Syrian Conflict: ಸಿರಿಯಾ ಭವಿಷ್ಯದ ಬಗ್ಗೆ ಚರ್ಚಿಸಲು ಮಹತ್ವದ ಸಭೆ!
ಸಿರಿಯಾ ದೇಶ ಧಗ ಧಗ ಹೊತ್ತಿ ಉರಿದು ಇದೀಗ ತಣ್ಣಗೆ ಆಗುತ್ತಿದೆ. ಒಂದು ಕಡೆ ಸಿರಿಯಾ ಸಮಸ್ಯೆ ಮಧ್ಯಪ್ರಾಚ್ಯ ಭಾಗಕ್ಕೆ ಸೀಮಿತ ಅಂತಾ ಅಂದುಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗೇ, ಇನ್ನೊಂದು ಕಡೆ ಈ ವಿಚಾರದಲ್ಲಿ ಪಾಶ್ಚಿಮಾತ್ಯ ದೇಶಗಳು ತಮ್ಮ ಕುತೂಹಲ ಕೈಬಿಟ್ಟಿಲ್ಲ. ಇಷ್ಟೆಲ್ಲದರ ನಡುವೆ ಸಿರಿಯಾಗೆ ಸೇರಿದ ಜಾಗದಲ್ಲಿ ಇಸ್ರೇಲ್ ಸೇನೆ ಬಿಡಾರ ಹೂಡುತ್ತಿದ್ದು, ಭವಿಷ್ಯದಲ್ಲಿ ಇದು ಮತ್ತೊಂದು ಸಂಘರ್ಷಕ್ಕೆ ಕಾರಣವಾಗುತ್ತೆ ಎಂಬ ಆರೋಪಗಳ ಮಧ್ಯೆ ಮಹತ್ವದ ಸಭೆ ನಡೆಸಿದೆ.
ಸಿರಿಯಾ ದೇಶದಲ್ಲಿ ಅಸ್ಸಾದ್ ಸರ್ಕಾರದ ವಿರುದ್ಧ ನಾಗರಿಕರು ಯುದ್ಧ ಸಾರಿದ್ದರು. ಹೀಗೆ ಶುರುವಾಗಿದ್ದ ಕಿರಿಕ್ ಮುಂದೆ ದೊಡ್ಡದಾಗಿ ಸಿರಿಯಾ ಸರ್ಕಾರ & ಅಧ್ಯಕ್ಷರ ಕುರ್ಚಿಯೇ ಅಲ್ಲಾಡಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕೊನೆಗೆ ಈ ತಿಕ್ಕಾಟ ಅಂತ್ಯವಾಗಿ ಸಿರಿಯಾ ಅಧ್ಯಕ್ಷ ಸ್ಥಾನ ಬಿಟ್ಟು ಅಸ್ಸಾದ್ ಎಸ್ಕೇಪ್ ಆಗಿದ್ದೂ ಆಗಿದೆ. ಇಂತಹ ಸಮಯದಲ್ಲಿ, ಅಮೆರಿಕ ಸೇರಿ ವಿವಿಧ ದೇಶಗಳು ಸಿರಿಯಾ ವಿಚಾರವಾಗಿ ಮಹತ್ವದ ಸಭೆ ಆರಂಭಿಸಿವೆ.

ಸಿರಿಯಾ ಭವಿಷ್ಯದ ಕಥೆ ಏನು?
ಅಮೆರಿಕ, ಟರ್ಕಿ, ಯುರೋಪ್ ಒಕ್ಕೂಟ ಸೇರಿದಂತೆ ಅರಬ್ ದೇಶಗಳ ಪ್ರತಿನಿಧಿಗಳು ಇದೀಗ ಮಹತ್ವದ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಸಿರಿಯಾ ಮುಂದಿನ ಕಥೆ ಏನು? ಅಲ್ಲಿರುವ ಪ್ರಜೆಗಳ ಜವಾಬ್ದಾರಿ ಯಾರಿಗೆ ವಹಿಸಬೇಕು? ಯಾವ ರೀತಿಯ ಸರ್ಕಾರ ಬರಬೇಕು? ಎನ್ನುವ ಪ್ರಶ್ನೆಗಳೂ ಸೇರಿದಂತೆ ಹಲವು ವಿಚಾರಗಳನ್ನ ಮುಂದೆ ಇಟ್ಟುಕೊಂಡು ಇದೀಗ ಸಭೆ ಕೂಡ ಆರಂಭವಾಗಿದೆ. ಈ ಮೂಲಕ ಸಿರಿಯಾ ವಿಚಾರ ಸಾಕಷ್ಟು ಗಮನ ಸೆಳೆಯುತ್ತಿದೆ. ಇಸ್ರೇಲ್ ಈಗಾಗಲೇ ಸಿರಿಯಾ ದೇಶದ ಆಯಕಟ್ಟಿನ ಜಾಗಗಳ ಮೇಲೆ ಕಣ್ಣಿಟ್ಟು, ತನ್ನ ಮಿಲಿಟರಿ ಮುಂದೆ ನುಗ್ಗಿಸಿದೆ.
ವಾಪಸ್ ಬರುತ್ತಿರುವ ಸಿರಿಯಾ ಪ್ರಜೆಗಳು
ಸಿರಿಯಾ ದೇಶದಲ್ಲಿ ಯಾವಾಗ ಆಂತರಿಕ ಯುದ್ಧ ಶುರುವಾಗಿ, ಜನಾಂಗೀಯ ದಾಳಿ ಜೋರಾಗಿತ್ತೋ ಆಗ ಅಲ್ಲಿಂದ ಲಕ್ಷಾಂತರ ಜನರು ದೇಶ ಬಿಟ್ಟು ಓಡಿ ಹೋಗಿದ್ದರು. ಆ ನಂತರ ಈ ವಿಚಾರವು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೂ ವೇದಿಕೆ ಒದಗಿಸಿತ್ತು. ಆದರೆ, ದೇಶ ಬಿಟ್ಟು ಹೋಗಿದ್ದ ಜನರೆಲ್ಲಾ ಇದೀಗ ವಾಪಸ್ ಬರುತ್ತಿದ್ದಾರೆ. ಹಾಗೇ ಮರಳಿ ಸಿರಿಯಾಗೆ ಬರುತ್ತಿರುವ ಪ್ರಜೆಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರನ್ನೂ ಸ್ವಾಗತಿಸಲಾಗುತ್ತಿದೆ. ಇನ್ನೊಂದು ಕಡೆ ಅಮೆರಿಕ ಮಹತ್ವದ ಸಭೆ ನಡೆಸುತ್ತಿದ್ದು, ಭವಿಷ್ಯದಲ್ಲಿ ಇದು ಇನ್ನಷ್ಟು ತಿರುವು ಪಡೆಯುವ ಸಾಧ್ಯತೆ ಇದೆ. ಈ ಮೂಲಕ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತಷ್ಟು ಚಟುವಟಿಕೆ ಆರಂಭವಾಗಿದೆ.












Click it and Unblock the Notifications