಗಂಟೆ 43 ನಿಮಿಷಗಳ ಹಾರಾಟ ನಡೆಸಿತ್ತು. ಆದರೆ, ಕ್ರ್ಯೂ-13 ಇದರ ಅರ್ಧ ಸಮಯದಲ್ಲಿ ಹಾರಾಟ ಪೂರ್ಣಗೊಳಿಸಿದೆ.
ಆದರೆ, ಒಟ್ಟಾರೆ ದಾಖಲೆ ಮಾತ್ರ ಬೇರೆಡೆಯಲ್ಲಿದೆ. ಮೇ 2020ರಲ್ಲಿ, ರಷ್ಯಾದ ಸೊಯುಜ್ ಮೂವರು ಗಗನಯಾತ್ರಿಗಳನ್ನು ಕೇವಲ 3 ಗಂಟೆ 3 ನಿಮಿಷಗಳಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿತ್ತು. ಹಾಗೆಂದು ಸೊಯುಜ್ ಹೆಚ್ಚು ವೇಗವಾಗಿ ಚಲಿಸುವ ಯಂತ್ರ ಎಂದರ್ಥವಲ್ಲ. ಇದರ ವ್ಯತ್ಯಾಸ ಯೋಜನಾ ನಿಯಂತ್ರಕರು ಆರಿಸುವ ಪಥದಲ್ಲಿದೆ. ರಷ್ಯಾ ಸಾಂಪ್ರದಾಯಿಕವಾಗಿ ಕಡಿಮೆ ಅಂತರದ 'ಫಾಸ್ಟ್ - ಟ್ರ್ಯಾಕ್' ಪಥಗಳನ್ನೇ ಆರಿಸಿದೆ. ಇದು ಒಂದು ರೀತಿ ದೀರ್ಘವಾದ, ಆರಾಮದಾಯಕ ಮಾರ್ಗದ ಬದಲು ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಚಲಿಸಿದಂತಾಗುತ್ತದೆ.
ಒಂಬತ್ತು ಇಂಜಿನ್‌ಗಳ ಶಕ್ತಿಯೊಡನೆ ಹಾರಾಟ ಆರಂಭ
ಈ ಪ್ರಯಾಣ ಫ್ಲೋರಿಡಾದ ಅಟ್ಲಾಂಟಿಕ್ ಕರಾವಳಿಯ ಬಳಿಯ ಕೇಪ್ ಕ್ಯಾನವೆರಾಲ್ ಸ್ಪೇಸ್ ಫೋರ್ಸ್ ಸ್ಟೇಷನ್ನಿನಿಂದ ಆರಂಭಗೊಂಡಿತು. ಬಹುತೇಕ 25 ಮಹಡಿಗಳ ಕಟ್ಟಡದಷ್ಟು ಎತ್ತರವಿರುವ ಫಾಲ್ಕನ್ 9 ರಾಕೆಟ್ ತನ್ನ ಕೆಳಭಾಗದಲ್ಲಿರುವ ಒಂಬತ್ತು ಇಂಜಿನ್‌ಗಳ ಶಕ್ತಿಯೊಡನೆ ಉಡಾವಣಾ ವೇದಿಕೆಯಿಂದ ಹಾರಾಟ ಆರಂಭಿಸಿತು. ಫಾಲ್ಕನ್ 9 ಎರಡು ಭಾಗಗಳಲ್ಲಿ ನಿರ್ಮಾಣಗೊಂಡಿದ್ದು, ಅವುಗಳನ್ನು ಸ್ಟೇಜ್‌ಗಳು ಎಂದು ಕರೆಯಲಾಗುತ್ತದೆ. ಅವು ರಿಲೇ ಓಟದ ಸ್ಪರ್ಧಿಗಳಂತೆ ಒಂದರ ನಂತರ ಒಂದಾಗಿ ಕಾರ್ಯಾಚರಿಸುತ್ತವೆ.
ಆರಂಭಿಕ ಮೂರು ನಿಮಿಷಗಳ ಅವಧಿಯ ಒಳಗೇ ಮೊದಲ ಹಂತ ತನ್ನ ಓಟವನ್ನು ಪೂರ್ಣಗೊಳಿಸಿತ್ತು. ಅದು ಪ್ರತ್ಯೇಕಗೊಂಡು ಎಲ್ಲೋ ಪತನಗೊಳ್ಳುವ ಬದಲು, ಹಿಂದಕ್ಕೆ ತಿರುಗಿ, ಹಾರಾಟ ನಡೆಸಿ, ಸುರಕ್ಷಿತ ಲ್ಯಾಂಡಿಂಗ್ ಕೈಗೊಂಡಿತು. ಈ ಬೂಸ್ಟರ್ ಈಗಾಗಲೇ ಅನುಭವಿಯಾಗಿದ್ದು, ಹಿಂದೆ ಕ್ರ್ಯೂ-12 ಮತ್ತು ಸ್ಟಾರ್‌ಲಿಂಕ್ ಉಪಗ್ರಹ ಸರಣಿಯ ಉಡಾವಣೆಗೆ ಬಳಕೆಯಾಗಿತ್ತು. ಇದು ಅದರ ಮೂರನೇ ಹಾರಾಟವಾಗಿದೆ. ರಾಕೆಟ್ ಮರುಬಳಕೆ ಮಾಡುವುದು ಎಂದರೆ ಪ್ರತಿ ಬಾರಿಯ ಹಾರಾಟಕ್ಕೆ ಹೊಸ ವಿಮಾನ ಬಳಸುವ ಬದಲು ಹಳೆಯದಕ್ಕೆ ಇಂಧನ ಮರುಪೂರಣ ನಡೆಸಿದಂತಿರಲಿದೆ.
