ಉಕ್ರೇನ್ ಮೇಲೆ ಆಕ್ರಮಣ ಮಾಡುವ ಉದ್ದೇಶ ಹೊಂದಿಲ್ಲ: ರಷ್ಯಾ
ಮಾಸ್ಕೋ, ಜನವರಿ 28: ಉಕ್ರೇನ್ ಮೇಲೆ ಆಕ್ರಮಣ ಮಾಡುವ ಉದ್ದೇಶವನ್ನು ರಷ್ಯಾ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಚಿಂತನೆಯೂ ಸ್ವೀಕಾರಾರ್ಹವಲ್ಲ' ಎಂದು ರಷ್ಯಾ ವಿದೇಶಾಂಗ ಇಲಾಖೆ ವಕ್ತಾರರು ಹೇಳಿದ್ದಾರೆ.
2014 ರಲ್ಲಿ ಉಕ್ರೇನ್‌ನಿಂದ ಕ್ರಿಮಿಯಾವನ್ನು ವಶಪಡಿಸಿಕೊಂಡಿರುವ ರಷ್ಯಾ ಪೂರ್ವ ಉಕ್ರೇನ್‌ನಲ್ಲಿ ದಂಗೆಯನ್ನು ಬೆಂಬಲಿಸಿತ್ತು. ಸದ್ಯ ಉಕ್ರೇನ್ ಬಳಿಯ ತನ್ನ ಭೂಪ್ರದೇಶದಲ್ಲಿ ಮತ್ತು ನೆರೆಯ ಬೆಲಾರಸ್‌ನಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿ ಯುದ್ಧ ಭೀತಿಗೆ ಕಾರಣವಾಗಿದೆ ಎಂದು ಬ್ರಿಟನ್ ಆರೋಪಿಸಿತ್ತು.
'ಪೂರ್ವ ಉಕ್ರೇನ್‌ನಲ್ಲಿನ ಪ್ರತ್ಯೇಕತಾವಾದಿ ಸಂಘರ್ಷಕ್ಕೂ ರಷ್ಯಾಕ್ಕೂ ಯಾವುದೇ ಸಂಬಂಧವಿಲ್ಲ. ಅದೊಂದು ಅಂತರ್ಯುದ್ಧ' ಎಂಬ ರಷ್ಯಾದ ವಾದವನ್ನು ಉಕ್ರೇನ್ ತಿರಸ್ಕರಿಸಿದ್ದು, ರಷ್ಯಾವು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದೆ.

ಇನ್ನು ಇದಕ್ಕೂ ಮೊದಲು ಬುಧವಾರ ಪ್ಯಾರಿಸ್‌ನಲ್ಲಿ ಎಂಟು ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ ಎಲ್ಲಾ ಪಕ್ಷಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಇದೀಗ ಏರ್ಪಟ್ಟಿರುವ ಕದನ ವಿರಾಮದಲ್ಲಿ ಫ್ರಾನ್ಸ್ ಮತ್ತು ಜರ್ಮನಿ ಪ್ರಮುಖ ಪಾತ್ರ ವಹಿಸಿವೆ. ಎರಡೂ ದೇಶಗಳು ಬೇಷರತ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಫ್ರಾನ್ಸ್ ರಾಜತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವಾರಗಳ ನಂತರ ಬರ್ಲಿನ್‌ನಲ್ಲಿ ರಷ್ಯಾ- ಯುಕ್ರೇನ್ ಮತ್ತೊಂದು ಸಭೆ ನಡೆಸಲಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಕದನವಿರಾಮ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುವ ಭೀತಿ ನಿವಾರಣೆಯ ನಿಟ್ಟಿಯಲ್ಲಿ ಇದು ರಷ್ಯಾದಿಂದ ಹೊರಬಿದ್ದಿರುವ ಮತ್ತೊಂದು ಅಧಿಕೃತ ಹೇಳಿಕೆಯಾಗಿದೆ.
'ನಮ್ಮ ದೇಶವು ಯಾರ ಮೇಲೂ ಆಕ್ರಮಣ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ನಾವು ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ನಮ್ಮ ಜನರ ನಡುವಿನ ಯುದ್ಧದ ಚಿಂತನೆಯು ಸಹ ಸ್ವೀಕಾರಾರ್ಹವಲ್ಲ' ಎಂದು ಸಚಿವಾಲಯದ ವಕ್ತಾರ ಅಲೆಕ್ಸಿ ಜೈಟ್ಸೆವ್ ಹೇಳಿದರು.
ರಷ್ಯಾ ಮತ್ತು ಉಕ್ರೇನ್ ನಡುವೆ ಭಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಕ್ಷಣದಲ್ಲಿ ರಕ್ತಪಾತದ ಯುದ್ಧ ಆರಂಭವಾಗುವ ಭೀತಿ ಎದುರಾಗಿದೆ.
ಉಭಯ ದೇಶಗಳ ಗಡಿಯುದ್ದಕ್ಕೂ ಸೇನಾ ಪಡೆಗಳು ಜಮಾಯಿಸಿವೆ. ಹಲವು ತಿಂಗಳಿನಿಂದ ಉಕ್ರೇನ್ ಗಡಿಯಲ್ಲಿ ರಷ್ಯಾ ಪಡೆಗಳು ಬೀಡು ಬಿಟ್ಟಿರುವುದಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ರಷ್ಯಾ ಬೆದರಿಕೆ ಹಿನ್ನೆಲೆಯಲ್ಲಿ ಉಕ್ರೇನ್ ಪರವಾಗಿ ಅಮೆರಿಕ ತನ್ನ 8,500 ಪಡೆಗಳನ್ನು ನಿಯೋಜಿಸುತ್ತಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಇರುವುದು ಗಡಿ ಪ್ರದೇಶದ ವಿವಾದ. ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ನಿರ್ಣಾಯಕ ಬಫರ್ ಎಂದು ಮಾಸ್ಕೋವನ್ನು ಉಕ್ರೇನ್ ಪರಿಗಣಿಸಿದೆ. ಆದರೆ, ಉಕ್ರೇನ್ ಒಬ್ಬ ನುಸುಳುಕೋರನಾಗಿದ್ದು, ತನ್ನ ಭೂಪ್ರದೇಶದ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ರಷ್ಯಾ ಪ್ರತಿಪಾದಿಸಿದೆ.
ಮಹಾಯುದ್ಧ ಆತಂಕ ನಿಜವೇ?: ಕಪ್ಪು ಸಮುದ್ರಕ್ಕೆ ಯುದ್ಧನೌಕೆ ಕಳಿಸುವ ಚಿಂತನೆ ನಡೆಸುತ್ತಿದೆ ಅಮೆರಿಕ!
ಉಕ್ರೇನ್ 603,628 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ದೇಶವಾಗಿದ್ದು, ರಷ್ಯಾ ಮತ್ತು ಯುರೋಪ್ ನಡುವೆ ಇದೆ. ಇದು 1991ರವರೆಗೂ ಸೋವಿಯತ್ ಒಕ್ಕೂಟದ ಸದಸ್ಯ ದೇಶವಾಗಿತ್ತು. ರಷ್ಯಾ ಪರ ಹಾಗೂ ಯುರೋಪ್ ಪರ ಸ್ಥಿತಿಗಳ ನಡುವಿನ ವಿದೇಶಾಂಗ ನೀತಿಯಲ್ಲಿ ಸಿಲುಕಿರುವ ಉಕ್ರೇನ್ ಆರ್ಥಿಕತೆ ಸದಾ ಅಸ್ಥಿರತೆಯಿಂದ ಬಳಲುತ್ತಿದ್ದು, ಒಂದಿಲ್ಲೊಂದು ಸಂಕಷ್ಟಗಳಿಗೆ ಒಳಗಾಗುತ್ತಲೇ ಇದೆ.
ಯುರೋಪಿಯನ್ ಒಕ್ಕೂಟದ ಜತೆಗೆ ವ್ಯಾಪಕ ಆರ್ಥಿಕ ವಿಲೀನದ ಯೋಜನೆಗಳನ್ನು ತಿರಸ್ಕರಿಸುವುದನ್ನು ವಿರೋಧಿಸಿ 2013ರಲ್ಲಿ ಅಧ್ಯಕ್ಷ ವಿಕ್ಟೊರ್ ಯಾನುಕೊವ್ಚ್ ವಿರುದ್ಧ ಭಾರಿ ಪ್ರತಿಭಟನೆ ನಡೆದಿತ್ತು.
ಈ ಬಿಕ್ಕಟ್ಟಿನಲ್ಲಿ ರಷ್ಯಾವು ವಿಕ್ಟೊರ್ ಅವರನ್ನು ಬೆಂಬಲಿಸಿದ್ದರೆ, ಪ್ರತಿಭಟನಾಕಾರರನ್ನು ಅಮೆರಿಕ ಮತ್ತು ಯುರೋಪ್ ಬೆಂಬಲಿಸಿತ್ತು. ಮತ್ತಷ್ಟು ಪ್ರತಿಭಟನಾಕಾರರು ರಾಜಧಾನಿ ನಗರ ಕೀವ್‌ನಲ್ಲಿ ಪ್ರತಿಭಟನೆಗೆ ಧುಮುಕಿದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷ ತೀವ್ರವಾದಾಗ 2014ರಲ್ಲಿ ಯಾನುಕೊವ್ಚ್ ದೇಶದಿಂದ ಪರಾರಿಯಾಗಿದ್ದರು.












Click it and Unblock the Notifications