ಪ್ಯಾಂಡೋರಾ ಪೇಪರ್ ಸೋರಿಕೆ: ವರದಿಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಆಪ್ತರ ಹೆಸರು ಉಲ್ಲೇಖ
ಇಸ್ಲಾಮಾಬಾದ್, ಅಕ್ಟೋಬರ್ 04: ಪ್ಯಾಂಡೋರಾ ಪೇಪರ್ ಸೋರಿಕೆ ಪ್ರಕರಣದಲ್ಲಿ ಹಲವಾರು ಶ್ರೀಮಂತರ ಆರ್ಥಿಕ ಗುಟ್ಟು ರಟ್ಟಾಗಿದೆ. ಪ್ಯಾಂಡೋರಾ ಪೇಪರ್ ಸೋರಿಕೆಯಾಗಿ ಸುಮಾರು ನೂರು ಕೋಟ್ಯಾಧಿಪತಿಗಳ, 30 ಅಂತಾರಾಷ್ಟ್ರೀಯ ನಾಯಕರ ಹಾಗೂ 300 ಸಾರ್ವಜನಿಕ ಅಧಿಕಾರಿಗಳ ಆರ್ಥಿಕ ವ್ಯವಹಾರದ ಲಕ್ಷಾಂತರ ದಾಖಲೆಗಳು ಬಹಿರಂಗವಾಗಿದೆ. ಈ ನಾಯಕರುಗಳ ಕಡಲಾಚೆಯ ವ್ಯವಹಾರಗಳು ಮತ್ತು ಸ್ವತ್ತುಗಳ ವಿವರವನ್ನು ಈ ದಾಖಲೆಗಳು ಹೊಂದಿದೆ ಎಂದು ಈ ತನಿಖಾ ವರದಿಯು ಹೇಳಿದೆ. ಇನ್ನು ಈ ಪ್ಯಾಂಡೋರಾ ಪೇಪರ್ ಸೋರಿಕೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಪ್ತರ ಹೆಸರು ಕೂಡಾ ಕಾಣಿಸಿಕೊಂಡಿದೆ.
ಇನ್ನು ಈ ಪ್ಯಾಂಡೋರಾ ಸೋರಿಕೆಯಲ್ಲಿ ಸುಮಾರು 11.9 ಮಿಲಿಯನ್ ದಾಖಲೆ ಇದೆ. ಇದು ಪನಾಮ, ದುಬೈ, ಮೊನಾಕೊ, ಸ್ವಿಟ್ಜರ್‌ಲ್ಯಾಂಡ್ ಮತ್ತು ಕೇಮನ್ ದ್ವೀಪಗಳಂತಹ ಪ್ರದೇಶದಲ್ಲಿ ಕಡಲಾಚೆಯ ವ್ಯವಹಾರ ಹಾಗೂ ಟ್ರಸ್ಟ್‌ಗಳನ್ನು ರಚಿಸಲು ಶ್ರೀಮಂತ ಗ್ರಾಹಕರಿಂದ ನೇಮಕಗೊಂಡ ಕಂಪನಿಗಳ 11.9 ಮಿಲಿಯನ್ ದಾಖಲೆ ಇದಾಗಿದೆ. ಈ ತನಿಖೆಯನ್ನು ಸುಮಾರು 600 ಪತ್ರಕರ್ತರು ಸೇರಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಬಯಲಾದ ಪೆಗಾಸಸ್ ಹಗರಣದ ನೆನಪನ್ನು ಈ ಅತೀ ದೊಡ್ಡ ಸೋರಿಕೆಯು ತಂದಿದೆ.
ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟವು ಭಾನುವಾರ ಈ ತನಿಖಾ ವರದಿಯನ್ನು ಪ್ರಕಟ ಮಾಡಿದೆ. ಇದಕ್ಕೆ "ಪ್ಯಾಂಡೋರಾ ಪೇಪರ್ಸ್" ಎಂದು ಹೆಸರಿಡಲಾಗಿದೆ. ಈ ತನಿಖೆಯಲ್ಲಿ 600 ಪತ್ರಕರ್ತರು ಒಳಗೊಂಡಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಹಾಗೂ ದಿ ಗಾರ್ಡಿಯನ್‌ನ ಪತ್ರಕರ್ತರು ಈ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ವಿಶ್ವದ ಸುಮಾರು 14 ಆರ್ಥಿಕ ಸಂಸ್ಥೆಗಳ 11.9 ಮಿಲಿಯನ್ ದಾಖಲೆಯ ಬಗ್ಗೆ ಈ ವರದಿ ಮಾಡಲಾಗಿದೆ.

