Russia-Ukraine War Stop: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವುದಕ್ಕೆ ಹೀಗೊಂದು ಕಂಡೀಷನ್!?
ಕೀವ್, ಮಾರ್ಚ್ 16: ಉಕ್ರೇನ್ ಮೇಲೆ ಮುರಿದುಕೊಂಡು ಬಿದ್ದಿರುವ ರಷ್ಯಾ ನಿರಂತರ ದಾಳಿ ನಡೆಸುತ್ತಿದೆ. ಇಡೀ ಜಗತ್ತು ಮೂರನೇ ಮಹಾಯುದ್ಧಕ್ಕೆ ವ್ಲಾಡಿಮಿರ್ ಪುಟಿನ್ ದಾರಿ ಮಾಡಿ ಕೊಡುತ್ತಿದ್ದಾರಾ ಎಂಬ ಆತಂಕದಲ್ಲಿದೆ. ರಷ್ಯಾದ ಮೇಲೆ ಮುಂದುವರಿದ ರಾಷ್ಟ್ರಗಳು ನಿರ್ಬಂಧಗಳ ಸರಪಳಿಯನ್ನು ಹಾಕುತ್ತಿದೆಯಾದರೂ, ಯುದ್ಧ ಯಾವಾಗ ನಿಲ್ಲುತ್ತದೆ ಎಂಬ ಪ್ರಶ್ನೆ ಇನ್ನೂ ಉತ್ತರ ಸಿಕ್ಕಿಲ್ಲ.
ಉಕ್ರೇನ್-ರಷ್ಯಾ ನಡುವಿನ ಯುದ್ಧ ಯಾವಾಗ ನಿಲ್ಲುತ್ತದೆ?, ಈ ಯುದ್ಧವನ್ನು ನಿಲ್ಲಿಸುವವರು ಯಾರು?, ಇಲ್ಲಿ ಮಧ್ಯಸ್ಥಿಕೆ ವಹಿಸುವ ರಾಷ್ಟ್ರ ಯಾವುದು?, ಮಧ್ಯವರ್ತಿ ಮಾತನ್ನು ಕೇಳುತ್ತಾರಾ ವ್ಲಾಡಿಮಿರ್ ಪುಟಿನ್? ಇಂಥ ಹಲವು ಪ್ರಶ್ನೆಗಳ ಮಧ್ಯೆ ಉಕ್ರೇನ್ ಜೊತೆಗಿನ ಯುದ್ಧ ನಿಲ್ಲಿಸುವುದಕ್ಕೆ ಸ್ವತಃ ರಷ್ಯಾ ಒಂದು ಆಪ್ಷನ್ ಕೊಟ್ಟಿದೆ.
ಕಳೆದ ಫೆಬ್ರವರಿ 24ರಿಂದ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ನಿರಂತರ ಯುದ್ಧಕ್ಕೆ ಬ್ರೇಕ್ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಉಭಯ ರಾಷ್ಟ್ರಗಳ ನಡುವಿನ ಕಾದಾಟ 21ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಯುದ್ಧ ಸಾಕು ಬಿಡಿ, ನಮ್ಮ ಒಂದೇ ಒಂದು ಷರತ್ತಿಗೆ ನೀವು ಒಪ್ಪಿದರೆ ಯುದ್ಧವನ್ನು ನಿಲ್ಲಿಸುವುದಕ್ಕೆ ನಾವು ರೆಡಿ ಎಂದು ರಷ್ಯಾ ಹೇಳುತ್ತಿದೆ ಎಂದು ಜಾಗತಿಕ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಹಾಗಿದ್ದರೆ ರಷ್ಯಾ ಹಾಕಿರುವ ಅದೊಂದು ಕಂಡೀಷನ್ ಏನು ಎಂಬುದರ ಕುರಿತು ತಿಳಿಯಲು ಈ ವರದಿ ಓದಿ...

ರಷ್ಯಾ-ಉಕ್ರೇನ್ ನಡುವೆ ಸಂಧಾನ ಸಭೆ
ಕಳೆದ 21 ದಿನಗಳಿಂದ ನಡೆಯುತ್ತಿರುವ ಉಕ್ರೇನ್ ಮೇಲಿನ ದಾಳಿಯನ್ನು ನಿಲ್ಲಿಸಬೇಕಾದರೆ ನೀವು ನಮ್ಮ ಷರತ್ತಿಗೆ ಒಪ್ಪಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಉಕ್ರೇನ್ ಒಂದು ತಟಸ್ಥ ರಾಷ್ಟ್ರವಾಗಿ ಬದಲಾಗಬೇಕು. ನೀವು ತಟಸ್ಥ ನಿಲುವು ಪಾಲನೆ ಮಾಡುವುದಾದರೆ ಯುದ್ಧಕ್ಕೆ ತೀಲಾಂಜಲಿ ಹಾಡಲು ನಾವು ಸಿದ್ಧ ಎಂದು ರಷ್ಯಾದ ಸಂಧಾನಕಾರ ವ್ಲಾಡಿಮಿರ್ ಮೆಡಿನ್ಸ್ಕಿ ಷರತ್ತು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಉಕ್ರೇನ್ ಮತ್ತು ರಷ್ಯಾ ಸಂಧಾನಕಾರರ ಸಭೆಯಲ್ಲಿ ಇಂಥದೊಂದು ಷರತ್ತನ್ನು ರಷ್ಯಾ ವಿಧಿಸಿರುವ ಬಗ್ಗೆ ವರದಿಯಾಗಿದೆ.