ಇನ್ನು ರಾಕೆಟ್ ಎರಡನೇ ಹಂತ ನಿರಂತರವಾಗಿ ಮೇಲೇರುತ್ತಾ ಸಾಗಿ, ಉದ್ದೇಶಿತ ಕಕ್ಷೆಯನ್ನು ತಲುಪಿ, ಬಳಿಕ ಗ್ರೇಸ್ ಅನ್ನು ಬಿಡುಗಡೆಗೊಳಿಸಿತು. ಕ್ಯಾಪ್ಸೂಲ್ ಸುರಕ್ಷಿತವಾಗಿ ಪ್ರತ್ಯೇಕಗೊಂಡು, ಭೂಮಿಯ ಪರಿಭ್ರಮಣೆ ನಡೆಸುತ್ತಿದೆ ಎಂದು ನಾಸಾ ಹೇಳಿತ್ತು. ಅಲ್ಲಿಂದ ಕ್ರ್ಯೂ ಡ್ರ್ಯಾಗನ್ ತನ್ನ ಸ್ವಂತ ಹಾದಿಯನ್ನು ಕಂಡುಕೊಂಡು, ತನ್ನ ವೇಗ, ದಿಕ್ಕು ಮತ್ತು ಕಕ್ಷೆಯನ್ನು ಸರಿಹೊಂದಿಸಿಕೊಳ್ಳಲು ಸಣ್ಣ ಥ್ರಸ್ಟರ್‌ಗಳನ್ನು ದಹಿಸುತ್ತಾ ಸಾಗಿತ್ತು. ಕ್ಯಾಪ್ಸೂಲ್ ಸ್ವತಃ ತಾನಾಗಿಯೇ ಸಾಗಬಲ್ಲದ್ದರಿಂದ, ಗಗನಯಾತ್ರಿಗಳು ಅದನ್ನು ಪ್ರತಿಕ್ಷಣವೂ ಚಲಾಯಿಸುವ ಅಗತ್ಯವಿರಲಿಲ್ಲ. ಪ್ರಯಾಣ ಬಹುತೇಕ ಎಂಟು ಗಂಟೆಗಳ ಕಾಲ ತಗುಲಬಹುದೆಂದು ಅಂದಾಜಿಸಲಾಗಿದ್ದು, ನಿರೀಕ್ಷಿತ ಸಮಯದಲ್ಲೇ ಪೂರ್ಣಗೊಂಡಿತು.
ದಾಖಲೆಗಳು ಸಂತೋಷ ನೀಡುವಂತಹವೇ ಆಗಿದ್ದರೂ, ಇದರ ಕೇಂದ್ರದಲ್ಲಿರುವುದು ಮಾನವರೇ ಆಗಿದ್ದಾರೆ. ನಾಲ್ವರು ಗಗನಯಾತ್ರಿಗಳು ತಮ್ಮ ವರ್ಷಗಳ ತರಬೇತಿ, ಸಾವಿರಾರು ಇಂಜಿನಿಯರ್‌ಗಳ ಪ್ರಯತ್ನ, ಮತ್ತು ಹಿಂದೆ ಹಾರಾಟ ನಡೆಸಿದ್ದ ರಾಕೆಟ್ ಮೇಲೆ ತಮ್ಮ ಪ್ರಾಣವನ್ನೇ ನಂಬಿಕೆಯಾಗಿಟ್ಟಿದ್ದರು. ಅಮೆರಿಕನ್ನರು, ಓರ್ವ ಕೆನೆಡಿಯನ್, ಓರ್ವ ರಷ್ಯನ್ ಈಗ ಬಾಹ್ಯಾಕಾಶದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕಾರ್ಯಾಚರಿಸಲಿದ್ದಾರೆ. ರಾತ್ರಿಯ ಆಗಸವನ್ನು ವೀಕ್ಷಿಸುವ ಪ್ರತಿಯೊಬ್ಬ ಯುವ ಭಾರತೀಯನಿಗೂ ಇದು ಮಾನವ ಜನಾಂಗವನ್ನು ಅತ್ಯಂತ ಮುಂದಕ್ಕೆ ಒಯ್ಯುವ ತಾಳ್ಮೆ, ಸಿದ್ಧತೆ ಮತ್ತು ಸಹಕಾರದ ಪಾಠವನ್ನು ಕಲಿಸಲಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])


Click it and Unblock the Notifications
