3ನೇ ಮಹಾಯುದ್ಧ: ರಂಜಕದ ಬಾಂಬ್ ಎಸೆಯಿತಾ ಉಕ್ರೇನ್?
ಉಕ್ರೇನ್: ರಷ್ಯಾ ಅಧ್ಯಕ್ಷರ ಪಿತ್ತ ನೆತ್ತಿಗೇರಿಸುವ ಕೆಲಸವನ್ನ ಉಕ್ರೇನ್ ಪದೇಪದೆ ಮಾಡುತ್ತಿದೆ. ಅದರಲ್ಲೂ ಪುಟಿನ್‌ರ ಕ್ರೆಮ್ಲಿನ್ ಮನೆ ಮೇಲೆ ದಾಳಿ ನಡೆದ ಕೆಲವೇ ದಿನದಲ್ಲಿ ಮತ್ತೊಂದು ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಈಗ ರಷ್ಯಾ ವಶದಲ್ಲಿ ಇರುವ ಬಖ್‌ಮತ್ ನಗರದ ಮೇಲೆ ಉಕ್ರೇನ್ ಸೇನೆ ರಂಜಕದ ಬಾಂಬ್ ಎಸೆದಿದೆ ಎಂಬ ಸ್ಫೋಟಕ ಆರೋಪ ಕೇಳಿಬಂದಿದ್ದು, ರಷ್ಯಾ ಸೇನೆ ಕೆರಳ ಕೆಂಡವಾಗಿದೆ.
ಬಖ್‌ಮತ್ ನಗರ ಉಕ್ರೇನ್‌ಗೆ ಸೇರಿದ್ದು, ಆದರೆ ಯುದ್ಧ ಆರಂಭವಾದ ನಂತರ ರಷ್ಯಾ ಬಖ್‌ಮತ್ ನಗರವನ್ನ ಆಕ್ರಮಣ ಮಾಡಿದೆ. ಹೀಗಾಗಿ ಬಖ್‌ಮತ್ ಸಿಟಿ ಮೇಲೆ ವಿನಾಶಕಾರಿ ರಂಜಕದ ಬಾಂಬ್ ಎಸೆದಿದೆ ಉಕ್ರೇನ್ ಸೇನೆ ಎಂಬ ಗಂಭೀರ ಆರೋಪವನ್ನ ರಷ್ಯಾ ಮಾಡಿದೆ. ಈ ಮೂಲಕ ಮೊದಲೇ ಹದಗೆಟ್ಟು ಹೋಗಿದ್ದ ಸ್ಥಿತಿಯನ್ನ ಉಕ್ರೇನ್ ಇನ್ನಷ್ಟು ಹಾಳು ಮಾಡಿರುವ ಆರೋಪ ಕೇಳಿಬಂದಿದೆ. ಗಡಿಯಲ್ಲಿ ಹೈಅಲರ್ಟ್ ಘೋಷಿಸಿರುವ ರಷ್ಯಾ ಪಡೆಗಳು ಉಕ್ರೇನ್ ಸೇನೆ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಸಜ್ಜಾಗಿದೆ.

ಅಮೆರಿಕದ ಸಹಾಯ, ಉಕ್ರೇನ್‌ಗೆ ಹುಮ್ಮಸ್ಸು!
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ನೀಡುತ್ತಿರುವ ಸಹಾಯವೇ ಉಕ್ರೇನ್ ಸೇನೆಯ ಈ ರೀತಿಯ ಕೃತ್ಯಗಳಿಗೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ರಷ್ಯಾ ಗಡಿಯಲ್ಲಿ ಉಕ್ರೇನ್ ಸೇನೆ ಭೀಕರ ದಾಳಿ ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಷ್ಯಾ ಸೇನೆ ಪಣತೊಟ್ಟಿದೆ. ಹೀಗೆ ಇಬ್ಬರ ಜಗಳದಲ್ಲಿ ಅಮಾಯಕರ ನೆಮ್ಮದಿಯೇ ಹಾಳಾಗಿ ಹೋಗುತ್ತಿದೆ. ಉಕ್ರೇನ್ & ರಷ್ಯಾ ಗಡಿಯಲ್ಲಿ ವಾಸ ಮಾಡುವ ಜನರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ.
ಮನಸ್ಸಿಗೆ ಬಂದಂತೆ ಉಕ್ರೇನ್ ದಾಳಿ?
ಉಕ್ರೇನ್ ಸೇನೆ ರಂಜಕದ ಬಾಂಬ್ ಎಸೆದಿರುವುದು ಮಾತ್ರವಲ್ಲ, ಮನಸ್ಸಿಗೆ ತೋಚಿದ್ದನ್ನ ಮಾಡುತ್ತಿದೆ ಎಂಬ ಆರೋಪ ಇದೆ. ರಷ್ಯಾ ಅಧ್ಯಕ್ಷ ಪುಟಿನ್‌ರ ಸರ್ಕಾರಿ ನಿವಾಸದ ಮೇಲೆ ನೇರವಾಗಿ ಬಾಂಬ್ ಹಾಕಿದ ಆರೋಪ ಮಾಡಲಾಗಿತ್ತು. ಮಾನವ ರಹಿತ ಡ್ರೋನ್ ಸಹಾಯದಿಂದ ಈ ದಾಳಿ ನಡೆದಿದ್ದು, ಅನುಮಾನಾಸ್ಪದ ರೀತಿಯಲ್ಲಿ 2 ಡ್ರೋನ್ ಪುಟಿನ್ ಮನೆ ಬಳಿ ಎಂಟ್ರಿ ಕೊಟ್ಟಿದ್ದೇ ತಡ ಎರಡೂ ಡ್ರೋನ್‌ಗಳನ್ನ ಉಡಾಯಿಸಿತ್ತು ರಷ್ಯಾ ಸೇನೆ. ಇದಾದ ಬಳಿಕ ವಿನಾಶಕಾರಿ ರಂಜಕದ ಬಾಂಬ್‌ನ ಬಖ್‌ಮತ್ ನಗರದ ಮೇಲೆ ಉಕ್ರೇನ್ ಸೇನೆ ಎಸೆದಿರುವ ಆರೋಪ ಕೇಳಿಬಂದಿದೆ.
ಅಮೆರಿಕದ ₹3 ಲಕ್ಷ ಕೋಟಿ ನೆರವು!
ರಷ್ಯಾ ಒಂದನ್ನ ಮುಗಿಸಿದರೆ ಅಮೆರಿಕ ವಿರುದ್ಧ ಮಾತನಾಡುವ ಯಾವುದೇ ದೇಶ ಉಳಿಯಲಾರದು. ಚೀನಾಗೆ ಆಘಾತ ನೀಡಿ ತಾನೇ ಪವರ್‌ಫುಲ್ ಆಗೋಕೆ ಅಮೆರಿಕ ಇನ್ನಿಲ್ಲದ ತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ನಡೆದುಕೊಳ್ಳುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ತನಗೇನೂ ಆಗದಿದ್ದರೂ ಮೂಗು ತೂರಿಸಿ, ಉಕ್ರೇನ್‌ಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ದಾನ ನೀಡಿದೆ. ಇದು ಅಮೆರಿಕ, ರಷ್ಯಾ ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ.

ಉಕ್ರೇನ್‌ಗೆ ವಿನಾಶಕಾರಿ ವೆಪನ್ಸ್ ದಾನ!
ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ ಅಮೆರಿಕ. ದಾನ ಕೊಡುತ್ತಿರುವ ಶಸ್ತ್ರಾಸ್ತ್ರಗಳಲ್ಲಿ, ಆಕಾಶದಿಂದಲೇ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಹೈಡ್ರಾ-70 ರಾಕೆಟ್‌ಗಳು ಕೂಡ ಸೇರಿವೆ. ಜೊತೆಗೆ ಮಿಸೈಲ್, ಬಾಂಬ್, ಮದ್ದುಗುಂಡು ಹೀಗೆ ಲೆಕ್ಕವಿಲ್ಲದಷ್ಟು ಶಸ್ತ್ರಾಸ್ತ್ರ ಅಮೆರಿಕದಿಂದ ಉಕ್ರೇನ್ ಉಗ್ರಾಣ ಸೇರುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾ ಕೂಡ ರೊಚ್ಚಿಗೇಳುತ್ತಿದೆ, ಹಾಗೇ ಸೈಲೆಂಟ್ ಆಗಿ ಇರಿ ಅಂತಾ ಅಮೆರಿಕಗೆ ಎಚ್ಚರಿಸುತ್ತಿದೆ.
ಉಕ್ರೇನ್ ಅಧ್ಯಕ್ಷ ರಷ್ಯಾ ಟಾರ್ಗೆಟ್?
ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಈ ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ರಷ್ಯಾ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಂಬುದನ್ನ ಈಗ ಪರೋಕ್ಷವಾಗಿ ತಿಳಿಸಿದೆ ರಷ್ಯಾ ಸೇನೆ. ಈ ಬೆಳವಣಿಗೆ ನಡುವೆ ಉಕ್ರೇನ್ ಸೇನೆ ರಂಜಕದ ಬಾಂಬ್ ಬಳಸಿ ರಷ್ಯಾ ಕೋಪವನ್ನ ಮತ್ತಷ್ಟು ಜಾಸ್ತಿ ಮಾಡುವ ಕೆಲಸಕ್ಕೆ ಕೈಹಾಕಿದಂತಾಗಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಅರೆಸ್ಟ್ ಆಗ್ತಾರಾ?
ಯುದ್ಧಾಪರಾಧದ ಆರೋಪಗಳ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದ ಬೆನ್ನಲ್ಲೇ ವ್ಲಾಡಿಮಿರ್ ಪುಟಿನ್ ಬಂಧನವಾಗುತ್ತಾ? ಎಂಬ ಪ್ರಶ್ನೆ ಮೂಡಿತ್ತು. ಆದರೆ ಅದು ಸಾಧ್ಯವಿಲ್ಲ, ಏಕೆಂದರೆ ಪುಟಿನ್ ವಿರುದ್ಧ ಐಸಿಸಿ ವಿಚಾರಣೆ ನಡೆಸುವ ಸಾಧ್ಯತೆ ತುಂಬಾ ಕಮ್ಮಿ. ಪೊಲೀಸ್ ಬಲವನ್ನೇ ಹೊಂದಿರದ ಐಸಿಸಿ ಪುಟಿನ್ ಬಂಧಿಸಲು ಆಗಲ್ಲ. ಆದರೆ ಈ ಆದೇಶದ ಮೂಲಕ ರಷ್ಯಾ ಅಧ್ಯಕ್ಷರ ಹೆಸರಿಗೆ ಹಿನ್ನಡೆ ತರಬಹುದು ಅಷ್ಟೇ. ಇದೀಗ ಉಕ್ರೇನ್ ಅಧ್ಯಕ್ಷ ಬೇರೆ ರೀತಿ ಆಟ ಶುರು ಮಾಡಿರುವುದು ರಷ್ಯಾ ರೊಚ್ಚಿಗೇಳುವಂತೆ ಮಾಡಿದೆ.
ಏನಿದು ಉಕ್ರೇನ್ ಅಧ್ಯಕ್ಷರ ಗೇಮ್?
ಉಕ್ರೇನ್ ಮೇಲಿನ ಆಕ್ರಮಣಕ್ಕೆ ಮತ್ತು ಯುದ್ಧ ಅಪರಾಧಗಳಿಗೆ ರಷ್ಯಾವನ್ನು ಹೊಣೆಯಾಗಿಸಲು ವಿಶೇಷ ನ್ಯಾಯಮಂಡಳಿ ರಚಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದು ಮೊದಲೇ ಹದಗೆಟ್ಟಿದ್ದ ರಷ್ಯಾ & ಉಕ್ರೇನ್ ಪರಿಸ್ಥಿತಿಯನ್ನ ಇನಷ್ಟು ಕೆಡಿಸಿ ಹಾಕಿದೆ. ಯುದ್ಧಾಪರಾಧದ ಆರೋಪಗಳ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿರುವ ಐಸಿಸಿಗೆ ಉಕ್ರೇನ್ ಅಧ್ಯಕ್ಷ ಭೇಟಿ ನೀಡಿ ಈ ರೀತಿ ಒತ್ತಾಯ ಮಾಡಿದ ಒಂದು ದಿನದ ಬಳಿಕ ರಂಜಕದ ಬಾಂಬ್ ಎಸೆದಿದೆ ಉಕ್ರೇನ್ ಸೇನೆ.
ಒಟ್ನಲ್ಲಿ ಉಕ್ರೇನ್ ಈ ರೀತಿ ತಾನು ವಶಕ್ಕೆ ಪಡೆದಿರುವ ಬಖ್‌ಮತ್ ನಗರದ ಮೇಲೆ ರಂಜಕದ ಬಾಂಬ್ ದಾಳಿ ನಡೆಸಿದ ಬಗ್ಗೆ ರಷ್ಯಾ ಅಧ್ಯಕ್ಷರು ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ರಷ್ಯಾ ಸೇನೆ ಮಾತ್ರ ಈ ಎಲ್ಲಾ ಘಟನೆಗಳನ್ನೂ ಲೆಕ್ಕ ಹಾಕಿ ಇಟ್ಟುಕೊಂಡಿದೆ. ಇನ್ನೇನು ಕೆಲವೇ ದಿನದಲ್ಲಿ ಉಕ್ರೇನ್‌ಗೆ ಅದರ ಲೆಕ್ಕ ಚುಕ್ತಾ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಇಬ್ಬರ ಘರ್ಷಣೆಯಲ್ಲಿ ಬಲಿಯಾಗುತ್ತಿರುವುದು ಮಾತ್ರ ಅಮಾಯಕರು ಎನ್ನುವುದೇ ದುರಂತ.












Click it and Unblock the Notifications