ಪಾಕಿಸ್ತಾನ ಉಗ್ರರ ದಾಳಿ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಮೇಲೆ ಗುಂಡು ಹಾರಿಸಿ ಹತ್ಯೆ
ಇಸ್ಲಾಮಾಬಾದ್ ಅಕ್ಟೋಬರ್ 15: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಶುಕ್ರವಾರ ಮಸೀದಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಖರನ್ ಪ್ರದೇಶದ ಮಸೀದಿಯ ಹೊರಗೆ ಮುಹಮ್ಮದ್ ನೂರ್ ಮೆಸ್ಕಂಜೈ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದಾರೆ. ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖರಾನ್ ಪೊಲೀಸ್ ವರಿಷ್ಠಾಧಿಕಾರಿ ಆಸಿಫ್ ಹಲೀಮ್ ತಿಳಿಸಿದ್ದಾರೆ. ಘಟನೆಯ ಬಳಿಕ ಮಾಜಿ ಮುಖ್ಯ ನ್ಯಾಯಮೂರ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಗಾಯಗೊಂಡು ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
"ನಿರ್ಭೀತ ನ್ಯಾಯಾಧೀಶರ" ಸಾವಿಗೆ ಸಂತಾಪ ವ್ಯಕ್ತಪಡಿಸಿದ ಬಲೂಚಿಸ್ತಾನ್ ಮುಖ್ಯಮಂತ್ರಿ ಮೀರ್ ಅಬ್ದುಲ್ ಕುದೂಸ್ ಬಿಜೆಂಜೊ ಅವರ ಸೇವೆಗಳು "ಅವಿಸ್ಮರಣೀಯ" ಎಂದು ಹೇಳಿದರು. ಶತ್ರುಗಳ ಹೇಡಿತನದ ದಾಳಿಗಳು ರಾಷ್ಟ್ರವನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಬಿಜೆಂಜೊ ಹೇಳಿದರು.

ಷರಿಯಾ ವಿರುದ್ಧ ರಿಬಾ ಆಧಾರಿತ ಬ್ಯಾಂಕಿಂಗ್ ವ್ಯವಸ್ಥೆ:-
ಮೆಸ್ಕಂಜೈ ಅವರು ಷರಿಯಾ ವಿರುದ್ಧ ರಿಬಾ ಆಧಾರಿತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಘೋಷಿಸುವ ಮಹತ್ವದ ತೀರ್ಪನ್ನು ಘೋಷಿಸಿದವರು. ಕ್ವೆಟ್ಟಾ ಬಾರ್ ಅಸೋಸಿಯೇಷನ್ (ಕ್ಯೂಬಿಎ) ಅಧ್ಯಕ್ಷ ಅಜ್ಮಲ್ ಖಾನ್ ಕಾಕರ್ ಕೂಡ ಮುಸ್ಕಂಜೈ ಹತ್ಯೆಯನ್ನು ಖಂಡಿಸಿದ್ದಾರೆ. ಮಾಜಿ ನ್ಯಾಯಾಧೀಶರ ಸಾವಿನಿಂದ ಪಾಕಿಸ್ತಾನದ ಪ್ರತಿಯೊಬ್ಬ ನಾಗರಿಕರು ತೀವ್ರ ದುಃಖಿತನಾಗಿದ್ದಾನೆ ಎಂದು ಅವರು ಹೇಳಿದರು.
"ನಾವು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಹಂತಕರನ್ನು ತಕ್ಷಣವೇ ಬಂಧಿಸಬೇಕು ಮತ್ತು ಕಾನೂನು ಕ್ರಮಕ್ಕೆ ಒಳಪಡಿಸಬೇಕು" ಎಂದು ಅಜ್ಮಲ್ ಕಾಕರ್ ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅಜ್ಮಲ್ ದೂರಿದರು. ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಕಾನೂನು ರಾಜ್ಯ ಸಚಿವ ಶಹದತ್ ಹುಸೇನ್ ಅವರು ಭಯೋತ್ಪಾದಕ ಚಟುವಟಿಕೆಗಳು ತೀವ್ರ ಹೆಚ್ಚಳದ ಬಗ್ಗೆ ಒಪ್ಪಿಕೊಂಡಿದ್ದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಅದಾಗಲೇ ಈ ಘಟನೆ ನಡೆದಿದೆ.

ಪಾಕಿಸ್ತಾನದಲ್ಲಿ ಮತ್ತೆ ಹೆಚ್ಚಾದ ಉಗ್ರರ ಗುಂಡಿನ ದಾಳಿಗಳು:-
ಈ ವರ್ಷ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಭಯೋತ್ಪಾದಕ ಘಟನೆಗಳು ಸೆಪ್ಟೆಂಬರ್‌ನಲ್ಲಿ ದಾಖಲಾಗಿವೆ ಎಂದು ಇಸ್ಲಾಮಾಬಾದ್ ಮೂಲದ ಚಿಂತಕರು ತಿಳಿಸಿದ್ದಾರೆ. ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ದಾಳಿಯನ್ನು ಪುನರಾರಂಭಿಸಿದೆ.
ಈ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್‌ಫ್ಲಿಕ್ಟ್ ಅಂಡ್ ಸೆಕ್ಯುರಿಟಿ ಸ್ಟಡೀಸ್ (ಪಿಐಸಿಎಸ್‌ಎಸ್) ಅನ್ನು ಉಲ್ಲೇಖಿಸಿ ಡಾನ್ ಹಿಂದಿನ ವರದಿಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ ನಲ್ಲಿ 42 ಭಯೋತ್ಪಾದಕ ದಾಳಿಗಳು ನಡೆದಿದ್ದು, ಆಗಸ್ಟ್ ಗೆ ಹೋಲಿಸಿದರೆ ಶೇ.35ರಷ್ಟು ಹೆಚ್ಚಳವಾಗಿದೆ. ಪಾಕಿಸ್ತಾನಿ ಚಿಂತಕರು ಹಿಂದಿನ ಫಟಾ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ (ಕೆಪಿ) ಹಿಂಸಾಚಾರದಲ್ಲಿ ಶೇಕಡಾ 106 ರಷ್ಟು ದಾಳಿ ಹೆಚ್ಚಳವನ್ನು ಗಮನಿಸಿದ್ದಾರೆ.
ಈ ವರ್ಷದ ಆಗಸ್ಟ್‌ನಲ್ಲಿ ಉಗ್ರಗಾಮಿಗಳು ಪಾಕಿಸ್ತಾನದಾದ್ಯಂತ 31 ದಾಳಿಗಳನ್ನು ನಡೆಸಿದ್ದು, ಇದರಲ್ಲಿ 37 ಜನರು ಸಾವನ್ನಪ್ಪಿದ್ದಾರೆ ಮತ್ತು 55 ಜನರು ಗಾಯಗೊಂಡಿದ್ದಾರೆ ಎಂದು ಥಿಂಕ್ ಟ್ಯಾಂಕ್ ಹೇಳಿದೆ.











Click it and Unblock the Notifications