ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಇದೆ ಎಂದ ನವಾಜ್‌ಗೆ ಕೋರ್ಟ್ ಸಮನ್ಸ್
ಲಾಹೋರ್, ಸೆಪ್ಟೆಂಬರ್ 24: ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನಿಯರು ಭಾಗಿಯಾಗಿದ್ದರು ಎಂದಿದ್ದ ಪಾಕ್ ಮಾಜಿ ನವಾಜ್ ಷರೀಫ್ ವಿರುದ್ಧ ಲಾಹೋರ್ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
'2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಪಾಕಿಸ್ತಾನದವರು ಇದ್ದರು' ಎಂದು ನವಾಜ್ ಷರೀಫ್ ಹೇಳಿದ್ದರು. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿಯೊಂದು ಸಲ್ಲಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ನವಾಜ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಕಳೆದ ಮೇ ತಿಂಗಳಲ್ಲಿ ಪಾಕ್‌ನ ಪ್ರತಿಷ್ಠಿತ ಡಾನ್ ಪತ್ರಿಕೆಗೆ ನವಾಜ್ ಷರೀಫ್ ಅವರು ನೀಡಿದ್ದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ, 'ಮುಂಬೈನಲ್ಲಿ ಹಲವು ಮಂದಿ ಮಡಿದ ಭಯೋತ್ಪಾದನಾ ಕೃತ್ಯದಲ್ಲಿ ಪಾಕಿಸ್ತಾದಲ್ಲಿ ಸಕ್ರಿಯವಾಗಿರುವ ಉಗ್ರರ ಗುಂಪು ಭಾಗವಹಿಸಿತ್ತು' ಎಂದಿದ್ದರು. ಅಲ್ಲದೆ ಆ ಪ್ರಕರಣದ ವಿಚಾರಣೆ ತಡವಾಗುತ್ತಿರುವ ಬಗ್ಗೆ ಆಕ್ಷೇಪ ಸಹ ವ್ಯಕ್ತಪಡಿಸಿದ್ದರು.

ಈಗ ಈ ಬಗ್ಗೆ ಲಾಹೋರ್ ಹೈಕೋರ್ಟ್ ನವಾಜ್ ಷರೀಫ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಖಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ. ಅಲ್ಲದೆ ಅನುಮತಿ ಇಲ್ಲದೆ ದೇಶಬಿಟ್ಟು ಹೋಗದಂತೆ ಸಹ ಹೇಳಿದೆ. ಇಷ್ಟೆ ಅಲ್ಲದೆ ಡಾನ್ ಪತ್ರಿಕೆಯ ಪತ್ರಕರ್ತ ಸಿರಿಲ್ ಅಲ್ಮೇಡಾ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
10 ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅವರನ್ನು ಕೆಲವು ದಿನಗಳ ಹಿಂದೆಯಷ್ಟೆ ಕೋರ್ಟ್ ಖುಲಾಸೆ ಮಾಡಿದೆ. ಪಾಕಿಸ್ತಾನ ಚುನಾವಣೆಗೂ ಮುಂಚೆ ನವಾಜ್ ಷರೀಫ್ ಅವರು ಭ್ರಷ್ಟಾಚಾರದ ಆರೋಪದ ಮೇಲೆ ಜೈಲುಪಾಲಾಗಿದ್ದರು.












Click it and Unblock the Notifications