Pakistan: ಇಮ್ರಾನ್ ಖಾನ್ ಬೆಂಬಲಿಗರ ಅಬ್ಬರಕ್ಕೆ ಬೆಚ್ಚಿದ ಪಾಕಿಸ್ತಾನ; ಕಂಡಲ್ಲಿ ಗುಂಡಿಕ್ಕಲು ಆದೇಶ
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ಸೇನೆಯನ್ನು ಮಧ್ಯಪ್ರವೇಶ ಮಾಡುವಂತೆ ಸರ್ಕಾರ ಆದೇಶಿಸಿದೆ. ಇಸ್ಲಾಮಾಬಾದ್‌ನ ಬೀದಿಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದ್ದು, ನಾಲ್ವರು ಪೊಲೀಸರು ಮತ್ತು ಓರ್ವ ನಾಗರಿಕ ಮೃತಪಟ್ಟಿದ್ದಾರೆ.
ಸರ್ಕಾರದ ಸೂಚನೆ ಮೇರೆಗೆ ಪಾಕಿಸ್ತಾನ ಸೈನ್ಯ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿದ್ದು ಸೆಕ್ಷನ್ 245 ರ ಅಡಿಯಲ್ಲಿ ಕಂಡಲ್ಲಿ ಗುಂಡಿಕ್ಕುವಂತೆ ಆದೇಶ ನೀಡಿದೆ. ಹೊರಗಿನ ಆಕ್ರಮಣ ಮತ್ತು ಯುದ್ಧದ ಬೆದರಿಕೆಯನ್ನು ತಪ್ಪಿಸಲು ನ್ಯಾಯಾಂಗ ಹಸ್ತಕ್ಷೇಪವನ್ನು ರದ್ದುಗೊಳಿಸುವುದರಿಂದ ಸೈನ್ಯವು ಮುಕ್ತವಾಗಿ ಕೆಲಸ ಮಾಡಲಿದೆ.

ಪ್ರತಿಭಟನಾಕಾರರು ಯಾರೇ ಆದರೂ ಬಿಡಬೇಡಿ ಎಂದು ಸೈನಿಕರಿಗೆ ಸೇನೆಯು ಆದೇಶಿಸಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರ ಎಚ್ಚರಿಕೆಯನ್ನು ತಿರಸ್ಕರಿಸಿರುವ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದ್ದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಕೋಲು, ಕಲ್ಲು ಹಿಡಿದು ನಿಂತ ಪ್ರತಿಭಟನಾಕಾರರು
ಇಸ್ಲಾಮಾಬಾದ್‌ನ ಬೀದಿ ಬೀದಿಗಳಲ್ಲಿ ಪ್ರತಿಭಟನಾಕಾರರು ಕಲ್ಲು, ಕೋಲು ಮತ್ತು ಕವಣೆಗಳನ್ನು ಹಿಡಿದುಕೊಂಡು ಬೀದಿಗೆ ಇಳಿದಿದ್ದಾರೆ. 2018ರಿಂದ 2022ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್‌ಗೆ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಿದ್ದು, ಜೈಲು ಶಿಕ್ಷೆ ನೀಡಲಾಗಿದೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅಪಾರ ಬೆಂಬಲಿಗರನ್ನು ಹೊಂದಿದ್ದರೂ, ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ.
ವಂಚನೆ ಮತ್ತು ಭ್ರಷ್ಟಾಚಾರ, ವಿಧ್ವಂಸಕ ಕೃತ್ಯ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದ್ದು ಹಲವು ಕಾನೂನು ಮೊಕದ್ದಮೆಗಳನ್ನು ಹಾಕಲಾಗಿದೆ. ದೇಶದ್ರೋಹ ಆರೋಪವನ್ನೂ ಕೂಡ ಹೊರಿಸಲಾಗಿದ್ದು, ಅವರು ರಾಜಕೀಯದಂತೆ ಬರದಂತೆ ತಡೆಯಲು ಬಂಧಿಸಲಾಗಿದೆ ಎಂದು ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.
ಇಮ್ರಾನ್ ಖಾನ್ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ 2024ರ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷವು ಹೆಚ್ಚಿನ ಸ್ಥಾನ ಪಡೆದಿತ್ತು. ಮಿಲಿಟರಿ ಪ್ರಭಾವಕ್ಕೆ ಹೆಚ್ಚು ಬಗ್ಗುವ ಪಕ್ಷಗಳ ಒಕ್ಕೂಟವು ಇಮ್ರಾನ್ ಖಾನ್ ಅಧಿಕಾರಕ್ಕೆ ಬರದಂತೆ ತಡೆಯಿತು.
ಇಮ್ರಾನ್ ಖಾನ್ ಅವರ ಪಕ್ಷ - ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅಥವಾ ಪಿಟಿಐ. ಇಮ್ರಾನ್ ಖಾನೆ ರಾಜಕೀಯ ವೃತ್ತಿಜೀವನವನ್ನು ಕೊನೆಗೊಳಿಸುವ ಸಂಚುಗಳನ್ನು ವಿರೋಧಿಸುವ ಸಲುವಾಗಿ ಆಗಾಗ್ಗೆ ದೇಶದಲ್ಲಿ ರ್‍ಯಾಲಿಗಳನ್ನು ನಡೆಸುವ ಮೂಲಕ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಲೇ ಬಂದಿದೆ. ಈಗ ಇಸ್ಲಮಾಬಾದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಾರಕ್ಕೆ ತಲೆನೋವಾಗಿದೆ.
ಪ್ರತಿಭಟನೆಗಳು ಶಾಂತಿಯುತವಾಗಿರಲು ಉದ್ದೇಶಿಸಿದ್ದರೂ, ಪೊಲೀಸರು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪ್ರಯತ್ನಿಸಿದ ನಂತರ ಹಿಂಸಾಚಾರಕ್ಕೆ ತಿರುಗಿತು, ಘರ್ಷಣೆಯಲ್ಲಿ ನಾಲ್ಕು ಪೊಲೀಸರು ಮತ್ತು ನಾಗರಿಕರು ಮೃತಪಟ್ಟಿದ್ದು, ಹತ್ತಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಭಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಶಾಂತಿಯುತ ಪ್ರತಿಭಟನೆಯಲ್ಲಿ ಉಗ್ರಗಾಮಿಗಳ ಕೃತ್ಯ ಎಂದಿದ್ದಾರೆ.












Click it and Unblock the Notifications