ಆಕಾಶದಲ್ಲಿ ಸೂರ್ಯ ಇಂದು ದಿಢೀರ್ ನಾಪತ್ತೆ, ಯಾವ ಯಾವ ದೇಶಗಳಲ್ಲಿ ತಿಳಿಯಿರಿ... Solar Eclipse
ಸೂರ್ಯಗ್ರಹಣ ಎಂದರೆ ಸಾವಿರಾರು ವರ್ಷಗಳಿಂದಲೂ ಮನುಷ್ಯರಿಗೆ ಅದೇನೋ ಕುತೂಹಲ & ಅಷ್ಟೇ ಆತಂಕ. ಒಂದು ಕಡೆ ಸೂರ್ಯ ದಿಢೀರ್ ಮಾಯ ಆಗುವುದು ಏಕೆ? ಎಂಬುದು ಕುತೂಹಲ ಕೆರಳಿಸಿ ಅದರ ಬಗ್ಗೆ ತಿಳಿಯಲು ಮನುಷ್ಯರಿಗೆ ಪ್ರೇರೇಪಣೆ ನೀಡಿತ್ತು. ಆದರೆ ಇಡೀ ಭೂಮಿಗೆ ಬೆಳಕು ನೀಡುವ ಇದೇ ಸೂರ್ಯ ಇದ್ದಕ್ಕಿದ್ದಂತೆ ಕಾಣೆ ಆಗುವ ಘಟನೆ ಮನುಷ್ಯರಿಗೆ ಭಯ ಕೂಡ ತರಿಸಿತ್ತು. ಇಷ್ಟೆಲ್ಲಾ ತೊಳಲಾಟಗಳ ನಡುವೆ ಆಧುನಿಕ ವಿಜ್ಞಾನ ಸೂರ್ಯಗ್ರಹಣ ಹಾಗೂ ಅದರ ಪರಿಣಾಮಗಳ ಕುರಿತು ಪಕ್ಕಾ ಮಾಹಿತಿ ನೀಡಿ, ಆತಂಕ ಹಾಗೂ ಮೂಢನಂಬಿಕೆ ಹೋಗಲಾಡಿಸಿದೆ. ಇಂತಹ ಸಮಯದಲ್ಲೇ ಈ ವರ್ಷದ ಮೊದಲ ಸೂರ್ಯಗ್ರಹಣ ಇದೀಗ ಎದುರಾಗಿದೆ.
ಫೆಬ್ರವರಿ 17, 2026ರ ಮಂಗಳವಾರ ಈ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಮುನಷ್ಯರು ಸಾಕ್ಷಿಯೂ ಆಗಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 3 ಗಂಟೆ 26 ನಿಮಿಷಕ್ಕೆ ಸರಿಯಾಗಿ ಸೂರ್ಯಗ್ರಹಣ ಶುರುವಾಗಲಿದ್ದು, ಇದೇ ಸೂರ್ಯಗ್ರಹಣದ ಪರಿಣಾಮ ಸಂಜೆ 7 ಗಂಟೆ 58 ನಿಮಿಷದ ತನಕವೂ ಮುಂದುವರಿಯಲಿದೆ. ಈ ಮೂಲಕ 2026ರ ಮೊದಲ ಸೂರ್ಯಗ್ರಹಣ ಒಟ್ಟು 4 ಗಂಟೆ 32 ನಿಮಿಷಗಳ ಕಾಲ ಸಂಭವಿಸಲಿದ್ದು, ಇಡೀ ಜಗತ್ತಿನ ಗಮನ ಇದೀಗ ಸೂರ್ಯನತ್ತ ನೆಟ್ಟಿದೆ. ಅಲ್ಲದೇ ಈ ಖಗೋಳ ವಿಸ್ಮಯದ ಮೂಲಕ ವಿಜ್ಞಾನಿಗಳು ನೂರಾರು ಸಂಶೋಧನೆ ನಡೆಸಲು ಸಜ್ಜಾಗಿದ್ದಾರೆ. ಹಾಗಾದರೆ, ಸೂರ್ಯಗ್ರಹಣ ಎಂದರೇನು? ಮಾಹಿತಿ ತಿಳಿಯಲು ಮುಂದೆ ಓದೋಣ ಬನ್ನಿ.

