Scientists cutouts: ಚೀನಾದಲ್ಲಿ ಶುರುವಾಯ್ತು ವಿಜ್ಞಾನಿಗಳ ಕಟೌಟ್ ಟ್ರೆಂಡ್! ನಮ್ಮಲ್ಲೂ ಈ ಥರ ಕಟೌಟ್ ಹಾಕಬಾರದೇಕೆ?
Scientists cutouts: ಬೆಂಗಳೂರನ್ನಾಗಲೀ, ಇನ್ಯಾವುದೇ ನಗರವನ್ನಾಗಲೀ ನೋಡಿ. ಎಲ್ಲ ಕಡೆ ರಾಜಕಾರಣಿಗಳ ಭಾರೀ ಹೋರ್ಡಿಂಗ್ಗಳು. ಅವರೇನೂ ಸಮಾಜಕ್ಕೆ ಮಹಾ ಉಪಕಾರ ಮಡಿರುವವರಲ್ಲ. ಯಾರದೋ ಜನ್ಮದಿನ, ಆತನ ಅನುಯಾಯಿಗಳ್ಯಾರೋ ಬ್ಯಾನರ್ ಹಾಕಿರುತ್ತಾರೆ. ಇನ್ಯಾರೋ ಯಾವುದೋ ಹಗರಣದಲ್ಲಿ ಜೈಲಿಗೆ ಹೋಗಿ ಬಂದವನು. ಶೇ.30 ಮತ ಬಿದ್ದದ್ದಕ್ಕಾಗಿ ಗೆದ್ದು ಜನನಾಯಕನಾಗಿರುತ್ತಾನೆ. ಹಾಗಂತ ಅವನು ಎಲ್ಲರ ನಾಯಕನೇನೂ ಅಲ್ಲ. ಆದರೂ ಅವನ ಭಾರೀ ಮುಖವನ್ನು ನಗರದ ಜಂಕ್ಷನ್ನಲ್ಲಿ ಪ್ರತಿದಿನ ನೋಡಿ ಸಹಿಸಿಕೊಳ್ಳಬೇಕಾದ ಕರ್ಮ ನಮ್ಮದು. ಇನ್ನು ಸಿನಿಮಾ ತಾರೆಗಳು. ಹೊಸ ಸಿನಿಮಾದ ನಾಯಕನ ಪೋಸ್ಟರ್. ಅವನ ಸಿನಿಮಾದಲ್ಲೂ ಹಿಂಸೆ ಬಿಟ್ಟರೆ ಇನ್ನೇನೂ ಇರೋಲ್ಲ. ಅಭಿಮಾನಿಗಳ ಸಂಘದ ಕಟ್ಔಟ್. ಹುಟ್ಟುಹಬ್ಬದ ಶುಭಾಶಯ, ವಿಜಯೋತ್ಸವದ ಬ್ಯಾನರ್ಗಳು. ನಾಯಕನ ಎತ್ತರವನ್ನು ಮೀರಿಸುವ ಕಟ್ಔಟ್ಗಳು. ಅವನೂ ನಮಗೆ ಐಕಾನ್.

ಇವೆಲ್ಲವನ್ನೂ ಶಾಲೆಗೆ ಹೋಗುವ ಮಕ್ಕಳು ನಿಂತು ನೋಡುತ್ತವೆ. ಪ್ರತಿದಿನ ಅದು ಯಾರನ್ನು ಹೀಗೆ ನೋಡುತ್ತದೆಯೋ, ಅವರನ್ನೇ ಹೀರೋ ಎಂದು ಭಾವಿಸುತ್ತದೆ. ಅವರನ್ನು ಯಶಸ್ಸು, ಹೀರೋಗಿರಿಯ ಪ್ರತೀಕ ಎಂದು ಕಲಿಯುತ್ತದೆ. ಅವರಂತೆ ಬೆಳೆಯಬೇಕು ಎಂದು ಕನಸು ಕಾಣುತ್ತದೆ. ಇದು ಸರಿಯಾ? ಅದೇ ಜಾಗದಲ್ಲಿ ನಿಜವಾದ ಹೀರೋಗಳು, ವಿಜ್ಞಾನಿಗಳು, ಸಮಾಜ ಸೇವಕರ ಕಟೌಟ್ ಇದ್ರೆ?
ಚೀನಾದಲ್ಲಿ ಶುರುವಾಯ್ತು ವಿಜ್ಞಾನಿಗಳ ಕಟೌಟ್ ಟ್ರೆಂಡ್!
ಇದನ್ನು ಹೇಳೋಕೆ ಕಾರಣವಿದೆ. ಇತ್ತೀಚೆಗೆ ಚೀನಾದ ಸಾರ್ವಜನಿಕ ಸ್ಥಳಗಳಲ್ಲಿರುವ ದೊಡ್ಡ ಡಿಜಿಟಲ್ ಪರದೆಗಳಲ್ಲಿ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಪ್ರದರ್ಶಿಸುವ ಚಿತ್ರಗಳು ಪ್ರಸಾರವಾದವು. ಅವರ ಕಟೌಟ್ಗಳು ಕಂಡುಬಂದವು. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ. ರಾಕೆಟ್ ವಿಜ್ಞಾನಿ ಕಿಯಾನ್ ಶ್ಯೂಸೆನ್, ನೊಬೆಲ್ ಪ್ರಶಸ್ತಿ ವಿಜೇತೆ ತು ಯೂಯೋಯೋ ಮತ್ತು ಕೃಷಿ ವಿಜ್ಞಾನಿ ಯುವಾನ್ ಲಾಂಗ್ಪಿಂಗ್ ಅವರಂತಹ ಸಾಧಕರನ್ನು ಸಾರ್ವಜನಿಕ ದೃಶ್ಯ ಸಂಸ್ಕೃತಿಯ ಭಾಗವಾಗಿಸುವ ಪ್ರಯತ್ನದ ಬಗ್ಗೆ ವರದಿಗಳು ಗಮನ ಸೆಳೆದಿವೆ. ಇದೇ ಹಿನ್ನೆಲೆಯಲ್ಲಿ ಭಾರತದಲ್ಲೂ ವಿಜ್ಞಾನಿಗಳು, ಶಿಕ್ಷಕರು, ವೈದ್ಯರು, ಎಂಜಿನಿಯರ್ಗಳು ಮತ್ತು ಆವಿಷ್ಕಾರಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸ್ಥಾನ ಸಿಗಬೇಕೆಂಬ ಪ್ರಶ್ನೆ ಎದ್ದಿದೆ.
ಮಕ್ಕಳಿಗೆ ನಾವು ಶಾಲೆಯಲ್ಲಿ ವಿಜ್ಞಾನಿಗಳ ಬಗ್ಗೆ ಹೇಳುತ್ತೇವೆ. ಪಠ್ಯಪುಸ್ತಕಗಳಲ್ಲಿ ಸಿ.ವಿ. ರಾಮನ್, ವಿಕ್ರಂ ಸಾರಾಭಾಯಿ, ಸತ್ಯೇಂದ್ರನಾಥ್ ಬೋಸ್ ಅವರ ಚಿತ್ರಗಳನ್ನು ತೋರಿಸುತ್ತೇವೆ. ಆದರೆ ಶಾಲೆಯ ಹೊರಗೆ ಬಂದ ತಕ್ಷಣ ನಗರದ ದೃಶ್ಯವೇ ಬೇರೆ ಪಾಠ ಕಲಿಸುತ್ತದೆ. ಖ್ಯಾತಿ ಎಂದರೆ ಸಿನಿಮಾ, ಶಕ್ತಿ ಎಂದರೆ ರಾಜಕೀಯ, ಯಶಸ್ಸು ಎಂದರೆ ಸೆಲೆಬ್ರಿಟಿ. ಸಮಾಜದ ದೃಷ್ಟಿಯಲ್ಲಿ ಮಹತ್ವ ಪಡೆಯಲು ಪ್ರಯೋಗಾಲಯದಲ್ಲಿ ವರ್ಷಗಳ ಕಾಲ ಕೆಲಸ ಮಾಡುವುದಕ್ಕಿಂತ ಒಂದು ಸಿನಿಮಾದ ಪೋಸ್ಟರ್ನಲ್ಲಿ ಕಾಣಿಸಿಕೊಳ್ಳುವುದೇ ದೊಡ್ಡ ಸಾಧನೆ ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ಅರಿವಿಲ್ಲದೆ ಮೂಡಿದರೆ ಆಶ್ಚರ್ಯವೇನು?
