Israel: ಒತ್ತೆಯಾಳು ಬಿಡುಗಡೆಗೆ ಹಮಾಸ್ ಜೊತೆಗೆ ಸಂಧಾನ?
ಇಸ್ರೇಲ್ & ಹಮಾಸ್ ಉಗ್ರರ ನಡುವೆ ಶುರುವಾಗಿರುವ ಕಾಳಗ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಅದ್ರಲ್ಲೂ ಇಸ್ರೇಲ್ ಭೀಕರ ದಾಳಿ ಆರಂಭಿಸಿದ ನಂತರ ಪರಿಸ್ಥಿತಿ ಸಂಪೂರ್ಣ ಕೈಮೀರಿ ಹೋಗಿದೆ. ಇನ್ನೊಂದು ಕಡೆ ಇಸ್ರೇಲ್ ನೆಲಕ್ಕೆ ನುಗ್ಗಿದ್ದ ಉಗ್ರರು ಹಲವು ಇಸ್ರೇಲ್ ನಾಗರಿಕರು ಮತ್ತು ಸೇನಾಧಿಕಾರಿಗಳನ್ನ ಅಪಹರಿಸಿದ್ದಾರೆ. ಹೀಗಾಗಿ ಒತ್ತೆಯಾಳು ಬಿಡುಗಡೆ ಸಂಬಂಧ ಹಮಾಸ್ ಉಗ್ರರ ಜೊತೆ ಸಂಧಾನ ಶುರುವಾಗಿದೆಯಂತೆ!
ಅಷ್ಟಕ್ಕೂ ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿದಾಗ 100ಕ್ಕೂ ಹೆಚ್ಚು ಜನರ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಇವರಲ್ಲಿ ಮಹಿಳೆಯರು & ಮಕ್ಕಳು ಕೂಡ ಸೇರಿದ್ದಾರೆ. ಇದೀಗ ಅವರ ಬಿಡುಗಡೆಗಾಗಿ ಸಂಧಾನ ಆರಂಭವಾಗಿದೆ ಅಂತಾ ಹೇಳಲಾಗುತ್ತಿದೆ. ಹಮಾಸ್ ಉಗ್ರರ ಬಳಿ ಇರುವ ಇಸ್ರೇಲ್ ನಾಗರಿಕರು ಹಾಗೂ ಸೇನಾಧಿಕಾರಿಗಳನ್ನು ಬಿಡಿಸಿ ತರಲು, ಇಸ್ರೇಲ್ ಜೈಲುಗಳಲ್ಲಿ ಇರುವ 36 ಜನ ಪ್ಯಾಲೆಸ್ಟೀನ್ ಮಹಿಳೆಯರು & ಮಕ್ಕಳ ಬಿಡುಗಡೆಗೆ ಚರ್ಚೆಯೂ ನಡೆಯುತ್ತಿದೆ ಎನ್ನಲಾಗಿದೆ. ಕತಾರ್ ಸಂಧಾನಕಾರರು ಹಮಾಸ್ ಜೊತೆಗೆ ಚರ್ಚೆ ನಡೆಸಿದ್ದಾರೆ ಅಂತಾ ಹೇಳಾಗಿದೆ.

