MH-370 ವಿಮಾನ ಕಣ್ಮರೆ: ನಿಗೂಢವಾಗಿಯೇ ಅಂತ್ಯಗೊಂಡ ತನಿಖೆ
ಕೌಲಾಲಂಪುರ, ಜುಲೈ 31: ನಿಗೂಢ ರೀತಿಯಲ್ಲಿ ಕಣ್ಮರೆಯಾದ MH-370 ವಿಮಾನ ಹುಡುಕಾಟವನ್ನು ಕೈಬಿಡಲು ತನಿಖಾತಂಡ ನಿರ್ಧರಿಸಿದೆ.
2014 ರ ಮಾರ್ಚ್ 8 ರಂದು ಬೀಜಿಂಗ್ ನಿಂದ ಕೌಲಾಲಂಪುರಕ್ಕೆ ತೆರಳುತ್ತಿದ್ದ ಮಲೇಶ್ಯನ್ ಏರ್ ಲೈನ್ಸ್ ನ MH-370 ಇದ್ದಕ್ಕಿದ್ದಂತೆ ಸಂಪರ್ಕ ಕಳೆದುಕೊಂಡಿತ್ತು.
239 ಜನ ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು ಎಂದು ಕೆಲವರು ಹೇಳಿದರೆ, ವಿಮಾನವು ಅಪಘಾತಕ್ಕೀಡಾಗಿ ಸಮುದ್ರ ಪಾಲಾಗಿದೆ ಎಂದು ಕೆಲವರು ಅಂದಾಜಿಸಿದ್ದರು. ಆದರೆ ಖಚಿತ ಮಾಹಿತಿ ಮಾತ್ರ ಲಭ್ಯವಾಗಲಿಲ್ಲ. ಈ ಘಟನೆ ನಡೆದು ನಾಲ್ಕು ವರ್ಷಗಳೇ ಕಳೆದರೂ ಇಂದಿಗೂ ಈ ವಿಮಾನದ ಕುರಿತು ಕೂದಲೆಳೆಯಷ್ಟು ಮಾಹಿತಿಯೂ ಲಭ್ಯವಾಗಿಲ್ಲ.

ಪ್ರಯಾಣಿಕರೆಲ್ಲ ಏನಾದರು?
ಹೈಜಾಕ್ ಆಗಿದ್ದರೆ ಹೈಜಾಕರ್ಸ್ ಕಡೆಯಿಂದ ಕರೆ ಬರಬೇಕಿತ್ತು, ಬೇಡಿಕೆ ಇಡಬೇಕಿತ್ತು ಆದರೆ ಯಾವ ಕರೆಯೂ ಬರಲಿಲ್ಲ ಸಮುದ್ರದಾಳದಲ್ಲಿ ಬಿದ್ದಿದ್ದರೆ ಅದರ ಕುರುಹಾದರೂ ಸಿಗಬೇಕಿತ್ತು. ವಿಮಾನದ ಯಾವುದಾದರೂ ಒಂದು ಭಾಗವಾದರೂ ಸಮುದ್ರದ ಮೇಲೆ ಕಾಣಿಸಿಕೊಳ್ಳಬೇಕಿತ್ತು. ಆದರೆ ಅದೂ ಆಗಲಿಲ್ಲ. ಹಾಗಾದರೆ ಈ ವಿಮಾನ ಏನಾಯ್ತು? ಇದರಲ್ಲಿದ್ದ 239 ಜನರ ಕತೆ ಏನಾಯ್ತು? ಅವರೆಲ್ಲ ಬದುಕಿದ್ದಾರಾ? ಅವರೆಲ್ಲರ ಕುಟುಂಬಸ್ಥರು ಅವರ ಬಗ್ಗೆ ನಿರೀಕ್ಷೆ ಇಟ್ಟುಕೊಂಡು ಕಾಯಬೇಕಾ?! ಇಲ್ಲ, ಇನ್ನು ಮೇಲೆ ಈ ತನಿಖೆಯನ್ನೇ ನಿಲ್ಲಿಸುವಾಗಿ ತನಿಖಾ ತಂಡ ಹೇಳಿದೆ. ಅಂದರೆ ಈ ಎಲ್ಲಾ ಪ್ರಯಾಣಿಕರೂ ಬದುಕಿಲ್ಲ ಎಂದೇ ತಿಳಿಯಬೇಕಿದೆ!