ಯಾವುದೇ ಸಮಾಜ ತನ್ನ ನಾಯಕರು ಯಾರು ಎಂಬುದನ್ನು ಕೇವಲ ಪಠ್ಯಪುಸ್ತಕಗಳಿಂದ ಮಾತ್ರ ನಿರ್ಧರಿಸುವುದಿಲ್ಲ. ಸಾರ್ವಜನಿಕ ಸ್ಥಳಗಳು, ಜಾಹೀರಾತುಗಳು, ಟಿವಿ, ಸಾಮಾಜಿಕ ಜಾಲತಾಣಗಳು ಮತ್ತು ಹೋರ್ಡಿಂಗ್ಗಳೂ ನಮ್ಮ ಸಾಮೂಹಿಕ ಕಲ್ಪನೆಯನ್ನು ರೂಪಿಸುತ್ತವೆ.
ಒಬ್ಬ ವಿಜ್ಞಾನಿಯ (science) ಮುಖವನ್ನು ಮಗು ಪ್ರತಿದಿನ ನೋಡಿದರೆ, ಒಂದು ದಿನ ಅದು "ನಾನು ಕೂಡ ವಿಜ್ಞಾನಿಯಾಗಬಹುದೇ?ʼ ಎಂದು ಕೇಳಬಹುದು. ಒಬ್ಬ ಗ್ರಾಮೀಣ ಶಿಕ್ಷಕಿಯ ಸಾಧನೆಯನ್ನು ನಗರದ ದೊಡ್ಡ ಪರದೆಯಲ್ಲಿ ನೋಡಿದರೆ, ಒಬ್ಬ ವೈದ್ಯರು ಹೊಸ ಚಿಕಿತ್ಸಾ ವಿಧಾನವನ್ನು ಕಂಡುಹಿಡಿದ ಕಥೆಯನ್ನು ನೋಡಿದರೆ, ಆ ಬಗ್ಗೆ ಮಗು ಕನಸು ಕಾಣಬಹುದು. ನಾನು ಜನರ ಬದುಕನ್ನು ಹೀಗೂ ಬದಲಾಯಿಸಬಹುದು ಎಂದುಕೊಳ್ಳಬಹುದು.
Scientists cutouts:ನಮ್ಮಲ್ಲಿನ ಪ್ರತಿಭೆಗಳನ್ನು ತೋರಿಸಿ
ನಮ್ಮಲ್ಲಿ ವಿಜ್ಞಾನಿಗಳ ಕೊರತೆಯಿಲ್ಲ. ಜಗತ್ತಿನ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಅನೇಕ ಸಾಧಕರು ನಮ್ಮಲ್ಲಿ ಇದ್ದಾರೆ. ಆದರೆ ಅವರಲ್ಲಿ ಹಲವರ ಹೆಸರು ಸಾಮಾನ್ಯ ಜನರಿಗೆ, ವಿಶೇಷವಾಗಿ ಯುವ ಪೀಳಿಗೆಗೆ, ಅಷ್ಟಾಗಿ ಪರಿಚಿತವಿಲ್ಲ. ಉದಾಹರಣೆಗೆ ಇ.ಸಿ.ಜಿ. ಸುದರ್ಶನ. ಕ್ವಾಂಟಂ ಭೌತಶಾಸ್ತ್ರ ಮತ್ತು ಕಣ ಭೌತಶಾಸ್ತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಈ ಭಾರತೀಯ ಭೌತಶಾಸ್ತ್ರಜ್ಞರ (physics) ಹೆಸರು ವಿಜ್ಞಾನ ವಲಯದ ಹೊರಗೆ ಎಷ್ಟು ಜನರಿಗೆ ಗೊತ್ತಿದೆ? ಅವರ ಕೆಲಸ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಇತ್ತೀಚಿನ ವರದಿಯೂ ಗಮನ ಸೆಳೆದಿದೆ.
ಅಥವಾ ಬಿಷ್ಣು ಎಸ್. ಅಟಲ್. ಮೊಬೈಲ್ ಫೋನ್ನಲ್ಲಿ ನಾವಿಂದು ಮಾತಾಡಿದ್ದು ಸರಳವಾಗಿ ತಲುಪೋಕೆ ಇವರೂ ಕಾರಣ. ಮಾನವನ ಧ್ವನಿಯನ್ನು ಡಿಜಿಟಲ್ ಜಾಲಗಳ ಮೂಲಕ ಪರಿಣಾಮಕಾರಿಯಾಗಿ ರವಾನಿಸಲು ನೆರವಾದ ಸ್ಪೀಚ್ ಕೋಡಿಂಗ್ ಕ್ಷೇತ್ರದ ಅವರ ಕೆಲಸ ಮೊಬೈಲ್ ಸಂವಹನದ ಬೆಳವಣಿಗೆಯಲ್ಲಿ ಮಹತ್ವದ್ದಾಗಿತ್ತು. ಇಂದು ಕೋಟ್ಯಂತರ ಜನರು ಸುಲಭವಾಗಿ ಫೋನ್ನಲ್ಲಿ ಮಾತನಾಡುತ್ತಿರುವ ಜಗತ್ತಿನ ಹಿಂದೆ ಇಂತಹ ಸಂಶೋಧಕರ ಕೆಲಸವೂ ಇದೆ.
ನಮ್ಮ ದಿನನಿತ್ಯದ ಬದುಕನ್ನು ಬದಲಾಯಿಸಿದ ಇಂತಹ ಮುಖಗಳು ಎಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸುತ್ತವೆ? ವಿಜ್ಞಾನಿ ಎಂದರೆ ಬಿಳಿ ಕೋಟ್ ಧರಿಸಿ ಪ್ರಯೋಗಾಲಯದಲ್ಲಿ ನಿಂತಿರುವ ವ್ಯಕ್ತಿ ಮಾತ್ರವಲ್ಲ. ಒಬ್ಬ ಕೃಷಿ ವಿಜ್ಞಾನಿ ರೈತನ ಬದುಕನ್ನು ಬದಲಾಯಿಸಬಹುದು. ಒಬ್ಬ ವೈದ್ಯಕೀಯ ಸಂಶೋಧಕ ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಒಬ್ಬ ಎಂಜಿನಿಯರ್ ದೂರದ ಹಳ್ಳಿಗೆ ನೀರು ತಲುಪಿಸಬಹುದು. ಒಬ್ಬ ಶಿಕ್ಷಕ ಒಂದು ತಲೆಮಾರಿನ ಭವಿಷ್ಯವನ್ನು ಬದಲಾಯಿಸಬಹುದು. ಒಬ್ಬ ಸಾಮಾಜಿಕ ಕಾರ್ಯಕರ್ತ ಸರ್ಕಾರದ ಯೋಜನೆ ತಲುಪದ ಜಾಗಕ್ಕೆ ಬೆಳಕು ತಲುಪಿಸಬಹುದು.