ಉಗ್ರರ ಜೊತೆ ಸಂಧಾನ ಸಕ್ಸಸ್ ಆಗುತ್ತಾ?
ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿದಾಗಲೇ ಖತರ್ನಾಕ್ ಪ್ಲ್ಯಾನ್ ಮಾಡಿದ್ದರು ಅಂತಾ ಹೇಳಲಾಗುತ್ತಿದೆ. ಹೇಗೆಂದರೆ ಇಸ್ರೇಲ್ ನಾಗರಿಕರನ್ನ ಅಪಹರಣ ಮಾಡಿದರೆ, ಆ ಮೂಲಕ ಇಸ್ರೇಲ್ ಜೈಲಲ್ಲಿ ಇರುವ ಬೇರೆಯವರನ್ನ ರಿಲೀಸ್ ಮಾಡಿಸುವುದು ಸುಲಭ ಎಂಬ ಲೆಕ್ಕವು ಇರಬಹುದು ಅಂತಾ ಹೇಳಲಾಗುತ್ತಿದೆ. ಇದೇ ಲೆಕ್ಕಾಚಾರದಲ್ಲಿ ಈಗ ಮಾತುಕತೆಯು ಕೂಡ ಶುರುವಾಗಿದೆ. ಇನ್ನು ಕತಾರ್ ಮತ್ತು ಅಮೆರಿಕದ ನೆರವಿನ ಮೂಲಕ ನಡೆದಿರುವ ಮಾತುಕತೆ ಬಹುತೇಕ ಸಕ್ಸಸ್ ಆಗುವ ಹಂತ ತಲುಪಿದೆ ಎನ್ನಲಾಗುತ್ತಿದೆ.
ಮತ್ತೊಂದು ಕಡೆ ಇಸ್ರೇಲ್ ನಾಗರಿಕರನ್ನ ಒತ್ತೆಯಾಳಾಗಿ ಇರಿಸಿಕೊಂಡ ನಂತರ ಹಮಾಸ್‌ನ ಉಗ್ರ ಪಡೆ ಎಲ್ಲಿಗೆ ಹೋಗಿದೆ ಎಂಬುದು ತಿಳಿಯುತ್ತಿಲ್ಲ. ಒತ್ತೆಯಾಳುಗಳ ಜೊತೆ ಅವರೆಲ್ಲಾ ಅಜ್ಞಾತ ಸ್ಥಳಕ್ಕೆ ಹೋಗಿರುವ ಸಾಧ್ಯತೆ ಇದೆ. ಆದರೆ ಹೀಗೆ ಒತ್ತೆಯಾಳುಗಳ ಕರೆದುಕೊಂಡು ಹೋಗಿರುವ ಹಮಾಸ್ ಉಗ್ರರ ಪಡೆ, ಕೆಲವರ ಜೊತೆಗೆ ಸಂಪರ್ಕದಲ್ಲಿ ಇದೆ ಎನ್ನಲಾಗಿದೆ. ಹಾಗೇ ಕತಾರ್ ಕೂಡ ಹಮಾಸ್ ಮುಖಂಡರ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತಿದೆ ಅಂತಾ ಹೇಳಲಾಗುತ್ತಿದೆ.
ಉಗ್ರರ ಕಿರಿಕ್ ಶುರುವಾಗಿದ್ದು ಹೇಗೆ?
ಶನಿವಾರ ಹಮಾಸ್ ಉಗ್ರ ಪಡೆ, ಇಸ್ರೇಲ್‌ನ ಕಡೆಗೆ 5000ಕ್ಕೂ ಹೆಚ್ಚು ರಾಕೆಟ್‌ನ್ನ ಒಂದೇ ಬಾರಿಗೆ ಉಡಾಯಿಸಿತ್ತು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ಹೀಗೆ ಗಾಜಾಪಟ್ಟಿ ಮೂಲಕ ಹಮಾಸ್ ಉಗ್ರರು ಇಸ್ರೇಲ್ ಒಳಗೆ ಬರುವಾಗ, ಗಾಜಾ ಪಟ್ಟಿಯಿಂದ ಸುಮಾರು 14 ಕಿಲೋ ಮೀಟರ್ ದೂರದಲ್ಲಿ ಮ್ಯೂಸಿಕ್ ಫೆಸ್ಟಿವಲ್ ನಡೆಯುತ್ತಿತ್ತು. ಅಲ್ಲಿಗೆ ಮೊದಲು ನುಗ್ಗಿದ ಉಗ್ರರು ರಕ್ತಪಾತ ಮಾಡಿದ್ದಾರೆ. ಜನರ ಮೇಲೆ ಗುಂಡಿನ ದಾಳಿ ನಡೆಸಿ, ಕಾರುಗಳ ಮೇಲೂ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ.

ಮ್ಯೂಸಿಕ್ ಫೆಸ್ಟಿವಲ್ ಸ್ಮಶಾನ
ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಹಮಾಸ್ ಉಗ್ರರು ನುಗ್ಗಿ ರಕ್ತಪಾತ ನಡೆಸಿದ್ದರು. ಇಡೀ ಇಸ್ರೇಲ್ ಮೇಲೆ ಮೊನ್ನೆ ನಡೆದಿರುವ ದಾಳಿ ಒಂದು ಕಡೆಯಾದರೆ, ಮ್ಯೂಸಿಕ್ ಫೆಸ್ಟಿವಲ್ ಮೇಲೆ ನಡೆದಿರುವ ದಾಳಿ ಮತ್ತೊಂದು ಭಯಾನಕ ಅಧ್ಯಾಯ ಬಿಡಿಸಿಟ್ಟಿದೆ. ಈ ಜಾಗವು ಗಾಜಾ ಪಟ್ಟಿಗೆ ಹತ್ತಿರದಲ್ಲೇ ಇರುವ ಕಾರಣ, ಗಾಜಾ ಪಟ್ಟಿಯಿಂದ ನುಗ್ಗಿ ಬಂದಿದ್ದ ಹಮಾಸ್, ಕಂಡ ಕಂಡವರ ಮೇಲೆ ದಾಳಿ ಮಾಡಿದೆ.
ಇನ್ನು ಈ ಘಟನೆಯಲ್ಲಿ ನೂರಾರು ಇಸ್ರೇಲ್ ನಾಗರಿಕರು ಮೃತಪಟ್ಟಿದ್ದು ಸುಮಾರು 260ಕ್ಕೂ ಹೆಚ್ಚು ಶವ ಇಲ್ಲಿ ತನಕ ಪತ್ತೆಯಾಗಿವೆ. ಹಾಗೇ ಇಲ್ಲಿಂದ ಅನೇಕರನ್ನು ಉಗ್ರರು ಒತ್ತೆಯಾಳಾಗಿ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಏಕೆಂದರೆ ಈ ಜಾಗ ಗಾಜಾ ಪಟ್ಟಿಗೆ ಕೇವಲ 14 ಕಿ.ಮೀ. ದೂರದಲ್ಲಿ ಇದ್ದು, ಬೈಕ್ ಸೇರಿದಂತೆ ಸಿಕ್ಕ ಸಿಕ್ಕ ವಾಹನದಲ್ಲಿ ಹಲವು ಇಸ್ರೇಲ್ ಜನರನ್ನ ಅಪಹರಣ ಮಾಡಿರುವ ಆರೋಪ ಕೇಳಿಬಂದಿದೆ.












Click it and Unblock the Notifications