1500 ಪುಟಗಳ ವರದಿ
ತನಿಖಾ ತಂಡ ಈಗ 1500 ಪುಟಗಳ ವರದಿ ನೀಡಿದ್ದು, ವಿಮಾನ ನಾಪತ್ತೆಗೆ ನಿಖರವಾದ ಕಾರಣವನ್ನೇನೂ ಈ ವರದಿಯಲ್ಲಿ ತಿಳಿಸಲಾಗಿಲ್ಲ. ತಾಂತ್ರಿಕ ಸಮಸ್ಯೆಯಿಲ್ಲದಿದ್ದರೂ ವಿಮಾನದ ದಾರಿಯನ್ನು ಬೇರೆಡೆ ವರ್ಗಾಯಿಸಿದ್ದೇ ಈ ಘಟನೆಗೆ ಕಾರಣವಿದ್ದಿರಬಹುದು ಎಂದು ವರದಿ ಹೇಳಿದ್ದು, ವಿಮಾನ ಅವಶೇಷ ಪತ್ತೆಯಾದರೆ ಮಾತ್ರವೇ ನಿಖರ ಕಾರಣ ತಿಳಿಯುತ್ತದೆ ಎನ್ನಲಾಗಿದೆ.

ಪೈಲೆಟ್ ಕೈವಾಡ?
'ಈ ಘಟನೆಯಲ್ಲಿ ಪೈಲೆಟ್ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಸಿದ ತನಿಖಾ ತಂಡಕ್ಕೆ ಸಿಕ್ಕ ಉತ್ತರ, 'ಪೈಲೆಟ್ ಒಬ್ಬ ಪ್ರಾಮಾಣಿಕ ಕೆಲಸಗಾರ' ಎಂಬುದು. ಆಅತನ ಹಿನ್ನೆಲೆಯನ್ನೂ ವಿಚಾರಿಸಿದ್ದೇವೆ. ಆತನ ಮಾನಸಿಕ ಆರೋಗ್ಯದ ಬಗ್ಗೆಯೂ ಯಾವುದೇ ದೂರುಗಳಿಲ್ಲ. ಇದು ಪೈಲೆಟ್ ಮಾಡಿದ ಕೆಲಸ ಎನ್ನುವುದನ್ನು ನಾವು ಸುತಾರಾಂ ಒಪ್ಪುವುದಿಲ್ಲ' ಎಂದು ಕೌಲಾಲಂಪುರ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ಆಲ್ ರೈಟ್ ಗುಡ್ ನೈಟ್!
ಕಾಕ್ಪಿಟ್ ನಿಂದ ಮಲೇಶ್ಯನ್ ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆ ಸಂಪರ್ಕಿಸಿದ್ದ ಒಬ್ಬರು ಕೊಟ್ಟ ಕೊನೆಯದಾಗಿ ಅಮದ್ರೆ ಬೆಳಗ್ಗಿನ ಜಾವ 1:20 ರ ಸಮಯದಲ್ಲಿ ಕಳಿಸಿದ ಸಂದೇಶ, "ಆಲ್ ರೈಟ್, ಗುಡ್ ನೈಟ್" ಅದಾದ ನಂತರ MH-370 ಸಂಪರ್ಕಕ್ಕೆ ಸಿಗಲಿಲ್ಲ, ಇಂದಿಗೂ ಸಿಕ್ಕಿಲ್ಲ! ನಿಗೂಢತೆಯ ಗೂಡಾಗಿಯೇ ಆರಂಭವಾದ ಈ ಪ್ರಕರಣ ಕೊನೆಗೆ ನಿಗೂಢತೆಯೊಂದಿಗೇ ಅಂತ್ಯವಾಗಿದೆ. ಅಂದು ಕಣ್ಮರೆಯಾದ 239 ಪ್ರಯಾಣಿಕರ ಕುಟುಂಬಸ್ಥರು ಯಾವುದೋ ಭರವಸೆಯಲ್ಲಿ ಇಂದಿಗೂ ಕಾಯುತ್ತಲೇ ಇದ್ದಾರೆ, ತಮ್ಮವರು ಬರಬಹುದು ಅಂತ!












Click it and Unblock the Notifications