ಇತಿಹಾಸದಲ್ಲಿಯೇ ವೈದ್ಯಕೀಯ ಕ್ಷೇತ್ರದಲ್ಲಿ ಗಮನಾರ್ಹವಾದ ಕೆಲಸ ಮಾಡಿದ ಡಾ. ಉಪೇಂದ್ರನಾಥ್ ಬ್ರಹ್ಮಚಾರಿ ಕಾಲಾ-ಅಜಾರ್ ಚಿಕಿತ್ಸೆಯಲ್ಲಿ ಬಳಸಲಾದ ಯೂರಿಯಾ ಸ್ಟಿಬಮೈನ್ ಅಭಿವೃದ್ಧಿಪಡಿಸಿದ್ದರು. ಅವರ ಸಂಶೋಧನೆ ಭಾರತೀಯ ವೈದ್ಯಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಡಾ. ನಿತ್ಯಾನಂದ್ ಅವರ ಔಷಧೀಯ ರಸಾಯನಶಾಸ್ತ್ರ ಕ್ಷೇತ್ರದ ಕೆಲಸ ಮತ್ತು ಸೆಂಟ್ಕ್ರೋಮನ್ ಎಂಬ ಗರ್ಭನಿರೋಧಕ ಔಷಧದ ಅಭಿವೃದ್ಧಿಯೂ ಭಾರತೀಯ ಸಂಶೋಧನೆಯ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ.
ಕಮಲಾ ಸೋಹೊನಿ ಅವರ ಕಥೆ ಇನ್ನೂ ವಿಭಿನ್ನ. ಪುರುಷ ಪ್ರಧಾನವಾಗಿದ್ದ ಸಂಶೋಧನಾ ಕ್ಷೇತ್ರದಲ್ಲಿ ಅಡೆತಡೆಗಳನ್ನು ಎದುರಿಸಿ, ಜೈವರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪಡೆದ ಮೊದಲ ಭಾರತೀಯ ಮಹಿಳೆಯಾಗಿ ಗುರುತಿಸಿಕೊಂಡ ಅವರ ಪಯಣ ವಿಜ್ಞಾನಕ್ಕಿಂತಲೂ ದೊಡ್ಡ ಸಾಮಾಜಿಕ ಸಂದೇಶವನ್ನು ಹೊಂದಿದೆ.
ಇಂತಹ ಕಥೆಗಳು ಕೇವಲ ವಿಜ್ಞಾನ ಪುಟಗಳಲ್ಲಿ ಯಾಕೆ ಉಳಿಯಬೇಕು. ಅವು ಯಾಕೆ ನಗರದ ದೊಡ್ಡ ಪರದೆಯಲ್ಲೂ ಕಾಣಬಾರದು?
ಇಲ್ಲಿ ಸಿನಿಮಾ ತಾರೆಯರ ಪೋಸ್ಟರ್ಗಳನ್ನು ತೆಗೆದುಹಾಕಿ ಎಂದು ಯಾರೂ ಹೇಳುತ್ತಿಲ್ಲ. ಕ್ರೀಡಾಪಟುಗಳ ಜನಪ್ರಿಯತೆಯನ್ನು ಕಡಿಮೆ ಮಾಡಿ, ರಾಜಕಾರಣಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಬಾರದು ಎಂದರ್ಥವಲ್ಲ.
ಪ್ರಶ್ನೆ ಇರುವುದು ಸಮತೋಲನದ ಬಗ್ಗೆ. ನಮ್ಮ ನಗರದಲ್ಲಿ ಹತ್ತು ದೊಡ್ಡ ಹೋರ್ಡಿಂಗ್ಗಳಿದ್ದರೆ, ಹತ್ತೂ ಒಂದೇ ರೀತಿಯ ಸೆಲೆಬ್ರಿಟಿಗಳಿಗಾಗಿಯೇ ಇರಬೇಕೇ? ಅವುಗಳಲ್ಲಿ ಒಂದರಲ್ಲಿ ಈ ತಿಂಗಳ ಭಾರತೀಯ ವಿಜ್ಞಾನಿ, ಗ್ರಾಮೀಣ ಪ್ರದೇಶದ ಶಿಕ್ಷಕಿಯ ಸಾಧನೆ, ಒಂದರಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ ವೈದ್ಯರ ಕಥೆ, ಒಂದರಲ್ಲಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಯುವ ಎಂಜಿನಿಯರ್, ಒಂದರಲ್ಲಿ ಹಳ್ಳಿಯ ಸಮಸ್ಯೆಗೆ ಪರಿಹಾರ ಕಂಡುಕೊಂಡ ವಿದ್ಯಾರ್ಥಿಯ ಮುಖ ಇರಬಾರದೇ?
