ಕುತೂಹಲ ಕೆರಳಿಸಿರುವುದು ಏಕೆ ರಷ್ಯಾ ಸಚಿವರ ಭಾರತ ಭೇಟಿ?
ನವದೆಹಲಿ, ಮಾರ್ಚ್ 30: ಉಕ್ರೇನ್ ರಾಜಧಾನಿ ಕೀವ್ ಮೇಲಿನ ಆಕ್ರಮಣ ಹಾಗೂ ಕಾರ್ಯಾಚರಣೆಯನ್ನು ಕಡಿತಗೊಳಿಸುವುದಾಗಿ ರಷ್ಯಾ ಸಂಧಾನ ಸಭೆಯಲ್ಲಿ ಭರವಸೆ ನೀಡಿದೆ. ಜಾಗತಿಕ ಮಟ್ಟದಲ್ಲಿ ಈ ಬೆಳವಣಿಗೆ ನಡೆದು ಕೆಲವೇ ಗಂಟೆಗಳಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಉಕ್ರೇನ್ ವಿರುದ್ಧ ಆಕ್ರಮಣ ನಡೆಸಿರುವ ರಷ್ಯಾ ಜಾಗತಿಕ ಮಟ್ಟದಲ್ಲಿ ಮುಂದುವರಿದ ರಾಷ್ಟ್ರಗಳ ನಿರ್ಬಂಧವನ್ನು ಎದುರಿಸುತ್ತಿದೆ. ಈ ಹಂತದಲ್ಲಿ ತನ್ನ ಮಿತ್ರರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವುದು ತೀರಾ ಅನಿವಾರ್ಯವಾಗಿದೆ.
ಭಾರತದ ಜೊತೆಗೆ ಮೊದಲಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿರುವ ರಷ್ಯಾ, ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಮಾರ್ಚ್ 31ರಿಂದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಎರಡು ದಿನದ ಪ್ರವಾಸ ಕೈಗೊಳ್ಳಲಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಐರೋಪ್ಯ ರಾಷ್ಟ್ರಗಳ ವಿರೋಧದ ಮಧ್ಯೆಯೂ ನಡೆಯುತ್ತಿರುವ ಬೆಳವಣಿಗೆಯು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಡುವ ನಿರೀಕ್ಷೆಗಳೂ ಹೆಚ್ಚಾಗಿದೆ.

ರಾಜಕೀಯ ಪರಿಸ್ಥಿತಿ ಕುರಿತು ಭಾರತಕ್ಕೆ ವಿವರಣೆ
ಉಕ್ರೇನ್ ಮೇಲಿನ ದಾಳಿಯ ನಡುವೆ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ಬೌಗೋಳಿಕ ಮತ್ತು ರಾಜಕೀಯ ಪರಿಸ್ಥಿತಿಯ ಕುರಿತು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ವಿವರಣೆ ನೀಡಲಿದ್ದಾರೆ. ಏಪ್ರಿಲ್ 1ರಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಜೊತೆಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಭೆ ನಡೆಸಲಿದ್ದು, ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧದ ಸಂಬಂಧ ಶಾಂತಿ ಸ್ಥಾಪನೆ ಕುರಿತು ಪ್ರಸ್ತಾಪವಾಗುವ ನಿರೀಕ್ಷೆಯಿದೆ.

ಪುಟಿನ್ ವಿರುದ್ಧ ಕೆಂಡ ಕಾರುತ್ತಿರುವ ಜೋ ಬೈಡೆನ್
ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಮಿತ್ರರಾಷ್ಟ್ರ ಮತ್ತು ಶತ್ರುರಾಷ್ಟ್ರಗಳು ಎಂಬ ಲೆಕ್ಕಾಚಾರ ಶುರುವಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಯುಎಸ್ ಅಧ್ಯಕ್ಷ ಜೋ ಬೈಡೆನ್ ಬೆಂಕಿ ಉಗುಳುತ್ತಿದ್ದಾರೆ. ಯುರೋಪ್ ರಾಷ್ಟ್ರಗಳೆಲ್ಲ ರಷ್ಯಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವಂತೆ ತಾಕೀತು ಮಾಡುತ್ತಿದ್ದಾರೆ. ಭಾರತವೂ ಕೂಡಾ ರಷ್ಯಾದಿಂದ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಷರತ್ತು ಹಾಕುತ್ತಿದ್ದಾರೆ. ಇದರ ಮಧ್ಯೆ ರಷ್ಯಾದೊಂದಿಗೆ ಆತ್ಮೀಯವಾಗಿ ಗುರುತಿಸಿಕೊಂಡಿರುವ ಚೀನಾಗೂ ಛೀಮಾರಿ ಹಾಕಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಕಳೆದ ವಾರವಷ್ಟೇ ಚೀನಾ ವಿದೇಶಾಂಗ ಸಚಿವರು ಕೂಡ ಭಾರತಕ್ಕೆ ವಿಸಿಟ್ ಕೊಟ್ಟಿದ್ದರು.

ವಾರದ ಹಿಂದೆಯಷ್ಟೇ ಭಾರತಕ್ಕೆ ಬಂದಿದ್ದ ಚೀನಾ ಸಚಿವ ವಾಂಗ್ ಯಿ
ಮಾರ್ಚ್ 25ರಂದು ಭಾರತಕ್ಕೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿ ನೀಡಿದ್ದರು. ಅಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆಗೆ ನಡೆಸಿದ ಸಭೆಗಳು ಹಲವು ಮಹತ್ವದ ವಿಷಯಗಳ ಚರ್ಚೆಗೆ ವೇದಿಕೆ ಆಗಿತ್ತು. ಚೀನಾ-ಭಾರತ ಗಡಿ ವಿವಾದಗಳ ಚರ್ಚೆಯ ಜೊತೆಗೆ 14ನೇ ಬ್ರಿಕ್ಸ್ ಶೃಂಗಸಭೆಯ ಆಹ್ವಾನದ ಉದ್ದೇಶವೂ ವಾಂಗ್ ಭೇಟಿಯ ಹಿಂದಿತ್ತು. ಇದಕ್ಕಿಂತ ಹೆಚ್ಚಾಗಿ ಚೀನಾದಲ್ಲಿ ನಡೆಯಲಿರುವ 14ನೇ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಜರ್ ಆಗಲಿದ್ದಾರೆ. ಅಲ್ಲಿಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವುದು ಮುಖ್ಯ ಉದ್ದೇಶವಾಗಿತ್ತು. ಆ ಮೂಲಕ ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ಬಲಿಷ್ಠ ರಾಷ್ಟ್ರಗಳು ತಮ್ಮೊಂದಿಗಿವೆ ಎನ್ನುವ ಸಂದೇಶವನ್ನು ವಿಶ್ವದ ದೊಡ್ಡಣ್ಣ ಅಮೆರಿಕಾಗೆ ತಟ್ಟಿ ಹೇಳುವುದು ರಷ್ಯಾದ ಗುರಿ ಆಗಿತ್ತು.

ರಷ್ಯಾ ಎದುರಿಗೆ ಮೊಂಡಿಯೂರಿದ ಉಕ್ರೇನ್
ರಷ್ಯಾ ಆಕ್ರಮಣಕ್ಕೆ ಬೆದರಿದ ಉಕ್ರೇನ್ ತಟಸ್ಥ ನಿಲುವು ತಾಳುವುದಾಗಿ ಸಂಧಾನ ಸಭೆಯಲ್ಲಿ ಹೇಳಿದೆ. ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಚರ್ಚೆಯ ನಂತರ ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಬಳಿ ಸೇನಾ ಚಟುವಟಿಕೆಗಳನ್ನು ಕಡಿತಗೊಳಿಸುವುದಾಗಿ ಮಾಸ್ಕೋ ಹೇಳಿದೆ. ಆ ಮೂಲಕ ಮಂಗಳವಾರ ನಡೆದ ಸಂಧಾನ ಮಾತುಕತೆ ಯಶಸ್ವಿಯಾಗಿದೆ. ರಷ್ಯಾದೊಂದಿಗಿನ ಇತ್ತೀಚಿನ ಸುತ್ತಿನ ಸಂಧಾನ ಮಾತುಕತೆಗಳಲ್ಲಿ ಭದ್ರತಾ ಒಕ್ಕೂಟವನ್ನು ಸೇರುವುದರ ಬದಲಿಗೆ ತಟಸ್ಥ ನಿಲುವು ತಾಳುವುದಾಗಿ ಕೀವ್ ನಿಯೋಗವು ಪ್ರಸ್ತಾಪಿಸಿದೆ. ಅಂದರೆ ನ್ಯಾಟೋ ಸೇರಿದಂತೆ ಇತರೆ ಯಾವುದೇ ಸೇನಾ ಮೈತ್ರಿಕೂಟವನ್ನು ಸೇರುವುದಿಲ್ಲ ಅಥವಾ ಸೇನೆ ನೆಲೆಗಳನ್ನು ಆಯೋಜಿಸುವುದಿಲ್ಲ ಎಂದು ನಿಯೋಗವು ಹೇಳಿದೆ.












Click it and Unblock the Notifications