3ನೇ ಮಹಾಯುದ್ಧಕ್ಕೆ ಸದ್ದೇ ಇಲ್ಲದೆ ಮೊಳಗಿದೆಯಾ ರಣಕಹಳೆ?
ಏನೂ ಮಾಡಲು ಆಗುತ್ತಿಲ್ಲ, ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನೀಗ ನಿಲ್ಲಿಸಲು ಆಗುತ್ತಿಲ್ಲ. ನೋಡ ನೋಡುತ್ತಲೇ ರಷ್ಯಾ & ಉಕ್ರೇನ್ ಯುದ್ಧ ಭರ್ಜರಿ ಎರಡು ವರ್ಷ ಪೂರೈಸಿದೆ. ಹೀಗೆ ಕಳೆದ 2 ವರ್ಷದಲ್ಲಿ ರಷ್ಯಾ ಹಾಗೂ ಉಕ್ರೇನ್ ಜನರು ನಲುಗಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವಾಗಲೇ ಮತ್ತೆ ಇಬ್ಬರ ನಡುವಿನ ಕಾದಾಟ ಹೆಚ್ಚಾಗಿದ್ದು, ಈ ಕಾರಣಕ್ಕೆ 3ನೇ ಮಹಾಯುದ್ಧದ ಭಯ ಕೂಡ ಜಗತ್ತಿನಾದ್ಯಂತ ಆವರಿಸಿದೆ.
ಯುದ್ಧ ನಡೆಯಬಾರದು, ಇದರಿಂದ ವಿನಾಶವೇ ಹೆಚ್ಚು ಎಂಬುದನ್ನ ಮನುಷ್ಯ ಈಗಾಗಲೇ ಕಲಿತಿದ್ದಾನೆ. ಆದರೂ ಯುದ್ಧಗಳನ್ನ ಸಂಪೂರ್ಣ ನಿಲ್ಲಿಸಲು ಮನುಷ್ಯ ಯಶಸ್ವಿ ಆಗಿಲ್ಲ & ಆಗುವುದೂ ಇಲ್ಲ ಎಂಬ ಆರೋಪಗಳು ಕೇಳಿಬರುತ್ತವೆ. ಈ ಆರೋಪಗಳ ನಡುವೆ ಇದೀಗ, ಮತ್ತಷ್ಟು ಕಿಚ್ಚು ಹೊತ್ತಿದೆ. ರಷ್ಯಾ ಪಡೆಗಳು ತಮ್ಮ ದಾಳಿಯನ್ನು ಮತ್ತಷ್ಟು ಭಿಕರಗೊಳಿಸಿ ಉಕ್ರೇನ್ ಜನರ ಪಾಲಿಗೆ ಕಂಟಕವಾಗಿವೆ ಎಂದು ಈಗ ಉಕ್ರೇನ್ ಆರೋಪ ಮಾಡುತ್ತಿದೆ. ಈ ಬೆಳವಣಿಗೆ ಮಧ್ಯೆ 3ನೇ ಮಹಾಯುದ್ಧ ನಡೆಯುವುದು ಗ್ಯಾರಂಟಿನಾ? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಮುಂದೆ ಓದಿ.

3 ವರ್ಷದ ಕಡೆ ಮುನ್ನುಗ್ಗಿದ ಯುದ್ಧ!
ಇಷ್ಟುದಿನ ಮಾಮೂಲಿ ದಾಳಿ ನಡೆಸುತ್ತಿದ್ದ ರಷ್ಯಾ ಈಗ ತನ್ನ ಉಗ್ರ ರೂಪ ತೋರಿಸುತ್ತಿದೆ. ಹೀಗೆ ತನ್ನ ಬಳಿ ಇರುವ ವಿನಾಶಕಾರಿ ಕ್ಷಿಪಣಿ ಡ್ರೋನ್ ಬಳಸಿ ಉಕ್ರೇನ್ ವಿರುದ್ಧ ದಾಳಿ ಆರಂಭಿಸಿದೆ. ಈ ಬೆಳವಣಿಗೆ ನಡುವೆ ರಷ್ಯಾ ದಾಳಿಗೆ ಉಕ್ರೇನ್‌ನ ಸಾಮಾನ್ಯ ಜನರು ಬಲಿಯಾಗಿದ್ದಾರೆ ಎಂದು ಉಕ್ರೇನ್ ಆರೋಪಿಸುತ್ತಿದೆ. ಜನ ವಸತಿ ಪ್ರದೇಶದ ಮೇಲೆ ಈ ರೀತಿ ರಷ್ಯಾ ದಾಳಿ ಮಾಡುತ್ತಿದೆ ಎಂಬ ಆರೋಪ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡುತ್ತಿದೆ. ಆದರೆ ರಷ್ಯಾ ಮಾತ್ರ ಈ ಆರೋಪಗಳು ಸುಳ್ಳು ಎನ್ನುತ್ತಿದೆ. ಈ ಮಧ್ಯೆ ನೋಡ ನೋಡುತ್ತಲೇ ಇಬ್ಬರ ನಡುವಿನ ಈ ಯುದ್ಧ 2 ವರ್ಷ ಪೂರೈಸಿ ಇದೀಗ 3 ವರ್ಷದ ಕಡೆಗೆ ಮುನ್ನುಗ್ಗುತ್ತಿದೆ.
ಏನ್ ಗುರೂ ಈ ಕಿತ್ತಾಟ?
ಅಂದಹಾಗೆ ಈಗ ಕೇಳಿಬರುತ್ತಿರುವ ಆರೋಪಗಳ ಪ್ರಕಾರ, ಪಾಶ್ಚಿಮಾತ್ಯ ದೇಶಗಳ ಯುದ್ಧದ ದಾಹ & ರಷ್ಯಾದ ಸಿಟ್ಟು ಉಕ್ರೇನ್ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ. ಮತ್ತೊಂದ್ಕಡೆ ಉಕ್ರೇನ್ ತನ್ನ ಸೇಡಿನ ಪರ್ವ ಮುಂದುವರಿಸಿದೆ. ಇಷ್ಟುದಿನ ರಷ್ಯಾದ ಗಡಿ ಭಾಗದ ಹಳ್ಳಿಗಳ ಮೇಲೆ ದಾಳಿ ನಡೆಸಿದ್ದ ಉಕ್ರೇನ್, ನೇರ ರಷ್ಯಾ ರಾಜಧಾನಿಗೆ ನುಗ್ಗಿ ಬಾಂಬ್ ಹಾಕುವ ಪ್ರಯತ್ನಗಳನ್ನು ಕೂಡ ಮುಂದುವರಿಸಿದೆ. ಹೀಗಾಗಿ ರಷ್ಯಾ ಕೂಡ ತನ್ನಲ್ಲಿರುವ ಅತ್ಯಾಧುನಿಕ ಅಸ್ತ್ರಗಳನ್ನೆಲ್ಲಾ ಬಳಸಿ ದಾಳಿ ಮಾಡುತ್ತಿದೆ. ಹೀಗಾಗಿ ನ್ಯೂಕ್ಲಿಯರ್ ವೆಪನ್ಸ್ ಬಳಕೆ ಆಗುತ್ತಾ? ಎಂಬ ಭಯ ಇದೀಗ ಆವರಿಸಿದೆ.
ಇದನ್ನೆಲ್ಲಾ ನೋಡುತ್ತಿದ್ರೆ ಈ ಯುದ್ಧವು ಇಷ್ಟಕ್ಕೇ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅತ್ತ ಅಮೆರಿಕ ಉಕ್ರೇನ್‌ಗೆ ಪರೋಕ್ಷ ಬೆಂಬಲ ನೀಡುತ್ತಾ ಆಟ ಆಡುತ್ತಿದೆ. ಇತ್ತ ರಷ್ಯಾ ಸೇನೆಯೂ, ತನ್ನ ಸೇಡು ತೀರಿಸಿಕೊಳ್ಳಲು ಪಣತೊಟ್ಟು ನಿಂತಿದೆ. ಹೀಗಾಗಿ ಎರಡು ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆ ಕೂಡ ನಡೆಯುವ ಸಾಧ್ಯತೆ ಇಲ್ಲ. ಇದೇ ರೀತಿ ಯುದ್ಧ ಮುಂದುವರಿಸಿದರೆ ಮುಂದೆ ಇದೆಲ್ಲಾ ನಾಗರಿಕತೆಯನ್ನು ವಿನಾಶದ ಅಂಚಿಗೆ ತಲುಪಿಸುವುದು ಗ್ಯಾರಂಟಿ.












Click it and Unblock the Notifications