ಸೂರ್ಯಗ್ರಹಣ ಎಂದರೇನು ಎಂಬುದರ ಮಾಹಿತಿ
ಭೂಮಿ ಎಂಬ ನಮ್ಮ ಗ್ರಹವು, ಸೂರ್ಯ ಎಂಬ ನಮ್ಮದೇ ಸೌರವ್ಯೂಹದ ನಕ್ಷತ್ರದ ಸುತ್ತಲೂ ಸುತ್ತುತ್ತದೆ. ಹೀಗಿದ್ದಾಗ ಚಂದ್ರ ಎಂಬ ಭೂಮಿಯ ಉಪಗ್ರಹ ಭೂಮಿಯ ಸುತ್ತಲೂ ಸುತ್ತುತ್ತದೆ. ಈ ನಡುವೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿ ಸುತ್ತಲೂ ಸುತ್ತು ಹಾಕುತ್ತಾ ಹಾಕುತ್ತಾ ಸೂರ್ಯ ಮತ್ತು ಭೂಮಿಯ ನಡುವೆ ಬಂದ ಸಮಯದಲ್ಲೇ ಈ ಖಗೋಳ ವಿಸ್ಮಯ ಸೂರ್ಯಗ್ರಹಣ ಸಂಭವಿಸುತ್ತದೆ. ಭೂಮಿ & ಸೂರ್ಯನ ನಡುವೆ ಬರುವ ಚಂದ್ರ ತನ್ನ ನೆರಳನ್ನು ಭೂಮಿ ಮೇಲೆ ಬೀಳುವಂತೆ ಮಾಡಿ, ಸೂರ್ಯನಿಗೆ ಅಡ್ಡಲಾಗಿ ನಿಲ್ಲುತ್ತಾನೆ. ಇದೇ ಸಮಯದಲ್ಲೇ ಸೂರ್ಯ ನಾಪತ್ತೆ ಆಗುವುದು & ಆಕಾಶದಲ್ಲಿ ಕತ್ತಲು & ಬೆಳಕಿನ ಆಟ ನಡೆಯುವುದು ಗಮನ ಸೆಳೆಯುತ್ತದೆ. ಇಂದು ಕೂಡ ಇಡೀ ಜಗತ್ತು ಕಾದು ಕುಳಿತಿರುವ ಅತ್ಯಂತ ವಿಸ್ಮಯಕಾರಿ ಆದ ಘಟನೆಗೆ ಕ್ಷಣಗಣನೆ ಆರಂಭವಾಗಿದೆ.
ಯಾವ ಯಾವ ದೇಶದಲ್ಲಿ ಗ್ರಹಣ?
