ಲಂಕಾ: ಹಿಂಸಾಚಾರಿಗಳಿಗೆ ಗುಂಡು ಹಾರಿಸುವಂತೆ ರಕ್ಷಣಾ ಸಚಿವಾಲಯ ಆದೇಶ
ಕೊಲಂಬೊ ಮೇ 10: ಶ್ರೀಲಂಕಾದಲ್ಲಿ ಅಂತರ್ಯುದ್ಧದ ಪರಿಸ್ಥಿತಿ ನಿರಂತರವಾಗಿ ನಿರ್ಮಾಣವಾಗುತ್ತಿದೆ. ಮಹಿಂದಾ ರಾಜಪಕ್ಸೆ ಅವರ ರಾಜೀನಾಮೆಯ ನಂತರ, ಈ ದೇಶದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ರಾಷ್ಟ್ರಪತಿ ಆಳ್ವಿಕೆಯ ಮಧ್ಯೆ ಬೀದಿಗಿಳಿದ ಗಲಭೆಕೋರರು ಸಾರ್ವಜನಿಕ ಆಸ್ತಿ ಪಾಸ್ತಿಗೆ ನಿರಂತರ ಹಾನಿ ಉಂಟುಮಾಡುತ್ತಿದ್ದಾರೆ. ಇಂತಹವರನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯವು ಸ್ಥಳದಲ್ಲಿ ಶೂಟ್ ಮಾಡಲು ಆದೇಶ ನೀಡಿದೆ. ರಕ್ಷಣಾ ಸಚಿಮಾಲಯದ ಆದೇಶದಂತೆ ಯಾವುದೇ ಗಲಭೆಕೋರರು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸುವುದು ಕಂಡುಬಂದರೆ, ಅಂತವರನ್ನು ಸ್ಥಳದಲ್ಲೇ ಗುಂಡು ಹಾರಿಸಿ ಕೊಲ್ಲಲಾಗುತ್ತದೆ.

ನಿಲ್ಲದ ಹಿಂಸಾಚಾರ
ಸೋಮವಾರ ಶ್ರೀಲಂಕಾದ ಹಲವಾರು ನಗರಗಳಲ್ಲಿ ಹಿಂಸಾಚಾರ ನಡೆದಿದ್ದು, ಇದರಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ ಮತ್ತು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ. ನಿನ್ನೆ ನಡೆದ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ಹಿಂಸಾಚಾರ ಉಲ್ಬಣಗೊಂಡಿದೆ. ಹಿಂಸಾಚಾರ ನಡೆಸಿದವರು ಮಹಿಂದಾ ರಾಜಪಕ್ಸೆ ಬೆಂಬಲಿಗರು ಎಂದು ಹೇಳಲಾಗುತ್ತಿದೆ.

ಅಧ್ಯಕ್ಷರಿಂದ ಶಾಂತಿಗಾಗಿ ಮನವಿ
ಶ್ರೀಲಂಕಾದಲ್ಲಿ ಹಿಂಸಾತ್ಮಕ ಪ್ರದರ್ಶನಗಳ ಮಧ್ಯೆ, ಅಧ್ಯಕ್ಷ ಗೊತಾಬಯ ರಾಜಪಕ್ಸೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಭಟನಾಕಾರರಿಗೆ ಇಂತಹ ಹಿಂಸಾತ್ಮಕ ಘಟನೆಗಳನ್ನು ಮಾಡಬೇಡಿ ಮತ್ತು ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ಸಾಮಾನ್ಯ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳದಂತೆ ರಾಷ್ಟ್ರಪತಿಗಳು ಭದ್ರತಾ ಪಡೆಗಳಿಗೆ ಮನವಿ ಮಾಡಿದ್ದಾರೆ. ಸೋಮವಾರ ಹಿಂಸಾತ್ಮಕ ಘಟನೆಗಳ ನಂತರ, ಇಂದು ಬೆಳಿಗ್ಗೆಯವರೆಗೆ ಕರ್ಫ್ಯೂ ವಿಧಿಸಲಾಗಿದೆ.

ಮಿಲಿಟರಿ ಮತ್ತು ಪೊಲೀಸರಿಗೆ ತುರ್ತು ಅಧಿಕಾರ
ಇಂದಿಗೂ ಹಿಂಸಾತ್ಮಕ ಪರಿಸ್ಥಿತಿ ನಿಯಂತ್ರಣಕ್ಕಾ ಬಾರದ ಹಿನ್ನೆಲೆಯಲ್ಲಿ ವಾರಂಟ್ ಇಲ್ಲದೆ ಜನರನ್ನು ಬಂಧಿಸಲು ಶ್ರೀಲಂಕಾ ತನ್ನ ಮಿಲಿಟರಿ ಮತ್ತು ಪೊಲೀಸರಿಗೆ ತುರ್ತು ಅಧಿಕಾರವನ್ನು ನೀಡಿದೆ. ಹಿಂದೂ ಮಹಾಸಾಗರದ ರಾಷ್ಟ್ರ ಶ್ರೀಲಂಕಾ ಇತಿಹಾಸದಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದನ್ನು ಬಗೆಹರಿಸಲು ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಜನ ಕೆಲ ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಲಂಕಾ ತೊರೆದ ಮಾಜಿ ಪ್ರಧಾನಿ
ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬವು ದ್ವೀಪ ರಾಷ್ಟ್ರದ ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲಿಯ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ನಡುವೆ ಮಾರಣಾಂತಿಕ ಪ್ರತಿಭಟನೆಗಳು ಶ್ರೀಲಂಕಾದಲ್ಲಿ ಮುಂದುವರೆದಿವೆ. ಹೀಗಾಗಿ ನಿನ್ನೆಯಷ್ಟೇ ಮಹಿಂದಾ ರಾಜಪಕ್ಸೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೂ ಹಿಂಸಾಚಾರ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು ಶ್ರೀಲಂಕಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಮನೆಯ ಸುತ್ತಲೂ ಹಿಂಸಾತ್ಮಾಕ ಘಟನೆಗಳು ವರದಿಯಾಗುತ್ತಲೇ ಇವೆ.












Click it and Unblock the Notifications