ಬಾಂಗ್ಲಾದೇಶ ಗಲಭೆಗೆ ಅದೊಂದು ದ್ವೀಪ ಕಾರಣ! ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದೇನು?
ಬಾಂಗ್ಲಾದೇಶ ದಂಗೆಯ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ಬಿಟ್ಟು ಭಾರತಕ್ಕೆ ಬಂದು ಆಶ್ರಯ ಪಡೆದಿರುವ ಶೇಖ್ ಹಸೀನಾ ಇದೀಗ ದೇಶದ ಗಲಭೆ ಬಗ್ಗೆ ಮಾತನಾಡಿದ್ದಾರೆ. ದೇಶವನ್ನು ಬಿಡುವ ಮೊದಲು ಜನತೆಯನ್ನು ಉದ್ದೇಶಿಸಿ ಮಾತನಾಡಲು ಬಯಸಿದ್ದರು ಆದರೆ ಅವರು ಮಾತನಾಡಲು ಸೇನೆ ಅನುಮತಿ ಕೊಟ್ಟಿರಲಿಲ್ಲ. ಇದೀಗ ಅವರ ಮಾತುಗಳು ಬಹಿರಂಗವಾಗಿದ್ದು, ಬಾಂಗ್ಲಾದೇಶದ ದಂಗೆಯಲ್ಲಿ ಅಮೆರಿಕದ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಂಡಿಯಾ ಟುಡೆ ವರದು ಪ್ರಕಾರ ತಾನು ದೇಶವನ್ನು ತೊರೆಯುವಲ್ಲಿ ಯುಎಸ್ ಪಾತ್ರ ವಹಿಸಿರಬಹುದು ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ. ಬಾಂಗ್ಲಾದೇಶದಲ್ಲಿರುವ ಸೇಂಟ್ ಮಾರ್ಟಿನ್ ದ್ವೀಪವನ್ನು ಯುಎಸ್ ವಶಕ್ಕೆ ನೀಡಿದ್ದರೆ ತಮ್ಮ ಸರ್ಕಾರ ಉಳಿಯುತ್ತಿತ್ತು ಎಂದು ಅವರು ಹೇಳಿದ್ದಾರೆ. ಸೇಂಟ್ ಮಾರ್ಟಿನ್ಸ್ ದ್ವೀಪವನ್ನು ನೀಡದ ಕಾರಣವೇ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸೇಂಟ್ ಮಾರ್ಟಿನ್ ದ್ವೀಪದ ಪ್ರಾಮುಖ್ಯತೆ
ಸೇಂಟ್ ಮಾರ್ಟಿನ್ ದ್ವೀಪ ಬಾಂಗ್ಲಾದೇಶದ ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿದ್ದು, ಮ್ಯಾನ್ಮಾರ್ ಬಳಿಯ ಬಾಂಗ್ಲಾದೇಶದ ದಕ್ಷಿಣದ ಪರ್ಯಾಯ ದ್ವೀಪದ ಕಾಕ್ಸ್ ಬಜಾರ್- ಟೆಕ್ನಾಫ್‌ನ ತುದಿಯಿಂದ ಸುಮಾರು ಒಂಬತ್ತು ಕಿಲೋಮೀಟರ್ ದಕ್ಷಿಣದಲ್ಲಿರುವ ಒಂದು ಸಣ್ಣ ಹವಳದ ದ್ವೀಪವಾಗಿದ್ದು, ಇದು ಬಾಂಗ್ಲಾದೇಶದ ಏಕೈಕ ಹವಳ ದ್ವೀಪವಾಗಿದೆ.
