ನೈಜೀರಿಯಾ ಪ್ರವಾಹ; 600 ಕ್ಕೂ ಹೆಚ್ಚು ಸಾವು, 1.3 ದಶಲಕ್ಷ ಜನರ ಸ್ಥಳಾಂತರ
ಅಬೂಜಾ, ಅ.17: ನೈಜೀರಿಯಾದಲ್ಲಿ ಒಂದು ದಶಕದಲ್ಲಿಯೇ ಅತ್ಯಂತ ಭೀಕರ ಪ್ರವಾಹ ಉಂಟಾಗಿದ್ದು, ಪ್ರವಾಹದಲ್ಲಿ ಈವರೆಗೆ 600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ.
ನೈಜೀರಿಯಾದ ಮಾನವೀಯ ವ್ಯವಹಾರಗಳ ಸಚಿವಾಲಯದ ಟ್ವೀಟ್ ಪ್ರಕಾರ ದುರಂತದ ಪರಿಣಾಮವಾಗಿ 1.3 ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆಯಬೇಕಾಗಿದೆ.
ಮಾನವೀಯ ವ್ಯವಹಾರಗಳ ಸಚಿವ ಸಾದಿಯಾ ಉಮರ್ ಫಾರೂಕ್ ತಿಳಿಸಿರುವಂತೆ, "ದುರದೃಷ್ಟವಶಾತ್, ಅಕ್ಟೋಬರ್ 16, 2022 ರ ಹೊತ್ತಿಗೆ 603 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ" ಎಂದು ಹೇಳಿದ್ದಾರೆ.
ಹಿಂದಿನ ವಾರ ಸಾವಿನ ಸಂಖ್ಯೆ 500 ಆಗಿತ್ತು. ಆದರೆ ಕೆಲವು ರಾಜ್ಯ ಸರ್ಕಾರಗಳು ಪ್ರವಾಹವನ್ನು ಸಮರ್ಥವಾಗಿ ನಿರ್ವಹಿಸಲು ಸಿದ್ಧತೆಗಳನ್ನು ಮಾಡದ ಕಾರಣ ಅಂಕಿಅಂಶಗಳು ಭಾಗಶಃ ಹೆಚ್ಚಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಭೀಕರ ಪ್ರವಾಹವು 2,00,000 ಕ್ಕೂ ಹೆಚ್ಚು ಮನೆಗಳನ್ನು ಮತ್ತು ಸರಿಸುಮಾರು 1,10,000 ಹೆಕ್ಟೇರ್ (272,000 ಎಕರೆ) ಕೃಷಿಯನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ ಎಂದು ಸಚಿವ ಉಮರ್ ಫಾರೂಕ್ ಹೇಳಿದ್ದಾರೆ.
ನವೆಂಬರ್ ಅಂತ್ಯದವರೆಗೆ ಪ್ರವಾಹ ಮುಂದುವರಿಯುವ ನಿರೀಕ್ಷೆಯಿದೆ ಎಂದು ಬಿಬಿಸಿ ವರದಿ ಮಾಡಿದೆ. ಮಳೆಗಾಲದ ಸಮಯ ನೈಜೀರಿಯಾದಲ್ಲಿ ಪ್ರತಿ ವರ್ಷ ಸೌಮ್ಯವಾದ ಪ್ರವಾಹ ಉಂಟಾಗುತ್ತಿತ್ತು. ಆದರೆ, ಈ ವರ್ಷ ಅದು ಗಮನಾರ್ಹವಾಗಿ ಭೀಕರವಾಗಿದೆ. ನೈಜೀರಿಯಾದ 36 ರಾಜ್ಯಗಳಲ್ಲಿ 27 ರಾಜ್ಯಗಳ ಮೇಲೆ ಪ್ರವಾಹ ಭಾರಿ ಪರಿಣಾಮ ಬೀರಿದೆ.
2012 ರಲ್ಲಿ, ಪ್ರವಾಹವು 2.1 ದಶಲಕ್ಷ ಜನರನ್ನು ಬಾಧಿಸಿ, 363 ಜನರ ಸಾವಿಗೆ ಕಾರಣವಾಗಿತ್ತು.
ನೈಜಿರಿಯಾದ ಅನೇಕ ಸಂಸ್ಥೆಗಳು ಈಗಾಗಲೇ ರಷ್ಯಾ ಮತ್ತು ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ಪರಿಣಾಮಗಳನ್ನು ಅನುಭವಿಸುತ್ತಿವೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಹೇಳುವಂತೆ ಹೆಚ್ಚಿನ ಹಸಿವಿನಿಂದ ಬಳಲುತ್ತಿರುವ ಅಪಾಯವನ್ನು ಹೊಂದಿರುವ ಆರು ದೇಶಗಳಲ್ಲಿ ನೈಜಿರಿಯಾ ಕೂಡ ಒಂದು.












Click it and Unblock the Notifications