ಮಕ್ಕಳ ಕಣ್ಣಿಗೆ ಹೊಸ ಹೀರೋಗಳು ಬೇಕು
ಭಾರತದಲ್ಲಿ ಇಂದು ಯುವಜನರಿಗೆ ಹೀರೋಗಳ ಕೊರತೆಯಿಲ್ಲ. ಆದರೆ ಹೀರೋ ಎಂಬ ಪದದ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವಿದೆ. ಸಿನಿಮಾದಲ್ಲಿ ದುಷ್ಟರನ್ನು ಸೋಲಿಸುವ ನಾಯಕ ಒಬ್ಬ ಹೀರೋ ಆಗಬಹುದು. ಅವನು ಚುನಾವಣೆಗೆ ನಿಂತು ಸಿಎಂ ಕೂಡ ಆಗಬಹುದು. ಸಹಜವಾಗಿಯೇ ಆತನ ಕಟೌಟ್ಗಳು ಎಲ್ಲ ಕಡೆ ರಾರಾಜಿಸಬಹುದು. ಆದರೆ ಅವನು ಕೈಹಿಡಿದ ಹೆಂಡತಿಯನ್ನು ವಂಚಿಸಿ ಬೇರೊಬ್ಬಳೊಡನೆ ಲಲ್ಲೆ ಹೊಡೆಯುತ್ತಿದ್ದರೆ? ಅವನೆಂಥ ಮಾದರಿ, ಎಂಥ ಹೀರೋ?
ಅದರ ಬದಲು, ಮಲೇರಿಯಾ, ಕ್ಯಾನ್ಸರ್ ಅಥವಾ ಬೇರೆ ರೋಗದ ವಿರುದ್ಧ ಹೊಸ ಪರಿಹಾರ ಹುಡುಕುವ ಸಂಶೋಧಕ ಕೂಡ ಹೀರೋ ಅಲ್ಲವೇ? ಕೊನೆಯ ಓವರ್ನಲ್ಲಿ ಪಂದ್ಯ ಗೆಲ್ಲಿಸುವ ಕ್ರಿಕೆಟಿಗ ಹೀರೋ ಆಗಬಹುದು. ಆದರೆ ಬರಪೀಡಿತ ಪ್ರದೇಶದ ರೈತರಿಗೆ ನೆರವಾಗುವ ಹೊಸ ತಂತ್ರಜ್ಞಾನ ಕಂಡುಹಿಡಿದ ಯುವ ಇಂಜಿನಿಯರ್ ಕೂಡ ಹೀರೋ ಅಲ್ಲವೇ? ಒಂದು ಬ್ಲಾಕ್ಬಸ್ಟರ್ ಸಿನಿಮಾ ನಿರ್ದೇಶಕ ಹೀರೋ ಆಗಬಹುದು. ಆದರೆ ಸಾವಿರಾರು ಬಡ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತಂದ ಶಿಕ್ಷಕ ಕೂಡ ಹೀರೋ ಅಲ್ಲವೇ?
ನಮ್ಮ ಮಕ್ಕಳು ಹೀರೋಯಿಸಂ ಎಂದರೆ ಕೇವಲ ಪರದೆಯ ಮೇಲಿನ ಸಾಹಸವಲ್ಲ ಎಂಬುದನ್ನು ನೋಡಬೇಕು. ನಿಜ ಜೀವನದಲ್ಲಿ ಸಮಸ್ಯೆ ಪರಿಹರಿಸುವವರೂ ಹೀರೋಗಳು ಎಂಬುದನ್ನು ಅರಿಯಬೇಕು.