ಈ ದ್ವೀಪವು ಮೂರು ಚದರ ಕಿ.ಮೀ. ಮೇಲ್ಮೈ ವಿಸ್ತೀರ್ಣ ಹೊಂದಿದ್ದು, 3700 ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ಮೀನುಗಾರಿಕೆ, ಭತ್ತ ಮತ್ತು ತೆಂಗಿನ ಕೃಷಿ ಇಲ್ಲಿನ ಪ್ರಮುಖ ಕೆಲಸವಾಗಿದ್ದು, ಕಡಲಿನ ಪಾಚಿಯನ್ನು ಒಣಗಿಸಿ ಮ್ಯಾನ್ಮಾರ್ ಗೆ ರಫ್ತು ಮಾಡಲಾಗುತ್ತದೆ.
ಮಾಜಿ ಪ್ರಧಾನಿ ಖಲೀದಾ ಜಿಯಾ ನಾಯಕತ್ವದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧಿಕಾರಕ್ಕೆ ಬರಲು ಯುಎಸ್ ಸಹಾಯ ಮಾಡಲಿದ್ದು, ಇದಕ್ಕೆ ಬದಲಾಗಿ ಮಿಲಿಟರಿ ನೆಲೆ ನಿರ್ಮಾಣಕ್ಕೆ ಸೇಂಟ್ ಮಾರ್ಟಿನ್ ದ್ವೀಪವನ್ನು ಯುಎಸ್ ವಶಕ್ಕೆ ನೀಡಬೇಕು ಎಂದು ಒಪ್ಪಂದವಾಗಿದೆ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ.
ಶೇಖ್ ಹಸೀನಾ ಅವರ ಆರೋಪಗಳನ್ನು ಯುಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ತಿರಸ್ಕರಿಸಿದೆ. ಬಾಂಗ್ಲಾದೇಶದ ಸಾರ್ವಭೌಮತ್ವವನ್ನು ಗೌರವಿಸುವ ಮತ್ತು ಚುನಾವಣೆ ಮೂಲಕ ಪ್ರಜಾಪ್ರಭುತ್ವಕ್ಕೆ ಉತ್ತೇಜನ ನೀಡುವುದಾಗಿ ಹೇಳಿದೆ.
ದ್ವೀಪದ ಇತಿಹಾಸ
ಈ ದ್ವೀಪದಲ್ಲಿ ತೆಂಗಿನ ಮರ ಹೆಚ್ಚಾಗಿರುವ ಕಾರಣ ಇದನ್ನು ಬಂಗಾಳಿ ಭಾಷೆಯಲ್ಲಿ 'ನರಿಕೇಲ್ ಜಿಂಜಿರಾ' ಅಥವಾ ತೆಂಗಿನಕಾಯಿ ದ್ವೀಪ ಎಂದು ಕರೆಯಲಾಗುತ್ತದೆ. ದಾರುಚಿನಿ ದ್ವೀಪ (ದಾಲ್ಚಿನ್ನಿ ದ್ವೀಪ) ಎನ್ನುವುದು ಮತ್ತೊಂದು ಹೆಸರಾಗಿದೆ.
1900 ರಲ್ಲಿ, ಬ್ರಿಟಿಷ್ ಭೂ ಸಮೀಕ್ಷೆ ತಂಡವು ಸೇಂಟ್ ಮಾರ್ಟಿನ್ ದ್ವೀಪವನ್ನು ಬ್ರಿಟಿಷ್ ಭಾರತದ ಭಾಗವಾಗಿ ಸೇರಿಸಿತು ಮತ್ತು ಸೇಂಟ್ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಪಾದ್ರಿಯ ಹೆಸರನ್ನು ನಾಮಕರಣ ಮಾಡಲಾಯಿತು. 1947ರಲ್ಲಿ ಭಾರತ ಭಾಗವಾದಾಗ ಇದು ಪಾಕಿಸ್ತಾನದ ಪಾಲಾಗಿತ್ತು. 1971ರ ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ಇದು ಬಾಂಗ್ಲಾದೇಶದ ಪಾಲಾಗಿತ್ತು. ಆದರೂ ಇದು ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವುದರಿಂದ ಗಡಿ ಸಮಸ್ಯೆ ಇದೆ.












Click it and Unblock the Notifications