ಏನಿದು ಪ್ಯಾಂಡೋರಾ ಪೇಪರ್ ಸೋರಿಕೆ?
ಇಮೇಲ್‌ಗಳು, ಮೆಮೊಗಳು, ಇನ್‌ಕಾರ್ಪೋರೇಷನ್ ದಾಖಲೆಗಳು, ಶೇರ್ ಮಾಡಲಾದ ಪ್ರಮಾಣ ಪತ್ರಗಳು, ಅನುಸರಣೆ ವರದಿಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳ ದಾಖಲೆಗಳು ಆಗಿದೆ. ಈ ಸೋರಿಕೆಯು ಈವರೆಗೂ ಅಪಾರದರ್ಶಕವಾಗಿದ್ದ ಸಂಸ್ಥೆಗಳ ನಿಜವಾದ ಮಾಲಿಕರು ಯಾರು ಎಂಬುವುದನ್ನು ಬಯಲಿಗೆ ಎಳೆದಿದೆ. ಈ ದಾಖಲೆಗಳು ವಾಷಿಂಗ್ಟನ್‌ನಲ್ಲಿ ತನಿಖಾ ಪತ್ರಕರ್ತರ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಸೋರಿಕೆಯಾಗಿ ಲಭಿಸಿದೆ. ಈ ತನಿಖೆಯಲ್ಲಿ ದಿ ಗಾರ್ಡಿಯನ್, ವಾಷಿಂಗ್ಟನ್ ಪೋಸ್ಟ್, ಲೆ ಮೋಂಡೆ, ಬಿಬಿಸಿ ಪನೋರಮಾ ಸೇರಿದೆ. 600 ಕ್ಕೂ ಅಧಿಕ ಪತ್ರಕರ್ತರು ಈ ತನಿಖೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಈ ಸೋರಿಕೆಯು ಈವರೆಗಿನ ಅತೀ ದೊಡ್ಡ ದಾಖಲೆ ಸೋರಿಕೆ ಎಂದು ಹೇಳಲಾಗಿದೆ. 2013 ರಿಂದ ಈವರೆಗಿನ ಅತೀ ದೊಡ್ಡ ಸೋರಿಕೆ ಎಂದು ಗುರುತಿಸಲಾಗಿದೆ.
ಸುಮಾರು 35 ಅಂತಾರಾಷ್ಟ್ರೀಯ ನಾಯಕರ ಆರ್ಥಿಕ ಮಾಹಿತಿಗಳು ಇದರಲ್ಲಿ ಇದೆ. ಇದರಲ್ಲಿ ಪ್ರಸ್ತುತ ಪ್ರಧಾನ ಮಂತ್ರಿ, ಅಧ್ಯಕ್ಷರುಗಳು ಹಾಗೂ ವಿವಿಧ ದೇಶಗಳ ಮುಖ್ಯಸ್ಥರ ಆರ್ಥಿಕ ಗುಂಟು ಇದೆ ಎನ್ನಲಾಗಿದೆ. ಸಚಿವರುಗಳು, ನ್ಯಾಯಾಧೀಶರು, ಮೇಯರ್‌ಗಳು ಹಾಗೂ ಮಿಲಿಟರಿ ಜನರಲ್‌ಗಳು ಸೇರಿ 90 ಕ್ಕೂ ಅಧಿಕ ದೇಶಗಳ 300 ಕ್ಕೂ ಅಧಿಕ ಸಾರ್ವಜನಿಕ ಅಧಿಕಾರಿಗಳ ಆರ್ಥಿಕ ಮಾಹಿತಿ ಇದರಲ್ಲಿ ಇದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಪ್ತರ ಹೆಸರು
