Pakistan Election: ಪಾಕಿಸ್ತಾನ ಮಾಜಿ ಪಿಎಂ ಪಾಕಿಸ್ತಾನಕ್ಕೆ ವಾಪಸ್
ಅರಾಜಕತೆಯ ತವರು ಪಾಕಿಸ್ತಾನದಲ್ಲಿ ಇನ್ನೇನು ಚುನಾವಣೆ ನಡೆಯಲಿದ್ದು ಸಕಲ ಸಿದ್ಧತೆ ಸಾಗಿದೆ. ಆದರೆ ಚುನಾವಣೆಗೆ ಮೊದಲೇ ಪಾಕ್ ಜನರಿಗೆ ಮತ್ತೊಂದು ಸರ್ಪ್ರೈಸ್ ಸಿಗುತ್ತಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆ ದೇಶ ಬಿಟ್ಟು ಎಸ್ಕೇಪ್ ಆಗಿದ್ದ ಮಾಜಿ ಪ್ರಧಾನಿಯ ರೀ ಎಂಟ್ರಿಗೆ ವೇದಿಕೆ ಸಿದ್ಧವಾಗಿದೆ. ಹಾಗಾದರೆ ಯಾರದು ಮಾಜಿ ಪ್ರಧಾನಿ? ಪಾಕ್‌ಗೆ ವಾಪಸ್ ಬರ್ತಿರೋದು ಯಾಕೆ?
ಪಾಕಿಸ್ತಾನದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವ ಸಮಯದಲ್ಲಿ ಕಿಡಿ ಬಿದ್ದು ಹೊತ್ತಿ ಉರಿಯುತ್ತೋ ಗೊತ್ತಿಲ್ಲ. ಅದರಲ್ಲೂ ಅಲ್ಲಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದ್ದು, ಕೊಳ್ಳೆಹೊಡೆದ ವ್ಯಕ್ತಿ ಕೂಡ ಜನನಾಯಕನ ಸ್ಥಾನ ಪಡೆಯುತ್ತಾನೆ. ಭ್ರಷ್ಟಾಚಾರ ಆರೋಪ ಸಾಬೀತು ಆಗಿದ್ದರೂ ಮೆರೆಯುತ್ತಾರೆ. ಅದೇ ರೀತಿ ಭ್ರಷ್ಟಾಚಾರ ಆರೋಪದಡಿ ದೇಶವನ್ನೇ ಬಿಟ್ಟು ಹೋಗಿದ್ದ ಮಾಜಿ ಪ್ರಧಾನಿ ಈಗ ವಾಪಸ್ ಬರ್ತಿದ್ದಾರೆ. ಅಷ್ಟೇ ಅಲ್ಲ ಭ್ರಷ್ಟಾಚಾರ ಆರೋಪ ಹೊತ್ತಿದ್ದ ಮಾಜಿ ಪ್ರಧಾನಿಯನ್ನ ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ಸಾಗಿದೆ.

ನವಾಜ್ ಷರೀಷ್ ಪಾಕಿಸ್ತಾನಕ್ಕೆ ರಿಟರ್ನ್!
ಹೌದು, ಪನಾಮಾ ಪೇಪರ್ಸ್ ಹಗರಣ ಹಿನ್ನೆಲೆ ದೇಶ ಬಿಟ್ಟು ಹೋಗಿದ್ದ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಕಂಬ್ಯಾಕ್ ಮಾಡಲು ವೇದಿಕೆ ಸಿದ್ಧವಾಗಿದೆ. ನಾಲ್ಕು ವರ್ಷಗಳಿಂದ ಲಂಡನ್ ಅಜ್ಞಾತವಾಸದಲ್ಲಿ ಇರುವ ನವಾಜ್‌ಗೆ ಪಾಕ್‌ಗೆ ಬರಲು ಅನುಮತಿ ಸಿಕ್ಕಿದೆ. ಇದೇ ಕಾರಣಕ್ಕೆ ಅಕ್ಟೋಬರ್ 21ರಂದು ವಿಶೇಷ ವಿಮಾನ ಮೂಲಕ ನವಾಜ್ ಷರೀಫ್ ತಮ್ಮ ತವರು ದೇಶ ಪಾಕ್‌ಗೆ ಬಂದು ಇಳಿಯಲಿದ್ದಾರಂತೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಯಕ ಕೂಡ ಆಗಿರುವ ನವಾಜ್ ಷರೀಫ್ ಈ ಮೂಲಕ ಪಾಕ್ ಮುಂದಿನ ಚುನಾವಣೆಗೆ ಪಕ್ಷವನ್ನ ಸಜ್ಜಾಗಿಸಲಿದ್ದಾರೆ. ಮೊದಲಿಗೆ ಅಕ್ಟೋಬರ್ 18ರಂದು ಲಂಡನ್‌ನಿಂದ ದುಬೈಗೆ ಬರಲಿರುವ ನವಾಜ್, ನಂತರ ಅಲ್ಲಿಂದ ನೇರವಾಗಿ ಪಾಕಿಸ್ತಾನಕ್ಕೆ ಬರಲಿದ್ದಾರೆ.
ನವಾಜ್ ಹೊರಗೆ.. ಇಮ್ರಾನ್ ಒಳಗೆ..!
ಇಮ್ರಾನ್ ಖಾನ್ ಅಧಿಕಾರಕ್ಕೆ ಬರುತ್ತಿದ್ದಂತೆ ನವಾಜ್ ಷರೀಫ್ ಜೈಲು ಸೇರಿದ್ರು. 71 ವರ್ಷದ ನವಾಜ್ 2018ರಲ್ಲಿ ಪಾಕಿಸ್ತಾನದಲ್ಲಿ 2 ಭ್ರಷ್ಟಾಚಾರ ಕೇಸ್‌ನಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಹೀಗೆ ಜೈಲು ಸೇರಿ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ಲಾಹೋರ್ ಹೈಕೋರ್ಟ್ ಅನುಮತಿಯನ್ನ ಪಡೆದು 2019ರಿಂದ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ಇದ್ದಾರೆ. ಈಗ ಮತ್ತೆ ಪಾಕ್ ರಾಜಕಾರಣದಲ್ಲಿ ಸಕ್ರಿಯವಾಗಲು ಸಿದ್ಧರಾಗುತ್ತಿದ್ದಾರೆ. ಆದ್ರೆ ಇದೇ ಸಮಯದಲ್ಲಿ ಮತ್ತೊಂದು ಕಡೆ ಇಮ್ರಾನ್ ಖಾನ್ ಜೈಲಿನಲ್ಲೇ ಕೊಳೆಯುತ್ತಿದ್ದಾರೆ.

ಒಟ್ನಲ್ಲಿ ನವಾಜ್ ಪಾಕಿಸ್ತಾನದಲ್ಲಿ ಜೈಲೂಟ ತಿಂದು ಬೇರೆ ದೇಶಕ್ಕೆ ಹೋಗಿದ್ದರು. 2019ರಿಂದ ಲಂಡನ್‌ನಲ್ಲಿರುವ ಮಾಜಿ ಪ್ರಧಾನಿ ನವಾಜ್, ಪನಾಮಾ ಪೇಪರ್ಸ್ ಹಗರಣ ಹಿನ್ನೆಲೆ ಪಾಕ್‌ಗೆ ಮರಳಿದ್ರು ರಾಜಕೀಯ ಪಕ್ಷಗಳ ನೇತೃತ್ವ ವಹಿಸಲು ಆಗುವುದಿಲ್ಲ. ಹೀಗಾಗಿ ಪಾಕ್‌ಗೆ ವಾಪಸ್ ಬಂದರೂ ತಮ್ಮ ಪಕ್ಷದ ಪರವಾಗಿ ರಣತಂತ್ರ ರೂಪಿಸಬಹುದೇ ಹೊರತು ನೇರ ಚುನಾವಣೆ ಅಖಾಡಕ್ಕೆ ನವಾಜ್ ಎಂಟ್ರಿ ಕೊಡಲು ಆಗಲ್ಲ.












Click it and Unblock the Notifications