ಲಂಡನ್ ಹೋಟೆಲ್‌ನಲ್ಲಿ ಸೌದಿ ರಾಜಕುಮಾರನ ದುರಂತ ಸಾವು: ಮರಣೋತ್ತರ ವಿಚಾರಣೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ
ಕಳೆದ ವರ್ಷ ಲಂಡನ್‌ನ ಐಷಾರಾಮಿ ಹೋಟೆಲ್ ಒಂದರಲ್ಲಿ ಸೌದಿ ಅರೇಬಿಯಾದ ಯುವ ರಾಜಕುಮಾರ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಎಲ್ಲರಿಗೂ ನೆನಪಿರಬಹುದು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಮರಣೋತ್ತರ ವಿಚಾರಣೆ ಪೂರ್ಣಗೊಂಡಿದೆ.
29 ವರ್ಷದ ಸೌದಿ ರಾಜಕುಮಾರ ಅಬ್ದುಲ್ಲಾ ಬಿನ್ ಫಹದ್ ಬಿನ್ ಅಬ್ದುಲ್ಲಾ ಬಿನ್ ಅಬ್ದುಲಜೀಜ್ ಬಿನ್ ಜಲಾವಿ ಅಲ್ ಸೌದ್ ಅವರ ಸಾವಿಗೆ ಆಲ್ಕೋಹಾಲ್ ಮತ್ತು ಮಾರಕ ಡ್ರಗ್ಸ್ ಸೇವನೆಯೇ ಕಾರಣ ಎಂಬ ಆಘಾತಕಾರಿ ವಿಚಾರವನ್ನ ಕರೋನರ್ ವರದಿ ದೃಢಪಡಿಸಿದೆ. ಇದೊಂದು ಉದ್ದೇಶಪೂರ್ವಕ ಮಾಡಿಕೊಂಡ ಆತ್ಮಹತ್ಯೆಯಲ್ಲ, ಬದಲಿಗಿ ಇದು ಅತಿಯಾದ ಮಾದಕವಸ್ತು ಸೇವನೆಯಿಂದ ಸಂಭವಿಸಿದ ಆಕಸ್ಮಿಕ ಸಾವು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಹೋಟೆಲ್ ಕೊಠಡಿಯಲ್ಲಿ ನಡೆದಿದ್ದೇನು?
2025ರ ನವೆಂಬರ್ 25ರಂದು ಲಂಡನ್‌ನ ಕೆನ್ಸಿಂಗ್ಟನ್‌ನಲ್ಲಿರುವ ಮ್ಯಾರಿಯೊಟ್ ಹೋಟೆಲ್‌ನಲ್ಲಿ ಈ ದುರ್ಘಟನೆ ಸಂಭವಿಸಿತ್ತು. ನವೆಂಬರ್ 19 ರಂದು ಒಂದು ವಾರದ ವಾಸ್ತವ್ಯಕ್ಕಾಗಿ ದಿನಕ್ಕೆ 600 ಪೌಂಡ್ ಅಂದರೆ ಸುಮಾರು 60 ಸಾವಿರ ರೂಪಾಯಿ ಬಾಡಿಗೆಯ ಐಷಾರಾಮಿ ರೂಮ್ ಒಂದನ್ನ ರಾಜಕುಮಾರ ಕಾಯ್ದಿರಿಸಿದ್ದರು. ಸಾವಿಗೂ ಹಿಂದಿನ ದಿನ ರಾತ್ರಿ ಸಿಗರೇಟ್ ಸೇದಲು ಹೋಟೆಲ್‌ನಿಂದ ಹೊರಬಂದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮರುದಿನ ಬೆಳಿಗ್ಗೆ ಸ್ವಚ್ಛತಾ ಸಿಬ್ಬಂದಿ ಕೊಠಡಿಗೆ ಹೋದಾಗ, ಸ್ನಾನಗೃಹದ ನೆಲದ ಮೇಲೆ ರಾಜಕುಮಾರ ಬಟ್ಟೆ ಧರಿಸಿದ ಸ್ಥಿತಿಯಲ್ಲೇ ಪ್ರಜ್ಞೆ ಕಳೆದುಕೊಡು ಬಿದ್ದಿದ್ದರು. ತಕ್ಷಣವೇ ತುರ್ತು ವೈದ್ಯಕೀಯ ಸಿಬ್ಬಂದಿ ಆಗಮಿಸಿದರೂ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಹಾಗೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.
ಮರಣೋತ್ತರ ಪರೀಕ್ಷೆ
ಇದೀಗ ರಾಜಕುಮಾರನ ಸಾವು ಸಂಭವಿಸಿದ್ದು ಹೇಗೆ ಎಂಬುದರ ಬಗ್ಗೆ ಟಾಕ್ಸಿಕಾಲಜಿ ವರದಿಯು ಸ್ಫೋಟಕ ಮಾಹಿತಿ ನೀಡಿದೆ. ರಾಜಕುಮಾರನ ರಕ್ತದಲ್ಲಿ ಪ್ರತಿ 100 ಮಿಲಿಲೀಟರ್‌ಗೆ 222 ಮಿಲಿಗ್ರಾಂನಷ್ಟು ಆಲ್ಕೋಹಾಲ್ ಅಂಶ ಪತ್ತೆಯಾಗಿತ್ತು. ಇಂಗ್ಲೆಂಡ್‌ನಲ್ಲಿ ವಾಹನ ಚಾಲನೆಗೆ ನಿಗದಿಪಡಿಸಲಾದ ಆಲ್ಕೋಹಾಲ್ ಮಿತಿಗಿಂತ ಇದು ಮೂರು ಪಟ್ಟು ಹೆಚ್ಚಾಗಿತ್ತು. ಕೇವಲ ಈ ಪ್ರಮಾಣದ ಆಲ್ಕೋಹಾಲ್ ವ್ಯಕ್ತಿಯನ್ನು ಕೋಮಾ ಸ್ಥಿತಿಗೆ ತಲುಪಿಸುವ ಸಾಧ್ಯತೆಯಿದೆ ಎಂದು ವೈದ್ಯಕೀಯ ತಜ್ಞರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದರ ಜೊತೆಗೆ, ಪಾರ್ಟಿ ಡ್ರಗ್ ಎಂದು ಕರೆಯಲಾಗುವ 'GHB' ಎಂಬ ಮಾರಕ ರಾಸಾಯನಿಕ, ಗಾಂಜಾ ಹಾಗೂ ಕ್ಸಾನಾಕ್ಸ್ ಸೇರಿದಂತೆ ಇನ್ನಿತರ ಆತಂಕ ನಿವಾರಿಸುವ ಮಾತ್ರೆಗಳ ಅಂಶಗಳು ಕೂಡ ಅವರ ದೇಹದಲ್ಲಿ ಪತ್ತೆಯಾಗಿವೆ. ಯಾವುದೇ ಕಾಯಿಲೆಯಿಂದ ಅವರ ಸಾವು ಸಂಭವಿಸಿಲ್ಲ. ಬದಲಿಗೆ ಈ ಎಲ್ಲಾ ಮಾರಣಾಂತಿಕ ಮಾದಕ ವಸ್ತುಗಳೆಲ್ಲ ಸೇರಿ ಹೃದಯ ಸ್ತಂಭನವಾಗಿ ರಾಜಕುಮಾರ ಸಾವನ್ನಪ್ಪಿದ್ದಾರೆ ಎಂದು ತಜ್ಞರು ದೃಢಪಡಿಸಿದ್ದಾರೆ.
ಮಾದಕವ್ಯಸನ ಮತ್ತು ಚಿಕಿತ್ಸೆ
ರಾಜಕುಮಾರ ಅಬ್ದುಲ್ಲಾ ಅವರಿಗೆ ಹಿಂದಿನಿಂದಲೂ ಮಾದಕವ್ಯಸನದ ಸಮಸ್ಯೆ ಇತ್ತು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಸಾವಿಗೂ ಕೆಲವು ತಿಂಗಳ ಮುನ್ನ, 2025ರ ಆಗಸ್ಟ್‌ನಲ್ಲಿ ಲಂಡನ್‌ನ ಪ್ರಿಯರಿ ಆಸ್ಪತ್ರೆಯಲ್ಲಿ ಅವರು ಆಲ್ಕೋಹಾಲ್ ಹಾಗೂ ಮಾತ್ರೆಗಳ ವ್ಯಸನದಿಂದ ಮುಕ್ತರಾಗಲು ಚಿಕಿತ್ಸೆ ಪಡೆದಿದ್ದರು. ಅಲ್ಲಿ ಯಾವುದೇ ದೈಹಿಕ ತೊಂದರೆಗಳಿಲ್ಲದೆ ಅವರು ನಿರ್ವಿಶೀಕರಣ (Detox) ಪ್ರಕ್ರಿಯೆಯನ್ನ ಪೂರ್ಣಗೊಳಿಸಿದ್ದರು.
ನಂತರ, ಅವರು ಮರ್ಸಿಸೈಡ್‌ನಲ್ಲಿರುವ ರೈನ್‌ಫೋರ್ಡ್ ಹಾಲ್ ಎಂಬ ಖಾಸಗಿ ಪುನರ್ವಸತಿ ಕೇಂದ್ರದಲ್ಲಿ ಮುಂದಿನ ಚಿಕಿತ್ಸೆ ಮುಂದುವರಿಸಿದ್ದರು. ಅಕ್ಟೋಬರ್‌ನಲ್ಲಿ ಅವರು ಅಲ್ಲಿಂದ ಬಿಡುಗಡೆಯಾದಾಗ, ವೈದ್ಯರು ಅವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಇಲ್ಲ ಎಂಬುದನ್ನ ಖಚಿತಪಡಿಸಿದ್ದರು.
ಇದು ಆತ್ಮಹತ್ಯೆಯೇ ಅಥವಾ ಬೇರೆಯವರ ಕೈವಾಡವಿದೆಯೇ ಎಂಬುದೇ ಈ ವಿಚಾರಣೆಯ ಪ್ರಮುಖ ಉದ್ದೇಶವಾಗಿತ್ತು. ಆದರೆ, ಸಹಾಯಕ ಕರೋನರ್ ಜೀನ್ ಹಾರ್ಕಿನ್ ಅವರು, ಇದು ಆತ್ಮಹತ್ಯೆ ಎನ್ನಲು ಯಾವುದೇ ಸೂಕ್ತ ಆಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೋಟೆಲ್ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿರಲಿಲ್ಲ ಹಾಗೂ ಬೇರೆಯವರು ರಾಜಕುಮಾರನ ಕೊಠಡಿಗೆ ಬಲವಂತವಾಗಿ ನುಗ್ಗಿದ ಕುರುಹುಗಳೂ ಇಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲೂ ರಾಜಕುಮಾರ ಒಬ್ಬಂಟಿಯಾಗಿರುವುದು ದೃಢಪಟ್ಟಿದ್ದರಿಂದ, ಇದೊಂದು ಬಹು-ಔಷಧಿ ಸೇವನೆಯಿಂದಾದ ಆಕಸ್ಮಿಕ ಸಾವು ಎಂದು ನ್ಯಾಯಾಲಯ ತೀರ್ಪು ನೀಡಿದೆ.


Click it and Unblock the Notifications