ಹೊಸ ಸಾರ್ವಜನಿಕ ಅಭಿಯಾನ
ಕಲ್ಪಿಸಿಕೊಳ್ಳಿ. ಬೆಂಗಳೂರಿನ ಮೆಟ್ರೋ ನಿಲ್ದಾಣದ ದೊಡ್ಡ ಪರದೆಯಲ್ಲಿ ಪ್ರತಿ ವಾರ ಒಬ್ಬ ಭಾರತೀಯ ಸಾಧಕ. ಈ ವಾರದ ಮುಖ ಒಬ್ಬ ವಿಜ್ಞಾನಿ, ಅವರು ಏನು ಕಂಡುಹಿಡಿದರು? ಅದು ನಮ್ಮ ಬದುಕಿಗೆ ಹೇಗೆ ಸಹಾಯ ಮಾಡುತ್ತಿದೆ? ಮುಂದಿನ ವಾರ ಒಬ್ಬ ಶಿಕ್ಷಕಿ. ಅವರು ಎಷ್ಟು ಮಕ್ಕಳ ಬದುಕನ್ನು ಬದಲಾಯಿಸಿದ್ದಾರೆ? ಆಮೇಲೆ ಒಬ್ಬ ವೈದ್ಯ. ಅವರ ಸಂಶೋಧನೆ ಅಥವಾ ಸೇವೆ ಎಷ್ಟು ಜನರಿಗೆ ನೆರವಾಗಿದೆ?
ಇದು ಕೇವಲ ಸರ್ಕಾರ ಮಾಡಬೇಕಾದ ಕೆಲಸವೂ ಅಲ್ಲ. ನಗರ ಪಾಲಿಕೆಗಳು, ಶಿಕ್ಷಣ ಸಂಸ್ಥೆಗಳು, ವಿಜ್ಞಾನ ಸಂಸ್ಥೆಗಳು, ಖಾಸಗಿ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಮತ್ತು ಜಾಹೀರಾತು ಕ್ಷೇತ್ರ ಒಟ್ಟಾಗಿ ಇಂತಹ ಅಭಿಯಾನವನ್ನು ಆರಂಭಿಸಬಹುದು.
ವಿಜ್ಞಾನವನ್ನು ದೃಶ್ಯ ಸಂಸ್ಕೃತಿಯ ಭಾಗವಾಗಿಸೋಣ
ನಮ್ಮ ದೇಶದಲ್ಲಿ ವಿಜ್ಞಾನವನ್ನು ತರಗತಿಯೊಳಗೆ ಸೀಮಿತಗೊಳಿಸಲಾಗಿದೆ. ವಿಜ್ಞಾನ ಎಂದರೆ ಪರೀಕ್ಷೆ, ಮಾರ್ಕ್ಸ್, ಇಂಜಿನಿಯರಿಂಗ್ ಪ್ರವೇಶ, ವೈದ್ಯಕೀಯ ಸೀಟ್ ಎಂಬ ಭಾವನೆ. ಆದರೆ ವಿಜ್ಞಾನ ಎಂದರೆ ಕುತೂಹಲ, ಪ್ರಶ್ನೆ ಕೇಳುವುದು, ವಿಫಲವಾದರೂ ಮತ್ತೆ ಪ್ರಯತ್ನಿಸುವುದು, ಸಮಾಜದ ಸಮಸ್ಯೆಗೆ ಪರಿಹಾರ ಹುಡುಕುವುದು. ಈ ಕಥೆಗಳನ್ನು ಶಕ್ತಿಶಾಲಿ ಚಿತ್ರ, ಚಿಕ್ಕ ವಿಡಿಯೊ, ಸಾರ್ವಜನಿಕ ಪರದೆ, ಮೆಟ್ರೋ ಪೋಸ್ಟರ್ ಅಥವಾ 30 ಸೆಕೆಂಡ್ ಕಥೆಯಾಗಿ ಹೇಳಿದರೆ ಅದು ಮಕ್ಕಳ ಮನಸ್ಸಿನಲ್ಲಿ ಉಳಿಯಬಹುದು.


Click it and Unblock the Notifications