2026 ಫೆಬ್ರವರಿ 17 ಮಂಗಳವಾರ ಸಂಭವಿಸುತ್ತಿರುವ ಕಂಕಣ ಸೂರ್ಯಗ್ರಹಣ, ದಕ್ಷಿಣ ಆಫ್ರಿಕಾ ಸೇರಿ ಜಿಂಬಾಬ್ವೆ, ಬೋತ್ಸ್‌ವಾನಾ, ನಮೀಬಿಯಾ, ಮಾರಿಷಸ್, ತಾಂಜೇನಿಯಾ ಭಾಗದಲ್ಲಿ ಕಾಣಸಿಗಲಿದೆ. ಆಫ್ರಿಕಾದ ದೇಶಗಳ ಜೊತೆಗೆ ದಕ್ಷಿಣ ಅಮೆರಿಕದ ಹಲವು ಭಾಗದಲ್ಲಿ ಇಂದಿನ ಕಂಕಣ ಸೂರ್ಯಗ್ರಹಣ ಗೋಚರಿಸಲಿದ್ದು, ಅರ್ಜೆಂಟಿನಾ, ಅಂಟಾರ್ಟಿಕಾ ಭಾಗವೂ ಸೇರಿದಂತೆ ಸುತ್ತಮುತ್ತ ಇರುವ ಹಲವು ಪ್ರದೇಶದಲ್ಲಿ ಕಾಣಲಿದೆ. ಆದರೆ ಭಾರತದಲ್ಲಿ ಇಂದಿನ ಕಂಕಣ ಸೂರ್ಯಗ್ರಹಣ ಗೋಚರಿಸುವುದಿಲ್ಲ, ಹೀಗಾಗಿ ಜೋತಿಷ್ಯದ ಪ್ರಕಾರ ಯಾವುದೇ ಪ್ರಭಾವ ಇರುವುದಿಲ್ಲ ಎನ್ನಲಾಗಿದೆ. ಮತ್ತೊಂದು ಕಡೆಯಲ್ಲಿ ವಿಜ್ಞಾನಿಗಳು ಹಾಗೂ ಖಗೋಳ ವಿಜ್ಞಾನ ಪ್ರಿಯರು ದೂರದರ್ಶಕ ಹಿಡಿದು ಆಕಾಶದತ್ತ ಮುಖಮಾಡಿ ಕೂತಿದ್ದಾರೆ.
'ಕೊರೋನಾ' ಅಧ್ಯಯನಕ್ಕೆ ಸಾಕಷ್ಟು ಸಹಕಾರಿ
ವಿಜ್ಞಾನಿಗಳಿಗೆ ಈ ಸಮಯ ಬಹುಮುಖ್ಯವಾಗಿದ್ದು, ಸೂರ್ಯನ ಹೊರ ವಾತಾವರಣ 'ಕೊರೋನಾ' ಗ್ರಹಣದ ಸಮಯದಲ್ಲಿ ಮಾತ್ರವೇ ಸ್ಪಷ್ಟವಾಗಿ ಕಾಣುತ್ತದೆ. ಗ್ರಹಣದ ವೇಳೆ ಸೂರ್ಯನ ತೀವ್ರ ಬೆಳಕು ಮುಚ್ಚಲ್ಪಡುವ ಕಾರಣ ಖಗೋಳ ವಿಜ್ಞಾನಿಗಳು ಸೂರ್ಯನ ಕೊರೋನಾ ಭಾಗ ಅಧ್ಯಯನ ಮಾಡಲು ಸಾಕಷ್ಟು ಸುಲಭವಾಗಲಿದೆ. ಹಾಗೇ ಇದರ ಜೊತೆಗೆ ಸೌರ ಜ್ವಾಲೆಗಳು & ಕೊರೋನಲ್ ಮಾಸ್ ಇಜೆಕ್ಷನ್ ಗಮನಿಸಲು ಕೂಡ ಇದೇ ಗ್ರಹಣದ ಸಮಯ ಸಾಕಷ್ಟು ಸಹಕಾರಿ ಆಗಿರಲಿದೆ. ಹೀಗಾಗಿಯೇ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಇಂದು ಆಕಾಶದತ್ತ ಮುಖಮಾಡಿ ಕೂತಿವೆ. ವಿಜ್ಞಾನಿಗಳು ಕೂಡ ಸೂರ್ಯಗ್ರಹಣ ಸ್ಪಷ್ಟವಾಗಿ ಕಾಣುವ ಜಾಗಕ್ಕೆ ಪ್ರಯಾಣ ಬೆಳೆಸಿದ್ದು, ಮನುಷ್ಯರ ಭವಿಷ್ಯದ ಉಳಿವಿಗಾಗಿ ಅಧ್ಯಯನ ಶುರು ಮಾಡಿದ್ದಾರೆ.












Click it and Unblock the Notifications