ಉಕ್ರೇನ್ ಎದುರು ಎರಡು ಮಾದರಿ ಇಟ್ಟ ರಷ್ಯಾ
ರಷ್ಯಾದ ಆಕ್ರಮಣವನ್ನು ನಿಲ್ಲಿಸಬೇಕಾದರೆ, ಉಕ್ರೇನ್ ಎರಡು ರಾಷ್ಟ್ರಗಳ ಮಾದರಿಯನ್ನು ಅನುಸರಿಸುವುದಕ್ಕೆ ಒಪ್ಪಿಕೊಳ್ಳಬೇಕು. ಆಸ್ಟ್ರಿಯಾ ಅಥವಾ ಸ್ವಿಡಿಷ್ ರೀತಿಯಲ್ಲಿ ಉಕ್ರೇನ್ ಕೂಡ ತನ್ನ ಮಾದರಿಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು. ಆ ಪ್ರಕಾರ, ಉಕ್ರೇನ್ ತನ್ನದೇ ಆಗಿರುವ ಸೇನೆ ಮತ್ತು ನೌಕಾಪಡೆಯನ್ನು ಹೊಂದಿರುತ್ತದೆ. ಆದರೆ ಯಾವುದೇ ಬೇರೆ ರಾಷ್ಟ್ರಗಳೊಂದಿಗೆ ಹೋಗುವಂತಿಲ್ಲ. ಇನ್ನು ಉಕ್ರೇನ್ ಎಷ್ಟು ಪ್ರಮಾಣದ ಸೇನೆಯನ್ನು ಹೊಂದಿರಬೇಕು ಎನ್ನುವುದರ ಕುರಿತು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ರಷ್ಯಾದ ಸಂಧಾನಕಾರ ವ್ಲಾಡಿಮಿರ್ ಮೆಡಿನ್ಸ್ಕಿ ಹೇಳಿದ್ದಾರೆ.

ರಷ್ಯಾ ಇಂಥ ಕಂಡೀಷನ್ ಹಾಕಲು ಕಾರಣ?
ಫೆಬ್ರವರಿ 24ಕ್ಕೂ ಮೊದಲು ಯುದ್ಧ ಆರಂಭಿಸುವುದಕ್ಕೂ ಪೂರ್ವದಲ್ಲಿಯೇ ರಷ್ಯಾ ಇಂಥದೊಂದು ಕಂಡೀಷನ್ ಅನ್ನು ಉಕ್ರೇನ್ ಮುಂದೆ ಇಟ್ಟಿತ್ತು. ಉಕ್ರೇನ್ ಅನ್ನು ವಶಕ್ಕೆ ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಲ್ಲ. ನೀವು ನ್ಯಾಟೋ ರಾಷ್ಟ್ರಗಳೊಂದಿಗೆ ಯಾವುದೇ ಕಾರಣಕ್ಕೂ ಒಪ್ಪಂದ ಮಾಡಿಕೊಳ್ಳುವಂತಿಲ್ಲ. ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವುದು ನಮಗೆ ಇಷ್ಟವಿಲ್ಲ. ನ್ಯಾಟೋ ಸದಸ್ಯತ್ವದಿಂದ ಅಂತರ ಕಾಯ್ದುಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವ್ಲಾಡಿಮಿರ್ ಪುಟಿನ್ ಯುದ್ಧ ಆರಂಭಿಸುವುದಕ್ಕೆ ಮೊದಲಿನಿಂದಲೂ ಎಚ್ಚರಿಕೆ ನೀಡಿದ್ದರು. ರಷ್ಯಾ ಇದೀಗ ಮತ್ತೊಮ್ಮೆ ತನ್ನ ಹಳೆ ರಾಗ ಹಾಡಿದೆ. ನ್ಯಾಟೋ ಸದಸ್ಯತ್ವ ಪಡೆದುಕೊಳ್ಳುವ ಪ್ರಯತ್ನದಿಂದ ಹಿಂದೆ ಸರಿಯಬೇಕು. ಉಕ್ರೇನ್ ಎನ್ನುವುದು ಒಂದು ತಟಸ್ಥ ಹಾಗೂ ಸೇನಾರಹಿತ(Demilitarized) ರಾಷ್ಟ್ರವಾಗಿರಬೇಕು ಎಂದಿದೆ.

ಕ್ರಿಮಿಯಾ ಎನ್ನುವುದು ರಷ್ಯಾದ ಭಾಗ
ಕ್ರಿಮಿಯಾವನ್ನು ರಷ್ಯಾದ ಭಾಗವಾಗಿ ಗುರುತಿಸಬೇಕೆಂದು ಮಾಸ್ಕೋ ಬಯಸುತ್ತದೆ. 2014ರ ಕೀವ್‌ನಲ್ಲಿನ ದಂಗೆಯ ನಂತರ ಉಕ್ರೇನ್‌ನಿಂದ ಬೇರ್ಪಟ್ಟ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ (DPR ಮತ್ತು LPR) ಸ್ವಾತಂತ್ರ್ಯವನ್ನು ರಷ್ಯಾದ ಸಂಧಾನಕಾರ ವ್ಲಾಡಿಮಿರ್ ಮೆಡಿನ್ಸ್ಕಿ ಪುನರುಚ್ಚರಿಸಿದರು. ನಾಜಿಸ್ಟ್ ಮುಕ್ತ ಉಕ್ರೇನ್ ನಿರ್ಮಾಣ ಹಾಗೂ ರಷ್ಯನ್ ಭಾಷಿಗರ ಹಕ್ಕುಗಳ ರಕ್ಷಣೆ ಸೇರಿದಂತೆ ಮತ್ತಷ್ಟು ಷರತ್ತುಗಳನ್ನು ಹಾಕಲಾಗಿದೆ. ಈ ಪೈಕಿ ಕೆಲವು ಕಂಡೀಷನ್ ಅನ್ನು ಪಾಲಿಸುವುದಕ್ಕೆ ಸಂಬಂಧಿಸಿದಂತೆ ಪ್ರಗತಿ ಕಂಡು ಬರಬಹುದು ಆದರೆ ಎಲ್ಲವೂ ಪಾಲನೆ ಆಗುವುದು ಕಷ್ಟ," ಎಂದು ಮೆಡೆನ್ಸ್ಕಿ ಹೇಳಿದ್ದಾರೆ.

ಕೆನಡಾ ಸಂಸತ್ತಿನಲ್ಲಿ ಭಾವನಾತ್ಮಕವಾಗಿ ಮಾತಾಡಿದ ಝೆಲೆನ್ಸ್ಕಿ
ಮಂಗಳವಾರ ಕೆನಡಾ ಸಂಸತ್ ಅನ್ನು ಉದ್ದೇಶಿಸಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾವನಾತ್ಮಕವಾಗಿ ಮಾತನಾಡಿದರು. "ರಷ್ಯನ್ ಸೇನೆಯು ಮೆಮೋರಿಯಲ್ ಕಾಂಪ್ಲೆಕ್ಸ್, ಆಸ್ಪತ್ರೆ, ಶಾಲೆ, ಅಪಾರ್ಟ್ ಮೆಂಟ್ ಸೇನಿದಂತೆ ಎಲ್ಲವನ್ನೂ ನಾಶಪಡಿಸಿದೆ. ಈಗಾಗಲೇ ಅವರು 97 ಮುಗ್ಧ ಮಕ್ಕಳನ್ನು ಕೊಂದಿದ್ದಾರೆ. ನಾವು ಹೆಚ್ಚಿನದ್ದನ್ನು ಕೇಳುತ್ತಿಲ್ಲ, ನ್ಯಾಯವನ್ನು ಕೇಳುತ್ತಿದ್ದೇವೆ. ನಮ್ಮವರ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ನೆರವು ಕೇಳುತ್ತಿದ್ದೇವೆ," ಎಂದು ಹೇಳಿದರು.
ಕೆನಡಾ ಮೇಲೆಯೂ ಇಂಥ ದಾಳಿ ನಡೆದರೆ ಊಹಿಸಿಕೊಳ್ಳಿ:
"ಕೆನಡಾದ ಮೇಲೆಯೂ ನಮ್ಮ ಕಟ್ಟಡಗಳು ಮತ್ತು ಸ್ಮಾರಕ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಊಹಿಸಿಕೊಳ್ಳಿ. ಪ್ರತಿರಾತ್ರಿಯೂ ಭಯಾನಕವಾಗಿದ್ದು, ಹಲವು ಕುಟುಂಬಗಳು ಸತ್ತಿವೆ. ಇಂಥ ಸಂದರ್ಭದಲ್ಲಿ ರಷ್ಯಾದ ಮೇಲೆ ಕೇವಲ ನಿರ್ಬಂಧ ವಿಧಿಸಿದರಷ್ಟೇ ಸಾಕಾಗುವುದಿಲ್ಲ," ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಬಾಂಬ್ ಹಾಗೂ ಮಿಸೈನ್ ದಾಳಿಯನ್ನು ನಿಯಂತ್ರಿಸುವುದಕ್ಕಾಗಿ ಹಾರಾಟ ನಿರ್ಬಂಧ ವಲಯವನ್ನು ಘೋಷಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಸಲ್ಲಿಸಿದ್ದರು. ಆದರೆ ಅವರು ಮನವಿಯನ್ನು ಯುರೋಪಿಯನ್ ರಾಷ್ಟ್ರಗಳು ತಿರಸ್ಕರಿಸಿದ್ದವು.












Click it and Unblock the Notifications