ಇನ್ನು ನೂರು ಕೋಟ್ಯಾಧಿಪತಿಗಳ ಪೈಕಿ ಹಲವಾರು ಸೆಲೆಬ್ರೆಟಿಗಳು ಇದ್ದಾರೆ. ಆಸ್ತಿ ಮತ್ತು ವಿಹಾರ ನೌಕೆಗಳಂತಹ ಐಷಾರಾಮಿ ವಸ್ತುಗಳನ್ನು ಹಾಗೂ ಯಾರಿಗೂ ತಿಳಿಯದ ಬ್ಯಾಂಕ್ ಖಾತೆಗಳನ್ನು ಹೊಂದಲು ಅನೇಕ ಮಂದಿ ಕಂಪನಿಗಳನ್ನು ಬಳಸಿಕೊಂಡಿದ್ದಾರೆ ಎಂಬುವುದು ಬಹಿರಂಗವಾಗಿದೆ. ಇನ್ನು ಈ ಮೂಲಕ ಬಹಿರಂಗವಾದ 700 ಕ್ಕೂ ಹೆಚ್ಚು ಪಾಕಿಸ್ತಾನಿಗಳಲ್ಲಿ ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ರ ಆಂತರಿಕ ವಲಯದ ಪ್ರಮುಖ ಸದಸ್ಯರು ಕೂಡಾ ಸೇರಿದ್ದಾರೆ. ಹಣಕಾಸು ಸಚಿವ ಶೌಕತ್ ತಾರಿನ್, ಜಲಸಂಪನ್ಮೂಲ ಸಚಿವ ಮೂನಿಸ್ ಎಲಾಹಿ, ಸೆನೆಟರ್ ಫೈಸಲ್ ವಾವ್ಡಾ, ಕೈಗಾರಿಕೆ ಮತ್ತು ಉತ್ಪಾದನೆ ಸಚಿವರಾದ ಖುಸ್ರೋ ಬಕ್ತಿಯಾರ್ ಕುಟುಂಬದ ಹೆಸರು ಇದೆ ಎನ್ನಲಾಗಿದೆ. ಈ ತನಿಖೆಯಲ್ಲಿ ಪಾಕಿಸ್ತಾನಿ ವರದಿಗಾರ ಉಮಾರ್ ಚೀಮಾ ಈ ತನಿಖೆಯಲ್ಲಿ ಸೇರಿದ್ದಾರೆ. ಹಾಗೆಯೇ ಫಖರ್ ದುರಾನಿ ಕೂಡಾ ಇದ್ದರು ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಪಾಕಿಸ್ತಾನದ ಉಮಾರ್ ಚೀಮಾ, "ನಾವು ಲಿಖಿತ ಪ್ರಶ್ನೆಯನ್ನು ಕಳಿಸಿದ್ದೆವು. ಕೆಲವರನ್ನು ಫೋನ್‌ನಲ್ಲಿ ಸಂಪರ್ಕ ಮಾಡಿದೆವು. ನಾವು ತನಿಖೆಯ ಬಗ್ಗೆ ಹೇಳಿದೆವು. ಕೆಲವರು ಇಮೇಲ್ ಐಡಿ ನೀಡಲು ಒಪ್ಪಲಿಲ್ಲ. ಇನ್ನೂ ಕೆಲವರನ್ನು ವಾಟ್ಸ್‌ಆಪ್ ಮೂಲಕ ಸಂಪರ್ಕ ಮಾಡಲಾಗಿದೆ," ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ರ ಆಪ್ತರ ಹೆಸರು ಉಲ್ಲೇಖದ ಬಗ್ಗೆ ಮಾತನಾಡಿದ ಚೀಮಾ, "ಪ್ರಧಾನ ಮಂತ್ರಿ ವಕ್ತಾರರಿಗೆ ಪ್ರಶ್ನೆಯನ್ನು ವಿಳಾಸಕ್ಕೆ ಕಳುಹಿಸಲಾಗಿತ್ತು.ಬೇರೆ ಮೂರು ನಾಲ್ಕು ವಿಳಾಸಗಳು ಇರಬಹುದು," ಎಂದಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications