Pakistan Train Accident: ರೈಲು ಅಪಘಾತಕ್ಕೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿಕೆ
ಕರಾಚಿ: ಪಾಕಿಸ್ತಾನದ ಜನರಿಗೆ ನೆಮ್ಮದಿಯೇ ಇಲ್ಲ, ಹೇಗೆಂದರೆ ಒಂದು ಕಡೆ ಉಗ್ರರ ದಾಳಿ ಆರ್ಭಟ. ಇನ್ನೊಂದು ಕಡೆ ಅರಾಜಕತೆಯ ಕಾಟ. ಇದೆಲ್ಲಾ ಸಾಲದು ಎಂಬಂತೆ ಪಾಕ್‌ನ ಸಾರಿಗೆ ಸಂಪರ್ಕ ವ್ಯವಸ್ಥೆ ಕೂಡ ಅರಾಜಕೀಯದ ನಡುವೆ ಕಳೆದು ಹೋಗಿದೆ. ಈ ಮಧ್ಯೆ ನಿನ್ನೆ ಸಂಭವಿಸಿದ್ದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗಿದೆ.
ಹೌದು ಪಾಕಿಸ್ತಾನದಲ್ಲಿ ನಿನ್ನೆ ಸಂಭವಿಸಿದ್ದ ಭೀಕರ ಘಟನೆ ನಂತರ ಇಡೀ ಜಗತ್ತು ಕಂಬನಿ ಮಿಡಿದಿತ್ತು. ಸಿಂಧ್ ಪ್ರಾಂತ್ಯದಲ್ಲಿ ಸಂಭವಿಸಿದ್ದ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಹಲವರು ಮೃತಪಟ್ಟು, ಹತ್ತಾರು ಮಂದಿ ಗಾಯಗೊಂಡಿದ್ದರು. ಇದೀಗ ಸಾವಿನ ಸಂಖ್ಯೆ 30ಕ್ಕೆ ಏರಿಕೆ ಆಗಿದ್ದು, 80 ಜನರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಸಚಿವ ಸಾದ್ ರಫೀಕ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಕರಾಚಿಯಿಂದ ರಾವಲ್ಪಿಂಡಿಯ ಕಡೆಗೆ ಹೊರಟಿದ್ದ ಹಜಾರಾ ಎಕ್ಸ್‌ಪ್ರೆಸ್ ರೈಲು ನವಾಬ್ ಶಾ ಜಿಲ್ಲೆ ಬಳಿ ನಿನ್ನೆ ಹಳಿತಪ್ಪಿತ್ತು. ನೋಡ ನೋಡ್ತಿದ್ದಂತೆ ಹಲವು ಜನರು ಸ್ಥಳದಲ್ಲೇ ಉಸಿರು ಚೆಲ್ಲಿದ್ದರು.

ರೈಲ್ವೆ ವ್ಯವಸ್ಥೆಯಲ್ಲೂ ದೋಷ ಇದೆಯಾ?
ಪಾಕಿಸ್ತಾನದಲ್ಲಿ ಯಾವುದು ಚೆನ್ನಾಗಿದೆ ಹೇಳಿ? ಅಲ್ಲಿ ಎಲ್ಲವೂ ಅಯೋಮಯ. ಶ್ರೀಮಂತ ಕುಳಗಳಿಗೆ ಅದ್ಧೂರಿ ಜೀವನ, ಅದೇ ಬಡವರ ಜೀವಕ್ಕೆ ಬೆಲೆ ಇಲ್ಲ. ಪರಿಸ್ಥಿತಿ ಹೀಗಿದ್ದಾಗ ಯಾರ ಬಳಿ ನ್ಯಾಯ ಕೇಳುವುದು. ಈಗ ಸಂಭವಿಸಿರುವ ರೈಲ್ವೆ ಅಪಘಾತ ಕೂಡ ಅಲ್ಲಿನ ವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ. ರೈಲ್ವೆ ಚಾಲಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಕಾರ, ರೈಲಿನ ಗರಿಷ್ಠ ವೇಗ ಗಂಟೆಗೆ 105 ಕಿಲೋ ಮೀಟರ್. ಆದ್ರೆ ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ ಕೇವಲ 50 ಕಿಲೋ ಮೀಟರ್ ವೇಗದಲ್ಲಿತ್ತು ಎನ್ನಲಾಗಿದೆ. 19 ಬೋಗಿಗಳಲ್ಲಿ 10 ಬೋಗಿ ಹಳಿತಪ್ಪಿದ್ದು, ತನಿಖೆ ನಡೆಯುತ್ತಿದೆ.
ಬಡವರ ಬಗ್ಗೆ ಕಾಳಜಿಯೇ ಇಲ್ವಾ?
ಆದರೆ ಇನ್ನೊಂದು ಕಡೆ ಪಾಕಿಸ್ತಾನದ ರೈಲ್ವೆ ಹಳಿಯಲ್ಲೇ ದೋಷ ಇದೆ ಎಂಬ ಆರೋಪ ಕೇಳಿಬಂದಿದೆ. ಹಳಿಗಳ ಸಮಸ್ಯೆ ಜೊತೆಯಲ್ಲೇ ಪಾಕಿಸ್ತಾನದಲ್ಲಿ ರೈಲುಗಳ ಹಳೇ ಇಂಜಿನ್ ಮತ್ತು ಸಿಗ್ನಲ್ ಸಮಸ್ಯೆಗಳು ಕೂಡ ಅಪಘಾತಕ್ಕೆ ಕಾರಣವೆಂಬ ಆರೋಪ ಇದೆ. ಇಂತಹ ಆರೋಪಗಳು ಮೊದಲಿಂದ ಕೇಳಿಬರುತ್ತಿದ್ರು, ಅಲ್ಲಿನ ಆಳುವ ಜನರು ಅಂದರೆ ಪಾಕಿಸ್ತಾನ ರಾಜಕಾರಣಿಗಳಿಗೆ ಬಡವರ ಬಗ್ಗೆ ಅಥವಾ ತಮ್ಮ ಪ್ರಜೆಗಳ ಬಗ್ಗೆ ಕಾಳಜಿ ಇದ್ದಂತೆ ಕಾಣ್ತಿಲ್ಲ ಈ ಕಾರಣಕ್ಕೆ ಹೀಗಾಗಿದೆ ಅಂತಿದ್ದಾರೆ ಜನ.

ಒಂದು ಸಾವಿರ ಜನರ ಜೀವ ಅಪಾಯಕ್ಕೆ!
ಅಷ್ಟಕ್ಕೂ ಇದೀಗ ಅಪಘಾತಕ್ಕೆ ತುತ್ತಾಗಿರುವ ರೈಲಿನಲ್ಲಿ ಸುಮಾರು ಒಂದು ಸಾವಿರ ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಹಲವು ಪ್ರಯಾಣಿಕರು ರೈಲು ಬೋಗಿಗಳಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪಾಕ್ ಸರ್ಕಾರ ಸ್ಪಷ್ಟನೆ ನೀಡಿದೆ. ಕರಾಚಿಯಿಂದ 275 ಕಿಲೋ ಮೀಟರ್ ದೂರದಲ್ಲಿ ರೈಲು ಅಪಘಾತ ಸಂಭವಿಸಿದೆ. ಇನ್ನು ರೈಲ್ವೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಂಡ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ, ಆದರೆ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.












Click it and Unblock the Notifications