Narendra Modi: ಇತ್ತ ಶೇಖ್ ಹಸೀನಾಗೆ ಆಶ್ರಯ ನೀಡಿ, ಅತ್ತ ಬಾಂಗ್ಲಾ ಹಿಂದೂಗಳಿಗೆ ರಕ್ಷಣೆ ಕೊಡಿ ಎಂದ ಪ್ರಧಾನಿ ಮೋದಿ
ದೆಹಲಿ ಆಗಸ್ಟ್ 9: ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಘರ್ಷಣೆಯಿಂದಾಗಿ ಅಲ್ಲಿನ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಭಾರತಕ್ಕೆ ಆಗಮಿಸಿದ್ದಾರೆ. ಶೇಖ್ ಹಸೀನಾ ಪದಚ್ಯುತಿಯ ನಂತರ ಬಾಂಗ್ಲಾದಲ್ಲಿ ಆರ್ಥಿಕ ತಜ್ಞ ಮೊಹಮ್ಮದ್ ಯುನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಇತ್ತ ಶೇಖ್ ಹಸೀನಾಗೆ ಆಶ್ರಯ ನೀಡಿ, ಅತ್ತ ಬಾಂಗ್ಲಾ ಹಿಂದೂಗಳಿಗೆ ರಕ್ಷಣೆ ಕೊಡಿ ಎಂದು ಪ್ರಧಾನಿ ಮೋದಿ, ಯುನಸ್ ಅವರಿಗೆ ಶುಭ ಕೋರುವ ಮೂಲಕ ಮನವಿ ಮಾಡಿದ್ದಾರೆ.
ಹೌದು.. ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಪ್ರತಿಭಟನಾಕಾರರು ಹಿಂದೂಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಅಲ್ಲಿನ ಹಿಂಸೆಯನ್ನು ತಾಳಲಾರದೆ ಹಲವಾರು ಜನ ತಮ್ಮನ್ನು ಭಾರತಕ್ಕೆ ಮರಳಿ ಕರೆಸಿಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಜೊತೆಗೆ ಪತ್ರಗಳನ್ನು ಬರೆಯುವ ಮೂಲಕ ತಮ್ಮ ಸಂಕಷ್ಟವನ್ನು ಹಂಚಿಕೊಳ್ಳುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳ ಮೊಮ್ಮಕ್ಕಳಿಗೆ ಮೀಸಲಾತಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಬಾಂಗ್ಲಾದಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ಹಿಂಸಾಚಾರಕ್ಕೆ ತಿರುಗಿತು. ಇದರಿಂದಾಗಿ ಶೇಖ್ ಹಸೀನಾ ಸೋಮವಾರದಂದು ರಾಜೀನಾಮೆ ನೀಡಬೇಕಾಯಿತು.
My best wishes to Professor Muhammad Yunus on the assumption of his new responsibilities. We hope for an early return to normalcy, ensuring the safety and protection of Hindus and all other minority communities. India remains committed to working with Bangladesh to fulfill the…
— Narendra Modi (@narendramodi) August 8, 2024
ಬಳಿಕ ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಯೂನಸ್‌ಗೆ ಪ್ರಧಾನಿ ನರೇಂದ್ರ ಮೊದಿ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಬಾಂಗ್ಲಾ ಸಹಜತೆ ಶೀಘ್ರವಾಗಿ ಮರುಸ್ಫಾಪನೆಯಾಗಲಿದೆ ಎಂಬ ವಿಶ್ವಾಸ ಭಾರತಕ್ಕೆ ಇದೆ. ಅಲ್ಲಿ ಸಹಜ ಸ್ಥಿತಿಗೆ ಎಲ್ಲವೂ ಮರಳಿದರೆ ಹಿಂದೂಗಳೂ ಸೇರಿದಂತೆ ಇತರ ಅಲ್ಪಸಂಖ್ಯಾತರ ರಕ್ಷಣೆಯು ಖಾತ್ರಿಯಾಗಲಿದೆ ಎಂದು ಹೇಳಿದ್ದಾರೆ.
ಇನ್ನೂ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಜನರ ಮೇಲಿನ ದಾಳಿಗಳು ಮತ್ತು ಅವರ ಅಂಗಡಿಗಳು ಹಾಗೂ ಪೂಜಾ ಸ್ಥಳಗಳನ್ನು ಧ್ವಂಸಗೊಳಿಸುವುದರ ಬಗ್ಗೆ ನವದೆಹಲಿ ಕಳವಳ ವ್ಯಕ್ತಪಡಿಸಿದೆ.

ಹಸೀನಾ ಪ್ರಸ್ತುತ ಭಾರತದ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಅಜ್ಞಾತ ಸ್ಥಳದಲ್ಲಿದ್ದಾರೆ. ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಕೂಡಲೆ, ಬಾಂಗ್ಲಾದೇಶದ ರಾಜಧಾನಿಯಲ್ಲಿರುವ ಅವರ ಅಧಿಕೃತ ನಿವಾಸ, ಗಣ ಭವನ. ಪ್ರತಿಭಟನಾ ಗುಂಪುಗಳಿಂದ ದಾಳಿಗೊಳಗಾದವು. ಇದಾದ ಕೆಲವೇ ಗಂಟೆಗಳಲ್ಲಿ ಅವರು ಢಾಕಾದಿಂದ ಹೊಸ ದೆಹಲಿ ಬಳಿಯ ಹಿಂಡನ್‌ನಲ್ಲಿರುವ ಭಾರತೀಯ ಏಟ್ ಫೋರ್ಸ್ ಬೇಸ್‌ಗೆ ಮಿಲಿಟರಿ ವಿಮಾನದಲ್ಲಿ ಬಂದಿಳಿದಿದ್ದಾರೆ.
ಹಸೀನಾ ಆಶ್ರಯಕ್ಕಾಗಿ ಬ್ರಿಟನ್ ಹಾಗೂ ಅಮೆರಿಕಕ್ಕೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿದ್ದು ಭಾರತ ಅವರ ಆಶ್ರಯಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಅವರು ಭಾರತದಿಂದ ಯಾವಾಗ ಹಿಂದಿರುಗುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೇಳಿದ್ದಾರೆ. ಅದಾಗ್ಯೂ ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯ ವರದಿಗಳ ಕುರಿತು ಪ್ರತಿಕ್ರಿಯಿಸಿದ ಎಂಇಎ ವಕ್ತಾರರು, ಭಾರತ ಅಲ್ಲಿನ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದರು.
ಭಾರತೀಯ ರಾಯಭಾರ ಕಚೇರಿಗಳು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಆ ದೇಶದಲ್ಲಿ ನೆಲೆಸಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರ ಸಂಪರ್ಕದಲ್ಲಿದೆ ಎಂದು ಅವರು ತಿಳಿಸಿದರು.












Click it and Unblock the Notifications