ಚಂದ್ರಯಾನ 2: ಹಮ್ಮು ಬಿಟ್ಟು ಭಾರತಕ್ಕೆ ಉಘೇ ಎಂದ ಪಾಕ್ ಗಗನಯಾತ್ರಿ
ಇಸ್ಲಾಮಾಬಾದ್, ಸೆಪ್ಟೆಂಬರ್ 10: ಭಾರತದ ಚಂದ್ರಯಾನ-2 ಪ್ರಯಾಣದಲ್ಲಿ ಕೊನೆಯ ಕ್ಷಣದಲ್ಲಾದ ಸಂವಹನ ಕಡಿತವನ್ನು ಕಂಡು ವಿಕೃತ ಸಂತೋಷ ಅನುಭವಿಸಿದ್ದ ಪಾಕಿಸ್ತಾನದ ಹಲವರಿಗೆ ಮುಖಭಂಗವಾಗುವಂಥ ಹೇಳಿಕೆಯನ್ನು ಪಾಕಿಸ್ತಾನದ ಮಹಿಳಾ ಗಗನಯಾತ್ರಿ ನೀಡಿದ್ದಾರೆ.
ಪಾಕಿಸ್ತಾನದ ಪ್ರಪ್ರಥಮ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಾಮಿರಾ ಸಾಲಿಮ್ ಚಂದ್ರಯಾನ 2 ಅನ್ನು ಐತಿಹಾಸಿಕ ಸಾಧನೆ ಎಂದು ವ್ಯಾಖ್ಯಾನಿಸಿದ್ದು, ಈ ಸಾಧನೆಗಾಗಿ ಇಸ್ರೋ ಮತ್ತು ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
"ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಂ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವ ಐತಿಹಾಸಿಕ ಪ್ರಯತ್ನ ಮಾಡಿದ ಭಾರತ ಮತ್ತು ಇಸ್ರೋಕ್ಕೆ ಕೃತಜ್ಞತೆಗಳು. ಚಂದ್ರಯಾನ 2 ಸಾಧನೆ ದಕ್ಷಿಣ ಏಷ್ಯಾದ ಮಟ್ಟಿಗೆ ಒಂದು ದೈತ್ಯ ಸಾಧನೆ. ಇದು ಕೇವಲ ಏಷ್ಯಾ ಮಾತ್ರವಲ್ಲದೆ ಇಡೀ ಜಗತ್ತೂ ಹೆಮ್ಮೆ ಪಡುವಂಥ ಸಾಧನೆ" ಎಂದು ಸಲೀಮ್ ಶ್ಲಾಘಿಸಿದ್ದಾರೆ.

ಸರ್ ರಿಚರ್ಡ್ ಬ್ರಾನ್ಸನ್ ಅವರ ವರ್ಜಿನ್ ಗ್ಯಾಲಾಕ್ಟಿಕ್ ಮೂಲಕ ಗಗನಯಾತ್ರೆ ಮಾಡಿದ ಮೊದಲ ಪಾಕಿಸ್ತಾನಿ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿರುವ ನಾಮಿರಾ ಸಲೀಂ, "ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಬೆಳವಣಿಗೆ ಗುರುತಿಸುವಂಥದ್ದು" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಯಾವುದೇ ದೇಶ ಮುಂಚೂಣಿಯಲ್ಲಿದ್ದರೂ ಅದು ನಮ್ಮೆಲ್ಲರ ಗೆಲುವು. ಭೂಮಿಯ ಮೇಲೆ ನಮ್ಮನ್ನು ವಿಭಜಿಸಿರುವ ರಾಜಕೀಯ, ಗಡಿಗಳನ್ನು ಮೀರಿ ನಮ್ಮನ್ನು ಒಂದಾಗಿಸುವುದಕ್ಕೆ ಸಾಧ್ಯವಿರುವುದು ಬಾಹ್ಯಾಕಾಶಕ್ಕೆ ಮಾತ್ರ" ಎಂದು ಸಲೀಂ ಹೇಳಿದ್ದಾರೆ.
ಸಲೀಂ ಅವರ ಈ ಹೇಳಿಕೆಗೆ ಪಾಕಿಸ್ತಾನದ ಹಲವರು ವೊಧ ವ್ಯಕ್ತಪಡಿಸಿದ್ದು, ಶತ್ರು ರಾಷ್ಟ್ರವನ್ನು ಶ್ಲಾಘಿಸಿದ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಲೀಂ, "ಭಾರತದ ಚಂದ್ರಯಾನ 2 ರ ಸಾಧನೆಗೆ ಮೆಚ್ಚುಗೆ ಸೂಚಿಸಿದ ನನ್ನ ಪರವಾಗಿ ನಿಂದ ಕೆಲವು ಪಾಕಿಸ್ತಾನಿ ಮಾಧ್ಯಮ ಮತ್ತು ಭಾರತದ ಮಾಧ್ಯಮಗಳಿಗೆ, ಜನರಿಗೆ ನಾನು ಋಣಿಯಾಗಿದ್ದೇನೆ" ಎಂದಿದ್ದಾರೆ.












Click it and Unblock the Notifications