Pope Francis: ಕ್ರೈಸ್ತ ಸಮುದಾಯದ ಪ್ರಭಾವಿ ಧರ್ಮಗುರು ಪೋಪ್ ಫ್ರಾನ್ಸಿಸ್ ನಿಧನ!
Pope Francis Died: ಕ್ರೈಸ್ತ ಸಮುದಾಯದ ಪ್ರಭಾವಿ ಧರ್ಮಗುರು ಹಾಗೂ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥರೂ ಆಗಿರುವ ಪೋಪ್ ಫ್ರಾನ್ಸಿಸ್ ಅವರು ಸೋಮವಾರ (ಏಪ್ರಿಲ್ 21) ನಿಧನರಾಗಿದ್ದಾರೆ. ಪೋಪ್ ಅವರಿಗೆ ವಿಶ್ವದಾದ್ಯಂತ ಲಕ್ಷಾಂತರ ಕ್ರೈಸ್ತ ಸಮುದಾಯದ ಅಭಿಮಾನಿಗಳು ಇದ್ದಾರೆ. ಪೋಪ್ ಅವರು ಕಳೆದ ಕೆಲವು ತಿಂಗಳುಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರು ಹಾಗೂ ಕ್ರೈಸ್ತ ಧರ್ಮದ ಪ್ರಭಾವಿ ಮತ್ತು ಪರಮೋಚ್ಚ ನಾಯಕರಾಗಿರುವ ಅವರ ನಿಧನಕ್ಕೆ ವಿಶ್ವದಾದ್ಯಂತ ಜನ ಕಂಬನಿ ಮಿಡಿದ್ದಿದ್ದಾರೆ. ನೆನ್ನೆಯಷ್ಟೇ ಪೋಪ್ ಫ್ರಾನ್ಸಿಸ್ ಅವರು ಭಾಷಣ ಮಾಡಿದ್ದರು. ಸೋಮವಾರ ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾನಲ್ಲಿರುವ ಅವರ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

ಧರ್ಮಗುರು ಕಾರ್ಡಿನಲ್ ಫಾರೆಲ್ ಅವರು ಪೋಪ್ ಫ್ರಾನ್ಸಿಸ್ ಅವರ ನಿಧನದ ಬಗ್ಗೆ ಸಂದೇಶವನ್ನು ಹಂಚಿಕೊಂಡಿದ್ದಾರೆ. "ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಪವಿತ್ರ ಪರಮೋಚ್ಚ ಧರ್ಮಗುರುಗಳಾದ ಫ್ರಾನ್ಸಿಸ್ ಅವರು ನಮ್ಮನ್ನು ಅಗಲಿದ್ದಾರೆ ಎನ್ನುವ ದುಃಖದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇಂದು ಬೆಳಿಗ್ಗೆ (ಸ್ಥಳೀಯ ಸಮಯ) 7:35 ಕ್ಕೆ ರೋಮ್‌ನ ಬಿಷಪ್ ಫ್ರಾನ್ಸಿಸ್ ಅವರನ್ನು ನೋಡುವುದಕ್ಕೆ ಹೋದಾಗ ಈ ವಿಷಯ ತಿಳಿದಿದೆ. ಅವರು ತಮ್ಮ ಇಡೀ ಜೀವನವು ಭಗವಂತ ಮತ್ತು ಅವರ ಚರ್ಚ್‌ನ ಸೇವೆಗೆ ಸಮರ್ಪಿತವಾಗಿತ್ತು'' ಎಂದು ಅವರು ಸ್ಮರಿಸಿದ್ದಾರೆ.
" ಮೌಲ್ಯಯುತ, ನಿಷ್ಠೆ, ಧೈರ್ಯ ಮತ್ತು ಸರ್ವರನ್ನೂ ಪ್ರೀತಿಯಿಂದ ಕಾಣುವ ಪಾಠವನ್ನು ಅವರು ಕಲಿಸಿದ್ದರು. ವಿಶೇಷವಾಗಿ ಬಡವರು ಮತ್ತು ಅತ್ಯಂತ ಸಂಕಷ್ಟದಲ್ಲಿರುವವರ ಪರವಾಗಿ ಬದುಕುವುದನ್ನು ನಮಗೆ ಕಲಿಸಿದ್ದರು." ಎಂದು ಹೇಳಿಕೊಂಡಿದ್ದಾರೆ.
ದೀರ್ಘಕಾಲದ ಅನಾರೋಗ್ಯ ಸಮಸ್ಯೆ: ಇನ್ನು ಪೋಪ್ ಫ್ರಾನ್ಸಿಸ್ ಅವರು ದೀಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ಇವರು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೆರಿನ್ ನಾಯಕ ಎನ್ನುವ ಖ್ಯಾತಿಯನ್ನೂ ಹೊಂದಿದ್ದರು. ಕಳೆದ 12 ವರ್ಷಗಳಿಂದಲೂ ಪೋಪ್ ಹುದ್ದೆಯಲ್ಲಿದ್ದ ಅವರು ಇತ್ತೀಚಿನ ದಿನಗಳಲ್ಲಿ ತೀವ್ರ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಸಂತಾಪ
ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೀವ್ರ ನೋವಾಗಿದೆ. ಈ ದುಃಖದ ಘಳಿಗೆಯಲ್ಲಿ ವಿಶ್ವದ ಕ್ಯಾಥೋಲಿಕ್ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಸ್ಮರಿಸುತ್ತಾರೆ. ಅವರ ಕರುಣೆ, ನಮ್ರತೆ ಮತ್ತು ಆಧ್ಯಾತ್ಮಿಕ ವಿಷಯಗಳ ದೀಪಸ್ತಂಭವಾಗಿ ಯಾವಾಗಲೂ ಸ್ಮರಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೂ, ಅವರು ಭಗವಂತ ಕ್ರಿಸ್ತನ ಆದರ್ಶಗಳನ್ನು ಅರಿತುಕೊಳ್ಳಲು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಅವರು ಬಡವರು ಮತ್ತು ದೀನದಲಿತರಿಗೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ಸಂಕಷ್ಟದಲ್ಲಿರುವವರಿಗೆ ಅವರು ಭರವಸೆಯ ಮನೋಭಾವವನ್ನು ಬೆಳಸಿದ್ದರು.
ನಾನು ಅವರೊಂದಿಗಿನ ಭೇಟಿಯ ಕ್ಷಣಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅವರ ಬದ್ಧತೆಯ ಗುಣಗಳಿಂದ ಹೆಚ್ಚು ಪ್ರೇರಿತನಾಗಿದ್ದೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಯಾವಾಗಲೂ ಸ್ಮರಿಸಲ್ಪಡುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.












Click it and Unblock the Notifications