306 ವರ್ಷಗಳ ಹಳೆಯ ದಾಖಲೆ ಪುಡಿ: 18ನೇ ವಯಸ್ಸಿಗೆ ವಿಶ್ವದ ಅತ್ಯಂತ ಕಿರಿಯ ಪ್ರೊಫೆಸರ್ ಆದ ನೇಥನ್ ಥಾಮಸ್
ವಾಷಿಂಗ್ಟನ್: ಶಿಕ್ಷಕರು ಅಥವಾ ಪ್ರೊಫೆಸರ್ ಎಂದರೆ ಅದೊಂದು ಸಾಮಾನ್ಯ ಹುದ್ದೆಯಲ್ಲ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನಾ ರೂಪಿಸುವ ಮಹತ್ವದ ಜವಬ್ದಾರಿಯದು. ಸಾಮಾನ್ಯವಾಗಿ ಪ್ರೊಫೆಸರ್ ಅಥವಾ ಪ್ರಾಧ್ಯಾಪಕ ಹುದ್ದೆಗೇರಲು ಹಲವು ವರ್ಷಗಳ ಉನ್ನತ ವ್ಯಾಸಂಗ ಹಾಗೂ ಅಪಾರ ಅನುಭವ ಬೇಕಾಗುತ್ತದೆ. ಆದರೆ, ಅಮೆರಿಕದ ಫ್ಲೋರಿಡಾ ಮೂಲದ 18 ವರ್ಷದ ಯುವಕನೊಬ್ಬ ತನ್ನ ಹದಿಹರೆಯದಲ್ಲೇ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುವ ಮೂಲಕ ಹೊಸದೊಂದು ಮೈಲಿಗಲ್ಲು ಸಾಧಿಸಿದ್ದಾನೆ.
ಹೌದು, ಇಂಜಿನಿಯರಿಂಗ್ ಶಿಕ್ಷಕನಾಗಿರುವ ನೇಥನ್ ಥಾಮಸ್ 'ವಿಶ್ವದ ಅತ್ಯಂತ ಕಿರಿಯ ಪುರುಷ ಪ್ರೊಫೆಸರ್' ಎಂಬ ಹೆಗ್ಗಳಿಕೆಯೊಂದಿಗೆ ಗಿನ್ನೆಸ್ ವಿಶ್ವ ದಾಖಲೆಯ ಪುಟಗಳನ್ನು ಸೇರಿದ್ದಾನೆ ಎಂದರೆ ನೀವು ನಂಬುತ್ತೀರಾ? ನೀವು ನಂಬಲೇಬೇಕು ಏಕೆಂದರೆ ಇದು ಕಟ್ಟುಕಥೆಯಲ್ಲ.

306 ವರ್ಷಗಳ ಹಳೆಯ ದಾಖಲೆ ಮುರಿದ ನೇಥನ್ ಥಾಮಸ್
ನೇಥನ್ ಥಾಮಸ್ ಅವರು ತಮ್ಮ 18 ವಯಸ್ಸಿನಲ್ಲಿ ಅಮೆರಿಕದ ಪ್ರತಿಷ್ಠಿತ ಮಿಯಾಮಿ ಡೇಡ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪ್ರೊಫೆಸರ್ ಹುದ್ದೆಯನ್ನ ಒಪ್ಪಿಕೊಳ್ಳುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರಿಂದಾಗಿ ಕಳೆದ 306 ವರ್ಷಗಳ ಹಳೆಯ ದಾಖಲೆಯೊಂದನ್ನಾ ಮುರಿದಿದ್ದಾರೆ.
1717ರಲ್ಲಿ ಕಾಲಿನ್ ಮ್ಯಾಕ್ಲಾರಿನ್ ಎಂಬುವವರು ತಮ್ಮ 19ನೇ ವಯಸ್ಸಿನಲ್ಲಿ ಪ್ರೊಫೆಸರ್ ಆಗುವ ಮೂಲಕ ವಿಶ್ವ ದಾಖಲೆ ಬರೆದಿದ್ದರು. ಇದೀಗ ನೇಥನ್ ಆ ಮೂರು ಶತಮಾನಗಳಷ್ಟು ಹಳೆಯ ದಾಖಲೆಯನ್ನ ಮುರಿದಿದ್ದಾರೆ. ಅಲ್ಲದೆ, 2008ರಲ್ಲಿ 18 ವರ್ಷ 362 ದಿನಗಳ ವಯಸ್ಸಿನಲ್ಲಿ ಪ್ರೊಫೆಸರ್ ಆಗಿ 'ವಿಶ್ವದ ಅತ್ಯಂತ ಕಿರಿಯ ಮಹಿಳಾ ಪ್ರೊಫೆಸರ್' ಎನ್ನುವ ದಾಖಲೆ ಬರೆದಿದ್ದ ಆಲಿಯಾ ಸಾಬುರ್ ಅವರಿಗಿಂತಲೂ ನೇಥನ್ 16 ದಿನ ಕಿರಿಯರಾಗಿದ್ದಾರೆ.
ಮಿಯಾಮಿ ಡೇಡ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪಾಠ
ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ನೇಥನ್ ಥಾಮಸ್ ಅವರು 2023ರ ಆಗಸ್ಟ್ ತಿಂಗಳಿನಿಂದ ಮಿಯಾಮಿ ಡೇಡ್ ಕಾಲೇಜಿನಲ್ಲಿ 'COP 2270: ಸಿ ಫಾರ್ ಇಂಜಿನಿಯರ್ಸ್' ಎಂಬ ಪ್ರಮುಖ ಕೋರ್ಸ್ ಅನ್ನು ಪಾಠ ಮಾಡುತ್ತಿದ್ದಾರೆ. ವಿಶೇಷವೆಂದರೆ,ಈ ತರಗತಿಯಲ್ಲಿ ಪಾಠ ಕೇಳುವ ಬಹುತೇಕ ವಿದ್ಯಾರ್ಥಿಗಳು ನೇಥನ್ ಅವರದ್ದೇ ವಯಸ್ಸಿನವರಾಗಿದ್ದಾರೆ.
ಈ ಕುರಿತು ಮಾತನಾಡಿರುವ ನೇಥನ್, "ತರಗತಿಯೊಳಗೆ ಬಂದ ಮೇಲೆ ಎಲ್ಲರ ಮುಖ್ಯ ಉದ್ದೇಶ ಹೊಸ ವಿಷಯವನ್ನ ಕಲಿಯುವುದೇ ಆಗಿರುತ್ತದೆ. ಅಲ್ಲಿ ವಯಸ್ಸು ಮುಖ್ಯವಾಗುವುದಿಲ್ಲ. ನನ್ನ ಕೆಲಸವನ್ನ ನಾನು ಅಚ್ಚುಕಟ್ಟಾಗಿ ಮಾಡುವುದು ಮತ್ತು ವಿದ್ಯಾರ್ಥಿಗಳ ಕಲಿಕೆಗೆ ನೆರವು ನೀಡುವುದು ನನ್ನ ಗುರಿ" ಎಂದು ಹೇಳಿದ್ದಾರೆ.
10ನೇ ವಯಸ್ಸಿನಲ್ಲೇ ಕಾಲೇಜು ಪ್ರವೇಶ
ಇನ್ನೂ ಈ ನೇಥನ್ ಅವರ ಶೈಕ್ಷಣಿಕ ಪಯಣವನ್ನಾ ನೋಡುವುದಾದ್ರೆ ತುಂಬ ಅಚ್ಚರಿ ಮೂಡಿಸುತ್ತದೆ. ಅವರು ತಮ್ಮ 10ನೇ ವಯಸ್ಸಿನಲ್ಲೇ ಮಿಯಾಮಿ ಡೇಡ್ ಕಾಲೇಜಿನಲ್ಲಿ ಡ್ಯುಯಲ್ ಎನ್‌ರೋಲ್‌ಮೆಂಟ್ ಪಡೆದುಕೊಂಡಿದ್ದರು. ನಂತರ ತಮ್ಮ 14ನೇ ವಯಸ್ಸಿನಲ್ಲಿ ಫ್ಲೋರಿಡಾ ಇಂಟರ್ನ್ಯಾಷನಲ್ ಯುನಿವರ್ಸಿಟಿಗೆ ವರ್ಗಾವಣೆಗೊಂಡು, ಮುಂದಿನ ನಾಲ್ಕು ವರ್ಷಗಳಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ಬ್ಯಾಚುಲರ್ ಹಾಗೂ ಮಾಸ್ಟರ್ಸ್ ಪದವಿಗಳನ್ನ ಪೂರ್ಣಗೊಳಿಸಿದರು.
ಇಂಜಿನಿಯರ್‌ಗಳೇ ತುಂಬಿರುವ ಕುಟುಂಬದಿಂದ ಬಂದಿರುವ ನೇಥನ್ ಅವರಿಗೆ ಬಾಲ್ಯದಿಂದಲೂ ಗಣಿತ ವಿಷಯದ ಮೇಲೆ ಅಪಾರ ಹಿಡಿತವಿತ್ತು. ತಮ್ಮ ತಾಯಿ ಕಷ್ಟದ ವಿಷಯಗಳನ್ನ ಅತ್ಯಂತ ಸುಲಭ ಮತ್ತು ಸರಳವಾಗಿ ಅರ್ಥಮಾಡಿಸುತ್ತಿದ್ದ ವಿಧಾನವೇ ತಮ್ಮ ಈ ಸಾಧನೆಗೆ ಪ್ರೇರಣೆ ಎಂದು ಅವರು ಹೇಳುತ್ತಾರೆ.
ಪ್ರಸ್ತುತ ಪ್ರೊಫೆಸರ್ ಆಗಿರುವ ನೇಥನ್, ತಮ್ಮ ವಿದ್ಯಾರ್ಥಿಗಳಿಗೆ ಸಂಕೀರ್ಣವಾದ ಕಂಪ್ಯೂಟಿಂಗ್ ಮತ್ತು ಪ್ರೋಗ್ರಾಮಿಂಗ್‌ಗಳನ್ನಾ ಅತ್ಯಂತ ಸರಳವಾಗಿ ಬೋಧಿಸುವ ಜವಾಬ್ದಾರಿ ಹೊತ್ತಿದ್ದಾರೆ. ತಮ್ಮ ವೃತ್ತಿಯ ಬಗ್ಗೆ ತಮಗಿರುವ ಪ್ರೀತಿಯನ್ನ ಹಂಚಿಕೊಂಡಿರುವ ಅವರು, "ವಿದ್ಯಾರ್ಥಿಗಳಿಗೆ ಅತ್ಯಂತ ಕಷ್ಟ ಮತ್ತು ಅಸಾಧ್ಯ ಎನಿಸುವ ವಿಷಯವೊಂದು, ನಾನು ಪಾಠ ಮಾಡಿದ ನಂತರ ಅವರಿಗೆ ಸುಲಭವಾಗಿ ಅರ್ಥವಾಗಿ ಅವರ ಮುಖದಲ್ಲಿ ಮೂಡುವ ಖುಷಿಯನ್ನು ನೋಡುವುದೇ ನನಗೆ ಅತ್ಯಂತ ಸಮಾಧಾನ ನೀಡುವ ಕ್ಷಣ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications
